ಗುರುವಾರ 15 ಜುಲೈ 2010

ಮೈಸೂರಿನಲ್ಲಿ "ವರ್ತಮಾನ ಕರ್ನಾಟಕ"

ನಾವು ನಮ್ಮಲ್ಲಿ, ಬಯಲು ಸಾಹಿತ್ಯ ವೇದಿಕೆ ಮೈಸೂರಿನಲ್ಲಿ ಏರ್ಪಡಿಸಿದ್ದ ವರ್ತಮಾನ ಕರ್ನಾಟಕ ಕುರಿತ ಎರಡು ದಿನ ಮುಕ್ತ ಸಂವಾದದ ಕೆಲ ಚಿತ್ರಗಳು ..











ಸೋಮವಾರ 10 ಆಗಸ್ಟ್ 2009

ಸಜ್ಜನನ ಸಹಜ ಕೃಷಿ









ರಾಸಾಯನಿಕ ಗೊಬ್ಬರಗಳನ್ನು ಹಾಕಿಯೇ ಬೆಳೆ ಬೆಳೆಯಬೇಕೆಂದು ಪ್ರಯತ್ನಿಸಿ ಕೈಸುಟ್ಟುಕೊಳ್ಳುತ್ತಿರುವ ರೈತರು ಒಂದೆಡೆಯಾದರೆ, ಬೆಳೆ ಸರಿಯಾಗಿ ಬರಲಿಲ್ಲವೆಂದು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಮತ್ತೊಂದೆಡೆ. ಇದಾವುದನ್ನೂ ತಲೆಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಸಹಜ ಕೃಷಿ ನಡೆಸುತ್ತ ಮತ್ತಿತರರಿಗೆ ಮಾದರಿಯಾಗಿರುವ ಸಜ್ಜನನಂತಹ ರೈತರು ವಿಭಿನ್ನವೆನಿಸುತ್ತಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದವರಾಗಿರುವ ಎಚ್.ವಿ.ಸಜ್ಜನ್ ಕೃಷಿಯಲ್ಲಿ ಸದಾ ಪ್ರಯೋಗಶೀಲರು. ಜಿಲ್ಲೆ ರಾಜ್ಯಮಟ್ಟದ ತರಬೇತಿಗಳನ್ನು ನೀಡುವಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಸಜ್ಜನ್ ಕಳೆದ ೧೪ ವರ್ಷಗಳಿಂದ ಸಹಜ ಕೃಷಿ ಅಳವಡಿಸಿಕೊಂಡಿರುವ ರೈತ.
ಕೂಡ್ಲಿಗಿ ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ ಹುಲಿಕೆರೆ ಪುಟ್ಟ ಗ್ರಾಮ. ಆದರೆ ಇಂದು ಸಜ್ಜನರಂತಹ ರೈತರಿಂದ ಅದು ಮಾದರಿ ಗ್ರಾಮವಾಗಿಯೂ ಬೆಳೆಯುತ್ತಿದೆ. ಕಳೆದ ೧೪ ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧಿಗಳಿಲ್ಲದೆ ಸಹಜ ಕೃಷಿಯ ಮೂಲಕ, ಸಾಧನೆ ಮಾಡುತ್ತಿರುವ ಸಜ್ಜನ್ ಸದಾ ಕ್ರಿಯಾಶೀಲ ರೈತ. ಖುಷ್ಕಿ ಬೇಸಾಯ ಪದ್ಧತಿಯ್ಲಲಿ ರೈತರಿಗೆ ಹೆಚ್ಚು ಲಾಭ ತಂದುಕೊಡುವ ತೋಟಗಾರಿಕೆ ಬೆಳೆಗಳಾವವು ಎನ್ನುವುದರಿಂದ ಹಿಡಿದು, ಕೊಟ್ಟಿಗೆ ಗೊಬ್ಬರದಿಂದ ಹೇಗೆ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂಬುದನ್ನು ಸಾದಿಸಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ, ಅಜೋಲಾ ಎಂಬ ಜಾನುವಾರುಗಳ ಕಡಿಮೆ ವೆಚ್ಚದ ಆಹಾರ, ಜೀವಾಮೃತ ತಯಾರಿಕೆ, ಬೀಜೋಪಚಾರ, ಹೈನುಗಾರಿಕೆಯಲ್ಲಿ ವಿವಿಧೋದ್ದೇಶ ಯೋಜನೆಗಳು, ಜೊತೆಗೆ ರಾಜ್ಯಾದ್ಯಂತ ಸಹಜ ಕೃಷಿಯ ಬಗ್ಗೆ ಪ್ರವಾಸ, ತಜ್ಞರೊಂದಿಗೆ ಚರ್ಚೆ, ರೈತರಿಗೆ ತರಬೇತಿ ನೀಡುವುದು ಹೀಗೆ ಸಜ್ಜನರ ಕಾರ್ಯಕ್ಷೇತ್ರ ವಿಶಾಲವಾದುದು.
ಸಜ್ಜನರ ತೋಟ, ಮನೆಯನ್ನು ನೋಡಿದರೆ ಸಾಕು ಎಂತಹ ನಿರಾಶಾವಾದಿ ರೈತರೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ವಿಶೇಷವೆಂದರೆ ಸಜ್ಜನ್ ಯಾವುದೇ ಯಂತ್ರೋಪಕರಣಗಳನ್ನು ಕೃಷಿಗೆ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿಯೇ, ಅತಿಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುತ್ತಿರುವುದು. ಕೊಟ್ಟಿಗೆ ಗೊಬ್ಬರವನ್ನು ದ್ರವರೂಪದಲ್ಲಿ, ಘನರೂಪದಲ್ಲಿ ಯಾವ ಯಾವ ಉದ್ದೇಶಕ್ಕೆ ಬಳಸಬಹುದೆಂಬುದಕ್ಕೆ ಅವರ ತೋಟವೇ ಒಂದು ಪ್ರಯೋಗಶಾಲೆಯಾಗಿದೆ. ಕೊಟ್ಟಿಗೆ ಗೊಬ್ಬರದ ದ್ರವವನ್ನು ಮೇಲೆತ್ತಿ ಸಂಗ್ರಹಿಸಲು, ತಾವೇ ತಯಾರಿಸಿದ ರಾಟೆ, ಕಾಲುವೆ, ನಿರುಪಯುಕ್ತ ವಸ್ತುಗಳಿಂದಾದುದು. ರಾಟೆಗೆ ಬಳಸಿದ್ದು ಕಾರಿನ ಹಳೆಯ ಚಕ್ರ, ನೈಲಾನ್ ಹಗ್ಗ, ಸೈಕಲ್ ಟ್ಯೂಬಿನ ರಬ್ಬರ್. ಮೇಲೆತ್ತಿದ ಗೊಬ್ಬರದ ದ್ರವವನ್ನು ಡ್ರಂನಲ್ಲಿ ಸಂಗ್ರಹಿಸಲು ತಾವೇ ಕಾಲುವೆಯನ್ನು ನಿರ್ಮಿಸಿದ್ದಾರೆ. ಸಂಗ್ರಹಗೊಂಡ ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ಬಳಸುತ್ತಾರೆ. ಘನ ರೂಪದ ಕೊಟ್ಟಿಗೆ ಗೊಬ್ಬರವನ್ನು ಎರೆಹುಳು ಸಾಕಣೆಗೆ ಬಳಸುತ್ತಾರೆ. ಹೆಚ್ಚಾದ ಎರೆಹುಳುಗಳನ್ನು ತಮ್ಮ ಗ್ರಾಮ ಹಾಗೂ ಬೇರೆ ಗ್ರಾಮದಲ್ಲೂ ಚರಂಡಿಗಳಲ್ಲಿ ಹಾಕಿದ್ದಾರೆ. ಚರಂಡಿಯಲ್ಲಿ ಸಮೃದ್ಧವಾಗಿ ಬೆಳೆಯುವ ಎರೆಹುಳುಗಳನ್ನು ಬೇರೆ ರೈತರೂ ಉಪಯೋಗಿಸಿಕೊಳ್ಳಬಹುದು. ಎರೆಹುಳು ಗೊಬ್ಬರವನ್ನು ಜರಡಿ ಹಿಡಿಯಲು, ಜರಡಿಯ ಯಂತ್ರವನ್ನು ತಾವೇ ಸಿದ್ಧಗೊಳಿಸಿದ್ದಾರೆ. ಇಲ್ಲೆಲ್ಲ ಬಳಕೆಯಾಗುವುದು ಕೇವಲ ಮಾನವಶಕ್ತಿಯೊಂದೇ, ವಿದ್ಯುತ್‌ನ್ನು ಅವಲಂಬಿಸಿಯೇ ಇಲ್ಲವೆಂಬುದು ಗಮನಿಸಬೇಕಾದ ಸಂಗತಿ. ಮಲ್ಲಿಗೆಯನ್ನು ಮುಖ್ಯಬೆಳೆಯನ್ನಾಗಿಸಿಕೊಂಡಿರುವ ಸಜ್ಜನ್, ಇದೀಗ ಬೆಟ್ಟದ ನೆಲ್ಲಿಕಾಯಿ, ಬೇಲದಹಣ್ಣು, ನೇರಳೆಹಣ್ಣುಗಳನ್ನು ಬೆಳೆಯುತ್ತ್ದಿದಾರೆ. ಭದ್ರಾ ರೈತರ ಕೂಟದಿಂದ ೨ ಬಾರಿ ರಾಜ್ಯಪ್ರಶಸ್ತಿ, ೧ ಬಾರಿ ಜಿಲ್ಲಾಪ್ರಶಸ್ತಿ ಪಡೆದ್ದಿದಾರೆ. ರಾಜ್ಯ, ರಾಷ್ಟ್ರಮಟ್ಟಗಳಲ್ಲಿ ಕೃಷಿ ಪ್ರವಾಸ ಮಾಡಿದ್ದಾರೆ. ಮೈಸೂರಿನಲ್ಲಿ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ರೈತರಿಗಾಗಿ ನಡೆಸುತ್ತಿರುವ ರಾಜ್ಯ ಮಟ್ಟದ ಸಹಜ ಕೃಷಿ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೆಲ್ಲವನ್ನು ಸಾಧಿಸಲು ಮುಖ್ಯ ಕಾರಣವನ್ನು ಕೇಳಿದರೆ, ಕೊರತೆ, ನೋವು ನನ್ನ ಎಲ್ಲ ಕ್ರಿಯಾಶೀಲತೆಗೆ ಕಾರಣ ಎನ್ನುತ್ತಾರೆ. ಅಂದಹಾಗೆ ಎಚ್.ವಿ.ಸಜ್ಜನ್ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರ. ಸಜ್ಜನರನ್ನು ಕಾಣಬೇಕೆನ್ನುವವರು, ಅವರ ಸಹಜ ಕೃಷಿಯ ಬಗ್ಗೆ ಆಸಕ್ತಿಯಿರುವವರುಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ೯೯೦೨೬೬೧೫೯೭




ಚಿತ್ರ, ಲೇಖನ -ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಶುಕ್ರವಾರ 17 ಜುಲೈ 2009

ಕನಸು ನಶೆಯೇರುವುದೆಂದರೆ...




ಗಾರ್ಮೆ೦ಟಿನ ಕೂಲಿಯೊಬ್ಬಳು
ಅವಸರದಿ ಸ್ಟಿಚ್ ಮಾಡುವಾಗ ಸೂಜಿ ಕೈಗ ನೆಟ್ಟು
ಮೆಲ್ಲಗೆ ಜಿನುಗಿದ ರಕ್ತದ ಕಲೆಗಳು
ಪ್ಯಾಕ್ಟರಿಯ ಮ್ಯಾನೇಜರ್ ಗೆ ಕಾಣದಂತೆ
ಅವಳ ಗೆಳತಿಯೇ ಜೀನ್ಸ್ ಪ್ಯಾಂಟನ್ನು ತೀಡಿ ತೀಡಿ
ಫಾಲಿಶ್ ಮಾಡಿ ಮರೆಮಾಚುತ್ತಾಳೆ !
ಕೆಲಸ ಕಳೆದುಕೊಳ್ಳುವ ಅಪಾಯದಿಂದ ಪಾರುಮಾಡಿ
ಅವಳ ಮುಖದಲ್ಲಿ ಗೆಲುವು ತರುತ್ತಾಳೆ !
*****
ಅದೇ ಜೀನ್ಸ್ ಪ್ಯಾಂಟನ್ನು
ತೊಟ್ಟ ಹುಡುಗಿಯೊಬ್ಬಳು
ಪಬ್ಬಿನಲಿ ಕುಡಿದು ಅಮಲೇರಿ
ಪ್ಯಾಂಟಿನ ಮೇಲೆಲ್ಲಾ ವಿಸ್ಕಿಯು ಚೆಲ್ಲಿದಾಗ
ರಕ್ತದ ಕಲೆ ಮತ್ತೇರಿ
ಗರ್ಮೆ೦ಟ್ ಹುಡುಗಿಯ ಕನಸಿಗೆ ಲಗ್ಗೆ ಇಟ್ಟಿವೆ!
ಇಲ್ಲಿ ಕೈಕಾಲು ಚಾಚದಸ್ಟು
ಪುಟ್ಟ ರೂಮಿನಲ್ಲಿ ಕೈ ಬೆರಳನೋವಲ್ಲಿ
ಗೆಳತಿಯ ಗಟ್ಟಿಯಾಗಿ ಬಿಗಿದಪ್ಪಿ ಮಲಗಿದ್ದಾಳೆ...
ಈಗ ಅವಳಿಗೂ ಮೆಲ್ಲಗೆ ನಶೆ ಏರುತ್ತಿದೆ.

-ಅರುಣ್ ಜೋಳದಕೂಡ್ಲಿಗಿ

ಸೋಮವಾರ 29 ಜೂನ್ 2009

ಮತ್ತೆ ಮತ್ತೆ ಅಕ್ಷತಾ....



ಆತ್ಮೀಯ ಗೆಳತಿ ಅಕ್ಷತಾ ಅವರ ಅಹರ್ನಿಶಿ ಪ್ರಕಾಶನದ ಎರಡನೇ ಪುಸ್ತಕ ಇಂದು ಬಿಡುಗಡೆ ಅವರಿಗೆ ಅಭಿನಂದನೆಗಳು

-ನಿರಂಜನ್,ಉಷಾ,ಅರುಣ್ ಮತ್ತು ಎಲ್ಲಾ ಸ್ನೇಹಿತರಿಂದ

ಬುಧವಾರ 17 ಜೂನ್ 2009

ಹೊರಳಿ, ಮರಳಿ ಹಳ್ಳಿಗೆ...






