ಭಾನುವಾರ, ಜನವರಿ 18, 2009

ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ಕೇಳುತ್ತಿರುವ ರಾಜು? ನಾನು ಏನು ಹೇಳಲಿ?

ರಾಜು ಅನಂತಸ್ವಾಮಿ ಎನ್ನುವ ಹಾಡುವ ಕೋಗಿಲೆಯೊಂದು ತನ್ನ ಸ್ವರವನ್ನು ನಿಲ್ಲಿಸಿದೆ ಎಂದು ಕೇಳಿಯೇ ಮನಸ್ಸು ಅಸ್ವಸ್ಥವಾಯಿತು.
ನಾನು ರಾಜು ಅನಂತಸ್ವಾಮಿ ಹೆಸರು ಕೇಳಿರಲೇ ಇಲ್ಲ. ಹಂಪಿ ಉತ್ಸವದಲ್ಲಿ ಕವಿ ಕಾವ್ಯ ಗಾಯನ ಕುಂಚ ಕಾರ್ಯಕ್ರಮದಲ್ಲಿ ನನ್ನನ್ನು ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು. ಹಾಡಬಲ್ಲ ಕವಿತೆ ಫ್ಯಾಕ್ಸ್ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಾಹಿತಿ ರವಾನಿಸಿದ್ದರು. ಆಗ ಉತ್ಸವಕ್ಕಾಗಿಯೇ ಬರೆದ ಕವಿತೆಯನ್ನು ಫ್ಯಾಕ್ಸ್ ಮಾಡಿದ್ದೇ. ಕವಿಗೋಷ್ಠಿ ಆರಂಭವಾಗುವ ಹದಿನೈದು ನಿಮಿಷ ಮುಂಚೆಯೇ ನಾನು ವೇದಿಕೆ ಬಳಿ ಇದ್ದೆ. ಯಾರೋ ಶಿವಮೊಗ್ಗ ಸುಬ್ಬಣ್ಣ ಅವರನ್ನು ಪರಿಚಯಿಸಿದರು. ಸುಬ್ಬಣ್ಣ ಅವರು ಒಡನೆಯೇ ಅಯ್ಯೋ ಮಾರಾಯ, ಅಂತೂ ಹೀಗಾದರೂ ಬಂದಿಯಲ್ಲ, ಆ ರಾಜು ನಿನ್ನ ಹುಡುಕುತ್ತಾ ಕಂಗಾಲಾಗಿದ್ದಾನೆ. ಎಂದು ರಾಜುವನ್ನು ಹುಡುಕಿ ಕೂಗಿ ಕರೆದು ಪರಿಚಯಿಸಿದರು. ಕಳೆದ ಹೋದ ನಿಧಿ ಸಿಕ್ಕವರಂತೆ ಪರಿಚಯವೇ ಇಲ್ಲದ ರಾಜು ನನ್ನ ಕೈ ಹಿಡಿದು ವಾರಿಗೆ ಕರೆದೊಯ್ಯದು ನನ್ನ ಕವಿತೆಯ ಅರ್ಥ ಹಾಗೂ ಕೆಲವು ಅಸ್ಪಷ್ಠ ಎನಿಸುವ ಪದಗಳ ವಿವರಣೆ ಕೇಳಿದರು. ನನ್ನ ಕನ್ನಡ ಬರಹ ನೋಡಿದವರಿಗೆ ಇದು ಯಾವ ಕಾಲದ ಲಿಪಿ ಎನ್ನುವಂತೆ ಇರುತ್ತದೆ. ಅದನ್ನೇ ಪ್ಯಾಕ್ಸ್ ಮಾಡಿದ್ದರಿಂದ ರಾಜುಗೆ ಅದೂ ಕೂಡಾ ಸಮಸ್ಯೆಯಾಗಿತ್ತು. ಕವಿತೆಯ ಅರ್ಥ, ಭಾವವ್ಯಾಪ್ತಿ ಎಲ್ಲವನ್ನೂ ತನ್ನಲ್ಲಿ ತಾನು ಗುನುಗುತ್ತಲೇ ಕೇಳಿಸಿಕೊಂಡ ರಾಜು ಸ್ವಲ್ಪ ಹೊತ್ತು ಧ್ಯಾನಸ್ಥನಾದವನಂತೆ ನನ್ನ ಮುಂದೆ ಹಾಡಲಾರಂಭಿಸಿದ. ಹಾಡುತ್ತಲೇ ಈ ಭಾವ ನಿಮ್ಮ ಭಾವವನ್ನು ತಟ್ಟುತ್ತದೆಯಲ್ಲವೇ ಎಂದು ಕೇಳಿದ. ಹೋರಾಟದ ಹಾಡುಗಳ ಪ್ರಭಾವದಿಂದ ಬೆಳೆದ ನನಗೆ ಈ ಸುಗಮ ಸಂಗೀತದ ಹಾಡುಗಳ ಬಗ್ಗೆ ತಾತ್ಸಾರವಿತ್ತು. ಅದನ್ನು ತೋರ್ಪಡಿಸಿಕೊಳ್ಳದೇ ನಿಮಗೆ ಬಂದಂತೆ ಹಾಡಿ ಎಂದೇ. ಈ ಮಾತು ರಾಜು ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ತನ್ನ ಹಾಡು ಕವಿತೆಯ ಭಾವ ಹಿಡಿದಿಡಲು ವಿಫಲವಾಗಿದೆ ಎಂದೇ ಭಾವಿಸಿ ಬಿಟ್ಟ. ಮತ್ತೊಂದು ಕ್ಷಣ ಗುನಗುನಿಸುತ್ತಲೇ ಧ್ಯಾನಸ್ಥನಾಗಿ ಬೇರೊಂದು ಬಗೆಯಲ್ಲಿ ಹಾಡಲು ಯತ್ನಿಸಿದ. ಈಗ ಹಾಡಿಗೆ ಸ್ವಲ್ಪ ವೇಗ ನೀಡಿದ್ದ. ನನಗೆ ರಾಜುನ ಸಮಸ್ಯೆ ಅರ್ಥವಾಯಿತು. ರಾಜು ನೀನು ಕವಿತೆಗೆ ಜೀವ ತುಂಬುವಂತೆ ಹಾಡುತ್ತೀ. ಎರಡೂ ಬಗೆಯ ಹಾಡುಗಳು ನನಗೆ ಇಷ್ಟವಾದವು ಎಂದಾಗಲೇ ರಾಜುನ ಕಣ್ಗಳಲ್ಲಿ ಮಿಂಚು ಕಾಣಿಸಿಕೊಂಡಿತು. ತಕ್ಷಣವೇ ವಾದ್ಯವೃಂದದವರ ಬಳಿ ತೆರಳಿ ಹಾಡು ಹೇಳುತ್ತಾ ಅವರನ್ನು ತನ್ನ ರಾಗಕ್ಕೆ ಒಗ್ಗಿಸಿದ.
ಅಷ್ಟರಲ್ಲಿಯಾಗಲೇ ವೇದಿಕೆಗೆ ಕವಿಗಳ ಅಹ್ವಾನ ನಡೆದಿತ್ತು. ನಾನು ವೇದಿಕೆ ಏರಿದೆ.
ನನ್ನ ಸರದಿ ಬಂದಾಗ ನಾನು ಕವಿತೆ ವಾಚಿಸಿದ ನಂತರ ರಾಜು ಅನಂತಸ್ವಾಮಿ ಹಾಡಿದ್ದಂತೂ ಇದು ನಾನು ಬರೆದಿದ್ದೇ ಎಂದು ನಾಚಿಕೆ ಪಡುವಷ್ಟು ಸೊಗಸಾಗಿ ಹಾಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿ ಬಿಟ್ಟ.
ನನ್ನ ಕವಿತೆಯ ಮೊದಲ ಚರಣವಿದು ’ ಪ್ರೀತಿ ಅರಳುವುದು ಎಲ್ಲಿಂದ? ತಾವರೆಯ ಮೊಗದವಳೇ, ಮಲ್ಲಿಗೆಯ ನಗೆಯೋಳೆ ಹೇಳೇ ನನಗೆ, ಪ್ರೀತಿ ಅರಳುವುದು ಎಲ್ಲಿಂದ? ಪ್ರೀತಿಯನ್ನು ಸೋಸಿ ಸೋಸಿ ಹುಡುಕಿದಂತೆ, ಹಂಪಿಯ ಕಲ್ಲುಬಂಡೆಗಳು ಕರಗಿ ಹೋಗುವಂತೆ ಅಂತರಾಳದಿಂದಲೇ ಮುತ್ತುಗಳನ್ನು ಹೆಕ್ಕುವಂತೆ ಕವಿತೆಗೆ ಜೀವ ತುಂಬಿದ ಪರಿ ನನಗೆ ಈಗಲೂ ಭಾವಪರವಶರಾಗುವಂತೆ ಮಾಡುತ್ತದೆ.
ಕವಿತೆಗಳು ಹಾಡುವದಕ್ಕೆ ಬರುವಂತೆ ಇರಬೇಕು ಎನ್ನುವದಕ್ಕೆ ವಿರೋಧವಾಗಿದ್ದ ನನ್ನ ಅಹಂಕಾರವನ್ನು ಸಹ ರಾಜು ತನ್ನ ಮಾಧುರ್ಯದ ಧ್ವನಿಯಿಂದ ನೂಚ್ಚು ನೂರಾಗಿಸಿ ಬಿಟ್ಟಿದ್ದ. ಗೋಷ್ಠಿ ಮುಗಿದ ನಂತರ ರಾಜು ಹುಡುಕಿಕೊಂಡು ಬಂದು ಹೇಗೆ ಬಂತು ಎಂದು ಕೇಳಿ, ನನ್ನ ಬಿಗಿದಪ್ಪಿದ. ಕವಿಗಳಿಗೆ ಇಷ್ಟವಾದರೆ ನಾನು ಕೃತಜ್ಞ ಎಂದ. ನಾನು ಯಾರು? ರಾಜು ಅನಂತಸ್ವಾಮಿ ಯಾರು? ಇಬ್ಬರ ನಡುವೆ ಈ ಪ್ರೀತಿ ಹುಟ್ಟಿದ ಘಳಿಗೆ ಯಾವುದು ಎನ್ನುವ ಹೊಸ ರೀತಿಯ ತಾತ್ವಿಕತೆಯೊಂದು ನನ್ನಲ್ಲಿ ಮೊಳಕೆ ಹೊಡೆಯಲು ಕಾರಣವಾಗಿ ಬಿಟ್ಟ. ಇದಾದ ನಂತರವಷ್ಟೇ ನಾನು ರಾಜು ಅನಂತಸ್ವಾಮಿ ಬಗ್ಗೆ ವಿವರಗಳು ಸಿಕ್ಕಿದ್ದು, ರಾಜು ಹಾಡಿದ ಭಾವಗೀತೆಗಳನ್ನು ಕೇಳಿದ್ದು.
ರಾಜು ಅನಂತಸ್ವಾಮಿ ಇನ್ನಿಲ್ಲ ಎನ್ನುವುದು ನನಗೆ ಯಾಕಿಷ್ಟು ತಳಮಳಕ್ಕೆ ಕಾರಣವಾಗುತ್ತಿದೆ? ಈ ಘಟನೆಯ ನಂತರ ನಾನು ಎಂದೂ ರಾಜುನನ್ನು ಭೇಟಿ ಮಾಡಿಲ್ಲ, ನಮ್ಮಿಬ್ಬರ ನಡುವೆ ದೊಡ್ಡ ಕಂದಕವೇ ಇದೆ. ನಿಜಕ್ಕೂ ಕಂದಕ ಇತ್ತೇ? ಪ್ರೀತಿ ನೀನು ಅರಳುವುದು ಎಲ್ಲಿಂದ? ಎಂದೇ ರಾಜು ಅನಂತಸ್ವಾಮಿ ನನ್ನ ಕವಿತೆಯನ್ನು ಹಾಡಿಯೇ ಕೇಳುತ್ತಿದ್ದಾನೆ? ನಾನು ಏನು ಹೇಳಲಿ? ತಕ್ಷಣ ಒಬ್ಬರಿಗೆ ಮೇಸೇಜ್ ಹಾಕಿದೆ- ‘ಒಂದು ಪ್ರೀತಿ ಸತ್ತು ಹೊಯಿತು’.

