ಕಣ್ಣು ತೆರೆಯಲೇ ಭಯ
ಹೆದರಿ ಮಂಜುಗತ್ತಲೆಗಲ್ಲ
ಬೆಳಕಿಗೆ ಕೊಡಬೇಕಾದ
ಉತ್ತರದಿಂದ
ನೆತ್ತಿ ಸೆರಗು ಜಾರದಂತೆ
ಮನೆಯ ಹೊಸ್ತಿಲಿನೊಂದಿಗೆ
ಹೃದಯಕ್ಕೂ ಮೊಳೆ
ಬಡಿಸಿಕೊಂಡ ದಿನದಿಂದ
ಗಂಡನ ಹೆಸರೇಳಿ
ತನ್ನನ್ನೇ ಮರೆತ ಮರೆವು
ಕುಳಿ ಬಿದ್ದ ಕಣ್ಣಿಗೆ
ಮರೀಚಿಕೆಯಾದ ಕನಸುಗಳು
ಬೆಳದಿಂಗಳ ಬಯಕೆಗಳ
ಸುಟ್ಟ ಕಾಮಕೇಳಿಯ ರಾತ್ರಿಗಳು
ಸಾಂತ್ವಾನ ಹೇಳಲರಿಯದ ಮುೂಲೆಗೆ
ಅರ್ಥವಾಗದ ನಿವೇದನೆ
ಚುಕ್ಕಿಗಳ ನೋಡಿ ನೋಟ
ಮರೆತಾಳೆಂದರೂ
ಮುಗಿಲ ಮರೆಮಾಚಿದ ಮಾಳಿಗೆ
ಯಾತನೆಯ ಮೌನದ ಪುಟಕ್ಕೆ
ಸ್ವಚ್ಛಂದ ಬಯಸಿ ಗೆಳತಿ
ಬರೆದಿಟ್ಟ ದಿನಚರಿ
ಧರಿಸಿದ್ದೆಲ್ಲವ ಕಳಚಿ
ಹಂಡೆ ಕಟ್ಟೆಗಿಟ್ಟು
ಬೆನ್ನ ಮೇಲೆ ನಿರಾಳ
ಹೆರಳ ರಾಶಿ ಚೆಲ್ಲಿ
ಹಾಯೆನಿಸುವ
ಬಿಸಿನೀರಿನ ಆವಿಯೊಂದಿಗೆ
ತನ್ನ ಬಿಡುಗಡೆ
ಇಡೀ ಜಗತ್ತು
ಬಚ್ಚಲು ಮನೆಯಾದಂದು!
ಟಿ.ಎಂ. ಉಷಾರಾಣಿ, ಹೂವಿನಹಡಗಲಿ
8 ಕಾಮೆಂಟ್ಗಳು:
ಬ್ಲಾಗ್ ಲ್ಲಿ ಮೊದಲ ಬಾರಿಗೆ ನಿನ್ನ ಮತ್ತು ನಿನ್ನ ಕವನ ನೋಡುತ್ತಿದ್ದೇನೆ ಕುಶಿ ಆತು.
ಆ ಸಂಜೆ ನೀವು ನೀಡಿದ ಹಾಲು ಶಾವಿಗೆ ಕೀರಿನಷ್ಟೇ ಸೊಗಸಾಗಿದೆ ನಿಮ್ಮ ಕವನ.
- ಮಂಜುನಾಥಸ್ವಾಮಿ
ಸಿದ್ದು ಪರಿಚಯಿಸಿದರು ನಿಮ್ಮ.. ತುಂಬಾ ಚೆನ್ನಾಗಿ ಬರ್ದಿದೀರಿ. ಖುಷಿ ಆತು, ಹೀಗೆ ಬರೀತಾ ಇರಿ.