ಕಳೆದ ಹತ್ತುಹದಿನೈದು ವರ್ಷಗಳಿಂದ ಎಲ್ಲಿದ್ದಾನೋ ಎಂದು ಗೊತ್ತಿಲ್ಲದ ಸ್ನೇಹಿತನೊಬ್ಬ ಇಲ್ಲಿಯೇ ಕೊಪ್ಪಳದ ಸಮೀಪ ಬಿಕನಹಳ್ಳಿಯಲ್ಲಿದ್ದಾನೆಂದು ತಿಳಿದಾಗ ಅತೀವ ಸಂತಸವಾಯಿತು.
ಆತನ ಹೆಸರು ಜಯಂತ್. ನಾನು ಮೈಸೂರಲ್ಲಿ ಕನ್ನಡ ಎಂ.ಎ. ಪರೀಕ್ಷೆ ಬರೆಯಬೇಕಾದಾಗ ಇಳಿದುಕೊಳ್ಳಲು ತಾವು ಹಾಗೂ ಊಟೋಪಚಾರ ನೋಡಿಕೊಂಡ ವ್ಯಕ್ತಿ. ಹಾಗೇ ನೋಡಿದರೆ ಅದಕ್ಕೂ ಮೊದಲು ನಾವು ಸ್ನೇಹಿತರೇ ಅಲ್ಲ. ಸ್ನೇಹಿತ ಬಣಗಾರ್ ಜರ್ನಲಿಜಂ ಮಾಡಲು ಮೈಸೂರಿಗೆ ಹೋಗಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಆತ ಹುಡುಕಿಕೊಂಡ ತಾವು ಅದಾಗಿತ್ತು. ಆಗಲೇ ಆತನಿಗೆ ಬಣಗಾರ್ ಮೂಲವಾಗಿದ್ದ, ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ನಾನು ಮೂಲವಾದೆ.
ಸಿವಿಲ್ ಇಂಜನಿಯರ್ ಆಗಿದ್ದ ಜಯಂತ್ ಉದ್ಯೋಗದಲ್ಲಿದ್ದರು. ಸರಸ್ವತಿಪುರಂನಲ್ಲಿ ಒಂದು ಸಣ್ಣ ರೂಮ್ ಮಾಡಿದ್ದರು. ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರು. ಅವರಿಗೆ ವಿದ್ಯಾರ್ಥಿಗಳಾಗಿದ್ದ ಬಣಗಾರ್, ಮೈಸೂರು ತಾಲ್ಲೂಕಿನವರೇ ಆದ ಬಸವರಾಜ ಆತನ ರೂಮ್ ಸೇರಿಕೊಂಡಿದ್ದರು. ಚಿಕ್ಕ ರೂಮ್‌ನಲ್ಲಿ ಯಾರು ಬಂದರೂ ಬೇಸರಿಸಿಕೊಳ್ಳದ ಜಯಂತ್ ಎಲ್ಲರಿಗೂ ಅವಕಾಶ ನೀಡಿದ್ದರು. ತೆಳ್ಳನೆಯ ದೇಹ, ಮಿತಮಾತು, ಸಾಹಿತ್ಯದ ಓದು, ಒಂದು ಸ್ವಲ್ಪ ಹೊತ್ತು ವಯಲಿನ್ ನುಡಿಸುವುದು, ಸ್ವಯಂಪಾಕ ಆತನ ದಿನಚರಿಗಳಲ್ಲಿ ಸೇರಿಹೋಗಿದ್ದವು.
ಬೇರೆಯವರ ರೂಮ್‌ನಲ್ಲಿ ಬಣಗಾರ್ ಇದ್ದು, ಅಲ್ಲಿ ನನಗೆ ಅಹ್ವಾನ ನೀಡಿರುವುದು ನನಗೆ ಮುಜಗರದ ವಿಷಯವಾಗಿದ್ದರೂ ನನ್ನ ಬದುಕಿನ ಸ್ಥಿತಿ ಅನಿವಾರ್ಯವೂ ಆಗಿತ್ತು. ಆತನ ರೂಮ್ ಸೇರಿದಾಗ ಎಲ್ಲಾ ಮುಜಗರಗಳು ಹೊರಟು ಹೋದವು. ಅಷ್ಟೊಂದು ಆತ್ಮೀಯವಾಗಿ ನನ್ನೊಂದಿಗೆ ವಿಚಾರ ಹಂಚಿಕೊಂಡ ಜಯಂತ್ ತೋರಿದ ಪ್ರೀತಿ, ವಿಶ್ವಾಸದ ಪರಿ ನನಗೆ ಈಗಲೂ ಪುಳಕಗೊಳಿಸುತ್ತದೆ. ಅಷ್ಟೊತ್ತಿಗಾಗಲೇ ಮಾರ್ಕ್ಸ್‌ವಾದಿಯಾಗಿದ್ದ ನಾನು ಯಾವುದೇ ವಿಷಯ ಮಂಡಿಸುವಾಗಲೂ ’ಪ್ರಖರ’ವಾಗಿ ಮುಖಕ್ಕೆ ಹೊಡೆದಂತೆ ಮಂಡಿಸುತ್ತಿದ್ದೆ. ಭಿನ್ನಾಭಿಪ್ರಾಯಗಳನ್ನು ಸಹಿಸುತ್ತಿದ್ದಿಲ್ಲ. ಮೃದು ಮನಸ್ಸಿನ ಜಯಂತ್‌ಗೆ ಇದು ಇರಿಸುಮುರಿಸು ಆಗಿರಬಹುದು ಎಂದು ಈಗ ಅನ್ನಿಸುತ್ತದೆ. ಆಗ ಅದು ಸತ್ಯ ಹೇಳುವ ಪರಿ ಎಂದಷ್ಟೇ ನನಗೆ ಗೊತ್ತಿತ್ತು. ವಾರದಲ್ಲಿ ಒಂದು ದಿನ ಚಾಮುಂಡಿ ಬೆಟ್ಟವನ್ನು ಓಡುತ್ತಲೇ ಏರಿ, ದೇವಿಯ ದರ್ಶನ ಪಡೆದು, ಲಾಡು ತೆಗೆದುಕೊಂಡು ಬರುತ್ತಿದ್ದರು. ನಾಸ್ತಿಕನಾದ ನಾನು ಲಾಡು ತಿನ್ನಬಹುದು ಎಂದೇ ಹೇಳಿಯೇ ತಿನ್ನುತ್ತಿದ್ದೆ. ಇದಾದ ನಂತರ ಬದುಕಿನ ಸ್ತಿತ್ಯಂತರಗಳು ಎಲ್ಲಿ ಎಲ್ಲಿಗೂ ಕೊಂಡೊಯ್ದು ಎಲ್ಲರೂ ಒಂದಲ್ಲ ಒಂದು ದಿಕ್ಕಿಗೆ ಹೊರಳಿಕೊಂಡೆವು. ಜಯಂತ್ ನೆನಪಾದಾಗ ಎಲ್ಲಿ ಜಯಂತ್? ಅಂತಹ ಬಣಗಾರ್‌ನಿಗೆ ಕೇಳಿದರೆ, ನನಗೂ ಸಿಕ್ಕಿಲ್ಲ, ಸ್ವಲ್ಪದಿನ ಬೆಂಗಳೂರಲ್ಲಿ ಇದ್ದನಂತೆ, ನಂತರ ಚಿನ್ನೈಗೆ ಹೋಗಿದ್ದಾನೆಂದು ಹೇಳಿದ, ಮತ್ತೊಂದು ಸಲ, ಉತ್ತರ ಭಾರತದ ಯಾವುದೋ ಊರಲ್ಲಿದ್ದಾನಂತೆ, ಮಗದೊಂದು ಸಲ, ಜಯಂತ್ ಸಿಗುವುದಿಲ್ಲ, ಆತ ವಿದೇಶದಲ್ಲಿದ್ದಾನೆ ಎಂದು ಹೇಳಿ ಅಂತಿಮಷರಾ ಬರೆದು ಬಿಟ್ಟ. ಬ್ಯಾಂಕಾಕ್, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಐದುವರ್ಷಗಳ ಕಾಲ ಉದ್ಯೋಗದಲ್ಲಿದ್ದ ಜಯಂತ್ ಒಂದು ದಿನ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಆ ದೇಶದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಅದರ ಮೂಲಕ್ಕೆ ಹೋದ ಜಯಂತ್ ಹಣವೇ ಪ್ರಧಾನವಾಗಿರುವ ಜಗತ್ತಿನಲ್ಲಿ ನಾನು ಜೀವಿಸುತ್ತಿರುವುದು ಯಾಕೇ? ಎಂಬ ಪ್ರಶ್ನೆ ಕೇಳಿಕೊಂಡ, ಬದುಕುವುದಕ್ಕೆ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವುದು ಕೇವಲ, ಅನ್ನ, ಬಟ್ಟೆ, ವಿಚಾರ ಮಾತ್ರ ಅನ್ನಿಸಿದೊಡನೆ ಪಿಚ್ಚೆನಿಸಿ ಉದ್ಯೋಗಕ್ಕೆ ರಾಜೀನಾಮೆ ಬಿಸಾಕಿ, ಹೊರಳಿ ನೋಡಿಕೊಂಡು, ಮರಳಿ ತಮ್ಮ ಕುಗ್ರಾಮಕ್ಕೆ ಬಂದು ಬಿಟ್ಟರು. ಉನ್ನತ ಉದ್ಯೋಗ ಬಿಟ್ಟು, ಮಳೆಯಾಶ್ರಿತ ಕೃಷಿ ಮಾಡುತ್ತೇನೆ ಎಂದು ಬಂದವರನ್ನು ಈ ಸಮಾಜ ’ಹುಚ್ಚುತನ’ ಎಂದೇ ನಗುತ್ತದೆ. ಹಾಗೇ ಈಗಲೂ ನಗುತ್ತಿದೆ ಕೂಡಾ.
