ಭಾನುವಾರ, ನವೆಂಬರ್ 23, 2008

ಇಲ್ಲ, ನನಗೆ ರಾಷ್ಟ್ರವಿಲ್ಲ...

ಇಲ್ಲ
ನನಗೆ ನಿಷ್ಠೆ ಇಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ
ಹುಸಿ ರಾಷ್ಟ್ರೀಯತೆಯ ಮತೀಯ ವ್ಯಾಖ್ಯಾನಕ್ಕೆ
ಆಳುವುದಕ್ಕಾಗಿಯೆ ಕಟ್ಟಿಕೊಂಡ ರಾಷ್ಟ್ರಕ್ಕೆ
ಪ್ರಜೆಗಳ ಹೆಸರಿನ ಪ್ರಭುತ್ವದ ಗಣಿತಕ್ಕೆ
ನಿಷ್ಠೆಯಿಲ್ಲ ನನಗೆ ಖಂಡಿತ. ಬದ್ಧನಲ್ಲ ನಾನು
ಶಬ್ದಗಳನ್ನೆ ಶಸ್ತ್ರವನ್ನಾಗಿಸಿ
ಕೊಂಡವರುದ್ರೋಹಿ ಎಂದರೂ ನನಗೆ ಅಳುಕಿಲ್ಲ
ಇಲ್ಲ, ನನಗೆ ರಾಷ್ಟ್ರವಿಲ್ಲ, ಭಾಷೆಯಿಲ್ಲ
ತಥಾಕಥಿತ ಧರ್ಮವಿಲ್ಲ

ಈ ನೆಲವೇ ನನ್ನ ಸೃಷ್ಟಿಯ ಮೂಲ
ಈ ನೆಲವೇ ನನ್ನ ಅನ್ನದ ಮೂಲ
ಈ ನೆಲಕ್ಕೇ ನನ್ನ ಬದುಕು ಅರ್ಪಿತ
ಈ ನೆಲಕ್ಕೇ ನನ್ನ ಸಾವೂ ಬದ್ಧ
ಈ ಅಖಂಡ ನೆಲವೇ ನನ್ನ ತಾಯಿ
ಈ ಅಖಂಡ ನೆಲವೇ ನನ್ನ ಮಾತೃಭೂಮಿ

