ಮಂಗಳವಾರ, ಜನವರಿ 27, 2009

ಮೋಹನ್‌ಗೆ ಒಲಿದ ಪು.ತಿ.ನ



‘ನಿಲ್ಲಿಸದಿರು ವನಮಾಲಿ ಕೊಳಲ ಗಾನವ ನಿಲ್ಲಿಸೇ ನೀ ಕಳೆವುದೆಂತೋ ಭವಭೀತಿಯ ಕೇಶವ’ ಎಂದು ಕವಿತೆ ಕಟ್ಟಿದವರು ಪು.ತಿ.ನ. ಅವರ ಪಾಲಿಗೆ ವನಮಾಲಿಯ ಕೊಳಲ ಗಾನ ಬದುಕಿನ ಕ್ಷುದ್ರತೆಯನ್ನು ಮೀರುವ ಕಲೆಯ ಹಾದಿ. ಅದು ಅವರ ಬದುಕಿನ ಧ್ಯಾನ ಮತ್ತು ಪ್ರೇಮ. ಆ ಹಾದಿಯ ಬಗ್ಗೆ ಅವರಿಗೆ ಎಣೆಯಿಲ್ಲದ ನಂಬಿಕೆ. ಪು.ತಿ.ನ ರಂತೆಯೇ ಕಲೆಯ ಹಾದಿಯನ್ನೇ ನಂಬಿ ನಡೆಯುತ್ತಿರುವ ಗೆಳೆಯ ಜಿ.ಎನ್. ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವಿತಾ ಸಂಕಲನಕ್ಕೆ ಈ ಬಾರಿಯ ಪು.ತಿ.ನ ಕಾವ್ಯ ಪ್ರಶಸ್ತಿ ಸಂದಿದೆ.
ಪ್ರಶ್ನೆಗಳಿರುವುದು... ಇವರ ಎರಡನೇ ಕವನ ಸಂಕಲನ. ಮೊದಲನೆಯದು ‘ಸೋನೆ ಮಳೆಯ ಸಂಜೆ’. ಮುಗ್ಧತೆ, ಕೌತುಕ ಮತ್ತು ತಲ್ಲಣದ ಲೋಕವನ್ನು ಸೋನೆಮಳೆಯಲ್ಲಿ ಕಟ್ಟಿ ಕೊಟ್ಟ ಮೋಹನ್, ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ ಸಂಕಲನದ ಕವಿತೆಗಳಲ್ಲಿ ಅಂಥದ್ದೆ ಲೋಕವನ್ನು ಬೌದ್ದಿಕ ಆಯಾಮದೊಂದಿಗೆ, ಸ್ವ ವಿಮರ್ಶೆಯಲ್ಲಿ ಎದುರಾಗಲೆತ್ನಿಸಿದ್ದಾರೆ. ಹೀಗೆ ಎದುರಾಗುವ ಭರದಲ್ಲೂ ಅವರು ಕವಿತೆಗಳಲ್ಲಿ ಮಾನವೀಯ ಕಾಳಜಿ ಮುಕ್ಕಾಗಲು ಬಿಟ್ಟಿಲ್ಲ. ಆದರೆ ಹಸಿ ಹಸಿ ಭಾವುಕತೆಯ ಭಾರದಿಂದ ನಲುಗದೇ ವಿಷಯವನ್ನು ಸೂಕ್ಷ್ಮವಾಗಿ ಮಂಡಿಸುವುದರಲ್ಲಿ ಈ ಕವಿತೆಗಳ ಯಶಸ್ಸಿದೆ.
ಮೋಹನ್‌ಗೆ ತಾವು ಬರೆಯುವುದರ ಜೊತೆಗೆ ಉಳಿದವರಿಂದಲೂ ಬರೆಸಬೇಕು ಎಂಬ ಹಂಬಲ. ಒಟ್ಟಾರೆ ಸಮೃದ್ದ ಸಾಂಸ್ಕೃತಿಕ ಲೋಕವೊಂದನ್ನು ಕಟ್ಟುವ ತಹತಹ ಹಾಗಾಗಿಯೇ ಮೋಹನ್ ಇಂದಿನ ಬಹುತೇಕ ಬರಹಗಾರರ ನೆಚ್ಚಿನ ಗೆಳೆಯ, ಮಾರ್ಗದರ್ಶಿ. ಇವರ ಅವಧಿ ಬ್ಲಾಗ್ ಹಲವು ಯುವಮನಸ್ಸುಗಳ ಕಲಾಭಿವ್ಯಕ್ತಿಯ ವೇದಿಕೆ. ಮೊದಲಿನಿಂದಲೂ ಇಂತದ್ದೆ ಜಾಯಮಾನದವರಾದ ಮೋಹನ್ ಬರೆದಿದ್ದಕ್ಕಿಂತ ಬರೆಸಿದ್ದೆ ಜಾಸ್ತಿ. ಜೊತೆಗೆ ತಾವು ಬರೆದದ್ದೆಲ್ಲ ಕೂಡಲೇ ಪ್ರಿಂಟಾಗಿ ಪುಸ್ತಕವಾಗಿ ಬರಬೇಕು ಎಂಬ ಹಲವರ ನಂಬಿಕೆಗೆ ಹೊರತಾದ ಮನಸಿದು. ‘ಇವರ ‘ನನ್ನೊಳಗಿನ ಹಾಡು ಕ್ಯೂಬಾ’ ಪ್ರವಾಸಕಥನ ಓದುಗರ ಮನಕ್ಕೆ ಲಗ್ಗೆ ಹಾಕಿ ಪ್ರತಿಗಳೆಲ್ಲ ಮಾರಾಟವಾಗಿ ಹೋದರೂ ಕೂಡಲೇ ಪುನರ್ ಮುದ್ರಣಕ್ಕೆ ಮನಸ್ಸು ಮಾಡದೇ ಅದರ ಬದಲಿಗೆ ಮೋಹನ್ ಹೊಸಬರ ಪುಸ್ತಕಗಳನ್ನು ಹೊರ ತರಲು ಒತ್ತಾಸೆ ತಂದರು ಹೀಗಾಗಿ ಬಿ.