ಅಂತಹ ಜಯಂತ್ ಕೊಪ್ಪಳದ ಬಳಿ ಬಿಸನೂರುನಲ್ಲಿದ್ದಾನೆಂದು ತಿಳಿದಾಗ ಕಂಡು ಬರಲು ಬಣಗಾರ್ ಕಾರು ರೆಡಿ ಮಾಡಿದರು. ಕನ್ನಡ ವಿವಿ ಕಲಾವಿದ ಕೆ.ಮಕಾಳಿ, ಭಾವೈಕ್ಯತಾ ವೇದಿಕೆಯ ಪಿ. ಅಬ್ದುಲ್, ಕಾರು ಚಾಲಕ ವೀರಭದ್ರಪ್ಪ, ನಾವು ಬೆಳಿಗ್ಗೆಯೇ ಹೊರಟೆವು. ಬಿಸನೂರು ಅಲ್ಲ, ಅದು ಬಿಕನೂರು ಎಂದು ಗೊತ್ತು ಮಾಡಿಕೊಂಡು ಆ ಕುಗ್ರಾಮ ಸೇರಬೇಕಾದರೆ ಸಾಕು ಸಾಕಾಯಿತು. ದಾರಿಯಲ್ಲಿ ಹಳ್ಳದ ಹುದಲಲ್ಲಿ ಕಾರಿನ ಚಕ್ರ ಸಿಕ್ಕು ಕೊಂಡು ಹಿಂದಕ್ಕೆ ಬಂದು, ಮತ್ತೊಂದು ದಾರಿಯಲ್ಲಿ ಸಾಗಿದ್ದು ನಡೆಯಿತು. ಅಂತೂ, ಇಂತೂ ಜಯಂತ್ ಮನೆ ಪತ್ತೆ ಹಚ್ಚಿದಾಗ ಜಯಂತ್ ತಂದೆ ಜಯಂತ್ ಹೊಲದಲ್ಲಿದ್ದಾನೆಂದು ಹೇಳಿ, ನಮ್ಮ ಜೊತೆ ಹೊಲಕ್ಕೆ ಹೊರಟರು. ಕಾಲು ಹಾದಿ ಹಿಡಿದು ಹಳ್ಳದಲ್ಲಿ ಇಳಿದು ಮೇಲತ್ತುವಾಗ ಜಯಂತ್ ಅಲ್ಲಿ ಪ್ರತ್ಯಕ್ಷ. ಮೆಲ್ಲಗೆ ಬನ್ನಿ, ಇವು ನ್ಯಾಚುರಲ್ ಗೇಟ್‌ಗಳು ಎಂದು ನಮ್ಮನ್ನು ಗುರುತಿಸಿ ಕೈ ಹಿಡಿದು ಕರೆದುಕೊಂಡರು. ಅದೇ ಜಯಂತ್. ಅದೇ ನೀಳ ದೇಹ, ಅದೇ ಮಂದಸ್ಮಿತ ನಗು, ಬಟ್ಟೆ ಮಾತ್ರ ಮಾಸಲು ಹತ್ತಿಬಟ್ಟೆಯವು. ಹರಿದ ಚಪ್ಪಲಿ, ಅಪ್ಪಟ ಭಾರತೀಯ ಕೃಷಿಕನಾಗಿ ಬದಲಾಗಿದ್ದ ಜಯಂತ್. ಕುಡಿಯುವ ನೀರಿಗೂ ಪರಿತಪಿಸುವ ಕುಗ್ರಾಮದಲ್ಲಿ, ತೋಡಿದಷ್ಟು ಉಪ್ಪು ನೀರು ಸಿಗುವ ಊರಿನಲ್ಲಿ, ಸರಿಯಾಗಿ ಒಂದು ಘಳಿಗೆಯೂ ವಿದ್ಯಾವಂತರೆನಿಸಿಕೊಂಡವರು ಇರಲಾರದ ಊರಲ್ಲಿ ಜಯಂತ್ ತಣ್ಣಗೆ ಇರುವುದಾದರೂ ಹೇಗೆ?
ಸಹಜ ಕೃಷಿಯ ಮೂಲಕ ತಮ್ಮ ೧೬ ಏಕರೆ ಎರೆ ಹಾಗೂ ಕೆಂಪು ಭೂಮಿಯ ಕೃಷಿ ನಡೆಸುತ್ತಿರುವ ಜಯಂತ್‌ನನ್ನು ಕಂಡು ನಕ್ಕವರು, ಹಿಯ್ಯಾಳಿಸುತ್ತಿರುವುದು ಇಡೀ ಊರೇ ಆಗಿದೆ.
ಗೊಬ್ಬರವಿಲ್ಲದ, ಹೈಬ್ರಿಡ್ ಬೀಜವಿಲ್ಲದೇ, ಆ ಭಾಗದ ಮೂಲ ತಳಿಗಳನ್ನು ಪತ್ತೆ ಹಚ್ಚಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಮಾರುಕಟ್ಟೆ ಅಗತ್ಯವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾರೆ. ಕುಸಬಿ ಬೆಳೆದು ಅದನ್ನು ಗಿರಣಿಯಲ್ಲಿ ಹಾಕಿಸಿ, ಎಣ್ಣೆ ಮಾಡಿಕೊಳ್ಳುತ್ತಾರೆ. ನವಣಿ, ಜೋಳ, ಸಾವಿ, ತೊಗರಿ, ಶೇಂಗಾ, ಅಗಸಿ, ಹೆಸರು, ಉದ್ದು ಬೆಳೆಯುತ್ತಾರೆ. ಇವರ ಬೆಳೆದ ಫಸಲು ಇವರ ಮನೆಯಲ್ಲಿಯೇ ಇದೆ. ಹಣ ಯಾಕೇ ಬೇಕು. ಸಣ್ಣಪುಟ್ಟ ಖರ್ಚುಗಳು ಅಷ್ಟು ತಾನೇ ಎಂದು ಹೇಳುತ್ತಾರೆ. ನಮಗೆ ಸಣ್ಣಪುಟ್ಟ ಖರ್ಚುಗಳ ಅಗತ್ಯವೂ ಇಲ್ಲ ಎಂದೇ ನಗುತ್ತಾರೆ. ಉತ್ತರ ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಪ್ರೀತಿಸಿ ಮದುವೆಯಾಗಿದ್ದ ಆ ಮಹಿಳೆ ಕೂಡಾ ಇಂತಹ ಕುಗ್ರಾಮದಲ್ಲಿ ಗಂಡನ ಜೊತೆ ಇದ್ದಾಳೆ. ಕನ್ನಡ ಭಾಷೆ ಬರದು, ಈಗೀಗ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆಯಂತೆ. ಇವರ ಎದುರಲ್ಲಿ ರಾಜರೋಷವಾಗಿ ಗೊಬ್ಬರ ಹಾಕಿ, ಹೈಬ್ರಿಡ್ ಬಂಪರ್ ಬೆಳೆ ಬೆಳೆಯುವ ರೈತರು, ಅವರ ಎದುರಲ್ಲಿ ದೇಶಿ ತಳಿಗಳು, ಅದರಲ್ಲೂ ಇಳುವರಿ ಕಡಿಮೆ ಕೊಡುವ ಬೆಳೆ ಬೆಳೆಯುವ ಜಯಂತ್ ಪೇಲವವಾಗಿ ಕಾಣುತ್ತಾರೆ. ಕೀಟಗಳ ಹಾವಳಿ, ಬೇರೆ ಬೇರೆ ಕಾರಣದಿಂದಲೂ ಬೆಳೆ ಹಾಳಾದರೂ ಇವರು ಚಿಂತೆ ಮಾಡುವುದಿಲ್ಲ. ಕೀಟಗಳು ಕೂಡಾ ತಿನ್ನಬೇಕು ತಾನೇ ತಿನ್ನಲಿ ಬಿಡಿ ಎನ್ನುತ್ತಾರೆ. ಅಷ್ಟೆಲ್ಲಾ ಬಂಪರ್ ಬೆಳೆ ಬೆಳೆದರೂ ಆ ಊರಲ್ಲಿ ಸ್ವಾವಲಂಬನೆಯಿಂದ ಯಾವ ರೈತನೂ ಜೀವಿಸುತ್ತಿಲ್ಲ. ಆದರೆ ಅಷ್ಟು ಕಡಿಮೆ ಬೆಳೆದು ಸ್ವಾವಲಂಬನೆಯಿಂದ ಬದುಕಿ ತೋರಿಸುತ್ತಿದ್ದಾನೆ ಜಯಂತ್. ಜಯಂತ್‌ನ ಮನೆಯಲ್ಲಿ ಟಿ.ವಿ. ಇಲ್ಲ, ಅದರ ಅಗತ್ಯವೂ ಇಲ್ಲ. ನೋಡುತ್ತೀರಿ, ಹೊರಳಿ, ಮರಳಿ ಇಲ್ಲಿಗೆ ಬರುತ್ತಾರೆ ಎಂದು ಜಯಂತ್ ಹೇಳುತ್ತಾನೆ. ಜಾಗತೀಕರಣದ ಈ ಹೊತ್ತಿನಲ್ಲಿ ಜಗತ್ತಿನಲ್ಲಿ ಯಾವ ಸರ್ಕಾರಗಳು ಬರಬೇಕು, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರಬೇಕು ಎನ್ನುವುದನ್ನು ಕೆಲವೇ ಕೆಲವು ಬೆರಳೆಣಿಕೆಯ ಜನ ನಿರ್ಧರಿಸುತ್ತಿದ್ದಾರೆ. ಇಂತಹ ಮೋಡಿಗೆ ನಾವು ಯಾಕೇ ಒಳಗಾಗಬೇಕು. ನಮ್ಮ ವಿವೇಕ, ವಿಚಾರದೊಡನೆ ಬದುಕಬೇಕು ಎನ್ನುತ್ತಾನೆ ಜಯಂತ್. ಇದೇ ಉತ್ತರವೂ ಎನ್ನುತ್ತಾನೆ. ಜಯಂತ್ ಮನೆಗೆ ಬಂದು ದೇಶಿ ತಿಂಡಿ ತಿನ್ನುವಾಗ ’ಕಾಯಕವೇ ಕೈಲಾಸ’ ಎಂದು ಹೇಳುವ ಬಸವಣ್ಣನ ಕ್ಯಾಲೆಂಡರ್ ಗಾಳಿಗೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಹೊಯ್ದಾಡುತ್ತಿತ್ತು. ದೇಶಿ ಕಡಲೆ, ಕುಸಬಿ ಪಡೆದುಕೊಂಡು, ಕಾರು ಹತ್ತುವಾಗ ರಸ್ತೆ ಹಾಳಾಗಿರುವ ಬಗ್ಗೆ ನಾವು ಗೋಳು ತೋಡಿಕೊಂಡು ಸರ್ಕಾರವನ್ನು ಬಯ್ದರೆ, ಜಯಂತ್ ಹೇಳಿದ, ರಸ್ತೆ ಇಷ್ಟೇ ಇದ್ದರೆ ಸಾಕು, ನಡೆಯಲು ಬರುತ್ತದಲ್ಲವೇ? ಅವಕ್ಕಾಗುವ ಸರದಿ ನಮ್ಮದು. ಜಯಂತ್ ತುಳಿದ ಹಾದಿಯನ್ನು ಬದಿಗೊತ್ತಿ ರಾಜಮಾರ್ಗಕ್ಕೆ ನಾವು ಹೊರಳಿಕೊಂಡಾಗ ಕಳೆದುಕೊಂಡ ಅನುಭವ ಎಲ್ಲರಲ್ಲೂ ದಟ್ಟವಾಗುತ್ತಾ ಹೊಯಿತು. ನಮ್ಮ ಜೊತೆ ದೇಶಿಯ ಕಾಳುಗಳು ನಾವಿದ್ದೇವೆ ಎಂದು ಹೇಳಿದವು.

ಶುಕ್ರವಾರ 17 ಎಪ್ರಿಲ್ 2009

ಕಾಡುವ ಕತೆಗಳು




(ಸ್ನೇಹಿತರಾದ ಚಿದಾನಂದ ಸಾಲಿಯವರ ಕಥಾ ಸಂಕಲನ ಮತ್ತು ಡಾ.ಆನಂದ್ ಋಗ್ವೇದಿಯವರ ವಿಮರ್ಶಾ ಸಂಕಲನಗಳನ್ನು ಮುದ್ದಾದ ಮುದ್ರಣ, ಮೌಲಿಕ ಪ್ರಕಟಣೆಗೆ ಮತ್ತು ಆತ್ಮೀಯ ಸ್ನೇಹಕ್ಕೆ ಹೆಸರಾದ ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್ ರವರು ಹೊರತರುತ್ತಿರುವ ಸಂದರ್ಭದಲ್ಲಿ ಎರಡು ಪುಸ್ತಕಗಳ ಮುಖಪುಟಗಳು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಸಾಲಿ’ಯವರ ಕಥಾಸಂಕಲನದ ದೇವು ಪತ್ತಾರರ ವಿಮರ್ಶೆ ನಿಮಗಾಗಿ)


ಸಿದ್ಧ ವಿನ್ಯಾಸದಿಂದ ‘ಮುಕ್ತ’ವಾದ ಕಥೆಗಳು ‘ಎಲೆಯುದುರುವ ಕಾಲ’ ಎಂಬ ಅನುವಾದಿತ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಧಿಕೃತ ಪ್ರವೇಶ ಪಡೆದ ಚಿದಾನಂದ ಸಾಲಿ ನಂತರ ‘ಮೌನ’ ಎಂಬ ಗಜಲ್ ಸಂಕಲನ ಪ್ರಕಟಿಸಿದರು. ಅದಕ್ಕೂ ಮುನ್ನ ಅಂದರೆ ಸುಮಾರು ದಶಕದ ಹಿಂದೆಯೇ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ‘ಕಥೆಗಾರ’ ಎಂದು ಗುರುತಿಸಿಕೊಂಡಿದ್ದ ‘ಸಾಲಿ’ ಅನುವಾದ, ಗಜಲ್‌ಗಳ ಕಡೆಗೆ ಮುಖ ಮಾಡಿದ್ದರು. ‘ಕೊಟ್ಟ ಕುದುರೆಯನೇರಲರಿಯದೆ’ ಅಂತಹ ಓದಿಸಿಕೊಳ್ಳುವ ಗುಣವುಳ್ಳ ಉತ್ತಮ ಕಥೆ ಬರೆದಿದ್ದ ಕಥೆಗಳ ವಿಷಯಕ್ಕೆ ಮೌನವಾದರೇನೋ ಅನ್ನಿಸತೊಡಗಿತ್ತು. ಆದರೆ, ನಾಡಿನ ಪ್ರಮುಖ ದೈನಿಕಗಳ ಪುರವಣಿ ಮತ್ತು ವಾರಪತ್ರಿಕೆಗಳಲ್ಲಿ ಕಥೆ ಪ್ರಕಟಿಸುವ ಮೂಲಕ ‘ಅಸ್ತಿತ್ವ’ ತೋರಿಸುತ್ತ ಬಂದಿದ್ದರು. ಕಥಾಸ್ಪರ್ಧೆಯ ಬಹುಮಾನ ಪಡೆಯುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದ್ದರು.