ಕಲ್ಲರೆ
ಉಷಾ ನಿನ್ನ ಕವಿತೆಯನ್ನು ಬಹಳ ದಿನಗಳ ಮೇಲೆ ನೋಡಿ ಖುಷಿಯಾಯಿತು. ಪರ್ವಾಯಿಲ್ಲ, ಇನ್ನೂ ಉಷಾ ಕವಿತೆ ಬರೆಯುತ್ತಾಳೆ, ನಿರಂಜನ ನೀನು ನಿಜಕ್ಕೂ ಧನ್ಯ ಎಂಬ ಸಂತೋಷವದು.
ನಿನ್ನ ಕವಿತೆಯ ಮೊದಲ ಸಾಲು ’ಕಣ್ಣು ತೆರೆಯಲೇ ಭಯ| ಹೆದರಿ ಮಂಜುಗತ್ತಲೆಗಲ್ಲ|’ ಎಂಬ ಎರಡು ಸಾಲು ಸ್ವಲ್ಪ ನಿಲ್ಲಿಸಿದವು. ಮಂಜುಗತ್ತಲೆಗಲ್ಲದಲ್ಲಿ ಗಲ್ಲ ಏನಾದರೂ ಹೇಳುತ್ತಿದೆಯೇ ಎಂಬುದ್ದರಿಂದ. ಉಷಾ ನಿನ್ನ ಕವಿತೆಗೆ ಶಕ್ತಿ ಇದೆ. ಆದರೆ ಅದು ಇನ್ನಿಷ್ಟು ಸ್ಪಷ್ಟವಾಗಿ ಕವಿತೆಯಾಗಬೇಕು. ಅಂತಾ ಪ್ರಯತ್ನವನ್ನು ನಾನು ಮಾಡಿ ನೋಡಿದೆ. (ಇದೊಂದು ಕೆಟ್ಟ ಚಟ ನನಗೆ)
ಕಣ್ಣು ತೆರೆದರೆ ಭಯ
ಬೆಳಗು ನೋಡಬೇಕಲ್ಲ
ನೆತ್ತಿ ಸೆರಗು ಜಾರದಂತೆ
ಮನೆಯ ಹೊಸ್ತಿಲೊಳಗೆ
ಸೆರಗು ಕಚ್ಚಿ
ಹೃದಯ ಚುಚ್ಚಿ
ದಿನವೂ ಗಂಡನ ಹೆಸರೇಳಿ
ನನ್ನ ಹೆಸರೆನೆಂದೆ ಮರೆತೆ
ಹೀಗೆ ಸಾಗುವ ಕವಿತೆ ಗಕ್ಕನೆ ಮತ್ತೊಂದು ಲೋಕಕ್ಕೆ ಜಿಗಿದು, ಅಲ್ಲಿಂದ ಮತ್ತೊಂದು ವಾಸ್ತವದ ಪ್ರಪಂಚಕ್ಕೆ ಪ್ರವೇಶ ಪಡೆಯುವಂತಿದ್ದರೆ ಎಷ್ಟು ಚೆನ್ನಾದ ಕವಿತೆಯಾಗುತ್ತಿತ್ತು ಎನಿಸಿತು. ಉಷಾ ನೀನು ನಿನ್ನದೇ ಆದರ ರೀತಿಯಲ್ಲಿ ಕವಿತೆ ಬರೆ. ಕವಿತೆ ಯಾವಾಗಲೂ ಅವರ ಸಹಿಯಂತಿರಬೇಕು. ’ಉಷಾತನ’ ನಿನ್ನ ಕವಿತೆಗಳಿಗೆ ಪ್ರಾಪ್ತವಾಗಲಿ. ನಿನ್ನ ಫೋಟೋ ಕೂಡಾ ಒಂದು ಕವಿತೆಯಂತಿದೆ.
