ಶುಕ್ರವಾರ, ಡಿಸೆಂಬರ್ 26, 2008

ಮರೆಗೆ ಸರಿದಿರುವ ನಿಜವಾದ ಭಯೋತ್ಪಾದಕರು ಇವರು! ಈ ಬಗ್ಗೆಯೂ ನಾವು ಮಾತನಾಡಬೇಕಲ್ಲವೇ?


ಭಯೋತ್ಪಾದನೆಯ ಬಗ್ಗೆ ಈಗ ದೊಡ್ಡ ಗಂಟಲಿನಿಂದ ಮಾತನಾಡಲಾಗುತ್ತಿದೆ. ಈ ನಡುವೆ ಭಯೋತ್ಪಾದೆಯನ್ನು ತಡೆಯಲು ವಿಶೇಷ ಮಸೂದೆಯನ್ನು ಕೇಂದ್ರ ಸರ್ಕಾರ ತರಾತುರಿಯಲ್ಲಿ ಹೊರ ತರುತ್ತಿದೆ. ಈ ಮಸೂದೆಯಲ್ಲಿ ಏನಿದೆಯೋ ಏನೋ? ಮುಂಬೈ ಘಟನೆಯ ನಂತರವಂತೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಉದ್ವೇಗದ ವಾತಾವರಣ ಸೃಷ್ಠಿಯಾಗಿದೆ. ಯುದ್ದೋತ್ಸಾಹದ ಮಾತುಗಳು ಎರಡೂ ಪಾಳೇಯದಿಂದಲೂ ಹೊರಡುತ್ತಿವೆ.
ಈ ಎಲ್ಲದರ ನಡುವೆ ’ನಿಜವಾದ ಭಯೋತ್ಪಾದಕರು’ ಮರೆಗೆ ಸರಿಯುತ್ತಿದ್ದಾರೆ. ಸರ್ಕಾರಿ ಭಯೋತ್ಪಾದನೆಯಂತೂ ದೇಶಭಕ್ತಿಯ ಉನ್ಮಾದಲ್ಲಿ ಹಿರೋ ಆಗಿ ಕಾಣಿಸಿಬಿಡುತ್ತದೆ.
ನಮ್ಮ ದೇಶದ ರೈತರ ಆತ್ಮಹತ್ಯೆಗಳು, ಎಸ್.ಎ.ಜೆಡ್ ಮುಂತಾದ ಜ್ವಲಂತವಾದ ಸಮಸ್ಯೆಗಳು ಹಿಂಬದಿಗೆ ಸರಿದಿವೆ.
ಮೂಲಭೂತ ಸಮಸ್ಯೆಗಳಲ್ಲಿ ಒಂದಾಗಿರುವ ಪ್ರಾಥಮಿಕ ಆರೋಗ್ಯದ ಬಗ್ಗೆ ಒಂದಿಷ್ಟು ಅವಲೋಕನ ಮಾಡೋಣ.
’ಆರೋಗ್ಯ ಎಂದರೆ ಕೇವಲ ಖಾಯಲೆ ಇರದೇ ಇರುವಂತಹದ್ದು ಮಾತ್ರವಲ್ಲ, ದೈಹಿಕ, ಮಾನಸಿಕ, ಸಾಮಾಜಿಕ ಸುಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆರೋಗ್ಯವು ಮಾನವ ಹಕ್ಕು ಎಂದು ಒಪ್ಪಿಕೊಂಡು, ಸರ್ವರಿಗೂ ಆರೋಗ್ಯ-ಪ್ರಾಥಮಿಕ ಆರೋಗ್ಯ ಪಾಲನೆಯಿಂದ ಮಾತ್ರ ಇದು ಸಾಧ್ಯ ಎಂದು ೧೯೭೮ರಲ್ಲಿ ಅಂದಿನ ಸೋವಿಯತ್ ರಷ್ಯಾದ ಅಲ್ಮಾ-ಆಟಾ ಎಂಬ ಊರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ೧೩೪ ರಾಷ್ಟ್ರಗಳು ಘೋಷಣೆ ಮಾಡಿ ಸಹಿ ಹಾಕಿದವು, ಇದರಲ್ಲಿ ಭಾರತ ದೇಶವೂ ಒಂದು.
