ಶನಿವಾರ, ಡಿಸೆಂಬರ್ 27, 2008

ಇವರು ಯಾರು ಬಲ್ಲಿರೇನು?



`ಮಣ್ಣು ಸೇರಿತು ಬೀಜ', `ತಮಂಧದ ಕೇಡು', `ಸವಾರಿ' ಕಥಾ ಸಂಕಲನಗಳಿಂದ ಪರಿಚಿತರಾದ ಕತೆಗಾರರು ಯಾರೆಂದು ಗೊತ್ತಾಗಿರಬೇಕಲ್ಲವೆ? ಹೌದು ಅವರೇ ಡಾ.ಅಮರೇಶ್ ನುಗಡೋಣಿಯವರು. ಇವರು ಈ ಹಿಂದೆ ಕವಿಗಳೂ ಆಗಿದ್ದರು ಎಂಬುದು ತಮಗೆ ಗೊತ್ತಿರಲಿಕ್ಕಿಲ್ಲ. ಕವನ ರಚನೆಯ ಮೂಲಕ ಇವರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. 1982ರಲ್ಲಿ ಬಿ.ಎ.ಪದವಿಯಲ್ಲಿ ಓದುತ್ತಿದ್ದಾಗ ಪ್ರಕಟಗೊಂಡ `ನೀನು ಅವರು ಪರಿಸರ' ಸಂಕಲನದ ಒಂದು ಪದ್ಯ ಮತ್ತು ಅವರ ಅಪರೂಪದ ಭಾವಚಿತ್ರ ಕೆಳಗಿದೆ. ಮತ್ತೊಂದು ಸಂತೋಷದ ಸಂಗತಿಯೆಂದರೆ, ಇವರ `ಸವಾರಿ' ಕತೆ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗುತ್ತಿದೆ.

ಅಯ್ಯ ಸ್ವಾಮಿ
ಮನುಷ್ಯನೆಂದು ಕರೆಸಿಕೊಳ್ಳುವಾತನೆ
ನಿನ್ನ ಬದುಕನ್ನು ಬಾಳಿ ಸವೆಸಲು
ಎಚ್ಚರವಾಗಿರು
ಇಲ್ಲದಿದ್ದರೆ
ಚರಿತ್ರೆಯಲ್ಲಿ ನಿನ್ನ ಹೆಸರು
ಕಪ್ಪು ಮಸಿಯಿಂದ ಗೀಚಿ ಹಾಕುತ್ತಾರೆ
ಆವಾಗ ನೀನು ವಾಚನಾಲಯದಲ್ಲಿ
ಧೂಳ ಹೊದ್ದು ಮಲಗಿರಬೇಕಾಗುತ್ತದೆ
ಇಷ್ಟಕ್ಕೆ ಬಿಡುತ್ತಾರೆ ಎಂದುಕೊಂಡರೆ
ಅದು ನಿನ್ನ ಪುಣ್ಯ
ಕಿವಿ ಪೊರೆ ಸೀಳುವಂಥ
ಜನ ತಿರುಗುವ ಗಿಜಿಗಿಜಿ ರಸ್ತೆಯಲ್ಲಿ
ಕಟ ಬಿಸಿಲಲ್ಲಿ ನಿನ್ನ ನೆಟ್ಟಗೆ ನಿಲ್ಲಿಸುತ್ತಾರೆ
ನಿರ್ವಾಹ ಇಲ್ಲದೆ ಸುಡಬೇಕು
ಮಳೆಯಲ್ಲಿ ನೆನೆಯಬೇಕು
ಬೆರಳು ಮಾಡಿ ತೋರಿಸಿಕೊಂಡು
ಕಂಡವರ ಬಾಯಿಯ
ಹುಳ ತಿಂದ ಹಲ್ಲುಗಳ ಮಧ್ಯೆ
ನುರಿತು ಜೊಲ್ಲಿನೊಂದಿಗೆ
ಒಳಕ್ಕು ಇಲ್ಲ ಹೊರಕ್ಕು...
ಇನ್ನೂ ಮುಗಿಯಲಿಲ್ಲ
ವರ್ಷಕ್ಕೊಮ್ಮೆ ಆಚರಣೆ
ಅದು ನಿನಗಾಗಿ ನಿನ್ನ ಆತ್ಮಕ್ಕಾಗಿ ಮೌನವಾಗಿ.
ಪಾಪ! ಅದಕ್ಕಾಗಿ
ಜಗತ್ತೆನಿಸಿಕೊಳ್ಳುವ ಇಲ್ಲಿ
ತಗಣಿ ಸೊಳ್ಳೆಗಳ ಕಣ್ಣಿಗೆ ಕಾಣದೆ
ಯಾರ ಕಪ್ಪು ಮಸಿಯ ಪೆನ್ನಿನ ಬಾಯಿಗೆ
ಒಳಗಾಗದೆ ಎಲ್ಲಿಯೋ ಉಳಿದು ಬಾಳು
ಹುಟ್ಟಿದ್ದು ತಪ್ಪಾದುದ್ದಕ್ಕೆ
ಬಾಳನ್ನು ಸವೆಸುತ್ತ
ಮರೆಯಾಗಿರು ಎಚ್ಚರವಾಗಿರು

(ಅಮರೇಶ್ ನುಗಡೋಣಿಯವರ ಒಪ್ಪಿಗೆ ಇಲ್ಲದೆ ಪ್ರಕಟಿಸಿದ್ದಕ್ಕೆ ಕ್ಷಮೆ ಕೋರುತ್ತಾ)

2 ಕಾಮೆಂಟ್‌ಗಳು:

ಗೋವಿಂದ್ರಾಜ್ ಹೇಳಿದರು...

Nimma 'jodi' log nodi tumba khushi aitu. Kannada sahityada kuritu hechchu hechchu mahitigalu sigali

ಅನಾಮಧೇಯ ಹೇಳಿದರು...

ಅಮರೇಶ್ ನುಗುಡೋಣಿ ಅವರ ಕಥನ ಜಗತ್ತಿನಲ್ಲಿ ನಾನು ಬೆರಗುಗೊಂಡಿರುವೆ.ತಣ್ಣಗೆ ತೆರೆದುಕೊಳ್ಳುವ ಅವರ ಕಥಾಲೋಕದೊಳಗೆ ನಾನು ಎಷ್ಠೋಬಾರಿ ಕಳೆದುಹೋಗಿದ್ದೇನೆ. ಇಲ್ಲಿ ಅವರ ಹದಿ ಹರೆಯದ ಪೋಟೋ ನೋಡಿ,ಗುರುತಿಸಲಾಗದೆ ಒದ್ದಾಡಿ,ನಂತರ ಗುರುತಿಸಿ ಖುಷಿಯಾಯ್ತು.ಅಮರೇಶರ ಹಳೇ ಪೋಟೋ ತೊರಿಸಿ ಖುಷಿಗೊಳಿಸಿದ ನಿರುಶಗೆ ಥ್ಯಾಂಕ್ಸ್ !