
(ಬಳ್ಳಾರಿ ಜಿಲ್ಲೆಯಲ್ಲಿ ಎಡಪಂಥೀಯ ಚಳವಳಿ, ಬಂಡಾಯ, ಸಮುದಾಯ ಚಳವಳಿ ಬೆಳೆಸಿದ ಪ್ರಗತಿಪರ ಚಿಂತಕ, ಕವಿ, ಹೋರಾಟಗಾರ ಹಾಗೂ ಸಂಶೋಧಕರಾಗಿದ್ದ ಪ್ರೊ.ಎಸ್.ಎಸ್.ಹಿರೇಮಠರ ಬಗ್ಗೆ ಯಾರಿಗೆ ಗೊತ್ತಿಲ್ಲ. ಜಿಲ್ಲೆಯವರೇ ಆಗಿ ಹೋದ ಅವರು ಈಚಿಗೆ ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಬಗ್ಗೆ ಪರುಶುರಾಮ ಕಲಾಲ್ ಇಲ್ಲಿ ಬರೆದಿದ್ದಾರೆ.)
ಎರಡು ಘಟನೆಗಳು: ಎಸ್.ಎಸ್. ಹಿರೇಮಠರೆಂಬ ಮುಗ್ಧರು!
ಬಹಳ ಹಿಂದಿನ ಘಟನೆ ನೆನಪಾಗುತ್ತಿದೆ. ಈಗ ಪ್ರಜಾವಾಣಿಯ ಉಪ ಸಂಪಾದಕರಾಗಿರುವ ಗುಡಿಹಳ್ಳಿ ನಾಗರಾಜ್ ಆಗ ಹೋರಾಟಗಾರರು. ಅವರು ಒಂದು ಕಪ್ ಬಿಯರ್ ಕುಡಿದ ಸುದ್ದಿ ಹಿರೇಮಠರಿಗೆ ಹೇಗೋ ಗೊತ್ತಾಗಿ ಬಿಟ್ಟಿತ್ತು. ಅದರ ವಿಚಾರಣೆಯಲ್ಲಿ ನಾನೂ ಇದ್ದೆ. ಹಿರೇಮಠರು ಹೆಂಡ ಕುಡ್ಕಂಡು ಎಂದು ಬಯ್ಯುವುದನ್ನು ತಾಳಲಾರದೇ ಗುಡಿಹಳ್ಳಿ ಸಾರ್ ಬಿಯರ್ ಏನು ಹೆಂಡವಲ್ಲ, ಅದರಲ್ಲಿ ಅಲ್ಕೋಹಾಲ್ ಸ್ವಲ್ಪ ಇರುತ್ತದೆ. ಒಂದು ಕಪ್ ಕುಡಿದಿದ್ದೇನೆ ಅಷ್ಟೆ ಎಂದು ಸಮರ್ಥಿಸಿಕೊಂಡರು.
ಏನ್ರಿ ಕಲಾಲ್ ಇದೇನು ಹೊಸ ಕತೆ ಎಂದು ಕೇಳಿದರು. ಬಿಯರ್, ವ್ಹಿಸ್ಕಿ, ರಮ್, ಜಿನ್, ಸರಾಯಿ ಇತ್ಯಾದಿ ಕುಲಗಳನ್ನೆಲ್ಲಾ ಹೇಳಿದೆ. ಎಲ್ಲಾ ವಿವರ ಕೇಳಿದ ಅವರು ಪ್ರತಿಕ್ರಿಯಿಸಿದ್ದು ಹೀಗೆ ಇದರಲ್ಲೂ ವರ್ಗ ಬಂದಿದೆ ಅಲ್ಲರಿ, ಕುಡುಕರನ್ನು ವರ್ಗಬೇಧ ಮಾಡಿ ಹಾಕಿ ಅಲ್ಲೂ ತಾರತಮ್ಯ ಸೃಷ್ಠಿಸಲಾಗಿದೆ. ಇದನ್ನು ಗುಡಿಹಳ್ಳಿ ಅಂತವರೂ ನಂಬುತ್ತಾರಲ್ಲ. ಹೆಂಡ ಅಷ್ಟೇ, ಬಿಯರ್ ಅಷ್ಟೇ
ಘಟನೆ ಎರಡು: ಹರಪನಹಳ್ಳಿಯಲ್ಲಿದ್ದ ಎಸ್.ಎಸ್.ಹಿರೇಮಠರ ಮನೆಗೆ ಹೋದಾಗ ಅವರು ಹಬ್ಬಗಳು ಪುಸ್ತಕ ನೀಡಿ ಅದನ್ನು ಕನ್ನಡ ವಿಶ್ವವಿದ್ಯಾಲಯದ ಆಗೀನ ಕುಲಪತಿಗಳಾಗಿದ್ದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ತಲುಪಿಸಬೇಕೆಂದು ಹೇಳಿದರು. ನನಗೂ ಒಂದು ಪುಸ್ತಕ ನೀಡಿದ್ದರು.