೧೯೯೦ರ ನಂತರ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಯಿಂದಾಗಿ ಜನಸಾಮಾನ್ಯರಿಗೆ ದೊರಕಬೇಕಿದ್ದ ಆರೋಗ್ಯ ಸೇವೆಯಿಂದ ಹಿಂದೆ ಸರಿದಿದೆ. ಆರೋಗ್ಯ ವ್ಯವಸ್ಥೆಗಾಗಿ ರಾಷ್ಟ್ರೀಯ ಉತ್ಪನ್ನದ ಶೇಕಡ ೫ರಷ್ಟು ಹಣಕಾಸು ಮೀಸಲಿಡಬೇಕೆಂದು ಸರ್ಕಾರವೇ ರಚಿಸಿದ ಭೋರೆ ಸಮಿತಿ, ಮೊದಲಿಯಾರ್ ಸಮಿತಿ, ಶ್ರೀವಾಸ್ತವ ಸಮಿತಿಗಳು ಹೇಳಿದ್ದರೂ, ಇಂದು ಆರೋಗ್ಯ ಸೇವೆಯ ವ್ಯವಸ್ಥೆಗಾಗಿ ಭಾರತ ಸರ್ಕಾರ ಕೇವಲ ಶೇಕಡ ೦.೯ ಮಾತ್ರ ಖರ್ಚು ಮಾಡುತ್ತಿದೆ. ದೇಶದ ಭದ್ರತೆಗೆಂದು ಯುದ್ಧ ಶಸ್ತ್ರಾಸ್ತ್ರಗಳಿಗೆ ಶೇಕಡಾ ೧೪ ಹಣವಿದ್ದರೆ ಅದು ಈ ಬಾರಿ ಇನ್ನೂ ಹೆಚ್ಚಾಗಲಿದೆ. ದೇಶದ ಜನರ ಪ್ರಾಥಮಿಕ ಆರೋಗ್ಯ ಭದ್ರತೆಯ ಬುಡವನ್ನೇ ಕತ್ತರಿಸುವ ಮೂಲಕ ಸುಭದ್ರ ಭಾರತ ನಿರ್ಮಾಣಕ್ಕೆ ದಾಪುಗಾಲು ಹಾಕಿದೆ.
ವಿಶ್ವಬ್ಯಾಂಕ್ ಎನ್ನುವ ಜನವಿರೋಧಿ ಹಣಕಾಸು ಸಂಸ್ಥೆಯೇ ೧೯೯೯ರಲ್ಲಿ ಆರೋಗ್ಯದ ಬಗ್ಗೆ ಕಳವಳಕಾರಿ ವರದಿ ನೀಡಿದೆ. ಆಸ್ಪತ್ರೆಗೆ ದಾಖಲಾದ ಶೇ.೪೦ಕ್ಕಿಂತಲೂ ಹೆಚ್ಚು ಜನರು ಸಾಲ ಮಾಡುತ್ತಾರೆ ಅಥವಾ ಆಸ್ತಿ ಮಾರುತ್ತಾರೆ. ಗರ್ಭಿಣಿಯರ ತಪಾಸಣೆ ಮತ್ತು ಶೇ.೪೦ಕ್ಕಿಂತ ಹೆಚ್ಚಿನ ಹೆರಿಗೆಗಳು ಖಾಸಗಿ ದವಾಖಾನೆಯಲ್ಲಿ ಆಗುತ್ತಿವೆ.
ಆಸ್ಪತ್ರೆಗೆ ದಾಖಲಾದ ಶೇ.೫೦ಕ್ಕಿಂತಲೂ ಹೆಚ್ಚಿನ ಜನ ತಮ್ಮ ವಾರ್ಷಿಕ ಆದಾಯದ ಅರ್ಧಕ್ಕಿಂತ ಹೆಚ್ಚು ಹಣವನ್ನು ಆರೋಗ್ಯಕ್ಕೆ ಖರ್ಚು ಮಾಡುತ್ತಾರೆ.
ಭಾರತದ ರಿಸರ್ವ್ ಬ್ಯಾಂಕ್ ೧೯೮೦ರ ವರದಿ ಪ್ರಕಾರ ಭಾರತದ ಗ್ರಾಮೀಣ ಜನರು ಮಾಡುವ ಸಾಲಕ್ಕೆ ಮುಖ್ಯ ಕಾರಣ ತಮ್ಮ ಮತ್ತು ತಮ್ಮ ಕುಟುಂಬದ ಖಾಯಿಲೆಗೆ ಚಿಕಿತ್ಸೆ ನೀಡುವುದೇ ಆಗಿದೆ.