- ಪರುಶುರಾಮ ಕಲಾಲ್
ಪ್ರೊಫೆಸರ್ ವಿವೇಕ ರೈ ಆಲೋಚನೆ ಮುಖ್ಯ ಚರ್ಚೆಗೆ ಬರಲಿ
’ಹಿಂಗುವುದೆ ತನು ಸೂತಕ ಹಿಂಗಲಾರದೇ ಮನ ಸೂತಕ’ (೫ನೇ ಡಿ.೨೦೦೮) ಬಿ.ಎ.ವಿವೇಕ ರೈ ಅವರ ಅಂಕಣ ಈಚಿನ ಒಂದೇ ಬಗೆಯ ಮತೀಯ ಆಲೋಚನೆಗಿಂತ ಭಿನ್ನವಾಗಿ ಮಹತ್ವದ ಒಳನೋಟಗಳಿಂದ ಕೂಡಿದೆ. ಮಾನವೀಯತೆ ಇರುವ ಯಾರೂ ಮುಂಬೈ ಪ್ರಕರಣವನ್ನು ಬೆಂಬಲಿಸಲಾರರು. ಹಾಗಂತ ಒಂದು ಮತೀಯ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದನ್ನು ಕೂq. ಭಯೋತ್ಪಾದನೆಯ ಮೇಲು ನೋಟದ ಜನಪ್ರಿಯ ಮಾದರಿಗಳು ಈಚಿನ ಜನಾಭಿಪ್ರಾಯದ ದಿಕ್ಕು ತಪ್ಪಿಸುತ್ತಿವೆ. ರೈ ಅವರು ಹೇಳುವಂತೆ, ಬಲಿಷ್ಠ ರಾಷ್ರಗಳು ಜಾಗತಿಕ ನಾಯಕತ್ವದ ಸೆಣಸಾಟದಲ್ಲಿ ಕೊಲ್ಲುವ-ಕಾಯುವ ನಾಟಕೀಯತೆಗೆ ಭಾರತ, ಪಾಕಿಸ್ಥಾನಗಳು ದಾಳಗಳಷ್ಟೆ. ಇದರ ರಾಜಕಾರಣದ ತಂತ್ರಗಳನ್ನು ಅರ್ಥಮಾಡಿಕೊಂಡೆ, ಇಂದಿನ ಮತೀಯ ಭಯೋತ್ಪಾದನೆಯನ್ನು ಎದುರುಗೊಳ್ಳಬೇಕಿದೆ. ಹಾಗಲ್ಲದಿದ್ದರೆ ಮತೀಯ ಬೆಂಕಿಯಲ್ಲಿ ದೇಶಗಳು ದಹಿಸಬೇಕಷ್ಟೆ.
ಮುಂಬೈ ಪ್ರಕರಣದ ನಂತರ ಸತ್ತವರಿಗೆ ಮಾನವೀಯ ಕಂಬನಿ ಮಿಡಿದದ್ದಕ್ಕಿಂತ ಒಂದು ಧರ್ಮದ ರಕ್ಕಸನ ತೆಕ್ಕೆಯಲ್ಲಿ ಕೂತೆ, ಇನ್ನೊಬ್ಬ ರಕ್ಕಸನ ಅಮಾನವೀಯ ಕೃತ್ಯವನ್ನು ವಿಶ್ಲೇಷಿಸಿದ್ದು ಈ ದೇಶದ ದುರಂತ. ಇದು ಒಬ್ಬ ರಾಕ್ಷಸನನ್ನು ಬೈಯುತ್ತ ಇನ್ನೊಬ್ಬ ರಾಕ್ಷಸನ ಜನಬೆಂಬಲವನ್ನು ಹೆಚ್ಚಿಸುವ ವ್ಯವಸ್ಥಿತ ತಂತ್ರ.. ಮಾಧ್ಯಮಗಳು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವು ಕೂಡ. ಈ ದೇಶಕ್ಕೆ ಮುಸ್ಲಿಂ ಭಯೋತ್ಪಾದನೆ ಎಷ್ಟು ಮಾರಕವೋ ಹಿಂದು ಮತೀಯವಾದ ಕೂಡ ಅಷ್ಟೆ ಮಾರಕ. ನಾವಿಂದು ಭಯೋತ್ಪಾದನೆಯನ್ನು ಎದುರುಗೊಳ್ಳಬೇಕಾದರೆ ಈ ಬಗೆಯ ಧಾರ್ಮಿಕ ಮೂಲಭೂತವಾದಗಳನ್ನು ಧಿಕ್ಕರಿಸುವಂತಾಗಬೇಕು. ಜಾಗತಿಕ ಬಲಿಷ್ಠ ರಾಷ್ರಗಳ ರಾಜಕಾರಣದ ರೈ ಅವರು ಎತ್ತುವ ಪ್ರಶ್ನೆಗಳು ಹೆಚ್ಚು ಚರ್ಚಿಗೊಳಪಡಬೇಕು. ಈ ಆಲೋಚನೆ ಜನರ ತಿಳುವಳಿಕೆಯನ್ನು ರೂಪಿಸುವಂತಾಗಬೇಕು.