ನಾನು ಆ ಪುಸ್ತಕದ ರಕ್ಷಾಪುಟ ಹಾಗೂ ಒಳಪುಟಗಳನ್ನು ನೋಡಿ, ಏನು ಸಾರ್ ಪುಸ್ತಕವನ್ನು ಎಷ್ಟು ಕೆಟ್ಟದ್ದಾಗಿ ತಂದು ಬಿಟ್ಟಿದ್ದೀರಿ ಎಂದೆ.
ಹಿರೇಮಠರಿಗೆ ಸಿಟ್ಟು ಬಂತು. ಪುಸ್ತಕದ ವಿಷಯ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ಮುದ್ರಣ, ಹಾಳೆ ಕುರಿತು ಮಾತನಾಡಿದ್ದರಿಂದ ಈ ಸಿಟ್ಟು ಬಂದಿತು ಎಂದು ಕಾಣುತ್ತದೆ. ಹಾಳೆ ಮುಖ್ಯ ಅಲ್ಲರಿ, ವಿಷಯ ಮುಖ್ಯ ಎಂದು ಗದರಿಕೊಂಡರು. ನನಗೂ ಸಿಟ್ಟು ಬಂತು. ಹಾಗಾದರೆ ಮುದ್ರಣ ಯಾಕೆ ಮಾಡಿಸಿದಿರಿ, ಬರೆದಿದ್ದನ್ನು ಟೈಪ್ ಮಾಡಿಸಿ, ಜಿರಾಕ್ಸ್ ಮಾಡಿಸಿದ್ದರೆ ಆಗುತ್ತಿತ್ತು. ರಕ್ಷಾಪುಟ ಯಾಕೇ? ಅದು ಕೂಡಾ ಬೇಕಾಗಿದ್ದಿಲ್ಲ ಎಂದೆ.
ಒಂದು ಕ್ಷಣ ಅಲ್ಲಿ ಮೌನ. ನಂತರ ಹಿರೇಮಠರು ನಿಧಾನವಾಗಿ ಹೇಳಿದರು. ಅವಸರವಾಯಿತು, ತಪ್ಪಾಗಿ ಬಿಟ್ಟಿದೆ. ಇನ್ನೊಂದು ಸಲ ಈ ತಪ್ಪು ಮಾಡುವುದಿಲ್ಲ.ಕಲಬುರ್ಗಿಯವರಿಗೆ ಈ ಪುಸ್ತಕ ಒಪ್ಪಿಸಿ ಸಮಾಧಾನ ಮಾಡಿ ಎಂಬ ವಿನಂತಿ ಬೇರೆ.
ಹೌದು, ಹಿರೇಮಠರಲ್ಲಿ ಒಬ್ಬ ಮುಗ್ಧ ಬಾಲಕನೂ ಇದ್ದ. ಆತ ವ್ಯವಹಾರನಸ್ಥನಲ್ಲ. ಈ ಪ್ರಾಪಂಚಿಕ ಜಗತ್ತಿನ ಜೊತೆ ಆತ ಬೆರೆಯಲಾರ. ಹಿರೇಮಠರಲ್ಲಿ ಚಿಂತಕ, ಹೋರಾಟಗಾರ, ಸಂಶೋಧಕ, ಕವಿ ಎಲ್ಲರೂ ಇದ್ದರೂ ಈ ಬಾಲಕನದೇ ಯಾವಾಗಲೂ ಮೇಲುಗೈ.
ತಾವು ಬರೆದ ಬರಹದಂತೆ ಬದುಕಿದ ಹಿರೇಮಠರು ಮುಖಕ್ಕೆ ಹೊಡೆದಂತೆ ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡರು. ಮಾತನಾಡಿದ ಮರುಗಳಿಗೆ ಅದನ್ನು ಮರೆತು ಬಿಡುವ ಹಿರೇಮಠರ ಮುಗ್ಧತೆಯನ್ನು ಅನೇಕರು ಅರ್ಥ ಮಾಡಿಕೊಳ್ಳಲಿಲ್ಲ. ನೆನಪು ಇಟ್ಟುಕೊಂಡು ಸಮಯ ಕಾದು ಸೇಡು ತೀರಿಸಿಕೊಂಡರು. ಹಿರೇಮಠರಿಗೆ ಇದು ಕೊನೆಯವರಿಗೂ ಗೊತ್ತಾಗಲೇ ಇಲ್ಲ. ಎಲ್ಲರನ್ನೂ ಮುಗ್ಧವಾಗಿ ನಂಬಿ ಬಿಡುತ್ತಿದ್ದರು. ವಿರೋಧಿಗಳನ್ನು ಸಹ.
ಹೀಗಾಗಿ ಕೊನೆಗಾಲದಲ್ಲಿ ತೀರಾ ಸಂಕಷ್ಟಗಳಿಗೆ ಸಿಲುಕಿದರು.
ಅವರ ಮಗ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಟ್ಟ ನಂತರ ಅವರ ಹುಡುಕಾಟವಂತೂ ಅನೇಕ ವರ್ಷಗಳ ಕಾಲ ಪುಸ್ತಕ, ಹೋರಾಟ, ಬರವಣಿಗೆಯಲ್ಲಿ ಮುಳುಗಿ ಈಗ ತಾನೇ ಮೇಲೆದ್ದ ತಂದೆಯೊಬ್ಬ ಅಷ್ಟು ವರ್ಷದ ಪ್ರೀತಿಯನ್ನು ಒಂದೇ ಸಲ ಹರಿಯ ಬಿಟ್ಟಂತೆ ಇತ್ತು.
ಆಗ ಕೊಟ್ಟೂರಿಗೆ ಹೋಗಿದ್ದೆ. ಇವರು ಹಿರೇಮಠರೇ ಎಂದು ಕೇಳುವಂತೆ ಜರ್ಜಿತರಾಗಿದ್ದರು.
ನನ್ನ ಮಗ ಹಂಪಿ, ಆನೆಗೊಂದಿ, ಹೊಸಪೇಟೆಯಲ್ಲಿ ಎಲ್ಲೂ ಒಂದುಕಡೆ ಇದ್ದಾನೆ. ಅನೇಕ ಜನ ನೋಡಿದ್ದಾರೆ. ಆದರೆ ಅವರು ನನಗೆ ಸಹಾಯ ಮಾಡುತ್ತಿಲ್ಲ, ನೀವು ಸ್ವಲ್ಪ ಸಹಾಯ ಮಾಡಿ, ನನ್ನ ಮಗನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಾಗ ನಾನು ಧರೆಗೆ ಕುಸಿದು ಹೋದೆ. ಚೇತರಿಸಿಕೊಳ್ಳುತ್ತಿರುವಾಗಲೇ ಅವರ ಸಾವಿನ ಸುದ್ದಿ ಬಂತು.
ಬೆಳಗಾವಿ ಜಿಲ್ಲೆಯ ಸಾಣೇಕೊಪ್ಪದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಅವರ ಕಳೆಬರಹ ನೋಡಿದರೆ ಅಲ್ಲಿ ಬೇರೊಬ್ಬ ಹಿರೇಮಠ ಇದ್ದರು. ನನಗೆ ಮಾತನಾಡಲು ಆಗಲಿಲ್ಲ. ಅವರು ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ
ಎಸ್.ಎಸ್. ಹಿರೇಮಠರು ನನಗೆ ಮತ್ತೇ ಕಾಣಿಸುತ್ತಿರುವುದು ಬಳ್ಳಾರಿ ಜಿಲ್ಲೆಯ ಇದೇ ನೆಲದಲ್ಲಿ. ಹೌದು, ಇಲ್ಲಿಯ ಎಡಪಂಥೀಯ ಹೋರಾಟಗಳಲ್ಲಿ, ದಲಿತರ ಹೋರಾಟಗಳಲ್ಲಿ, ಅನ್ಯಾಯ, ಅಸಮಾನತೆ ವಿರುದ್ಧ ಹೋರಾಟದಲ್ಲಿ ನನಗೆ ಕಾಣಿಸುತ್ತಿದ್ದಾರೆ. ಅವರ ಪುಸ್ತಕದಲ್ಲಿ ತಮಗೆ ಸಿಕ್ಕ ಸತ್ಯವನ್ನು ತಡಮಾಡದೇ ಅವಸರವಸರವಾಗಿ ಹೇಳುತ್ತಿದ್ದಾರೆ. ಅದೇ ಅಸ್ತವ್ಯಸ್ತತೆ ಬದುಕು, ಹುಡುಕಾಟ.
ತಮ್ಮ ತಣ್ಣಗಿನ ದನಿಯಲ್ಲಿ ಹಾಲುಗಲ್ಲದ ಹಸುಗೂಸೆ, ಹಸುಕಾಯೋ ಧೀರಬಾಲನೇ, ಹಾಲು ಮರೆತು ದಿನವೆಷ್ಟಾಯಿತೋ, ಓ ಹಾಲುಗಲ್ಲದ ಜೀತಗಾರ ಜೀತ ಸೇರಿ ದಿನವೆಷ್ಟಾಯಿತೋ ಹಾಡುತ್ತಿದ್ದಾರೆ. ನಿಶ್ಯಬ್ಧವಾಗಿ ಕೇಳಿ!
ಹಿರೇಮಠರಿಗೆ ಅವರ ಮಗ ಇಲ್ಲಿ ಎಲ್ಲಿಯೂ ಇದ್ದಾನೆ. ಎಲ್ಲರಿಗೂ ಕಾಣಿಸುತ್ತಾನೆ. ಯಾರು ಸಹಾಯ ಮಾಡುತ್ತಿಲ್ಲ ಎಂದೇ ಹೇಳುತ್ತಿದ್ದರು. ಹೌದು ಹಿರೇಮಠರೂ ನನಗೆ ಕಾಣಿಸುತ್ತಿದ್ದಾರೆ. ಅವರು ಇಲ್ಲಿಯೇ ಇದ್ದಾರೆ. ಹಿರೇಮಠರು ಹಲೋ ಎಂದೇ ಹೇಳುತ್ತಿದ್ದಾರೆ. ನಾನು ಅವರಿಗೆ ಹಲೋ ಹೇಳದೇ ಇರಲಾರೆ. ಎಂತಹ ನಂಬಿಕೆ ಇದು. ಈ ಜಗತ್ತು ನಂಬಿಕೆಯ ಮೇಲೆ ನಿಂತಿದೆ.
ಹೌದು, ನನ್ನೊಳಗೆ ಮುಗ್ಧತೆ ಇರುವವರಿಗೂ ಹಿರೇಮಠರು ಸಾಯುವುದಿಲ್ಲ. ನನ್ನಲ್ಲಿ ಮುಗ್ಧತೆ ಸತ್ತರೆ ಹಿರೇಮಠರು ಸಾಯುತ್ತಾರೆ. ಜೊತೆಗೆ ನಾನೂ ಕೂಡಾ.
-ಪರಶುರಾಮ ಕಲಾಲ್