ಪರುಶುರಾಮ್ ಕಲಾಲ್

January 18, 2009 4:07 AM

6 ಕಾಮೆಂಟ್‌ಗಳು:

eshakumar h n ಹೇಳಿದರು...

raju avara kantasiriye haagittu.sugama sangitakkende misalu envantha kanta.avara daniyali mana muttida YAVA MOHANA MIRALI KAREYITHO kavana
mattara daniyaliyu manake muda nidaadu.
avara bagge anthakarana kalakuvanthe bareda nimage danyavaadagalu

nirusha ಹೇಳಿದರು...

ಎದೆ ತುಂಬಿ ಬರೆದಿದ್ದೀರಿ ಕಲಾಲ್. ಮನುಷ್ಯ ಮನುಷ್ಯ ನಡುವಿನ ಸಂಬಂಧ ಈಗೆ ಒಬ್ಬರಿಂದ ಒಬ್ಬರು ಪರಸ್ಪರ ಸ್ಫೂರ್ತಿಪಡೆದು ಜೀವಿಸಿದಾಗ ಮಾತ್ರ ಸ್ವಸ್ತ ಸಮಾಜ ರೂಪುಗೊಳ್ಳುವುದು. ನಿರಂಜನ, ಉಷಾ, ಅರುಣ ಮತ್ತು ಕಲಾಲ್ ಎಲ್ಲರೂ ಸೇರಿ ಒಂದು ಒಳ್ಳೆಯ ಬ್ಲಾಗ ಮಾಡುತ್ತಿದ್ದೀರಿ ಮುಂದುವರೆಸಿ. ಅಂದಹಾಗೆ ದಯವಿಟ್ಟು ದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ತಾವೆಲ್ಲರೂ ಬರಬೇಕು.
- ಮಂಜುನಾಥ ಸ್ವಾಮಿ

arunjoladkudligi ಹೇಳಿದರು...

..yaava mohan murali kareyito dura teerake ninnanu... haadu kelidaagalella raaju ananta swami nannannu kaaduttare.nimma antakaranada baraha raaju avarannu tattide.

ಅನಾಮಧೇಯ ಹೇಳಿದರು...

ondu preeti sattu hoyitu...
Kalal, nanu ittichege nimma baraha haagu alochane parige abhimani. odugana nara naadigalannu muttuva barahavannu prakatisiddakke, nirushage dhanyavadagalu...
illama prabhu

siddu devaramani ಹೇಳಿದರು...

ondu priti sattitu ....
nivaste barilikke sadya sir ..
hats off
- siddu devaramani

shivu ಹೇಳಿದರು...

ಸರ್,
ಬಹಳ ಆಪ್ತವಾಗಿ ಬರೆದಿದ್ದೀರಿ ಸಾರ್,..ನಿಮಗೆ ಅಂಥ ಗಾಯಕನ ಪರಿಚಯವಾಗಿದೆ ಅಂತ ಗೊತ್ತಾದಾಗ ನಮಗೆ ತುಂಬಾ ಸಂತೋಷವಾಗುತ್ತದೆ...ನಿಮ್ಮಂಥವರು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿದ್ದೀರಿ ಅಂತ ತಿಳಿದಾಗ ನನಗೆ ಅಚ್ಚರಿಯಾಯಿತು....ಥ್ಯಾಂಕ್ಸ್....ನಮ್ಮಂಥವರಿಗೆ ನೀವು ಸಲಹೆ ಸೂಚನೆ ನೀಡುತ್ತೀರೆಂದು ಕಾಯುತ್ತಿರುತ್ತೇನೆ....ಶಿವು...