ಸೋಮವಾರ, ಆಗಸ್ಟ್ 10, 2009
ಸಜ್ಜನನ ಸಹಜ ಕೃಷಿ
ರಾಸಾಯನಿಕ ಗೊಬ್ಬರಗಳನ್ನು ಹಾಕಿಯೇ ಬೆಳೆ ಬೆಳೆಯಬೇಕೆಂದು ಪ್ರಯತ್ನಿಸಿ ಕೈಸುಟ್ಟುಕೊಳ್ಳುತ್ತಿರುವ ರೈತರು ಒಂದೆಡೆಯಾದರೆ, ಬೆಳೆ ಸರಿಯಾಗಿ ಬರಲಿಲ್ಲವೆಂದು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಮತ್ತೊಂದೆಡೆ. ಇದಾವುದನ್ನೂ ತಲೆಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಸಹಜ ಕೃಷಿ ನಡೆಸುತ್ತ ಮತ್ತಿತರರಿಗೆ ಮಾದರಿಯಾಗಿರುವ ಸಜ್ಜನನಂತಹ ರೈತರು ವಿಭಿನ್ನವೆನಿಸುತ್ತಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದವರಾಗಿರುವ ಎಚ್.ವಿ.ಸಜ್ಜನ್ ಕೃಷಿಯಲ್ಲಿ ಸದಾ ಪ್ರಯೋಗಶೀಲರು. ಜಿಲ್ಲೆ ರಾಜ್ಯಮಟ್ಟದ ತರಬೇತಿಗಳನ್ನು ನೀಡುವಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಸಜ್ಜನ್ ಕಳೆದ ೧೪ ವರ್ಷಗಳಿಂದ ಸಹಜ ಕೃಷಿ ಅಳವಡಿಸಿಕೊಂಡಿರುವ ರೈತ.
ಕೂಡ್ಲಿಗಿ ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ ಹುಲಿಕೆರೆ ಪುಟ್ಟ ಗ್ರಾಮ. ಆದರೆ ಇಂದು ಸಜ್ಜನರಂತಹ ರೈತರಿಂದ ಅದು ಮಾದರಿ ಗ್ರಾಮವಾಗಿಯೂ ಬೆಳೆಯುತ್ತಿದೆ. ಕಳೆದ ೧೪ ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧಿಗಳಿಲ್ಲದೆ ಸಹಜ ಕೃಷಿಯ ಮೂಲಕ, ಸಾಧನೆ ಮಾಡುತ್ತಿರುವ ಸಜ್ಜನ್ ಸದಾ ಕ್ರಿಯಾಶೀಲ ರೈತ. ಖುಷ್ಕಿ ಬೇಸಾಯ ಪದ್ಧತಿಯ್ಲಲಿ ರೈತರಿಗೆ ಹೆಚ್ಚು ಲಾಭ ತಂದುಕೊಡುವ ತೋಟಗಾರಿಕೆ ಬೆಳೆಗಳಾವವು ಎನ್ನುವುದರಿಂದ ಹಿಡಿದು, ಕೊಟ್ಟಿಗೆ ಗೊಬ್ಬರದಿಂದ ಹೇಗೆ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂಬುದನ್ನು ಸಾದಿಸಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ, ಅಜೋಲಾ ಎಂಬ ಜಾನುವಾರುಗಳ ಕಡಿಮೆ ವೆಚ್ಚದ ಆಹಾರ, ಜೀವಾಮೃತ ತಯಾರಿಕೆ, ಬೀಜೋಪಚಾರ, ಹೈನುಗಾರಿಕೆಯಲ್ಲಿ ವಿವಿಧೋದ್ದೇಶ ಯೋಜನೆಗಳು, ಜೊತೆಗೆ ರಾಜ್ಯಾದ್ಯಂತ ಸಹಜ ಕೃಷಿಯ ಬಗ್ಗೆ ಪ್ರವಾಸ, ತಜ್ಞರೊಂದಿಗೆ ಚರ್ಚೆ, ರೈತರಿಗೆ ತರಬೇತಿ ನೀಡುವುದು ಹೀಗೆ ಸಜ್ಜನರ ಕಾರ್ಯಕ್ಷೇತ್ರ ವಿಶಾಲವಾದುದು.
ಸಜ್ಜನರ ತೋಟ, ಮನೆಯನ್ನು ನೋಡಿದರೆ ಸಾಕು ಎಂತಹ ನಿರಾಶಾವಾದಿ ರೈತರೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ವಿಶೇಷವೆಂದರೆ ಸಜ್ಜನ್ ಯಾವುದೇ ಯಂತ್ರೋಪಕರಣಗಳನ್ನು ಕೃಷಿಗೆ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿಯೇ, ಅತಿಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುತ್ತಿರುವುದು. ಕೊಟ್ಟಿಗೆ ಗೊಬ್ಬರವನ್ನು ದ್ರವರೂಪದಲ್ಲಿ, ಘನರೂಪದಲ್ಲಿ ಯಾವ ಯಾವ ಉದ್ದೇಶಕ್ಕೆ ಬಳಸಬಹುದೆಂಬುದಕ್ಕೆ ಅವರ ತೋಟವೇ ಒಂದು ಪ್ರಯೋಗಶಾಲೆಯಾಗಿದೆ. ಕೊಟ್ಟಿಗೆ ಗೊಬ್ಬರದ ದ್ರವವನ್ನು ಮೇಲೆತ್ತಿ ಸಂಗ್ರಹಿಸಲು, ತಾವೇ ತಯಾರಿಸಿದ ರಾಟೆ, ಕಾಲುವೆ, ನಿರುಪಯುಕ್ತ ವಸ್ತುಗಳಿಂದಾದುದು. ರಾಟೆಗೆ ಬಳಸಿದ್ದು ಕಾರಿನ ಹಳೆಯ ಚಕ್ರ, ನೈಲಾನ್ ಹಗ್ಗ, ಸೈಕಲ್ ಟ್ಯೂಬಿನ ರಬ್ಬರ್. ಮೇಲೆತ್ತಿದ ಗೊಬ್ಬರದ ದ್ರವವನ್ನು ಡ್ರಂನಲ್ಲಿ ಸಂಗ್ರಹಿಸಲು ತಾವೇ ಕಾಲುವೆಯನ್ನು ನಿರ್ಮಿಸಿದ್ದಾರೆ. ಸಂಗ್ರಹಗೊಂಡ ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ಬಳಸುತ್ತಾರೆ. ಘನ ರೂಪದ ಕೊಟ್ಟಿಗೆ ಗೊಬ್ಬರವನ್ನು ಎರೆಹುಳು ಸಾಕಣೆಗೆ ಬಳಸುತ್ತಾರೆ. ಹೆಚ್ಚಾದ ಎರೆಹುಳುಗಳನ್ನು ತಮ್ಮ ಗ್ರಾಮ ಹಾಗೂ ಬೇರೆ ಗ್ರಾಮದಲ್ಲೂ ಚರಂಡಿಗಳಲ್ಲಿ ಹಾಕಿದ್ದಾರೆ. ಚರಂಡಿಯಲ್ಲಿ ಸಮೃದ್ಧವಾಗಿ ಬೆಳೆಯುವ ಎರೆಹುಳುಗಳನ್ನು ಬೇರೆ ರೈತರೂ ಉಪಯೋಗಿಸಿಕೊಳ್ಳಬಹುದು. ಎರೆಹುಳು ಗೊಬ್ಬರವನ್ನು ಜರಡಿ ಹಿಡಿಯಲು, ಜರಡಿಯ ಯಂತ್ರವನ್ನು ತಾವೇ ಸಿದ್ಧಗೊಳಿಸಿದ್ದಾರೆ. ಇಲ್ಲೆಲ್ಲ ಬಳಕೆಯಾಗುವುದು ಕೇವಲ ಮಾನವಶಕ್ತಿಯೊಂದೇ, ವಿದ್ಯುತ್‌ನ್ನು ಅವಲಂಬಿಸಿಯೇ ಇಲ್ಲವೆಂಬುದು ಗಮನಿಸಬೇಕಾದ ಸಂಗತಿ. ಮಲ್ಲಿಗೆಯನ್ನು ಮುಖ್ಯಬೆಳೆಯನ್ನಾಗಿಸಿಕೊಂಡಿರುವ ಸಜ್ಜನ್, ಇದೀಗ ಬೆಟ್ಟದ ನೆಲ್ಲಿಕಾಯಿ, ಬೇಲದಹಣ್ಣು, ನೇರಳೆಹಣ್ಣುಗಳನ್ನು ಬೆಳೆಯುತ್ತ್ದಿದಾರೆ. ಭದ್ರಾ ರೈತರ ಕೂಟದಿಂದ ೨ ಬಾರಿ ರಾಜ್ಯಪ್ರಶಸ್ತಿ, ೧ ಬಾರಿ ಜಿಲ್ಲಾಪ್ರಶಸ್ತಿ ಪಡೆದ್ದಿದಾರೆ. ರಾಜ್ಯ, ರಾಷ್ಟ್ರಮಟ್ಟಗಳಲ್ಲಿ ಕೃಷಿ ಪ್ರವಾಸ ಮಾಡಿದ್ದಾರೆ. ಮೈಸೂರಿನಲ್ಲಿ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ರೈತರಿಗಾಗಿ ನಡೆಸುತ್ತಿರುವ ರಾಜ್ಯ ಮಟ್ಟದ ಸಹಜ ಕೃಷಿ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೆಲ್ಲವನ್ನು ಸಾಧಿಸಲು ಮುಖ್ಯ ಕಾರಣವನ್ನು ಕೇಳಿದರೆ, ಕೊರತೆ, ನೋವು ನನ್ನ ಎಲ್ಲ ಕ್ರಿಯಾಶೀಲತೆಗೆ ಕಾರಣ ಎನ್ನುತ್ತಾರೆ. ಅಂದಹಾಗೆ ಎಚ್.ವಿ.ಸಜ್ಜನ್ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರ. ಸಜ್ಜನರನ್ನು ಕಾಣಬೇಕೆನ್ನುವವರು, ಅವರ ಸಹಜ ಕೃಷಿಯ ಬಗ್ಗೆ ಆಸಕ್ತಿಯಿರುವವರುಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ೯೯೦೨೬೬೧೫೯೭
ಚಿತ್ರ, ಲೇಖನ -ಸಿದ್ಧರಾಮ ಹಿರೇಮಠ. ಕೂಡ್ಲಿಗಿ
ಶುಕ್ರವಾರ, ಜುಲೈ 17, 2009
ಕನಸು ನಶೆಯೇರುವುದೆಂದರೆ...
ಗಾರ್ಮೆ೦ಟಿನ ಕೂಲಿಯೊಬ್ಬಳು
ಅವಸರದಿ ಸ್ಟಿಚ್ ಮಾಡುವಾಗ ಸೂಜಿ ಕೈಗ ನೆಟ್ಟು
ಮೆಲ್ಲಗೆ ಜಿನುಗಿದ ರಕ್ತದ ಕಲೆಗಳು
ಪ್ಯಾಕ್ಟರಿಯ ಮ್ಯಾನೇಜರ್ ಗೆ ಕಾಣದಂತೆ
ಅವಳ ಗೆಳತಿಯೇ ಜೀನ್ಸ್ ಪ್ಯಾಂಟನ್ನು ತೀಡಿ ತೀಡಿ
ಫಾಲಿಶ್ ಮಾಡಿ ಮರೆಮಾಚುತ್ತಾಳೆ !
ಕೆಲಸ ಕಳೆದುಕೊಳ್ಳುವ ಅಪಾಯದಿಂದ ಪಾರುಮಾಡಿ
ಅವಳ ಮುಖದಲ್ಲಿ ಗೆಲುವು ತರುತ್ತಾಳೆ !
*****
ಅದೇ ಜೀನ್ಸ್ ಪ್ಯಾಂಟನ್ನು
ತೊಟ್ಟ ಹುಡುಗಿಯೊಬ್ಬಳು
ಪಬ್ಬಿನಲಿ ಕುಡಿದು ಅಮಲೇರಿ
ಪ್ಯಾಂಟಿನ ಮೇಲೆಲ್ಲಾ ವಿಸ್ಕಿಯು ಚೆಲ್ಲಿದಾಗ
ರಕ್ತದ ಕಲೆ ಮತ್ತೇರಿ
ಗರ್ಮೆ೦ಟ್ ಹುಡುಗಿಯ ಕನಸಿಗೆ ಲಗ್ಗೆ ಇಟ್ಟಿವೆ!
ಇಲ್ಲಿ ಕೈಕಾಲು ಚಾಚದಸ್ಟು
ಪುಟ್ಟ ರೂಮಿನಲ್ಲಿ ಕೈ ಬೆರಳನೋವಲ್ಲಿ
ಗೆಳತಿಯ ಗಟ್ಟಿಯಾಗಿ ಬಿಗಿದಪ್ಪಿ ಮಲಗಿದ್ದಾಳೆ...
ಈಗ ಅವಳಿಗೂ ಮೆಲ್ಲಗೆ ನಶೆ ಏರುತ್ತಿದೆ.
-ಅರುಣ್ ಜೋಳದಕೂಡ್ಲಿಗಿ
ಸೋಮವಾರ, ಜೂನ್ 29, 2009
ಮತ್ತೆ ಮತ್ತೆ ಅಕ್ಷತಾ....
ಬುಧವಾರ, ಜೂನ್ 17, 2009
ಹೊರಳಿ, ಮರಳಿ ಹಳ್ಳಿಗೆ...
ಕಳೆದ ಹತ್ತುಹದಿನೈದು ವರ್ಷಗಳಿಂದ ಎಲ್ಲಿದ್ದಾನೋ ಎಂದು ಗೊತ್ತಿಲ್ಲದ ಸ್ನೇಹಿತನೊಬ್ಬ ಇಲ್ಲಿಯೇ ಕೊಪ್ಪಳದ ಸಮೀಪ ಬಿಕನಹಳ್ಳಿಯಲ್ಲಿದ್ದಾನೆಂದು ತಿಳಿದಾಗ ಅತೀವ ಸಂತಸವಾಯಿತು.
ಆತನ ಹೆಸರು ಜಯಂತ್. ನಾನು ಮೈಸೂರಲ್ಲಿ ಕನ್ನಡ ಎಂ.ಎ. ಪರೀಕ್ಷೆ ಬರೆಯಬೇಕಾದಾಗ ಇಳಿದುಕೊಳ್ಳಲು ತಾವು ಹಾಗೂ ಊಟೋಪಚಾರ ನೋಡಿಕೊಂಡ ವ್ಯಕ್ತಿ. ಹಾಗೇ ನೋಡಿದರೆ ಅದಕ್ಕೂ ಮೊದಲು ನಾವು ಸ್ನೇಹಿತರೇ ಅಲ್ಲ. ಸ್ನೇಹಿತ ಬಣಗಾರ್ ಜರ್ನಲಿಜಂ ಮಾಡಲು ಮೈಸೂರಿಗೆ ಹೋಗಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಆತ ಹುಡುಕಿಕೊಂಡ ತಾವು ಅದಾಗಿತ್ತು. ಆಗಲೇ ಆತನಿಗೆ ಬಣಗಾರ್ ಮೂಲವಾಗಿದ್ದ, ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ನಾನು ಮೂಲವಾದೆ.
ಸಿವಿಲ್ ಇಂಜನಿಯರ್ ಆಗಿದ್ದ ಜಯಂತ್ ಉದ್ಯೋಗದಲ್ಲಿದ್ದರು. ಸರಸ್ವತಿಪುರಂನಲ್ಲಿ ಒಂದು ಸಣ್ಣ ರೂಮ್ ಮಾಡಿದ್ದರು. ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರು. ಅವರಿಗೆ ವಿದ್ಯಾರ್ಥಿಗಳಾಗಿದ್ದ ಬಣಗಾರ್, ಮೈಸೂರು ತಾಲ್ಲೂಕಿನವರೇ ಆದ ಬಸವರಾಜ ಆತನ ರೂಮ್ ಸೇರಿಕೊಂಡಿದ್ದರು. ಚಿಕ್ಕ ರೂಮ್‌ನಲ್ಲಿ ಯಾರು ಬಂದರೂ ಬೇಸರಿಸಿಕೊಳ್ಳದ ಜಯಂತ್ ಎಲ್ಲರಿಗೂ ಅವಕಾಶ ನೀಡಿದ್ದರು. ತೆಳ್ಳನೆಯ ದೇಹ, ಮಿತಮಾತು, ಸಾಹಿತ್ಯದ ಓದು, ಒಂದು ಸ್ವಲ್ಪ ಹೊತ್ತು ವಯಲಿನ್ ನುಡಿಸುವುದು, ಸ್ವಯಂಪಾಕ ಆತನ ದಿನಚರಿಗಳಲ್ಲಿ ಸೇರಿಹೋಗಿದ್ದವು.
ಬೇರೆಯವರ ರೂಮ್‌ನಲ್ಲಿ ಬಣಗಾರ್ ಇದ್ದು, ಅಲ್ಲಿ ನನಗೆ ಅಹ್ವಾನ ನೀಡಿರುವುದು ನನಗೆ ಮುಜಗರದ ವಿಷಯವಾಗಿದ್ದರೂ ನನ್ನ ಬದುಕಿನ ಸ್ಥಿತಿ ಅನಿವಾರ್ಯವೂ ಆಗಿತ್ತು. ಆತನ ರೂಮ್ ಸೇರಿದಾಗ ಎಲ್ಲಾ ಮುಜಗರಗಳು ಹೊರಟು ಹೋದವು. ಅಷ್ಟೊಂದು ಆತ್ಮೀಯವಾಗಿ ನನ್ನೊಂದಿಗೆ ವಿಚಾರ ಹಂಚಿಕೊಂಡ ಜಯಂತ್ ತೋರಿದ ಪ್ರೀತಿ, ವಿಶ್ವಾಸದ ಪರಿ ನನಗೆ ಈಗಲೂ ಪುಳಕಗೊಳಿಸುತ್ತದೆ. ಅಷ್ಟೊತ್ತಿಗಾಗಲೇ ಮಾರ್ಕ್ಸ್‌ವಾದಿಯಾಗಿದ್ದ ನಾನು ಯಾವುದೇ ವಿಷಯ ಮಂಡಿಸುವಾಗಲೂ ’ಪ್ರಖರ’ವಾಗಿ ಮುಖಕ್ಕೆ ಹೊಡೆದಂತೆ ಮಂಡಿಸುತ್ತಿದ್ದೆ. ಭಿನ್ನಾಭಿಪ್ರಾಯಗಳನ್ನು ಸಹಿಸುತ್ತಿದ್ದಿಲ್ಲ. ಮೃದು ಮನಸ್ಸಿನ ಜಯಂತ್‌ಗೆ ಇದು ಇರಿಸುಮುರಿಸು ಆಗಿರಬಹುದು ಎಂದು ಈಗ ಅನ್ನಿಸುತ್ತದೆ. ಆಗ ಅದು ಸತ್ಯ ಹೇಳುವ ಪರಿ ಎಂದಷ್ಟೇ ನನಗೆ ಗೊತ್ತಿತ್ತು. ವಾರದಲ್ಲಿ ಒಂದು ದಿನ ಚಾಮುಂಡಿ ಬೆಟ್ಟವನ್ನು ಓಡುತ್ತಲೇ ಏರಿ, ದೇವಿಯ ದರ್ಶನ ಪಡೆದು, ಲಾಡು ತೆಗೆದುಕೊಂಡು ಬರುತ್ತಿದ್ದರು. ನಾಸ್ತಿಕನಾದ ನಾನು ಲಾಡು ತಿನ್ನಬಹುದು ಎಂದೇ ಹೇಳಿಯೇ ತಿನ್ನುತ್ತಿದ್ದೆ. ಇದಾದ ನಂತರ ಬದುಕಿನ ಸ್ತಿತ್ಯಂತರಗಳು ಎಲ್ಲಿ ಎಲ್ಲಿಗೂ ಕೊಂಡೊಯ್ದು ಎಲ್ಲರೂ ಒಂದಲ್ಲ ಒಂದು ದಿಕ್ಕಿಗೆ ಹೊರಳಿಕೊಂಡೆವು. ಜಯಂತ್ ನೆನಪಾದಾಗ ಎಲ್ಲಿ ಜಯಂತ್? ಅಂತಹ ಬಣಗಾರ್‌ನಿಗೆ ಕೇಳಿದರೆ, ನನಗೂ ಸಿಕ್ಕಿಲ್ಲ, ಸ್ವಲ್ಪದಿನ ಬೆಂಗಳೂರಲ್ಲಿ ಇದ್ದನಂತೆ, ನಂತರ ಚಿನ್ನೈಗೆ ಹೋಗಿದ್ದಾನೆಂದು ಹೇಳಿದ, ಮತ್ತೊಂದು ಸಲ, ಉತ್ತರ ಭಾರತದ ಯಾವುದೋ ಊರಲ್ಲಿದ್ದಾನಂತೆ, ಮಗದೊಂದು ಸಲ, ಜಯಂತ್ ಸಿಗುವುದಿಲ್ಲ, ಆತ ವಿದೇಶದಲ್ಲಿದ್ದಾನೆ ಎಂದು ಹೇಳಿ ಅಂತಿಮಷರಾ ಬರೆದು ಬಿಟ್ಟ. ಬ್ಯಾಂಕಾಕ್, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಐದುವರ್ಷಗಳ ಕಾಲ ಉದ್ಯೋಗದಲ್ಲಿದ್ದ ಜಯಂತ್ ಒಂದು ದಿನ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಆ ದೇಶದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಅದರ ಮೂಲಕ್ಕೆ ಹೋದ ಜಯಂತ್ ಹಣವೇ ಪ್ರಧಾನವಾಗಿರುವ ಜಗತ್ತಿನಲ್ಲಿ ನಾನು ಜೀವಿಸುತ್ತಿರುವುದು ಯಾಕೇ? ಎಂಬ ಪ್ರಶ್ನೆ ಕೇಳಿಕೊಂಡ, ಬದುಕುವುದಕ್ಕೆ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವುದು ಕೇವಲ, ಅನ್ನ, ಬಟ್ಟೆ, ವಿಚಾರ ಮಾತ್ರ ಅನ್ನಿಸಿದೊಡನೆ ಪಿಚ್ಚೆನಿಸಿ ಉದ್ಯೋಗಕ್ಕೆ ರಾಜೀನಾಮೆ ಬಿಸಾಕಿ, ಹೊರಳಿ ನೋಡಿಕೊಂಡು, ಮರಳಿ ತಮ್ಮ ಕುಗ್ರಾಮಕ್ಕೆ ಬಂದು ಬಿಟ್ಟರು. ಉನ್ನತ ಉದ್ಯೋಗ ಬಿಟ್ಟು, ಮಳೆಯಾಶ್ರಿತ ಕೃಷಿ ಮಾಡುತ್ತೇನೆ ಎಂದು ಬಂದವರನ್ನು ಈ ಸಮಾಜ ’ಹುಚ್ಚುತನ’ ಎಂದೇ ನಗುತ್ತದೆ. ಹಾಗೇ ಈಗಲೂ ನಗುತ್ತಿದೆ ಕೂಡಾ.
ಅಂತಹ ಜಯಂತ್ ಕೊಪ್ಪಳದ ಬಳಿ ಬಿಸನೂರುನಲ್ಲಿದ್ದಾನೆಂದು ತಿಳಿದಾಗ ಕಂಡು ಬರಲು ಬಣಗಾರ್ ಕಾರು ರೆಡಿ ಮಾಡಿದರು. ಕನ್ನಡ ವಿವಿ ಕಲಾವಿದ ಕೆ.ಮಕಾಳಿ, ಭಾವೈಕ್ಯತಾ ವೇದಿಕೆಯ ಪಿ. ಅಬ್ದುಲ್, ಕಾರು ಚಾಲಕ ವೀರಭದ್ರಪ್ಪ, ನಾವು ಬೆಳಿಗ್ಗೆಯೇ ಹೊರಟೆವು. ಬಿಸನೂರು ಅಲ್ಲ, ಅದು ಬಿಕನೂರು ಎಂದು ಗೊತ್ತು ಮಾಡಿಕೊಂಡು ಆ ಕುಗ್ರಾಮ ಸೇರಬೇಕಾದರೆ ಸಾಕು ಸಾಕಾಯಿತು. ದಾರಿಯಲ್ಲಿ ಹಳ್ಳದ ಹುದಲಲ್ಲಿ ಕಾರಿನ ಚಕ್ರ ಸಿಕ್ಕು ಕೊಂಡು ಹಿಂದಕ್ಕೆ ಬಂದು, ಮತ್ತೊಂದು ದಾರಿಯಲ್ಲಿ ಸಾಗಿದ್ದು ನಡೆಯಿತು. ಅಂತೂ, ಇಂತೂ ಜಯಂತ್ ಮನೆ ಪತ್ತೆ ಹಚ್ಚಿದಾಗ ಜಯಂತ್ ತಂದೆ ಜಯಂತ್ ಹೊಲದಲ್ಲಿದ್ದಾನೆಂದು ಹೇಳಿ, ನಮ್ಮ ಜೊತೆ ಹೊಲಕ್ಕೆ ಹೊರಟರು. ಕಾಲು ಹಾದಿ ಹಿಡಿದು ಹಳ್ಳದಲ್ಲಿ ಇಳಿದು ಮೇಲತ್ತುವಾಗ ಜಯಂತ್ ಅಲ್ಲಿ ಪ್ರತ್ಯಕ್ಷ. ಮೆಲ್ಲಗೆ ಬನ್ನಿ, ಇವು ನ್ಯಾಚುರಲ್ ಗೇಟ್‌ಗಳು ಎಂದು ನಮ್ಮನ್ನು ಗುರುತಿಸಿ ಕೈ ಹಿಡಿದು ಕರೆದುಕೊಂಡರು. ಅದೇ ಜಯಂತ್. ಅದೇ ನೀಳ ದೇಹ, ಅದೇ ಮಂದಸ್ಮಿತ ನಗು, ಬಟ್ಟೆ ಮಾತ್ರ ಮಾಸಲು ಹತ್ತಿಬಟ್ಟೆಯವು. ಹರಿದ ಚಪ್ಪಲಿ, ಅಪ್ಪಟ ಭಾರತೀಯ ಕೃಷಿಕನಾಗಿ ಬದಲಾಗಿದ್ದ ಜಯಂತ್. ಕುಡಿಯುವ ನೀರಿಗೂ ಪರಿತಪಿಸುವ ಕುಗ್ರಾಮದಲ್ಲಿ, ತೋಡಿದಷ್ಟು ಉಪ್ಪು ನೀರು ಸಿಗುವ ಊರಿನಲ್ಲಿ, ಸರಿಯಾಗಿ ಒಂದು ಘಳಿಗೆಯೂ ವಿದ್ಯಾವಂತರೆನಿಸಿಕೊಂಡವರು ಇರಲಾರದ ಊರಲ್ಲಿ ಜಯಂತ್ ತಣ್ಣಗೆ ಇರುವುದಾದರೂ ಹೇಗೆ?
ಸಹಜ ಕೃಷಿಯ ಮೂಲಕ ತಮ್ಮ ೧೬ ಏಕರೆ ಎರೆ ಹಾಗೂ ಕೆಂಪು ಭೂಮಿಯ ಕೃಷಿ ನಡೆಸುತ್ತಿರುವ ಜಯಂತ್‌ನನ್ನು ಕಂಡು ನಕ್ಕವರು, ಹಿಯ್ಯಾಳಿಸುತ್ತಿರುವುದು ಇಡೀ ಊರೇ ಆಗಿದೆ.
ಗೊಬ್ಬರವಿಲ್ಲದ, ಹೈಬ್ರಿಡ್ ಬೀಜವಿಲ್ಲದೇ, ಆ ಭಾಗದ ಮೂಲ ತಳಿಗಳನ್ನು ಪತ್ತೆ ಹಚ್ಚಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಮಾರುಕಟ್ಟೆ ಅಗತ್ಯವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾರೆ. ಕುಸಬಿ ಬೆಳೆದು ಅದನ್ನು ಗಿರಣಿಯಲ್ಲಿ ಹಾಕಿಸಿ, ಎಣ್ಣೆ ಮಾಡಿಕೊಳ್ಳುತ್ತಾರೆ. ನವಣಿ, ಜೋಳ, ಸಾವಿ, ತೊಗರಿ, ಶೇಂಗಾ, ಅಗಸಿ, ಹೆಸರು, ಉದ್ದು ಬೆಳೆಯುತ್ತಾರೆ. ಇವರ ಬೆಳೆದ ಫಸಲು ಇವರ ಮನೆಯಲ್ಲಿಯೇ ಇದೆ. ಹಣ ಯಾಕೇ ಬೇಕು. ಸಣ್ಣಪುಟ್ಟ ಖರ್ಚುಗಳು ಅಷ್ಟು ತಾನೇ ಎಂದು ಹೇಳುತ್ತಾರೆ. ನಮಗೆ ಸಣ್ಣಪುಟ್ಟ ಖರ್ಚುಗಳ ಅಗತ್ಯವೂ ಇಲ್ಲ ಎಂದೇ ನಗುತ್ತಾರೆ. ಉತ್ತರ ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಪ್ರೀತಿಸಿ ಮದುವೆಯಾಗಿದ್ದ ಆ ಮಹಿಳೆ ಕೂಡಾ ಇಂತಹ ಕುಗ್ರಾಮದಲ್ಲಿ ಗಂಡನ ಜೊತೆ ಇದ್ದಾಳೆ. ಕನ್ನಡ ಭಾಷೆ ಬರದು, ಈಗೀಗ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆಯಂತೆ. ಇವರ ಎದುರಲ್ಲಿ ರಾಜರೋಷವಾಗಿ ಗೊಬ್ಬರ ಹಾಕಿ, ಹೈಬ್ರಿಡ್ ಬಂಪರ್ ಬೆಳೆ ಬೆಳೆಯುವ ರೈತರು, ಅವರ ಎದುರಲ್ಲಿ ದೇಶಿ ತಳಿಗಳು, ಅದರಲ್ಲೂ ಇಳುವರಿ ಕಡಿಮೆ ಕೊಡುವ ಬೆಳೆ ಬೆಳೆಯುವ ಜಯಂತ್ ಪೇಲವವಾಗಿ ಕಾಣುತ್ತಾರೆ. ಕೀಟಗಳ ಹಾವಳಿ, ಬೇರೆ ಬೇರೆ ಕಾರಣದಿಂದಲೂ ಬೆಳೆ ಹಾಳಾದರೂ ಇವರು ಚಿಂತೆ ಮಾಡುವುದಿಲ್ಲ. ಕೀಟಗಳು ಕೂಡಾ ತಿನ್ನಬೇಕು ತಾನೇ ತಿನ್ನಲಿ ಬಿಡಿ ಎನ್ನುತ್ತಾರೆ. ಅಷ್ಟೆಲ್ಲಾ ಬಂಪರ್ ಬೆಳೆ ಬೆಳೆದರೂ ಆ ಊರಲ್ಲಿ ಸ್ವಾವಲಂಬನೆಯಿಂದ ಯಾವ ರೈತನೂ ಜೀವಿಸುತ್ತಿಲ್ಲ. ಆದರೆ ಅಷ್ಟು ಕಡಿಮೆ ಬೆಳೆದು ಸ್ವಾವಲಂಬನೆಯಿಂದ ಬದುಕಿ ತೋರಿಸುತ್ತಿದ್ದಾನೆ ಜಯಂತ್. ಜಯಂತ್‌ನ ಮನೆಯಲ್ಲಿ ಟಿ.ವಿ. ಇಲ್ಲ, ಅದರ ಅಗತ್ಯವೂ ಇಲ್ಲ. ನೋಡುತ್ತೀರಿ, ಹೊರಳಿ, ಮರಳಿ ಇಲ್ಲಿಗೆ ಬರುತ್ತಾರೆ ಎಂದು ಜಯಂತ್ ಹೇಳುತ್ತಾನೆ. ಜಾಗತೀಕರಣದ ಈ ಹೊತ್ತಿನಲ್ಲಿ ಜಗತ್ತಿನಲ್ಲಿ ಯಾವ ಸರ್ಕಾರಗಳು ಬರಬೇಕು, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರಬೇಕು ಎನ್ನುವುದನ್ನು ಕೆಲವೇ ಕೆಲವು ಬೆರಳೆಣಿಕೆಯ ಜನ ನಿರ್ಧರಿಸುತ್ತಿದ್ದಾರೆ. ಇಂತಹ ಮೋಡಿಗೆ ನಾವು ಯಾಕೇ ಒಳಗಾಗಬೇಕು. ನಮ್ಮ ವಿವೇಕ, ವಿಚಾರದೊಡನೆ ಬದುಕಬೇಕು ಎನ್ನುತ್ತಾನೆ ಜಯಂತ್. ಇದೇ ಉತ್ತರವೂ ಎನ್ನುತ್ತಾನೆ. ಜಯಂತ್ ಮನೆಗೆ ಬಂದು ದೇಶಿ ತಿಂಡಿ ತಿನ್ನುವಾಗ ’ಕಾಯಕವೇ ಕೈಲಾಸ’ ಎಂದು ಹೇಳುವ ಬಸವಣ್ಣನ ಕ್ಯಾಲೆಂಡರ್ ಗಾಳಿಗೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಹೊಯ್ದಾಡುತ್ತಿತ್ತು. ದೇಶಿ ಕಡಲೆ, ಕುಸಬಿ ಪಡೆದುಕೊಂಡು, ಕಾರು ಹತ್ತುವಾಗ ರಸ್ತೆ ಹಾಳಾಗಿರುವ ಬಗ್ಗೆ ನಾವು ಗೋಳು ತೋಡಿಕೊಂಡು ಸರ್ಕಾರವನ್ನು ಬಯ್ದರೆ, ಜಯಂತ್ ಹೇಳಿದ, ರಸ್ತೆ ಇಷ್ಟೇ ಇದ್ದರೆ ಸಾಕು, ನಡೆಯಲು ಬರುತ್ತದಲ್ಲವೇ? ಅವಕ್ಕಾಗುವ ಸರದಿ ನಮ್ಮದು. ಜಯಂತ್ ತುಳಿದ ಹಾದಿಯನ್ನು ಬದಿಗೊತ್ತಿ ರಾಜಮಾರ್ಗಕ್ಕೆ ನಾವು ಹೊರಳಿಕೊಂಡಾಗ ಕಳೆದುಕೊಂಡ ಅನುಭವ ಎಲ್ಲರಲ್ಲೂ ದಟ್ಟವಾಗುತ್ತಾ ಹೊಯಿತು. ನಮ್ಮ ಜೊತೆ ದೇಶಿಯ ಕಾಳುಗಳು ನಾವಿದ್ದೇವೆ ಎಂದು ಹೇಳಿದವು.