ನನ್ನ ತಾಯಿ ಶುಭ್ರಜೋತ್ಸಾನ ಪುಲಕಿತ ಯಾಮಿನಿ ಅಲ್ಲ
ಸದಾವತ್ಸಲೇ…ಎಂದು ನಮಿಸುವ ನಟನೆ ನನಗೆ ಬೇಕಿಲ್ಲ
ನನ್ನ ನಾಡಿನ ಪರ್ವತಗಳನ್ನು
ತಾಯಿ ಮೊಲೆಗಳಿಗೆ ಹೋಲಿಸುವ
ತಾಯ್ಗಂಡ ಭಕ್ತಿ ಬೇಡ ನನಗೆ
ಹೌದು, ನಾನು ಈ ನೆಲದ ಜೀವ
ಅಖಂಡ ನೆಲವೇ ನನ್ನ ಮಾತೃಭೂಮಿ
ಸೀತೆ ನನ್ನಕ್ಕ, ಬಸವ ನನ್ನಣ್ಣ
ಶಂಭೂಕ ನನ್ನ ಬಂಧು
ಬುದ್ಧ ಮಾರ್ಗದರ್ಶಕ ದತ್ತ ನನ್ನ ಮಿತ್ರ
ತುತ್ತಿನ ತತ್ವ ಶಾಸ್ತ್ರ ನನ್ನ ಸಿದ್ಧಾಂತ
ನೈಲ್, ಆಫ್ರಿಕಾ, ದ್ರಾವಿಡಗಳಲ್ಲಿ ನನ್ನ ಕುಲಮೂಲ
ಪ್ಯಾಲೆಸ್ಪೈನಿನ ವಿಧವೆ, ರುಮೇನಿಯಾದ ಚೆಲುವೆ
ಗ್ರೀಕಿನ ಕೂಲಿ, ಫ್ರಾನ್ಸಿನ ಝಾಡಮಾಲಿ
ಚೀನಾದ ರೈತ, ಕ್ಯೂಬಾದ ಯೋಧ, ಅಫಘಾನ ಅನಾಥ
ಎಲ್ಲ, ನನ್ನ ಸಂಬಂಧಿಗಳು
ನಾನು ಈ ನೆಲದ ಸೃಷ್ಟಿ
ಅಖಂಡ ಭೂಮಂಡಲವೇ ನನ್ನ ಮನೆ
ಇಂದ್ರಪ್ರಸ್ಥ ಅಯೋಧ್ಯೆ ದಿಲ್ಲಿಗಳ
ಹತ್ಯಾರಕ್ಕೆ ಸಿಕ್ಕು ಹರಿದ ನೆತ್ತರ ವಂಶಸ್ಥ ನಾನು
ನನ್ನವರ ಕರುಳು ಬಗೆದ ರಾಜ ಖಡ್ಗಗಳ ಮೇಲೆಲ್ಲ
ಪ್ರತ್ಯಕ್ಷ ದೇವತಾ ಮುದ್ರೆಗಳು
ಹಿರೋಶಿಮಾ, ನಾಗಸಾಕಿ ಬಾಂಬುಗಳ ಮೇಲೆ ಶಾಂತಿ ಮಂತ್ರಗಳು
ಇರಾಕ್, ವಿಯೆಟ್ನಾಂ ಯುದ್ಧ ವಿಮಾನಗಳ ಮೇಲೆ
ಪ್ರಜಾಪ್ರಭುತ್ವದ ಘೋಷಗಳು
ಹಿಟ್ಲರನ ಸಾವಿನ ಶಿಬಿರಗಳಲ್ಲಿ
ದೇಶಭಕ್ತಿಯ ಸಾರಗಳು
ಪಿತೃ ಭೂ ಪುಣ್ಯಭೂಮಿಯ ಹೆಂಡದಂಗಡಿಗಳಿಗೆ
ಧರ್ಮದ ಬೋರ್ಡುಗಳು
ಕೊಲೆಗಡುಕರ ಹಣೆ ಮೇಲೆಸಂಸ್ಕೃತಿಯ ಸಂಕೇತಗಳು
ಅತ್ಯಾಚಾರಿಗಳ ಬಾಯಲ್ಲೇಕೆ ಮಾತೃವಂದನೆ ಗೀತೆ
ಎಂದು ಯಾರಿಗೆ ಕೇಳಬೇಕು ನಾನು

ಲೂಟಿಕೋರರ ಕೈಯಲ್ಲಿ
ದೇಶದ ನಕಾಶೆ ನೇತಾಡುತ್ತಿದೆ
ದಲ್ಲಾಳಿಯಂಗಡಿಯಾದ ಸಂಸತ್ತಿನಲ್ಲಿ
ಸ್ವಾತಂತ್ರ್ಯದ ಹರಾಜಿಗೆ ಟೆಂಡರ್ ಕರೆಯಲಾಗಿದೆ
ನಾನು ಈ ಲೋಕದ ಪ್ರಜೆ
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೆ ಇವೆ

ಇಲ್ಲ. ನನಗೆ ನಿಷ್ಠೆಯಿಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ ಹುಸಿ ರಾಷ್ಟ್ರೀಯತೆಗೆ
ಪ್ರಜೆಗಳನ್ನು ಸತ್ರೋಳಿಗಳನ್ನಾಗಿಸಿದ ಪ್ರಭುತ್ವಕ್ಕೆ

- ಪೀರ್ ಬಾಷ

ಶನಿವಾರ, ನವೆಂಬರ್ 22, 2008

ಮೌನ

ಕಂಡ ಕನಸುಗಳೆಲ್ಲ ನನಸಾಗುವುದೇ ಬದುಕಿನ ನಿಜಘೋರ ಸಾಕಿ
ಗೆಲ್ಲುವ ಛಲ ಹುಟ್ಟಿಸುವ ಸೋಲ ಕಾನುವಾಸೆಯಾಗುತಿದೆ ಬದುಕಬೇಕು