
‘ನಿಲ್ಲಿಸದಿರು ವನಮಾಲಿ ಕೊಳಲ ಗಾನವ ನಿಲ್ಲಿಸೇ ನೀ ಕಳೆವುದೆಂತೋ ಭವಭೀತಿಯ ಕೇಶವ’ ಎಂದು ಕವಿತೆ ಕಟ್ಟಿದವರು ಪು.ತಿ.ನ. ಅವರ ಪಾಲಿಗೆ ವನಮಾಲಿಯ ಕೊಳಲ ಗಾನ ಬದುಕಿನ ಕ್ಷುದ್ರತೆಯನ್ನು ಮೀರುವ ಕಲೆಯ ಹಾದಿ. ಅದು ಅವರ ಬದುಕಿನ ಧ್ಯಾನ ಮತ್ತು ಪ್ರೇಮ. ಆ ಹಾದಿಯ ಬಗ್ಗೆ ಅವರಿಗೆ ಎಣೆಯಿಲ್ಲದ ನಂಬಿಕೆ. ಪು.ತಿ.ನ ರಂತೆಯೇ ಕಲೆಯ ಹಾದಿಯನ್ನೇ ನಂಬಿ ನಡೆಯುತ್ತಿರುವ ಗೆಳೆಯ ಜಿ.ಎನ್. ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವಿತಾ ಸಂಕಲನಕ್ಕೆ ಈ ಬಾರಿಯ ಪು.ತಿ.ನ ಕಾವ್ಯ ಪ್ರಶಸ್ತಿ ಸಂದಿದೆ.
ಪ್ರಶ್ನೆಗಳಿರುವುದು... ಇವರ ಎರಡನೇ ಕವನ ಸಂಕಲನ. ಮೊದಲನೆಯದು ‘ಸೋನೆ ಮಳೆಯ ಸಂಜೆ’. ಮುಗ್ಧತೆ, ಕೌತುಕ ಮತ್ತು ತಲ್ಲಣದ ಲೋಕವನ್ನು ಸೋನೆಮಳೆಯಲ್ಲಿ ಕಟ್ಟಿ ಕೊಟ್ಟ ಮೋಹನ್, ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ ಸಂಕಲನದ ಕವಿತೆಗಳಲ್ಲಿ ಅಂಥದ್ದೆ ಲೋಕವನ್ನು ಬೌದ್ದಿಕ ಆಯಾಮದೊಂದಿಗೆ, ಸ್ವ ವಿಮರ್ಶೆಯಲ್ಲಿ ಎದುರಾಗಲೆತ್ನಿಸಿದ್ದಾರೆ. ಹೀಗೆ ಎದುರಾಗುವ ಭರದಲ್ಲೂ ಅವರು ಕವಿತೆಗಳಲ್ಲಿ ಮಾನವೀಯ ಕಾಳಜಿ ಮುಕ್ಕಾಗಲು ಬಿಟ್ಟಿಲ್ಲ. ಆದರೆ ಹಸಿ ಹಸಿ ಭಾವುಕತೆಯ ಭಾರದಿಂದ ನಲುಗದೇ ವಿಷಯವನ್ನು ಸೂಕ್ಷ್ಮವಾಗಿ ಮಂಡಿಸುವುದರಲ್ಲಿ ಈ ಕವಿತೆಗಳ ಯಶಸ್ಸಿದೆ.