ಎಂ ಬಶೀರ್ ಮತ್ತು ಸಬಿಹಾ ಭೂಮಿಗೌಡ ಅವರ ಪುಸ್ತಕಗಳು ಹೊರಬಂದವು’ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸಣ್ಣ ಮೋಹನ್ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ. ಕನ್ನಡದ ಎರಡು ಅಪೂರ್ವ ಕೃತಿಗಳಾದ ನಾಗವೇಣಿಯವರ ‘ಗಾಂಧಿ ಬಂದ’ ಮತ್ತು ಗೀತಾ ನಾಗಭೂಷಣರ ‘ಬದುಕು’ ಕಾದಂಬರಿಗಳ ಮ್ಯಾನುಸ್ಕ್ರಿಪ್ಟ್‌ನ್ನು ಅಚ್ಚಿನ ಮನೆ ಸೇರಿಸುವುದರಿಂದ ಹಿಡಿದು ಪುಸ್ತಕದ ರೂಪದಲ್ಲಿ ಹೊರ ಬರುವ ತನಕದ ಎಲ್ಲ ಪ್ರಕ್ರಿಯೆಗಳಲ್ಲಿ ನಿಗಾ ತೆಗೆದುಕೊಂಡವರು ಮೋಹನ್. ಅವರೊಳಗೆ ಅಂದಿನಿಂದ ಇಂದಿಗೂ ಒಬ್ಬ ಅತ್ಯುತ್ತಮ ಸ್ತ್ರೀವಾದಿ ಲೇಖಕ ಮತ್ತು ಓದುಗನಿದ್ದಾನೆ.
ಪ್ರಜಾವಾಣಿಯಲ್ಲಿದ್ದು ಅಭಿರುಚಿವಂತ ಓದುಗರನ್ನು ಸೃಷ್ಟಿಸಿದ್ದ ಮೋಹನ್, ಈ ಟಿವಿಯಲ್ಲಿದ್ದು ಅಭಿರುಚಿವಂತ ನೋಡುಗರನ್ನು ಸೃಷ್ಟಿಸಿದ್ದರು. ಅದು ದೃಶ್ಯ ಮಾಧ್ಯಮದ ಗೆಳೆಯ ವೆಂಕಟ್ರಮಣ ಗೌಡ ಹೇಳುವಂತೆ ‘ದೃಶ್ಯ ಮಾಧ್ಯಮದ ಕಮರ್ಷಿಯಲ್ ಆದ ಒತ್ತಾಯಗಳನ್ನು ಉಲ್ಲಂಘಿಸಿ ಭಾವದ ಜಗುಲಿಯ ತೋರಣ ನಳನಳಿಸುವಂತೆ ನೋಡಿಕೊಳ್ಳುವ ಮೂಲಕ’. ಬೆಂಗಳೂರಿನಿಂದ ವೃತ್ತಿ ಜೀವನ ಆರಂಭಿಸಿ, ಕಡಲ ನಗರಿ ಮಂಗಳೂರು, ಬಿಸಿಲ ನಗರಿ ಕಲ್ಬುರ್ಗಿ, ಮುತ್ತಿನ ನಗರಿ ಹೈದ್ರಾಬಾದ್‌ಗೆ ಪಯಣ ಬೆಳೆಸಿದ್ದ ಮೋಹನ್‘ಎಲ್ಲಿಯು ನಿಲ್ಲದಿರು’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಎಲ್ಲಿಯು ನಿಲ್ಲದೆ ‘ಹೋಗೆವೆನು ನನ್ನ ತವರಿನ ಬೀಡಿಗೆ’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಸೀದಾ ತಮ್ಮ ತವರು ಮನೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲು ಪೆನ್ನು ಆನಂತರ ಕ್ಯಾಮರಾ ಮೂಲಕ ಮಾತನ್ನು ಕಟ್ಟಿಕೊಡುತಿದ್ದ ಮೋಹನ್ ಇದೀಗ ಅವೆರಡನ್ನು ಒಟ್ಟೊಟ್ಟಿಗೆ ಬಳಸಿಕೊಂಡು ಆ ಮೂಲಕ ಒಂದು ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡಲು ಹೊರಟಿದ್ದಾರೆ. ಮೇ ಫ್ಲವರ್ ಮೀಡಿಯಾ ಹೌಸ್ ಮೂಲಕ ಅವರು ಮಾಡುತ್ತಿರುವ ಕೆಲಸ ಅದೇ. ಮೇ ಫ್ಲವರ್ ಆಫೀಸ್‌ನ ಆಪ್ತ ಅಂಗಣ ಇಂಥ ಹಲವು ಕಾರ್ಯಕ್ರಮಗಳಿಗೆ ಇದಾಗಲೇ ಸಾಕ್ಷಿಯಾಗಿದೆ. ಹೊರ ಊರಿನಿಂದ ಬೆಂಗಳೂರಿಗೆ ಹೋಗುವರು ಈಗ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬೆಂಗಳೂರಿನಲ್ಲಿ ಇರಲಿಕ್ಕಾಗುವಂತೆ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ ಏಕೆಂದರೆ ಅಂದು ಮೇ ಫ್ಲವರ್ ಆಪ್ತ ಅಂಗಳದಲ್ಲಿ ಫಿಶ್ ಮಾರ್ಕೆಟ್ ಇರುತ್ತದೆ. ಫಿಶ್ ಮಾರ್ಕೆಟ್‌ನಲ್ಲಿ ಇದಾಗಲೇ ಕಾವ್ಯ ಜಂಗಮ ಕಿ.