-ಅರುಣ್ ಜೋಳದ ಕೂಡ್ಲಿಗಿ, ಕನ್ನಡ ವಿವಿ ಹಂಪಿ.
( ಅರುಣ್ ಈ ಪ್ರತಿಕ್ರಿಯೆಯನ್ನು ಪ್ರಜಾವಾಣಿ ವಾಚಕರ ವಾಣಿ ವಿಭಾಗಕ್ಕೆ ಕಳಿಸಿದ್ದರು. ಅಲ್ಲಿ ಪ್ರಕಟವಾಗದಿದ್ದ ಕಾರಣ ’ನಾವು-ನಮ್ಮಲ್ಲಿ’ ಚರ್ಚೆ ನಡೆಯಲಿ ಎಂಬ ಕಾರಣಕ್ಕೆ ಇಲ್ಲಿ ದಾಖಲಿಸುತ್ತಿರುವೆ. - ಪರುಶುರಾಮ ಕಲಾಲ್)
ಓಹ್! ಅರುಣನ ಪ್ರತಿಕ್ರಿಯೆ ಇಲ್ಲಿ ಓದಬೇಕಾಗಿ ಬಂತು. ನಾವೆಲ್ಲರೂ ನಮ್ಮ ನಮ್ಮ ಉದ್ವೇಗಗಳನ್ನು ಕೊಂಚ ಬದಿಗಿಟ್ಟು ತಣ್ಣಗೆ ಕುಂತು ಮಾತಾಡಿದರೆ ಈ ಬಗೆಯ ಮತ್ತಷ್ಟು ಆರೋಗ್ಯಕರ ಚಿಂತನೆಗಳು ಹೊಮ್ಮುತ್ತದೆಯಲ್ಲವೆ? ಥ್ಯಾಂಕ್ಸ್ ಕಲಾಲ್, ಇಲ್ಲಿ ಹಾಕಿದ್ದಕ್ಕೆ.
ಉಷಾ, ಕವಿತೆ ಚೆನ್ನಾಗಿದೆ. ಒಟ್ಟಾರೆ ಬ್ಲಾಗ್ ವಿಭಿನ್ನವಾಗಿದೆ. ನಿಮಗೆ ಮತ್ತು ನಿರಂಜನರಿಗೆ ಧನ್ಯವಾದ. ಇದರ ಲಿಂಕ್ ಕಳಿಸಿಕೊಟ್ಟ ಅರುಣನಿಗೂ.
ವಂದೇ,
ಚೇತನಾ ತೀರ್ಥಹಳ್ಳಿ
Who knows where to download XRumer 5.0 Palladium?
Help, please. All recommend this program to effectively advertise on the Internet, this is the best program!
koneya salu, yestu sundara. jagathu bachala mane agali, bega!
-vikas negiloni
ಕಾಮೆಂಟ್ ಪೋಸ್ಟ್ ಮಾಡಿ