ಮೋಹನ್‌ಗೆ ತಾವು ಬರೆಯುವುದರ ಜೊತೆಗೆ ಉಳಿದವರಿಂದಲೂ ಬರೆಸಬೇಕು ಎಂಬ ಹಂಬಲ. ಒಟ್ಟಾರೆ ಸಮೃದ್ದ ಸಾಂಸ್ಕೃತಿಕ ಲೋಕವೊಂದನ್ನು ಕಟ್ಟುವ ತಹತಹ ಹಾಗಾಗಿಯೇ ಮೋಹನ್ ಇಂದಿನ ಬಹುತೇಕ ಬರಹಗಾರರ ನೆಚ್ಚಿನ ಗೆಳೆಯ, ಮಾರ್ಗದರ್ಶಿ. ಇವರ ಅವಧಿ ಬ್ಲಾಗ್ ಹಲವು ಯುವಮನಸ್ಸುಗಳ ಕಲಾಭಿವ್ಯಕ್ತಿಯ ವೇದಿಕೆ. ಮೊದಲಿನಿಂದಲೂ ಇಂತದ್ದೆ ಜಾಯಮಾನದವರಾದ ಮೋಹನ್ ಬರೆದಿದ್ದಕ್ಕಿಂತ ಬರೆಸಿದ್ದೆ ಜಾಸ್ತಿ. ಜೊತೆಗೆ ತಾವು ಬರೆದದ್ದೆಲ್ಲ ಕೂಡಲೇ ಪ್ರಿಂಟಾಗಿ ಪುಸ್ತಕವಾಗಿ ಬರಬೇಕು ಎಂಬ ಹಲವರ ನಂಬಿಕೆಗೆ ಹೊರತಾದ ಮನಸಿದು. ‘ಇವರ ‘ನನ್ನೊಳಗಿನ ಹಾಡು ಕ್ಯೂಬಾ’ ಪ್ರವಾಸಕಥನ ಓದುಗರ ಮನಕ್ಕೆ ಲಗ್ಗೆ ಹಾಕಿ ಪ್ರತಿಗಳೆಲ್ಲ ಮಾರಾಟವಾಗಿ ಹೋದರೂ ಕೂಡಲೇ ಪುನರ್ ಮುದ್ರಣಕ್ಕೆ ಮನಸ್ಸು ಮಾಡದೇ ಅದರ ಬದಲಿಗೆ ಮೋಹನ್ ಹೊಸಬರ ಪುಸ್ತಕಗಳನ್ನು ಹೊರ ತರಲು ಒತ್ತಾಸೆ ತಂದರು ಹೀಗಾಗಿ ಬಿ.ಎಂ ಬಶೀರ್ ಮತ್ತು ಸಬಿಹಾ ಭೂಮಿಗೌಡ ಅವರ ಪುಸ್ತಕಗಳು ಹೊರಬಂದವು’ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸಣ್ಣ ಮೋಹನ್ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ. ಕನ್ನಡದ ಎರಡು ಅಪೂರ್ವ ಕೃತಿಗಳಾದ ನಾಗವೇಣಿಯವರ ‘ಗಾಂಧಿ ಬಂದ’ ಮತ್ತು ಗೀತಾ ನಾಗಭೂಷಣರ ‘ಬದುಕು’ ಕಾದಂಬರಿಗಳ ಮ್ಯಾನುಸ್ಕ್ರಿಪ್ಟ್‌ನ್ನು ಅಚ್ಚಿನ ಮನೆ ಸೇರಿಸುವುದರಿಂದ ಹಿಡಿದು ಪುಸ್ತಕದ ರೂಪದಲ್ಲಿ ಹೊರ ಬರುವ ತನಕದ ಎಲ್ಲ ಪ್ರಕ್ರಿಯೆಗಳಲ್ಲಿ ನಿಗಾ ತೆಗೆದುಕೊಂಡವರು ಮೋಹನ್. ಅವರೊಳಗೆ ಅಂದಿನಿಂದ ಇಂದಿಗೂ ಒಬ್ಬ ಅತ್ಯುತ್ತಮ ಸ್ತ್ರೀವಾದಿ ಲೇಖಕ ಮತ್ತು ಓದುಗನಿದ್ದಾನೆ.
ಪ್ರಜಾವಾಣಿಯಲ್ಲಿದ್ದು ಅಭಿರುಚಿವಂತ ಓದುಗರನ್ನು ಸೃಷ್ಟಿಸಿದ್ದ ಮೋಹನ್, ಈ ಟಿವಿಯಲ್ಲಿದ್ದು ಅಭಿರುಚಿವಂತ ನೋಡುಗರನ್ನು ಸೃಷ್ಟಿಸಿದ್ದರು. ಅದು ದೃಶ್ಯ ಮಾಧ್ಯಮದ ಗೆಳೆಯ ವೆಂಕಟ್ರಮಣ ಗೌಡ ಹೇಳುವಂತೆ ‘ದೃಶ್ಯ ಮಾಧ್ಯಮದ ಕಮರ್ಷಿಯಲ್ ಆದ ಒತ್ತಾಯಗಳನ್ನು ಉಲ್ಲಂಘಿಸಿ ಭಾವದ ಜಗುಲಿಯ ತೋರಣ ನಳನಳಿಸುವಂತೆ ನೋಡಿಕೊಳ್ಳುವ ಮೂಲಕ’. ಬೆಂಗಳೂರಿನಿಂದ ವೃತ್ತಿ ಜೀವನ ಆರಂಭಿಸಿ, ಕಡಲ ನಗರಿ ಮಂಗಳೂರು, ಬಿಸಿಲ ನಗರಿ ಕಲ್ಬುರ್ಗಿ, ಮುತ್ತಿನ ನಗರಿ ಹೈದ್ರಾಬಾದ್‌ಗೆ ಪಯಣ ಬೆಳೆಸಿದ್ದ ಮೋಹನ್‘ಎಲ್ಲಿಯು ನಿಲ್ಲದಿರು’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಎಲ್ಲಿಯು ನಿಲ್ಲದೆ ‘ಹೋಗೆವೆನು ನನ್ನ ತವರಿನ ಬೀಡಿಗೆ’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಸೀದಾ ತಮ್ಮ ತವರು ಮನೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲು ಪೆನ್ನು ಆನಂತರ ಕ್ಯಾಮರಾ ಮೂಲಕ ಮಾತನ್ನು ಕಟ್ಟಿಕೊಡುತಿದ್ದ ಮೋಹನ್ ಇದೀಗ ಅವೆರಡನ್ನು ಒಟ್ಟೊಟ್ಟಿಗೆ ಬಳಸಿಕೊಂಡು ಆ ಮೂಲಕ ಒಂದು ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡಲು ಹೊರಟಿದ್ದಾರೆ. ಮೇ ಫ್ಲವರ್ ಮೀಡಿಯಾ ಹೌಸ್ ಮೂಲಕ ಅವರು ಮಾಡುತ್ತಿರುವ ಕೆಲಸ ಅದೇ. ಮೇ ಫ್ಲವರ್ ಆಫೀಸ್‌ನ ಆಪ್ತ ಅಂಗಣ ಇಂಥ ಹಲವು ಕಾರ್ಯಕ್ರಮಗಳಿಗೆ ಇದಾಗಲೇ ಸಾಕ್ಷಿಯಾಗಿದೆ. ಹೊರ ಊರಿನಿಂದ ಬೆಂಗಳೂರಿಗೆ ಹೋಗುವರು ಈಗ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬೆಂಗಳೂರಿನಲ್ಲಿ ಇರಲಿಕ್ಕಾಗುವಂತೆ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ ಏಕೆಂದರೆ ಅಂದು ಮೇ ಫ್ಲವರ್ ಆಪ್ತ ಅಂಗಳದಲ್ಲಿ ಫಿಶ್ ಮಾರ್ಕೆಟ್ ಇರುತ್ತದೆ. ಫಿಶ್ ಮಾರ್ಕೆಟ್‌ನಲ್ಲಿ ಇದಾಗಲೇ ಕಾವ್ಯ ಜಂಗಮ ಕಿ.ರಂ ನಾಗರಾಜರಿಂದ ಹಿಡಿದು ಮೊನ್ನೆ ಮೊನ್ನೆ ಕಾವ್ಯ ಬರೆಯಲು ತೊಡಗಿದ ಕನಸು ಕಂಗಳ ಹುಡುಗರವರೆಗೆ, ಪತ್ರಕರ್ತರು, ಸಿನಿಮಾದವರು, ವಿಮರ್ಶಕರು, ಕಲಾವಿದರು ಹೀಗೆ ಹತ್ತು ಹಲವು ಕ್ಷೇತ್ರದ ಜನರು ಬಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಪ್ತ ಅಂಗಳ ಈಗಾಗಲೇ ತನ್ನದೇ ಆದ ಪ್ರೇಕ್ಷಕರನ್ನು ಸಂಪಾದಿಸಿದೆ. ಜೊತೆಗೆ ಈ ಪ್ರೇಕ್ಷಕರು ಪ್ರತಿ ಬಾರಿಯು ಮತ್ತೊಂದಿಷ್ಟು ಪ್ರೇಕ್ಷಕರನ್ನು ಕರೆದು ತರುತ್ತಲೇ ಇರುತ್ತಾರೆ. ಮೇ ಫ್ಲವರ್‌ನ ಪ್ಯಾಪಿರಸ್ ಪ್ರಕಾಶನ ಒಲಿಂಪಿಕ್ ಎಂಬ ಕೆಂಪು ದೀಪ, ಭಾಮಿನಿ ಷಟ್ಪಧಿ ಕೃತಿಗಳನ್ನು ಹಾಗೂ ತೇಜಸ್ವಿ, ಸುಬ್ಬಣ್ಣ, ಸಮುದಾಯದ ಕಾರ್ಡಗಳನ್ನು ಪ್ರಕಟಿಸುವ ಮೂಲಕ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಅವಧಿ, ಓದು ಬಜಾರ್ ಮತ್ತು ಸೈಡ್ ವಿಂಗ್ ಬ್ಲಾಗ್‌ಗಳು ಸಾಹಿತ್ಯ, ಸಾಂಸ್ಕೃತಿಕ ಬರಹಗಳ ವೇದಿಕೆಗಳಾಗಿವೆ. ಇಲ್ಲೆಲ್ಲ ಯುವಮನಸ್ಸುಗಳ ತಲ್ಲಣ ಮತ್ತು ಕೌತುಕ ಅನಾವರಣಗೊಳ್ಳುತ್ತಿರುತ್ತದೆ. ಪತ್ರಿಕೋದ್ಯಮ ಶಿಕ್ಷಣ, ದೃಶ್ಯ ಮಾಧ್ಯಮದಲ್ಲಿ ಹಲವು ಪ್ರಯೋಗಗಳು ಹೀಗೆ ಹತ್ತು ಹಲವು ಯೋಜನೆಗಳು ಕಾರ್ಯಗತವಾಗುತ್ತಿವೆ. ಇವೆಲ್ಲದರ ಹಿಂದಿನ ಶಕ್ತಿ ಜಿ.ಎನ್.ಮೋಹನ್. ಯುವ ಮನಸ್ಸುಗಳಲ್ಲಿ ಸೃಜನಶೀಲತೆಯನ್ನು, ಸಾಹಿತ್ಯದ ಅಭಿರುಚಿಯನ್ನು ಹುಟ್ಟು ಹಾಕುತ್ತಿರುವ ಗೆಳೆಯ ಮೋಹನ್ ನಾಳೆ ಸಂಜೆ ಐದು ಗಂಟೆಗೆ ಬೆಂಗಳೂರಿನ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪು.ತಿ.ನ ಕಾವ್ಯ ಪ್ರಶಸ್ತಿ ಸ್ವೀಕರಿಸುತಿದ್ದಾರೆ. ಕಾರ್ಯಕ್ರಮದ ಮೊದಲಿಗೆ ತಿಂಡಿ ಕೊಡ್ತಾರೆ ಆಗಂತೂ ನೀವು ಹಾಜರಿರಲೇ ಬೇಕು ಎಂದು ಅವರಿಗಾಗಲೇ ಕರೆಕೊಟ್ಟಿದ್ದಾರೆ. ಆದರೆ ನಾವು ಕಾರ್ಯಕ್ರಮ ಮುಗಿಯೋ ತನಕವೂ ಇರೋಣ. ಒಳ್ಳೆಯ ಗಾಯಕರೂ ಆಗಿರುವ ಮೋಹನ್ ಕಂಠ ಸಿರಿಯಿಂದ ಕೊನೆಗೆ ಸಮಯ ಸಿಕ್ಕಿದರೆ ಒಂದೆರಡು ಹಾಡನ್ನು ಕೇಳಿಕೊಂಡು ಬರೋಣ. ಒತ್ತಾಯ ಮಾಡಿದರೆ ಮೋಹನ ಮುರಳೀ ನುಡಿಯದಿದ್ದೀತೆ?
ಮತ್ತೆ ಮೋಹನ್‌ಗೆ ಒಂದು ಮಾತು. ನಿಮ್ಮಾಸೆ ಇದೆಯಲ್ಲ ಯಾರ ಕೈಗೂ ಸಿಗದೆ ಒಳಗೆ ಉಳಿಯುತ್ತಲ್ಲಾ ಹುಳ ಹಾಗೆ ನೀವು ಇರಬೇಕು ಅಂತ. ಆ ಕನಸನ್ನು ಮುಂದಿನ ಜನ್ಮಕ್ಕೆ ಪೆಂಡಿಂಗ್ ಇಟ್ಕೊಳ್ಳಿ. ಏಕೆಂದರೆ ಎಲ್ಲರ ಗೆಳೆಯನಾಗುವ ಜೀವ ಗೂಡಿನೊಳಗೆ ಹೊಕ್ಕಿ ಕೂರಲು ಸಾಧ್ಯವೇ ಇಲ್ಲ. ಇರಲಿ ಮೋಹನ್ ಇದು ಖುಷಿಯ ಸಂದರ್ಭ. ಪು.ತಿ.ನ ಕಾವ್ಯ ಪ್ರಶಸ್ತಿ ನಿಮ್ಮನ್ನು ಪು.ತಿ.ನ ಕಾವ್ಯದಂತೆಯೇ ನಿಮ್ಮೊಳಗಿನ ಚೈತನ್ಯವನ್ನು ಪೊರೆಯಲಿ.
January 27, 2009 5:24 AM