ರಂ ನಾಗರಾಜರಿಂದ ಹಿಡಿದು ಮೊನ್ನೆ ಮೊನ್ನೆ ಕಾವ್ಯ ಬರೆಯಲು ತೊಡಗಿದ ಕನಸು ಕಂಗಳ ಹುಡುಗರವರೆಗೆ, ಪತ್ರಕರ್ತರು, ಸಿನಿಮಾದವರು, ವಿಮರ್ಶಕರು, ಕಲಾವಿದರು ಹೀಗೆ ಹತ್ತು ಹಲವು ಕ್ಷೇತ್ರದ ಜನರು ಬಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಪ್ತ ಅಂಗಳ ಈಗಾಗಲೇ ತನ್ನದೇ ಆದ ಪ್ರೇಕ್ಷಕರನ್ನು ಸಂಪಾದಿಸಿದೆ. ಜೊತೆಗೆ ಈ ಪ್ರೇಕ್ಷಕರು ಪ್ರತಿ ಬಾರಿಯು ಮತ್ತೊಂದಿಷ್ಟು ಪ್ರೇಕ್ಷಕರನ್ನು ಕರೆದು ತರುತ್ತಲೇ ಇರುತ್ತಾರೆ. ಮೇ ಫ್ಲವರ್‌ನ ಪ್ಯಾಪಿರಸ್ ಪ್ರಕಾಶನ ಒಲಿಂಪಿಕ್ ಎಂಬ ಕೆಂಪು ದೀಪ, ಭಾಮಿನಿ ಷಟ್ಪಧಿ ಕೃತಿಗಳನ್ನು ಹಾಗೂ ತೇಜಸ್ವಿ, ಸುಬ್ಬಣ್ಣ, ಸಮುದಾಯದ ಕಾರ್ಡಗಳನ್ನು ಪ್ರಕಟಿಸುವ ಮೂಲಕ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಅವಧಿ, ಓದು ಬಜಾರ್ ಮತ್ತು ಸೈಡ್ ವಿಂಗ್ ಬ್ಲಾಗ್‌ಗಳು ಸಾಹಿತ್ಯ, ಸಾಂಸ್ಕೃತಿಕ ಬರಹಗಳ ವೇದಿಕೆಗಳಾಗಿವೆ. ಇಲ್ಲೆಲ್ಲ ಯುವಮನಸ್ಸುಗಳ ತಲ್ಲಣ ಮತ್ತು ಕೌತುಕ ಅನಾವರಣಗೊಳ್ಳುತ್ತಿರುತ್ತದೆ. ಪತ್ರಿಕೋದ್ಯಮ ಶಿಕ್ಷಣ, ದೃಶ್ಯ ಮಾಧ್ಯಮದಲ್ಲಿ ಹಲವು ಪ್ರಯೋಗಗಳು ಹೀಗೆ ಹತ್ತು ಹಲವು ಯೋಜನೆಗಳು ಕಾರ್ಯಗತವಾಗುತ್ತಿವೆ. ಇವೆಲ್ಲದರ ಹಿಂದಿನ ಶಕ್ತಿ ಜಿ.ಎನ್.ಮೋಹನ್. ಯುವ ಮನಸ್ಸುಗಳಲ್ಲಿ ಸೃಜನಶೀಲತೆಯನ್ನು, ಸಾಹಿತ್ಯದ ಅಭಿರುಚಿಯನ್ನು ಹುಟ್ಟು ಹಾಕುತ್ತಿರುವ ಗೆಳೆಯ ಮೋಹನ್ ನಾಳೆ ಸಂಜೆ ಐದು ಗಂಟೆಗೆ ಬೆಂಗಳೂರಿನ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪು.ತಿ.ನ ಕಾವ್ಯ ಪ್ರಶಸ್ತಿ ಸ್ವೀಕರಿಸುತಿದ್ದಾರೆ. ಕಾರ್ಯಕ್ರಮದ ಮೊದಲಿಗೆ ತಿಂಡಿ ಕೊಡ್ತಾರೆ ಆಗಂತೂ ನೀವು ಹಾಜರಿರಲೇ ಬೇಕು ಎಂದು ಅವರಿಗಾಗಲೇ ಕರೆಕೊಟ್ಟಿದ್ದಾರೆ. ಆದರೆ ನಾವು ಕಾರ್ಯಕ್ರಮ ಮುಗಿಯೋ ತನಕವೂ ಇರೋಣ. ಒಳ್ಳೆಯ ಗಾಯಕರೂ ಆಗಿರುವ ಮೋಹನ್ ಕಂಠ ಸಿರಿಯಿಂದ ಕೊನೆಗೆ ಸಮಯ ಸಿಕ್ಕಿದರೆ ಒಂದೆರಡು ಹಾಡನ್ನು ಕೇಳಿಕೊಂಡು ಬರೋಣ. ಒತ್ತಾಯ ಮಾಡಿದರೆ ಮೋಹನ ಮುರಳೀ ನುಡಿಯದಿದ್ದೀತೆ?
ಮತ್ತೆ ಮೋಹನ್‌ಗೆ ಒಂದು ಮಾತು. ನಿಮ್ಮಾಸೆ ಇದೆಯಲ್ಲ ಯಾರ ಕೈಗೂ ಸಿಗದೆ ಒಳಗೆ ಉಳಿಯುತ್ತಲ್ಲಾ ಹುಳ ಹಾಗೆ ನೀವು ಇರಬೇಕು ಅಂತ. ಆ ಕನಸನ್ನು ಮುಂದಿನ ಜನ್ಮಕ್ಕೆ ಪೆಂಡಿಂಗ್ ಇಟ್ಕೊಳ್ಳಿ. ಏಕೆಂದರೆ ಎಲ್ಲರ ಗೆಳೆಯನಾಗುವ ಜೀವ ಗೂಡಿನೊಳಗೆ ಹೊಕ್ಕಿ ಕೂರಲು ಸಾಧ್ಯವೇ ಇಲ್ಲ. ಇರಲಿ ಮೋಹನ್ ಇದು ಖುಷಿಯ ಸಂದರ್ಭ. ಪು.ತಿ.ನ ಕಾವ್ಯ ಪ್ರಶಸ್ತಿ ನಿಮ್ಮನ್ನು ಪು.ತಿ.ನ ಕಾವ್ಯದಂತೆಯೇ ನಿಮ್ಮೊಳಗಿನ ಚೈತನ್ಯವನ್ನು ಪೊರೆಯಲಿ.

January 27, 2009 5:24 AM

ಭಾನುವಾರ, ಜನವರಿ 25, 2009

ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!




ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ ೬೦ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.
ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ ’ಇತಿಹಾಸ ನಿರ್ಮಾಣಕಾರರು’ ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.
ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.
ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೇ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಾಸ್ಸು ಬಂದಾಗ ಇನ್ನೂ ಸೇತುವೆ ಯಾಕೇ ಬೇಕು ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.
ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.
ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ. ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು ೩೦ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.
ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ’ವಿಹಾರ’ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.
ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?
ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. (ಪತ್ರಕರ್ತನಾಗಿದ್ದರಿಂದ) ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.
ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, ’ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.’ ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾಧದ ನಗೆಯಲ್ಲಿಯೇ ನಿಮ್ಮಂತವರ ಅಗತ್ಯ ಹಂಪಿಗೆ ಇದೆ ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.
’ಕಾಲಿದ್ದವರು ಹಂಪಿಯನ್ನು ನೋಡಬೇಕು’ ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.
ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.
ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. ೧೨ ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ’ಅಂತೂ ಕೊನೆಗೆ ಬಂದಿರಲ್ಲ’ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿ ಬಿಟ್ಟು ’ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ’ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ ಎನಿಸಿಬಿಟ್ಟಿತು.
- ಪರಶುರಾಮ ಕಲಾಲ್

ಭಾನುವಾರ, ಜನವರಿ 18, 2009

ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ಕೇಳುತ್ತಿರುವ ರಾಜು? ನಾನು ಏನು ಹೇಳಲಿ?





ರಾಜು ಅನಂತಸ್ವಾಮಿ ಎನ್ನುವ ಹಾಡುವ ಕೋಗಿಲೆಯೊಂದು ತನ್ನ ಸ್ವರವನ್ನು ನಿಲ್ಲಿಸಿದೆ ಎಂದು ಕೇಳಿಯೇ ಮನಸ್ಸು ಅಸ್ವಸ್ಥವಾಯಿತು.
ನಾನು ರಾಜು ಅನಂತಸ್ವಾಮಿ ಹೆಸರು ಕೇಳಿರಲೇ ಇಲ್ಲ. ಹಂಪಿ ಉತ್ಸವದಲ್ಲಿ ಕವಿ ಕಾವ್ಯ ಗಾಯನ ಕುಂಚ ಕಾರ್ಯಕ್ರಮದಲ್ಲಿ ನನ್ನನ್ನು ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು. ಹಾಡಬಲ್ಲ ಕವಿತೆ ಫ್ಯಾಕ್ಸ್ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಾಹಿತಿ ರವಾನಿಸಿದ್ದರು. ಆಗ ಉತ್ಸವಕ್ಕಾಗಿಯೇ ಬರೆದ ಕವಿತೆಯನ್ನು ಫ್ಯಾಕ್ಸ್ ಮಾಡಿದ್ದೇ. ಕವಿಗೋಷ್ಠಿ ಆರಂಭವಾಗುವ ಹದಿನೈದು ನಿಮಿಷ ಮುಂಚೆಯೇ ನಾನು ವೇದಿಕೆ ಬಳಿ ಇದ್ದೆ. ಯಾರೋ ಶಿವಮೊಗ್ಗ ಸುಬ್ಬಣ್ಣ ಅವರನ್ನು ಪರಿಚಯಿಸಿದರು. ಸುಬ್ಬಣ್ಣ ಅವರು ಒಡನೆಯೇ ಅಯ್ಯೋ ಮಾರಾಯ, ಅಂತೂ ಹೀಗಾದರೂ ಬಂದಿಯಲ್ಲ, ಆ ರಾಜು ನಿನ್ನ ಹುಡುಕುತ್ತಾ ಕಂಗಾಲಾಗಿದ್ದಾನೆ. ಎಂದು ರಾಜುವನ್ನು ಹುಡುಕಿ ಕೂಗಿ ಕರೆದು ಪರಿಚಯಿಸಿದರು. ಕಳೆದ ಹೋದ ನಿಧಿ ಸಿಕ್ಕವರಂತೆ ಪರಿಚಯವೇ ಇಲ್ಲದ ರಾಜು ನನ್ನ ಕೈ ಹಿಡಿದು ವಾರಿಗೆ ಕರೆದೊಯ್ಯದು ನನ್ನ ಕವಿತೆಯ ಅರ್ಥ ಹಾಗೂ ಕೆಲವು ಅಸ್ಪಷ್ಠ ಎನಿಸುವ ಪದಗಳ ವಿವರಣೆ ಕೇಳಿದರು. ನನ್ನ ಕನ್ನಡ ಬರಹ ನೋಡಿದವರಿಗೆ ಇದು ಯಾವ ಕಾಲದ ಲಿಪಿ ಎನ್ನುವಂತೆ ಇರುತ್ತದೆ. ಅದನ್ನೇ ಪ್ಯಾಕ್ಸ್ ಮಾಡಿದ್ದರಿಂದ ರಾಜುಗೆ ಅದೂ ಕೂಡಾ ಸಮಸ್ಯೆಯಾಗಿತ್ತು. ಕವಿತೆಯ ಅರ್ಥ, ಭಾವವ್ಯಾಪ್ತಿ ಎಲ್ಲವನ್ನೂ ತನ್ನಲ್ಲಿ ತಾನು ಗುನುಗುತ್ತಲೇ ಕೇಳಿಸಿಕೊಂಡ ರಾಜು ಸ್ವಲ್ಪ ಹೊತ್ತು ಧ್ಯಾನಸ್ಥನಾದವನಂತೆ ನನ್ನ ಮುಂದೆ ಹಾಡಲಾರಂಭಿಸಿದ. ಹಾಡುತ್ತಲೇ ಈ ಭಾವ ನಿಮ್ಮ ಭಾವವನ್ನು ತಟ್ಟುತ್ತದೆಯಲ್ಲವೇ ಎಂದು ಕೇಳಿದ. ಹೋರಾಟದ ಹಾಡುಗಳ ಪ್ರಭಾವದಿಂದ ಬೆಳೆದ ನನಗೆ ಈ ಸುಗಮ ಸಂಗೀತದ ಹಾಡುಗಳ ಬಗ್ಗೆ ತಾತ್ಸಾರವಿತ್ತು. ಅದನ್ನು ತೋರ್ಪಡಿಸಿಕೊಳ್ಳದೇ ನಿಮಗೆ ಬಂದಂತೆ ಹಾಡಿ ಎಂದೇ. ಈ ಮಾತು ರಾಜು ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ತನ್ನ ಹಾಡು ಕವಿತೆಯ ಭಾವ ಹಿಡಿದಿಡಲು ವಿಫಲವಾಗಿದೆ ಎಂದೇ ಭಾವಿಸಿ ಬಿಟ್ಟ. ಮತ್ತೊಂದು ಕ್ಷಣ ಗುನಗುನಿಸುತ್ತಲೇ ಧ್ಯಾನಸ್ಥನಾಗಿ ಬೇರೊಂದು ಬಗೆಯಲ್ಲಿ ಹಾಡಲು ಯತ್ನಿಸಿದ. ಈಗ ಹಾಡಿಗೆ ಸ್ವಲ್ಪ ವೇಗ ನೀಡಿದ್ದ. ನನಗೆ ರಾಜುನ ಸಮಸ್ಯೆ ಅರ್ಥವಾಯಿತು. ರಾಜು ನೀನು ಕವಿತೆಗೆ ಜೀವ ತುಂಬುವಂತೆ ಹಾಡುತ್ತೀ. ಎರಡೂ ಬಗೆಯ ಹಾಡುಗಳು ನನಗೆ ಇಷ್ಟವಾದವು ಎಂದಾಗಲೇ ರಾಜುನ ಕಣ್ಗಳಲ್ಲಿ ಮಿಂಚು ಕಾಣಿಸಿಕೊಂಡಿತು. ತಕ್ಷಣವೇ ವಾದ್ಯವೃಂದದವರ ಬಳಿ ತೆರಳಿ ಹಾಡು ಹೇಳುತ್ತಾ ಅವರನ್ನು ತನ್ನ ರಾಗಕ್ಕೆ ಒಗ್ಗಿಸಿದ.