ಭಾರತ ಸರ್ಕಾರದ ಅಧಿಕೃತ ಸಮೀಕ್ಷೆ ಸಂಸ್ಥೆ (ಎನ್‌ಎಸ್‌ಎಸ್‌ಓ) ಪ್ರಕಾರ ಜನಸಂಖ್ಯೆಯ ಶೇ.೪೦ಷ್ಟು ಜನರು, (ಬಡವರು) ಮಿತಿ ಮೀರಿದ ಆರೋಗ್ಯ ಸೇವೆಯ ಖರ್ಚಿನ ಕಾರಣ ಕಾಯಲೆಗೆ ಚಿಕಿತ್ಸೆ ಪಡೆಯುತ್ತಲೇ ಇಲ್ಲ. ಇದೇ ವರದಿಯು ಶೇ.೨೫ರಷ್ಟು ಗ್ರಾಮೀಣ ಜನರ ಸಾಲಕ್ಕೆ ಮುಖ್ಯ ಕಾರಣ ಕಾಯಲೆಗೆ ಚಿಕಿತ್ಸೆ ಪಡೆಯಲು ಆಗಿದೆ ಎಂದು ಗುರುತಿಸಿದೆ.
ಸರ್ಕಾರದ ಅಧಿಕೃತ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ (ಎನ್‌ಎಚ್‌ಎಫ್‌ಎಸ್ ೨೦೦೫) ಪ್ರಕಾರ ಪ್ರಗತಿ ಸಾಧಿಸಿದ ರಾಜ್ಯ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಿರುವ, ಸುವರ್ಣ ಕರ್ನಾಟಕ ಸಂಭ್ರದಲ್ಲಿರುವ ರಾಜ್ಯದಲ್ಲಿ ೬ವರ್ಷ ಒಳಗಿನ ಶೇ.೮೩ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ.
ರಾಜ್ಯದಲ್ಲಿ ಹುಟ್ಟುವ ಪ್ರತಿ ಒಂದುಸಾವಿರ ಮಕ್ಕಳಲ್ಲಿ ಒಂದು ವರ್ಷದೊಳಗೆ ೫೫ ಮಕ್ಕಳ ಸಾವು. ೬ವರ್ಷದೊಳಗಿನ ಮಕ್ಕಳಲ್ಲಿ ನೂರಕ್ಕೆ ಶೇ.೭೦.೪ ಮಕ್ಕಳಲ್ಲಿ ರಕ್ತಹೀನತೆ, ಶೇ. ಐವತ್ತು ಮಹಿಳೆಯರಲ್ಲಿ ರಕ್ತಹೀನತೆ, ನೂರು ಮಕ್ಕಳಲ್ಲಿ ಶೇ.೩೭.೬ ಮಕ್ಕಳಿಗೆ ಅಪೌಷ್ಠಿಕತೆ, ಶೇ.೩೫ ಮನೆಗಳು ಮಾತ್ರ ಮೂಲಭೂತ ಸೌಲಭ್ಯಗಳು ಹೊಂದಿವೆ, ಪೂರ್ಣವಾಗಿ ಲಸಿಕೆ ಪಡೆದ ಮಕ್ಕಳು ನೂರಕ್ಕೆ ಶೇ.೫೫ ಮಾತ್ರ, ರಾಜ್ಯ ಸರ್ಕಾರವು ಒಟ್ಟು ಆದಾಯದಲ್ಲಿ ಆರೋಗ್ಯದ ಮೇಲೆ ಮಾಡುತ್ತಿರುವ ಖರ್ಚು ಕೇವಲ ಶೇ.೩.೩೭ ಮಾತ್ರ!!!