ಪ್ರತಿಯೊಂದು ಕಥೆಯೂ ಹೊಸ ಜೀವನಾನುಭವ ಕಟ್ಟಿಕೊಡುವ ‘ಪ್ರಯೋಗ’ ಎಂದು ಭಾವಿಸುವ ಕಥೆಗಾರ ಮಾತ್ರ ಚೌಕಟ್ಟುಗಳನ್ನು ಮೀರಿ ತನ್ನದೇ ಹೊಸ ಕಥೆ ಕಟ್ಟಬಲ್ಲ. ಚಿದಾನಂದ ಸಾಲಿ ತಮ್ಮ ಮೊದಲ ‘ಧರೆಗೆ ನಿದ್ರೆಯು ಇಲ್ಲ’ ಕಥಾಸಂಕಲನದ ಮೂಲಕ ತಾವು ಕೇವಲ ಸ್ಪರ್ಧೆಗಾಗಿ ಬರೆಯುವ ಕಥೆಗಾರ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಸಂಕಲನದ ಎಲ್ಲ ಕಥೆಗಳೂ ಒಂದಕ್ಕಿಂತ ಮತ್ತೊಂದು ವಸ್ತು, ವಿಷಯ, ನಿರ್ವಹಣೆ ಮತ್ತು ತಂತ್ರದ ದೃಷ್ಟಿಯಿಂದ ಭಿನ್ನವಾಗಿವೆ. ವೈವಿಧ್ಯತೆಯೇ ಇಲ್ಲಿನ ಕಥೆಗಳ ಜೀವಾಳ. ಕನ್ನಡದ ಅಥವಾ ಹೈದರಾಬಾದ್ ಕರ್ನಾಟಕದ ಕಥೆಗಾರರ ಸಿದ್ಧವಿನ್ಯಾಸದ ಹೆಜ್ಜೆ ನಾಡಿನಲ್ಲಿ ನಡೆಯಬಯಸದ ‘ಸಾಲಿ ಮಾಸ್ತರ’ ತನ್ನದೇ ಹೊಸ ದಾರಿ ಕಂಡುಕೊಂಡಿದ್ದಾರೆ.

‘ಕೊಟ್ಟ ಕುದುರೆಯನೇರಲರಿಯದೆ’ ಮತ್ತು ‘ಆಸೆಯೆಂಬ ತಥಾಗತನ ವೈರಿ’ ಕಥೆಗಳು ಸಂಕಲನದಲ್ಲಿ ಗಮನ ಸೆಳೆಯುವ ಗಂಭೀರ ಕಥೆಗಳು. ಬದುಕಿನ ನಗ್ನಸತ್ಯವನ್ನು ಯಾವುದೇ ಮುಜುಗರಕ್ಕೆ ಎಡೆಯಿಲ್ಲದಂತೆ ಬಿಚ್ಚಿಡುವ ಈ ಎರಡು ಕಥೆಗಳು ವಸ್ತು ಮತ್ತು ನಿರ್ವಹಣೆಯ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಸೂಕ್ಷ್ಮ ಸಂವೇದಿ ಓದುಗನನ್ನು ಈ ಎರಡು ಕಥೆಗಳು ಡಿಸ್ಟರ್ಬ್ ಮಾಡಿಬಿಡುತ್ತವೆ ಮತ್ತು ಯೋಚನೆಗೆ ಹಚ್ಚುತ್ತವೆ.

ಸಲಿಂಗ ಕಾಮದ ಸುತ್ತ ಹೆಣೆದಿರುವ ‘ಒಳಗಿನೊಳಗಿನ ಒಳಗೆ’ ಕಾವ್ಯಾತ್ಮಕ ನಿರೂಪಣೆಯಿಂದ ಪ್ರಿಯವಾಗುತ್ತದೆ. ‘ಹಿಪಾಕ್ರಸಿ’ ಕೇಂದ್ರವಾಗಿಟ್ಟುಕೊಂಡ ‘ಕಾಗೆಯೊಂದಗುಳ ಕಂಡರೆ’ ಮತ್ತು ‘ಅಂಬರದೊಳಗಾಡುವ ಗಿಳಿ’ ಕಥೆಗಳು ಸಭ್ಯ-ಅಸಭ್ಯಗಳನ್ನು ಮುಖಾಮುಖಿಯಾಗಿಸಿ ರೂಢಿಗತ ನಂಬಿಕೆಯನ್ನು ಹುಸಿ ಮಾಡುತ್ತವೆ.

ನಿರೀಕ್ಷಿತ ಅಂತ್ಯ ತೋರಿಸುವ ನಿಶ್ಚಿತ ಉದ್ದೇಶವಿರುವ ‘ಕಳ್ಳಗಂಜಿ ಕಾಡ ಹೊಕ್ಕರೆ..’ ಕಥೆಯಲ್ಲಿ ಪ್ರಬಂಧ ಧ್ವನಿಯಿದೆ. ‘ಮನಸೂಂದ್ರೆ ನಾಕೊಂದ್ಲೆ ನಾಕಲ್ಲ’ ಕಥೆಯ ತಂತ್ರ ಅತ್ಯಂತ ವಿಶಿಷ್ಟವಾದದ್ದಾಗಿದೆ. ಮನಸ್ಸು ಮತ್ತು ಬುದ್ಧಿಗಳ ನಡುವಿನ ತಾಕಲಾಟ ಮತ್ತು ಆ ನಂತರ ಅದಕ್ಕೆ ಘಟನೆಯನ್ನು ಬೆಸೆಯುವ ಮೂಲಕ ಹೇಳಿದ ಕಥೆ ಮನತಟ್ಟುತ್ತದೆ. ‘ತಾಯ ಮೊಲೆವಾಲು ನಂಜಾಗಿ ಕೊಲುವೆಡೆ’ ಕಥೆಯು ಘಟನೆಯೊಂದನ್ನು ಕಥೆಯಾಗಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ. ಅದರಾಚೆಗೆ ಬೆಳೆದು ನಿಲ್ಲುವ ಕಥೆಯು ತನ್ನದೇ ಅರ್ಥದ ಸಾಧ್ಯತೆಗಳನ್ನು ಬಿಚ್ಚಿಡುತ್ತ ಹೋಗುತ್ತದೆ.

ಈ ಸಂಕಲನದ ಕಥೆಗಳ ಭಾಷೆಯ ಬಗ್ಗೆ ಬರೆಯದಿದ್ದರೆ ಅಪೂರ್ಣವಾಗುತ್ತದೆ. ಕಾವ್ಯಾತ್ಮಕ ಪದಗಳ ಬಳಕೆ, ಸೂಚ್ಯವಾಗಿ ಹೇಳುವ ರೀತಿ ಅಪ್ಯಾಯಮಾನವಾಗಿದೆ. ಭಾವಗೀತಾತ್ಮಕ ನಿರೂಪಣೆ ಇಲ್ಲಿನ ಕಥೆಗಳ ಓದನ್ನು ಸಹ್ಯವಾಗಿಸುತ್ತದೆ. ಶಂಕರಗೌಡ ಬೆಟ್ಟದೂರು ಅವರ ಕಲಾಕೃತಿಗಳನ್ನು ಒಳಗೊಂಡ ಆಕರ್ಷಕ ಮುಖಪುಟ ಮತ್ತು ಅಷ್ಟೇ ಸೊಗಸಾದ ಮುದ್ರಣ ಗಮನ ಸೆಳೆಯುತ್ತವೆ. ತಪ್ಪಿಲ್ಲದಂತೆ ಅಥವಾ ಮುದ್ರಣದೋಷಗಳಾಗದಂತೆ ವಹಿಸಿದ ಕಾಳಜಿ ಎದ್ದು ಕಾಣಿಸುತ್ತದೆ.