ಅಷ್ಟರಲ್ಲಿಯಾಗಲೇ ವೇದಿಕೆಗೆ ಕವಿಗಳ ಅಹ್ವಾನ ನಡೆದಿತ್ತು. ನಾನು ವೇದಿಕೆ ಏರಿದೆ.
ನನ್ನ ಸರದಿ ಬಂದಾಗ ನಾನು ಕವಿತೆ ವಾಚಿಸಿದ ನಂತರ ರಾಜು ಅನಂತಸ್ವಾಮಿ ಹಾಡಿದ್ದಂತೂ ಇದು ನಾನು ಬರೆದಿದ್ದೇ ಎಂದು ನಾಚಿಕೆ ಪಡುವಷ್ಟು ಸೊಗಸಾಗಿ ಹಾಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿ ಬಿಟ್ಟ.
ನನ್ನ ಕವಿತೆಯ ಮೊದಲ ಚರಣವಿದು ’ ಪ್ರೀತಿ ಅರಳುವುದು ಎಲ್ಲಿಂದ? ತಾವರೆಯ ಮೊಗದವಳೇ, ಮಲ್ಲಿಗೆಯ ನಗೆಯೋಳೆ ಹೇಳೇ ನನಗೆ, ಪ್ರೀತಿ ಅರಳುವುದು ಎಲ್ಲಿಂದ? ಪ್ರೀತಿಯನ್ನು ಸೋಸಿ ಸೋಸಿ ಹುಡುಕಿದಂತೆ, ಹಂಪಿಯ ಕಲ್ಲುಬಂಡೆಗಳು ಕರಗಿ ಹೋಗುವಂತೆ ಅಂತರಾಳದಿಂದಲೇ ಮುತ್ತುಗಳನ್ನು ಹೆಕ್ಕುವಂತೆ ಕವಿತೆಗೆ ಜೀವ ತುಂಬಿದ ಪರಿ ನನಗೆ ಈಗಲೂ ಭಾವಪರವಶರಾಗುವಂತೆ ಮಾಡುತ್ತದೆ.
ಕವಿತೆಗಳು ಹಾಡುವದಕ್ಕೆ ಬರುವಂತೆ ಇರಬೇಕು ಎನ್ನುವದಕ್ಕೆ ವಿರೋಧವಾಗಿದ್ದ ನನ್ನ ಅಹಂಕಾರವನ್ನು ಸಹ ರಾಜು ತನ್ನ ಮಾಧುರ್ಯದ ಧ್ವನಿಯಿಂದ ನೂಚ್ಚು ನೂರಾಗಿಸಿ ಬಿಟ್ಟಿದ್ದ. ಗೋಷ್ಠಿ ಮುಗಿದ ನಂತರ ರಾಜು ಹುಡುಕಿಕೊಂಡು ಬಂದು ಹೇಗೆ ಬಂತು ಎಂದು ಕೇಳಿ, ನನ್ನ ಬಿಗಿದಪ್ಪಿದ. ಕವಿಗಳಿಗೆ ಇಷ್ಟವಾದರೆ ನಾನು ಕೃತಜ್ಞ ಎಂದ. ನಾನು ಯಾರು? ರಾಜು ಅನಂತಸ್ವಾಮಿ ಯಾರು? ಇಬ್ಬರ ನಡುವೆ ಈ ಪ್ರೀತಿ ಹುಟ್ಟಿದ ಘಳಿಗೆ ಯಾವುದು ಎನ್ನುವ ಹೊಸ ರೀತಿಯ ತಾತ್ವಿಕತೆಯೊಂದು ನನ್ನಲ್ಲಿ ಮೊಳಕೆ ಹೊಡೆಯಲು ಕಾರಣವಾಗಿ ಬಿಟ್ಟ. ಇದಾದ ನಂತರವಷ್ಟೇ ನಾನು ರಾಜು ಅನಂತಸ್ವಾಮಿ ಬಗ್ಗೆ ವಿವರಗಳು ಸಿಕ್ಕಿದ್ದು, ರಾಜು ಹಾಡಿದ ಭಾವಗೀತೆಗಳನ್ನು ಕೇಳಿದ್ದು.
ರಾಜು ಅನಂತಸ್ವಾಮಿ ಇನ್ನಿಲ್ಲ ಎನ್ನುವುದು ನನಗೆ ಯಾಕಿಷ್ಟು ತಳಮಳಕ್ಕೆ ಕಾರಣವಾಗುತ್ತಿದೆ? ಈ ಘಟನೆಯ ನಂತರ ನಾನು ಎಂದೂ ರಾಜುನನ್ನು ಭೇಟಿ ಮಾಡಿಲ್ಲ, ನಮ್ಮಿಬ್ಬರ ನಡುವೆ ದೊಡ್ಡ ಕಂದಕವೇ ಇದೆ. ನಿಜಕ್ಕೂ ಕಂದಕ ಇತ್ತೇ? ಪ್ರೀತಿ ನೀನು ಅರಳುವುದು ಎಲ್ಲಿಂದ? ಎಂದೇ ರಾಜು ಅನಂತಸ್ವಾಮಿ ನನ್ನ ಕವಿತೆಯನ್ನು ಹಾಡಿಯೇ ಕೇಳುತ್ತಿದ್ದಾನೆ? ನಾನು ಏನು ಹೇಳಲಿ? ತಕ್ಷಣ ಒಬ್ಬರಿಗೆ ಮೇಸೇಜ್ ಹಾಕಿದೆ- ‘ಒಂದು ಪ್ರೀತಿ ಸತ್ತು ಹೊಯಿತು’.