ಆರೋಗ್ಯದ ಸೇವೆಯ ಒಟ್ಟಾರೆ ಖರ್ಚಿನಲ್ಲಿ ಭಾರತ ಸರ್ಕಾರದ ಪಾಲು ಕೇವಲ ಶೇ.೧೮ ಇದ್ದರೆ ಖಾಸಗಿಯವರ ಪಾಲು ಶೇ.೮೨ರಷ್ಟಿದೆ. ಬಡವರಿಗೆ ಆರೋಗ್ಯ ಸೇವೆಯ ನಿರಾಕರಣೆ, ಜನರನ್ನು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯತ್ತ ಬಲವಂತವಾಗಿಯೇ ಅತ್ಯಂತ ನಿರ್ಲಜ್ಜವಾಗಿ ಸರ್ಕಾರಗಳು ತಳ್ಳುತ್ತಿವೆ. ಔಷಧಿ ಕಂಪನಿಗಳು, ಸ್ಕಾನಿಂಗ್, ಅಲ್ಟಾ ಸೌಂಡ್ ಇತ್ಯಾದಿ ತಾಂತ್ರಿಕತೆ, ಅನಿಯಂತ್ರಿತ ವ್ಯಾಪಾರೀಕರಣದಿಂದಾಗಿ ವೈದ್ಯಕೀಯ ಸೇವೆ ಎನ್ನುವುದೇ ಒಂದು ಅನೈತಿಕ ವ್ಯವಹಾರವಾಗಿ ಬಿಟ್ಟು ಜನಸಾಮಾನ್ಯರ ಆರೋಗ್ಯದ ಹಕ್ಕಿನ ಬಹಿರಂಗವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ವಿವಿಧ ವೈದ್ಯಕೀಯ ಕಾಲೇಜ್‌ಗಳಿಂದ ಪ್ರತಿವರ್ಷ ೩,೩೦೦ ವೈದ್ಯರು ಹೊರ ಬರುತ್ತಾರೆ. ಇವರೆಲ್ಲಾ ಎಲ್ಲಿ ಹೋಗುತ್ತಾರೆ? ಇವತ್ತು ರಾಜ್ಯದಲ್ಲಿ ೧,೬೦೦ ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.
ಭಾರತದ ಸಂವಿಧಾನದ ೨೧ನೇ ವಿಧಿಯಲ್ಲಿ ಸೂಚಿಸಿದ ’ಗೌರವಾನ್ವಿತ ಬದುಕಿನ ಹಕ್ಕು’ ಜನಸಾಮಾನ್ಯರಿಗೆ ಸಿಗಬೇಕಾದರೆ ಆರೋಗ್ಯದ ಹಕ್ಕು ಮೂಲಭೂತ ಹಕ್ಕಾಗಬೇಕು. ಶ್ರೀಲಂಕಾ, ಬ್ರೆಜಿಲ್, ಕ್ಯೂಬಾ ದೇಶಗಳಂತೆ ಎಲ್ಲರಿಗೂ ಆರೋಗ್ಯ ಸೇವೆಯು ಉಚಿತವಾಗಿ ಸಿಗುವಂತೆ ಆಗಬೇಕು. ಮುಖ್ಯವಾಗಿ ಸಮಗ್ರ ಪ್ರಾಥಮಿಕ ಆರೋಗ್ಯ ಪಾಲನೆಯಿಂದಲೇ ಬಡವರಿಗೆ ಆರೋಗ್ಯ ಸಾಧ್ಯ ಮತ್ತು ಇದಕ್ಕೆ ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ವ್ಯವಸ್ಥೆ ಅತ್ಯಗತ್ಯ. ಚಿಕಂಗ್ಯೂನ್, ಮಲೇರಿಯಾ, ಕಾಲರ, ಪೊಲಿಯೋ ಇಂತಹ ಎಷ್ಟು ರೋಗಗಳು ಮೂಲ ಕಾರಣವನ್ನು ಪತ್ತೆ ಹಚ್ಚಿ ಆರೋಗ್ಯದ ಹಿನ್ನೆಲೆಯಲ್ಲಿ ಚರಂಡಿ, ರಸ್ತೆ, ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರು ಒದಗಿಸುವ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ನಾವೆಲ್ಲಾ ಜನಾರೋಗ್ಯ ಆಂದೋಲನವೊಂದಕ್ಕೆ ಮುನ್ನಡಿ ಬರೆಯಬೇಕಿದೆ. ಸರ್ಕಾರದ ಮೇಲೆ ಒತ್ತಡ ತರುವುದಕ್ಕೆ ಕೈ ಜೋಡಿಸಬೇಕಿದೆ.
- ಪರುಶುರಾಮ ಕಲಾಲ್

December 25, 2008 11:27 PM

ಕಾಮೆಂಟ್‌ಗಳಿಲ್ಲ: