ಸೋಮವಾರ, ಜನವರಿ 12, 2009

ಜಾಡಮಾಲಿಯೊಬ್ಬಳ ದಿನಚರಿನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ ಅವಳು
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ

-2-
ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ
ದಾರಿಹೋಕರು ಆ ಮರದ ಎಳೆ ನೀರು ಕುಡಿದು ತಂಪಾದಂತೆ
ಅವರು ಬಿಸಾಡಿದ ಖಾಲಿ ತೆಂಗು ಕಸ ಬಳಿಯಲು ಅಡ್ಡಾದಂತೆ
ಏನೆಲ್ಲಾ ಅನ್ನಿಸಿ ಕನಸ ಕಿತ್ತೊಗೆದು
ಪೊರಕೆಗೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಒಂದೊಂದೇ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಆ ತುಟಿಗಳೆಲ್ಲಾ ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ

-3-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನರೆಳುಗಳ
ಮೆಲ್ಲಗೆ ನಿದ್ದೆ ಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರ ವಹಿಸಿ
ಬೇಧವ ಮರೆತು ಕಸದ ತೊಟ್ಟಿಯಲ್ಲಿ
ಒಂದಾದ ಮನುಷ್ಯರ ಛಾಯೆಗಳಿಗೆ ಹೊಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ

-4-
ಈಗ ತಾನೆ ಚಲಿಸಿದ ವಾಹನವೊಂದರ ಟಯರ್ ಗುರುತು
ಹೊಸ ಕಾರಿನದೆಂದು ಗುರುತಿಸಿ ಗುರುತು ಹಿಡಿದು ಎಳೆದಂತೆ
ಕಾರು ಹಿಂಚಲಿಸಿ ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ
ಟಯರಿನ ಚಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ
ಹೆಜ್ಜೆ ಮುಡದ ಸವೆದ ಹಳೆ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ

-5-
ಮೈಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ
ಮುಂಜಾವನ್ನು ಬೀದಿಗೆ ಹರಡುತ್ತಾಳೆ
ಯಾರಿಗೂ ಕಾಣದಂತೆ ಸೀರೆಯ ಸೆರಗಿನಲ್ಲಿ
ಕಟ್ಟಿಕೊಂಡ ವಿಮಾನದ ನೆರಳಲ್ಲಿ ಕೂತು
ಆಕಾಶಕ್ಕೆ ಮುಖ ಮಾಡಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು

-ಅರುಣ್ ಜೋಳದ ಕೂಡ್ಲಿಗಿ

11 ಕಾಮೆಂಟ್‌ಗಳು:

siddha ಹೇಳಿದರು...

ಅರುಣ್, ನಿಮ್ಮ ಅತ್ಯುತ್ತಮ ಕವಿತೆಗಳಲ್ಲೊಂದು. ನಾನು ಈ ಕವಿತೆಯನ್ನು ಒಬ್ಬ ಸಹೃದಯನಾಗಿ ಓದಿ ತುಂಬಾ ಖುಷಿಪಟ್ಟೆ. ಮತ್ತಷ್ಟು ಇಂತಹ ಕವಿತೆಗಳು ನಿಮ್ಮಿಂದ ಬರಲಿ ಎಂದು ನಿರೀಕ್ಷಿಸುವೆ.- ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಅನಾಮಧೇಯ ಹೇಳಿದರು...

ಎಂಥ ಒಳಗಣ್ಣು...
ಎಂಥ ಸಾಂಕೇತಿಕತೆ...
ಮುಲ್ಕ್ ರಾಜ್ ಆನಂದರ 'ಅನ್‍ಟಚಬಲ್'ದ ನಾಯಕ ಬಾಖನ ಮಾತು ನೆನಪಾಯಿತು "They call us dirty, because we clean their dirt!"
ಉತ್ತಮ ಕಾವ್ಯ...

ದಿನೇಶ್ ಕುಮಾರ್ ಎಸ್.ಸಿ. ಹೇಳಿದರು...

ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ
ಮುಂಜಾವನ್ನು ಬೀದಿಗೆ ಹರಡುತ್ತಾಳೆ

ಸಾಲುಗಳು ಇಡೀ ಕವಿತೆಯ ಆತ್ಮ.
ಒಳ್ಳೆಯ ಕವಿತೆ ಓದಲು ನೀಡಿದ್ದಕ್ಕೆ ಥ್ಯಾಂಕ್ಸ್. ಹೀಗೇ ಬರೀತಾ ಇರಿ.

ಅನಾಮಧೇಯ ಹೇಳಿದರು...

ಅರುಣ್ ನಿನ್ನ ’ಜಾಡಮಾಲಿಯೊಬ್ಬಳ ದಿನಚರಿ’ ನನಗೆ ಖುಷಿ ಕೊಟ್ಟ ಕವನ. ನಿನ್ನೊಳಗೆ ಇರುವ ಸೂಕ್ಷ್ಮಮತಿ ಕವಿಯೊಬ್ಬ ವರ್ತಮಾನದ ಕಠೋರ ಸತ್ಯಗಳಿಗೆ ಮುಖಾಮುಖಿಯಾಗುತ್ತಾನೆ. ಆತ ಸಹಜ ಎನ್ನಬಹುದಾದ ಘಟನೆಗಳನ್ನೇ ತನ್ನ ಕಾವ್ಯದ ಪ್ರತಿಮೆಗಳನ್ನಾಗಿಸಿಕೊಂಡು ಕಾವ್ಯ ಕಟ್ಟುತ್ತಾನೆ ಎನ್ನುವುದು ಈ ಖುಷಿಗೆ ಕಾರಣ.
ನಿನ್ನ ಕವಿತೆಯಲ್ಲಿ ’ಒಂದಾದ ಮನುಷ್ಯ ಛಾಯೆಗಳಿಗೆ ಹೊಂದಿಸಿ: ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳುಕಿತಳಾಗುತ್ತಾಳೆ.’ ಹಾಗೂ ’ಹೆಜ್ಜೆ ಮೂಡದ ಸವೆದ ಹಳೆ ಟಯರುಗಳು ಇವಳ ನೋಡಿ: ಮುಸಿ ಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ’ ಈ ಸಾಲುಗಳಂತೂ ನನಗೆ ತಟ್ಟಿ ಬಿಟ್ಟವು.
’ಲೋಕದ ನಿನ್ನೆಯ ಪೂರಕೆಯಿಂದ ಗುಡಿಸಿ: ಸೂರ್ಯನಲ್ಲಿ ಹಗಲು ಬಿಕ್ಷೆಯ ಬೇಡಿ: ಮುಂಜಾವನ್ನು ಬೀದಿಗೆ ಹರಡುತ್ತಾಳೆ’ ಸಾಲಂತೂ ಸೂರ್ಯನನ್ನು ಪೆಟೆಂಟ್ ಪಡೆದವನಂತೆ ವರ್ತಿಸುವ ನನ್ನ ಅಹಂಕಾರವನ್ನು ನುಚ್ಚುನೂರು ಮಾಡಿ ಹಾಕಿತು. ಅರುಣ್ ನಿನ್ನ ಪ್ರೀತಿಯ ಕವಿತೆಗಳು ಸಾಮಾಜಿಕ ಆಯಾಮ ಪಡೆಯುತ್ತಿರುವುದು ನನಗಂತೂ ಸಂತಸದ ವಿಷಯ. ನನ್ನ ನಿರೀಕ್ಷೆಗಳನ್ನು ಹೆಚ್ಚು ಮಾಡಿವೆ. ನಿನ್ನ ಕವಿತೆಗಳ ಹಾದಿ ನೋಡುತ್ತಿರುವೆ.
- ಪರಶುರಾಮ ಕಲಾಲ್

ಅನಾಮಧೇಯ ಹೇಳಿದರು...

Arun,
one more good poem from you.
satish

Anand Rugvedi ಹೇಳಿದರು...

Arun,
kavithe annisada ninna kavithe hrudayada kada tattida berela saddinantide. nija alva, naavella aake bhikshe tanda dinagalannu badukuttiddeve.
Thanks to you and jadamaali

ಅಂತರಾಳದ ಮಾತಗಳು ಹೇಳಿದರು...

ಹಾಯ್ ಅರುಣ್,
ನಿನ್ನ ಕವಿತೆ ಓದಿದೆ. ಎಂದಿನಂತೆ ನಿನ್ನ ಕವಿತೆಯೂಳಗೆ ನಮ್ಮನ್ನ ತಟ್ಟೋದು ಅದ್ಭುತ ರೂಪಕಗಳ ತಾನೇ,ಅದು ನಿನಗೆ ವಿಶಿಷ್ಷವಾಗಿ ಸಿದ್ದಸಿದ ಶಕ್ತಿ. ಇನ್ನಷ್ಷು ಉತ್ತಮ ಕವಿತೆ ಮತ್ತು ಸಂಕಲನದ ನಿರೀಕ್ಷೆಯಲ್ಲಿ..
ನಿಮ್ಮ
ಸುಧಾಕರ.ಬಿ

kaligananath gudadur ಹೇಳಿದರು...

arunana bayiyinda hosapeteyalli jadamaliya dinachari keliye kushipattidda nanage mattomme oduva avakasha kottiddikke nimage dhanyavada. -kaligananath gudadur

shivu.k ಹೇಳಿದರು...

ಅರುಣ್ ಸರ್,

ನನಗೆ ಈ ಕವನ ತುಂಬಾ ಇಷ್ಟವಾಯಿತು....

ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ

ಇಂಥ ಸಾಲುಗಳು ನನಗೆ ತುಂಬಾ ಇಷ್ಟ...

ನೀವು ಇಂಥ ಕವನವನ್ನು ಹಾಕಿದಾಗ ನನ್ನಲ್ಲೂ ಇಂಥ ಕವನಗಳಿವೆ...ಉದಾ: ಚಿಂದಿ ಆಯುವವರು, ಹೀಗೊಂದು ಕೊಳೆಗೇರಿಯ ದಿನಚರಿ....ಸುಮಾರು ಕವನಗಳಿವೆ...ಅವನ್ನೆಲ್ಲಾ ಬ್ಲಾಗಿಗೆ ಹಾಕುತ್ತೇನೆ...ಬಂದು ನೋಡುತ್ತಿರಲ್ಲ.....ನೋಡಿ ಪ್ರತಿಕ್ರಿಯಿಸಿ....ಥ್ಯಾಂಕ್ಸ್...

ಹಳ್ಳಿ ಬಸವ ಹೇಳಿದರು...

ನನ್ನ ಗುರುಗಳಾದ ಕಲಿಗಣನಾಥ ಗುಡದೂರು ಅವರು ನವಂಬರ್ನಲ್ಲಿ ಹಂಪಿ ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ಸಂದರ್ಶನಕ್ಕೆಂದು ಹೋದಾಗ ರೂಂನಲ್ಲಿ ಅರುಣ್ ಜೋಳದ್ ಕೂಡ್ಲಿಗಿಯವರು 'ಜಾಡಮಾಲಿನಿಯ ದಿನಚರಿ' ಕವನನ್ನು ಒದಿದ ಬಗ್ಗೆ ಹೇಳಿದ್ದರು. ಆಮೇಲೆ ಬ್ಲಾಗಿನಲ್ಲಿ ಕಣ್ಣಾಡಿಸಿದಾಗ ಕವನವನ್ನು ಓದಿದೆ. ತುಂಬಾ ಚೆನ್ನಾಗಿದೆ.

ಬಸವರಾಜ ಹಳ್ಳಿ

RJ_Arun_93.5-RED FM ಹೇಳಿದರು...

ತಮ್ಮ ಕವನ ತುಂಬ ಚೆನ್ನಾಗಿದೆ..
--
Regards
Arunkumar.C.Dhuttargi.
Radio Jockey.
93.5 RED ಫಂ
ttp://www.rjarumkumar.blogspot.com
Email-a.arun770@gmail.com