ಪರುಶುರಾಮ್ ಕಲಾಲ್

January 18, 2009 4:07 AM

ಶನಿವಾರ, ಜನವರಿ 17, 2009

ವಚನಾಚಲ


ಗಜಲ್ ಗಳಿಗೆ ಹೆಸರಾದ ಇಟಗಿ ಈರಣ್ಣನವರು ರಚಿಸಿದ ಅಧುನಿಕ ವಚನ.ಇನ್ನು ಕೆಲವೇ ದಿನಗಳಲ್ಲಿ ಇವರ ವಚನಗಳ ಸ೦ಕಲನ ‘ವಚನಾಚಲ‘ ಪ್ರಕಟವಾಗಲಿದೆ,ಅದಕ್ಕು ಮು೦ಚೆ ಅದರ ಒ೦ದು ಇಷ್ಟದ ಕವಿತೆ ಇಲ್ಲಿದೆ.

ಸಾಯಲೀಬೀಜವೆ೦ದು ಮಣ್ಣಲ್ಲಿ ಹೂಳಿದರು!
ಉಸಿರುಗಟ್ಟಲಿ ಎ೦ದು ಮೇಲೆ ನೀರು ಬಿಟ್ಟರು!
ನಲುಗಿಸಿ ಬಿಡುವೆನೆ೦ದು ಬಿಸಿಲು ಬಿದ್ದಿತು!
ಮಲಗಿಸಿ ಬಿಡುವೆನೆ೦ದು ಗಾಳಿ ಸುಳಿಯಿತು!
ಆಚೆ ಈಚೆ ತಿರುಗದ೦ತೆ
ನೆಲವೇ ಕಾಲನು ಕಟ್ಟಿಹಾಕಿತು!
ಏನೆ೦ಬೆನಚ್ಚರಿಯ?
ಬೀಜ ಬೆಳೆಯಿತು,ಮೊಳಕೆಯೊಡೆಯಿತು,
‘ಭೂಜ‘ ವಾಗಿಯೆ ನಿ೦ತಿತು!!
ತನಗಾದ ಅಳಲ ತೋಡಿಕೊಳ್ಳದೆ
ಲೊಕಕ್ಕೆ ನೆಳಲ ನೀಡಿತು!
ಶಾರದಾಸಖ ಈಶಾ ನೀನೆ ಸಾಕ್ಷಿ
ಬೆಳೆವವರಿಗೆಲ್ಲ ತಾನೇ ಅದರ್ಶವಾಯಿತು!!

ಇಟಗಿ ಈರಣ್ಣ.

ಬುಧವಾರ, ಜನವರಿ 14, 2009

ಸಂಕ್ರಾಂತಿ ಹಬ್ಬದ ಶುಭಾಶಯಗಳು











ಸಂಕ್ರಾಂತಿಯ ದಿನ ಹಂಪಿ ಹತ್ತಿರದ ಗುಂಡ್ಲುಕೆರೆ ಮತ್ತು ಮಾಲ್ಯವಂತ ಬೆಟ್ಟದ ಮೇಲಿಂದ ಕಂಡ ಕೆಲವು ದೃಶ್ಯಗಳು

ಸೋಮವಾರ, ಜನವರಿ 12, 2009

ಜಾಡಮಾಲಿಯೊಬ್ಬಳ ದಿನಚರಿ



ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ ಅವಳು
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ

-2-
ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ
ದಾರಿಹೋಕರು ಆ ಮರದ ಎಳೆ ನೀರು ಕುಡಿದು ತಂಪಾದಂತೆ
ಅವರು ಬಿಸಾಡಿದ ಖಾಲಿ ತೆಂಗು ಕಸ ಬಳಿಯಲು ಅಡ್ಡಾದಂತೆ
ಏನೆಲ್ಲಾ ಅನ್ನಿಸಿ ಕನಸ ಕಿತ್ತೊಗೆದು
ಪೊರಕೆಗೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಒಂದೊಂದೇ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಆ ತುಟಿಗಳೆಲ್ಲಾ ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ

-3-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನರೆಳುಗಳ
ಮೆಲ್ಲಗೆ ನಿದ್ದೆ ಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರ ವಹಿಸಿ
ಬೇಧವ ಮರೆತು ಕಸದ ತೊಟ್ಟಿಯಲ್ಲಿ
ಒಂದಾದ ಮನುಷ್ಯರ ಛಾಯೆಗಳಿಗೆ ಹೊಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ

-4-
ಈಗ ತಾನೆ ಚಲಿಸಿದ ವಾಹನವೊಂದರ ಟಯರ್ ಗುರುತು
ಹೊಸ ಕಾರಿನದೆಂದು ಗುರುತಿಸಿ ಗುರುತು ಹಿಡಿದು ಎಳೆದಂತೆ
ಕಾರು ಹಿಂಚಲಿಸಿ ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ
ಟಯರಿನ ಚಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ
ಹೆಜ್ಜೆ ಮುಡದ ಸವೆದ ಹಳೆ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ

-5-
ಮೈಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ
ಮುಂಜಾವನ್ನು ಬೀದಿಗೆ ಹರಡುತ್ತಾಳೆ
ಯಾರಿಗೂ ಕಾಣದಂತೆ ಸೀರೆಯ ಸೆರಗಿನಲ್ಲಿ
ಕಟ್ಟಿಕೊಂಡ ವಿಮಾನದ ನೆರಳಲ್ಲಿ ಕೂತು
ಆಕಾಶಕ್ಕೆ ಮುಖ ಮಾಡಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು

-ಅರುಣ್ ಜೋಳದ ಕೂಡ್ಲಿಗಿ

ಶನಿವಾರ, ಜನವರಿ 10, 2009

ತಿರುಗಿ ನಿ೦ತ ಪ್ರಶ್ನೆ


(ನನಗೆ ತು೦ಬ ಇಷ್ಟವಾದ ಕವನ ನಿಮಗಾಗಿ...)

ಅಪ್ಪ ಜನಕ ಕಲಿಸಿದ ಅಕ್ಷರವಿತ್ತು
ಸಾಕವ್ವೆಯರು ಹೇಳಿಕೊಟ್ಟ ಹಾಡ ಮುಟ್ಟಿತ್ತು
ಸುತ್ತಮುತ್ತ ತಾಡಪತ್ರ ಚೆಲ್ಲಿತ್ತು
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?

ಅಶೋಕದ ನೆರಳಿತ್ತು
ನಿನ್ನ ತು೦ಬ ಶೋಕವಿತ್ತು
ಇನ್ನೇನು ಬೇಕಿತ್ತು?
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?

ಅಮೇಲೂ ಬಿಡುವಿತ್ತು
ಲವಕುಶರು ಬೆಳೆದು
ಆಶ್ರಮ ಪ್ರಶಾಂತವಾಗಿತ್ತು
ನಿನ್ನೆದುರು ಹರಿದು ಹೋದ
ಇಡೀ ಜೀವನವಿತ್ತು
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?

ನನ್ನ ಪ್ರಶ್ನೆಗಳಿಗೆಲ್ಲ
ಅವಳ ಭೂಮಿತೂಕದ ಮೌನ.
ಕತ್ತೆತ್ತಿ ನೋಡಿದರೂ
ಅವಳ ಕಣ್ಣಭಾವಗಳು
ಶಬ್ದವಾಗದೇ ನನ್ನ ಕಣ್ಣಗಿಳಿದು
ತಿರುಗಿ ನಿಂತವು ಕೇಳಿದ್ದ ಪ್ರಶ್ನೆಗಳು

-ಡಾ| ವಿಜಯಾ ದಬ್ಬೆ

ಶುಕ್ರವಾರ, ಜನವರಿ 9, 2009


(ಮೈಸೂರಿನ ಗೆಳೆಯ ಎಚ್.ಎನ್.ಈಶಕುಮಾರ್ ತಮ್ಮ ಪುಟ್ಟ ಕವನದಿಂದ ಬ್ಲಾಗಿನ ಎಲ್ಲಾ ಗೆಳೆಯರಿಗೆ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ)

ಹಳೆ ಬೇರಿನ ಸತ್ವವಹುದಲ್ಲವೇ
ಹೊಸ ಚಿಗುರಿನ ನವನೀತ ಚಿಗುರುತನ
ನಳನಳಿಸುವ ಹಸಿರ ಸಿಂಚನದ
ಒಡಲಲಿಲ್ಲವೇ ಭೂತಾಯಿಯ ಗುಣ
ಹಳೆಯ ಅನುಭವದ ನೆನಪ
ಸೊಗಡಿನ ಆಹ್ಲಾದದ ಪಸರಲ್ಲವೇ
ಹೊಸತರ ಅನ್ವೇಷಣೆ
ಹಳತು ಹೊಸತುಗಳೆರಡರ
ಸಮ್ಮಿಲ್ಲನವೇ ನವೋಲ್ಲಾಸದ ಸೊಬಗು...
ಹೊಸ ವರುಷದ ಹೊಸ ಹುಡುಕಾಟಕೆ
ನೂರು ರಹದಾರಿಗಳಿರಲಿ...
ಮನಕೆ ಚೈತನ್ಯವಿರಲಿ
ಸದಾಕಾಲ

ಗುರುವಾರ, ಜನವರಿ 8, 2009

ಗಜಲ್


ನೀ ನೆಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಸವಿ ಮುತ್ತ ನೀಡಿದೆ ಚಿಕ್ಕೆಗಳೆಲ್ಲ ನಕ್ಕವು ನೀನಿರುವುದೇ ಹಾಗೆ

ಮುಂಜಾವಿನ ಹೊಂಗಿರಣದಿ ತೊಯ್ದು ಗಿಡಗಂಟೆ ಬಳ್ಳಿಗಳೆಲ್ಲ
ಚಿಗುರು ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀನಿರುವುದೇ ಹಾಗೆ

ಸುಳಿವ್ ತಂಗಾಳಿಯಲ್ಲಿ ನೀರವ ಮೌನದಲ್ಲಿ ಪಿಸುಮಾತಿನ ಹೊನಲ
ಹರಿಸಿದೆ ಕೋಗಿಲೆಗಳೆಲ್ಲ ಕೂಜನವ ಮರೆತವು ನೀನಿರುವುದೇ ಹಾಗೆ

ಕುಡಿನೋಟ, ಹುಸಿನಗೆ, ಕಿರುಗೆಜ್ಜೆಯ ನಾದವ ಹೊಮ್ಮಿಸಿ, ಚಿಮ್ಮುತ, ಬಳುಕುತ
ಹಸಿರಲ್ಲೆಲ್ಲ ಸುಳಿದೆ ಚಿಟ್ಟೆಗಳೆಲ್ಲ ಬೆರಗಾದವು ನೀನಿರುವುದೇ ಹಾಗೆ

ಸುಳಿಸುಳಿಯಾಗಿ ಹೆರಳ ಕೆದರಿ ಕೊರಳ ಕೊಂಕಿಸಿ ಓರೆನೋಟವ ಬೀರಿ
ಮುನಿಸು ತೋರಿದೆ ನವಿಲುಗಳೆಲ್ಲ ಹೆಜ್ಜೆ ಮರೆತವು ನೀನಿರುವುದೇ ಹಾಗೆ

ಸಿದ್ಡರಾಮ ಹಿರೇಮಠ,ಕೂಡ್ಲಿಗಿ