-ದೇವು ಪತ್ತಾರ

ರವಿವಾರ 22 ಮಾರ್ಚ್ 2009

ಪ್ರೊ.ಎಸ್.ಎಸ್.ಹಿರೇಮಠ-ಒಂದು ನೆನಪು






(ಬಳ್ಳಾರಿ ಜಿಲ್ಲೆಯಲ್ಲಿ ಎಡಪಂಥೀಯ ಚಳವಳಿ, ಬಂಡಾಯ, ಸಮುದಾಯ ಚಳವಳಿ ಬೆಳೆಸಿದ ಪ್ರಗತಿಪರ ಚಿಂತಕ, ಕವಿ, ಹೋರಾಟಗಾರ ಹಾಗೂ ಸಂಶೋಧಕರಾಗಿದ್ದ ಪ್ರೊ.ಎಸ್.ಎಸ್.ಹಿರೇಮಠರ ಬಗ್ಗೆ ಯಾರಿಗೆ ಗೊತ್ತಿಲ್ಲ. ಜಿಲ್ಲೆಯವರೇ ಆಗಿ ಹೋದ ಅವರು ಈಚಿಗೆ ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಬಗ್ಗೆ ಪರುಶುರಾಮ ಕಲಾಲ್ ಇಲ್ಲಿ ಬರೆದಿದ್ದಾರೆ.)

ಎರಡು ಘಟನೆಗಳು: ಎಸ್.ಎಸ್. ಹಿರೇಮಠರೆಂಬ ಮುಗ್ಧರು!

ಬಹಳ ಹಿಂದಿನ ಘಟನೆ ನೆನಪಾಗುತ್ತಿದೆ. ಈಗ ಪ್ರಜಾವಾಣಿಯ ಉಪ ಸಂಪಾದಕರಾಗಿರುವ ಗುಡಿಹಳ್ಳಿ ನಾಗರಾಜ್ ಆಗ ಹೋರಾಟಗಾರರು. ಅವರು ಒಂದು ಕಪ್ ಬಿಯರ್ ಕುಡಿದ ಸುದ್ದಿ ಹಿರೇಮಠರಿಗೆ ಹೇಗೋ ಗೊತ್ತಾಗಿ ಬಿಟ್ಟಿತ್ತು. ಅದರ ವಿಚಾರಣೆಯಲ್ಲಿ ನಾನೂ ಇದ್ದೆ. ಹಿರೇಮಠರು ಹೆಂಡ ಕುಡ್ಕಂಡು ಎಂದು ಬಯ್ಯುವುದನ್ನು ತಾಳಲಾರದೇ ಗುಡಿಹಳ್ಳಿ ಸಾರ್ ಬಿಯರ್ ಏನು ಹೆಂಡವಲ್ಲ, ಅದರಲ್ಲಿ ಅಲ್ಕೋಹಾಲ್ ಸ್ವಲ್ಪ ಇರುತ್ತದೆ. ಒಂದು ಕಪ್ ಕುಡಿದಿದ್ದೇನೆ ಅಷ್ಟೆ ಎಂದು ಸಮರ್ಥಿಸಿಕೊಂಡರು.

ಏನ್ರಿ ಕಲಾಲ್ ಇದೇನು ಹೊಸ ಕತೆ ಎಂದು ಕೇಳಿದರು. ಬಿಯರ್, ವ್ಹಿಸ್ಕಿ, ರಮ್, ಜಿನ್, ಸರಾಯಿ ಇತ್ಯಾದಿ ಕುಲಗಳನ್ನೆಲ್ಲಾ ಹೇಳಿದೆ. ಎಲ್ಲಾ ವಿವರ ಕೇಳಿದ ಅವರು ಪ್ರತಿಕ್ರಿಯಿಸಿದ್ದು ಹೀಗೆ ಇದರಲ್ಲೂ ವರ್ಗ ಬಂದಿದೆ ಅಲ್ಲರಿ, ಕುಡುಕರನ್ನು ವರ್ಗಬೇಧ ಮಾಡಿ ಹಾಕಿ ಅಲ್ಲೂ ತಾರತಮ್ಯ ಸೃಷ್ಠಿಸಲಾಗಿದೆ. ಇದನ್ನು ಗುಡಿಹಳ್ಳಿ ಅಂತವರೂ ನಂಬುತ್ತಾರಲ್ಲ. ಹೆಂಡ ಅಷ್ಟೇ, ಬಿಯರ್ ಅಷ್ಟೇ

ಘಟನೆ ಎರಡು: ಹರಪನಹಳ್ಳಿಯಲ್ಲಿದ್ದ ಎಸ್.ಎಸ್.ಹಿರೇಮಠರ ಮನೆಗೆ ಹೋದಾಗ ಅವರು ಹಬ್ಬಗಳು ಪುಸ್ತಕ ನೀಡಿ ಅದನ್ನು ಕನ್ನಡ ವಿಶ್ವವಿದ್ಯಾಲಯದ ಆಗೀನ ಕುಲಪತಿಗಳಾಗಿದ್ದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ತಲುಪಿಸಬೇಕೆಂದು ಹೇಳಿದರು. ನನಗೂ ಒಂದು ಪುಸ್ತಕ ನೀಡಿದ್ದರು.

ನಾನು ಆ ಪುಸ್ತಕದ ರಕ್ಷಾಪುಟ ಹಾಗೂ ಒಳಪುಟಗಳನ್ನು ನೋಡಿ, ಏನು ಸಾರ್ ಪುಸ್ತಕವನ್ನು ಎಷ್ಟು ಕೆಟ್ಟದ್ದಾಗಿ ತಂದು ಬಿಟ್ಟಿದ್ದೀರಿ ಎಂದೆ.

ಹಿರೇಮಠರಿಗೆ ಸಿಟ್ಟು ಬಂತು. ಪುಸ್ತಕದ ವಿಷಯ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ಮುದ್ರಣ, ಹಾಳೆ ಕುರಿತು ಮಾತನಾಡಿದ್ದರಿಂದ ಈ ಸಿಟ್ಟು ಬಂದಿತು ಎಂದು ಕಾಣುತ್ತದೆ. ಹಾಳೆ ಮುಖ್ಯ ಅಲ್ಲರಿ, ವಿಷಯ ಮುಖ್ಯ ಎಂದು ಗದರಿಕೊಂಡರು. ನನಗೂ ಸಿಟ್ಟು ಬಂತು. ಹಾಗಾದರೆ ಮುದ್ರಣ ಯಾಕೆ ಮಾಡಿಸಿದಿರಿ, ಬರೆದಿದ್ದನ್ನು ಟೈಪ್ ಮಾಡಿಸಿ, ಜಿರಾಕ್ಸ್ ಮಾಡಿಸಿದ್ದರೆ ಆಗುತ್ತಿತ್ತು. ರಕ್ಷಾಪುಟ ಯಾಕೇ? ಅದು ಕೂಡಾ ಬೇಕಾಗಿದ್ದಿಲ್ಲ ಎಂದೆ.

ಒಂದು ಕ್ಷಣ ಅಲ್ಲಿ ಮೌನ. ನಂತರ ಹಿರೇಮಠರು ನಿಧಾನವಾಗಿ ಹೇಳಿದರು. ಅವಸರವಾಯಿತು, ತಪ್ಪಾಗಿ ಬಿಟ್ಟಿದೆ. ಇನ್ನೊಂದು ಸಲ ಈ ತಪ್ಪು ಮಾಡುವುದಿಲ್ಲ.ಕಲಬುರ್ಗಿಯವರಿಗೆ ಈ ಪುಸ್ತಕ ಒಪ್ಪಿಸಿ ಸಮಾಧಾನ ಮಾಡಿ ಎಂಬ ವಿನಂತಿ ಬೇರೆ.

ಹೌದು, ಹಿರೇಮಠರಲ್ಲಿ ಒಬ್ಬ ಮುಗ್ಧ ಬಾಲಕನೂ ಇದ್ದ. ಆತ ವ್ಯವಹಾರನಸ್ಥನಲ್ಲ. ಈ ಪ್ರಾಪಂಚಿಕ ಜಗತ್ತಿನ ಜೊತೆ ಆತ ಬೆರೆಯಲಾರ. ಹಿರೇಮಠರಲ್ಲಿ ಚಿಂತಕ, ಹೋರಾಟಗಾರ, ಸಂಶೋಧಕ, ಕವಿ ಎಲ್ಲರೂ ಇದ್ದರೂ ಈ ಬಾಲಕನದೇ ಯಾವಾಗಲೂ ಮೇಲುಗೈ.

ತಾವು ಬರೆದ ಬರಹದಂತೆ ಬದುಕಿದ ಹಿರೇಮಠರು ಮುಖಕ್ಕೆ ಹೊಡೆದಂತೆ ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡರು. ಮಾತನಾಡಿದ ಮರುಗಳಿಗೆ ಅದನ್ನು ಮರೆತು ಬಿಡುವ ಹಿರೇಮಠರ ಮುಗ್ಧತೆಯನ್ನು ಅನೇಕರು ಅರ್ಥ ಮಾಡಿಕೊಳ್ಳಲಿಲ್ಲ. ನೆನಪು ಇಟ್ಟುಕೊಂಡು ಸಮಯ ಕಾದು ಸೇಡು ತೀರಿಸಿಕೊಂಡರು. ಹಿರೇಮಠರಿಗೆ ಇದು ಕೊನೆಯವರಿಗೂ ಗೊತ್ತಾಗಲೇ ಇಲ್ಲ. ಎಲ್ಲರನ್ನೂ ಮುಗ್ಧವಾಗಿ ನಂಬಿ ಬಿಡುತ್ತಿದ್ದರು. ವಿರೋಧಿಗಳನ್ನು ಸಹ.

ಹೀಗಾಗಿ ಕೊನೆಗಾಲದಲ್ಲಿ ತೀರಾ ಸಂಕಷ್ಟಗಳಿಗೆ ಸಿಲುಕಿದರು.

ಅವರ ಮಗ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಟ್ಟ ನಂತರ ಅವರ ಹುಡುಕಾಟವಂತೂ ಅನೇಕ ವರ್ಷಗಳ ಕಾಲ ಪುಸ್ತಕ, ಹೋರಾಟ, ಬರವಣಿಗೆಯಲ್ಲಿ ಮುಳುಗಿ ಈಗ ತಾನೇ ಮೇಲೆದ್ದ ತಂದೆಯೊಬ್ಬ ಅಷ್ಟು ವರ್ಷದ ಪ್ರೀತಿಯನ್ನು ಒಂದೇ ಸಲ ಹರಿಯ ಬಿಟ್ಟಂತೆ ಇತ್ತು.

ಆಗ ಕೊಟ್ಟೂರಿಗೆ ಹೋಗಿದ್ದೆ. ಇವರು ಹಿರೇಮಠರೇ ಎಂದು ಕೇಳುವಂತೆ ಜರ್ಜಿತರಾಗಿದ್ದರು.

ನನ್ನ ಮಗ ಹಂಪಿ, ಆನೆಗೊಂದಿ, ಹೊಸಪೇಟೆಯಲ್ಲಿ ಎಲ್ಲೂ ಒಂದುಕಡೆ ಇದ್ದಾನೆ. ಅನೇಕ ಜನ ನೋಡಿದ್ದಾರೆ. ಆದರೆ ಅವರು ನನಗೆ ಸಹಾಯ ಮಾಡುತ್ತಿಲ್ಲ, ನೀವು ಸ್ವಲ್ಪ ಸಹಾಯ ಮಾಡಿ, ನನ್ನ ಮಗನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಾಗ ನಾನು ಧರೆಗೆ ಕುಸಿದು ಹೋದೆ. ಚೇತರಿಸಿಕೊಳ್ಳುತ್ತಿರುವಾಗಲೇ ಅವರ ಸಾವಿನ ಸುದ್ದಿ ಬಂತು.

ಬೆಳಗಾವಿ ಜಿಲ್ಲೆಯ ಸಾಣೇಕೊಪ್ಪದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಅವರ ಕಳೆಬರಹ ನೋಡಿದರೆ ಅಲ್ಲಿ ಬೇರೊಬ್ಬ ಹಿರೇಮಠ ಇದ್ದರು. ನನಗೆ ಮಾತನಾಡಲು ಆಗಲಿಲ್ಲ. ಅವರು ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ

ಎಸ್.ಎಸ್. ಹಿರೇಮಠರು ನನಗೆ ಮತ್ತೇ ಕಾಣಿಸುತ್ತಿರುವುದು ಬಳ್ಳಾರಿ ಜಿಲ್ಲೆಯ ಇದೇ ನೆಲದಲ್ಲಿ. ಹೌದು, ಇಲ್ಲಿಯ ಎಡಪಂಥೀಯ ಹೋರಾಟಗಳಲ್ಲಿ, ದಲಿತರ ಹೋರಾಟಗಳಲ್ಲಿ, ಅನ್ಯಾಯ, ಅಸಮಾನತೆ ವಿರುದ್ಧ ಹೋರಾಟದಲ್ಲಿ ನನಗೆ ಕಾಣಿಸುತ್ತಿದ್ದಾರೆ. ಅವರ ಪುಸ್ತಕದಲ್ಲಿ ತಮಗೆ ಸಿಕ್ಕ ಸತ್ಯವನ್ನು ತಡಮಾಡದೇ ಅವಸರವಸರವಾಗಿ ಹೇಳುತ್ತಿದ್ದಾರೆ. ಅದೇ ಅಸ್ತವ್ಯಸ್ತತೆ ಬದುಕು, ಹುಡುಕಾಟ.

ತಮ್ಮ ತಣ್ಣಗಿನ ದನಿಯಲ್ಲಿ ಹಾಲುಗಲ್ಲದ ಹಸುಗೂಸೆ, ಹಸುಕಾಯೋ ಧೀರಬಾಲನೇ, ಹಾಲು ಮರೆತು ದಿನವೆಷ್ಟಾಯಿತೋ, ಓ ಹಾಲುಗಲ್ಲದ ಜೀತಗಾರ ಜೀತ ಸೇರಿ ದಿನವೆಷ್ಟಾಯಿತೋ ಹಾಡುತ್ತಿದ್ದಾರೆ. ನಿಶ್ಯಬ್ಧವಾಗಿ ಕೇಳಿ!

ಹಿರೇಮಠರಿಗೆ ಅವರ ಮಗ ಇಲ್ಲಿ ಎಲ್ಲಿಯೂ ಇದ್ದಾನೆ. ಎಲ್ಲರಿಗೂ ಕಾಣಿಸುತ್ತಾನೆ. ಯಾರು ಸಹಾಯ ಮಾಡುತ್ತಿಲ್ಲ ಎಂದೇ ಹೇಳುತ್ತಿದ್ದರು. ಹೌದು ಹಿರೇಮಠರೂ ನನಗೆ ಕಾಣಿಸುತ್ತಿದ್ದಾರೆ. ಅವರು ಇಲ್ಲಿಯೇ ಇದ್ದಾರೆ. ಹಿರೇಮಠರು ಹಲೋ ಎಂದೇ ಹೇಳುತ್ತಿದ್ದಾರೆ. ನಾನು ಅವರಿಗೆ ಹಲೋ ಹೇಳದೇ ಇರಲಾರೆ. ಎಂತಹ ನಂಬಿಕೆ ಇದು. ಈ ಜಗತ್ತು ನಂಬಿಕೆಯ ಮೇಲೆ ನಿಂತಿದೆ.

ಹೌದು, ನನ್ನೊಳಗೆ ಮುಗ್ಧತೆ ಇರುವವರಿಗೂ ಹಿರೇಮಠರು ಸಾಯುವುದಿಲ್ಲ. ನನ್ನಲ್ಲಿ ಮುಗ್ಧತೆ ಸತ್ತರೆ ಹಿರೇಮಠರು ಸಾಯುತ್ತಾರೆ. ಜೊತೆಗೆ ನಾನೂ ಕೂಡಾ.

-ಪರಶುರಾಮ ಕಲಾಲ್