ಶುಕ್ರವಾರ, ಏಪ್ರಿಲ್ 17, 2009
ಕಾಡುವ ಕತೆಗಳು
(ಸ್ನೇಹಿತರಾದ ಚಿದಾನಂದ ಸಾಲಿಯವರ ಕಥಾ ಸಂಕಲನ ಮತ್ತು ಡಾ.ಆನಂದ್ ಋಗ್ವೇದಿಯವರ ವಿಮರ್ಶಾ ಸಂಕಲನಗಳನ್ನು ಮುದ್ದಾದ ಮುದ್ರಣ, ಮೌಲಿಕ ಪ್ರಕಟಣೆಗೆ ಮತ್ತು ಆತ್ಮೀಯ ಸ್ನೇಹಕ್ಕೆ ಹೆಸರಾದ ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್ ರವರು ಹೊರತರುತ್ತಿರುವ ಸಂದರ್ಭದಲ್ಲಿ ಎರಡು ಪುಸ್ತಕಗಳ ಮುಖಪುಟಗಳು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಸಾಲಿ’ಯವರ ಕಥಾಸಂಕಲನದ ದೇವು ಪತ್ತಾರರ ವಿಮರ್ಶೆ ನಿಮಗಾಗಿ)
ಸಿದ್ಧ ವಿನ್ಯಾಸದಿಂದ ‘ಮುಕ್ತ’ವಾದ ಕಥೆಗಳು ‘ಎಲೆಯುದುರುವ ಕಾಲ’ ಎಂಬ ಅನುವಾದಿತ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಧಿಕೃತ ಪ್ರವೇಶ ಪಡೆದ ಚಿದಾನಂದ ಸಾಲಿ ನಂತರ ‘ಮೌನ’ ಎಂಬ ಗಜಲ್ ಸಂಕಲನ ಪ್ರಕಟಿಸಿದರು. ಅದಕ್ಕೂ ಮುನ್ನ ಅಂದರೆ ಸುಮಾರು ದಶಕದ ಹಿಂದೆಯೇ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ‘ಕಥೆಗಾರ’ ಎಂದು ಗುರುತಿಸಿಕೊಂಡಿದ್ದ ‘ಸಾಲಿ’ ಅನುವಾದ, ಗಜಲ್‌ಗಳ ಕಡೆಗೆ ಮುಖ ಮಾಡಿದ್ದರು. ‘ಕೊಟ್ಟ ಕುದುರೆಯನೇರಲರಿಯದೆ’ ಅಂತಹ ಓದಿಸಿಕೊಳ್ಳುವ ಗುಣವುಳ್ಳ ಉತ್ತಮ ಕಥೆ ಬರೆದಿದ್ದ ಕಥೆಗಳ ವಿಷಯಕ್ಕೆ ಮೌನವಾದರೇನೋ ಅನ್ನಿಸತೊಡಗಿತ್ತು. ಆದರೆ, ನಾಡಿನ ಪ್ರಮುಖ ದೈನಿಕಗಳ ಪುರವಣಿ ಮತ್ತು ವಾರಪತ್ರಿಕೆಗಳಲ್ಲಿ ಕಥೆ ಪ್ರಕಟಿಸುವ ಮೂಲಕ ‘ಅಸ್ತಿತ್ವ’ ತೋರಿಸುತ್ತ ಬಂದಿದ್ದರು. ಕಥಾಸ್ಪರ್ಧೆಯ ಬಹುಮಾನ ಪಡೆಯುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದ್ದರು.
ಪ್ರತಿಯೊಂದು ಕಥೆಯೂ ಹೊಸ ಜೀವನಾನುಭವ ಕಟ್ಟಿಕೊಡುವ ‘ಪ್ರಯೋಗ’ ಎಂದು ಭಾವಿಸುವ ಕಥೆಗಾರ ಮಾತ್ರ ಚೌಕಟ್ಟುಗಳನ್ನು ಮೀರಿ ತನ್ನದೇ ಹೊಸ ಕಥೆ ಕಟ್ಟಬಲ್ಲ. ಚಿದಾನಂದ ಸಾಲಿ ತಮ್ಮ ಮೊದಲ ‘ಧರೆಗೆ ನಿದ್ರೆಯು ಇಲ್ಲ’ ಕಥಾಸಂಕಲನದ ಮೂಲಕ ತಾವು ಕೇವಲ ಸ್ಪರ್ಧೆಗಾಗಿ ಬರೆಯುವ ಕಥೆಗಾರ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಸಂಕಲನದ ಎಲ್ಲ ಕಥೆಗಳೂ ಒಂದಕ್ಕಿಂತ ಮತ್ತೊಂದು ವಸ್ತು, ವಿಷಯ, ನಿರ್ವಹಣೆ ಮತ್ತು ತಂತ್ರದ ದೃಷ್ಟಿಯಿಂದ ಭಿನ್ನವಾಗಿವೆ. ವೈವಿಧ್ಯತೆಯೇ ಇಲ್ಲಿನ ಕಥೆಗಳ ಜೀವಾಳ. ಕನ್ನಡದ ಅಥವಾ ಹೈದರಾಬಾದ್ ಕರ್ನಾಟಕದ ಕಥೆಗಾರರ ಸಿದ್ಧವಿನ್ಯಾಸದ ಹೆಜ್ಜೆ ನಾಡಿನಲ್ಲಿ ನಡೆಯಬಯಸದ ‘ಸಾಲಿ ಮಾಸ್ತರ’ ತನ್ನದೇ ಹೊಸ ದಾರಿ ಕಂಡುಕೊಂಡಿದ್ದಾರೆ.
‘ಕೊಟ್ಟ ಕುದುರೆಯನೇರಲರಿಯದೆ’ ಮತ್ತು ‘ಆಸೆಯೆಂಬ ತಥಾಗತನ ವೈರಿ’ ಕಥೆಗಳು ಸಂಕಲನದಲ್ಲಿ ಗಮನ ಸೆಳೆಯುವ ಗಂಭೀರ ಕಥೆಗಳು. ಬದುಕಿನ ನಗ್ನಸತ್ಯವನ್ನು ಯಾವುದೇ ಮುಜುಗರಕ್ಕೆ ಎಡೆಯಿಲ್ಲದಂತೆ ಬಿಚ್ಚಿಡುವ ಈ ಎರಡು ಕಥೆಗಳು ವಸ್ತು ಮತ್ತು ನಿರ್ವಹಣೆಯ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಸೂಕ್ಷ್ಮ ಸಂವೇದಿ ಓದುಗನನ್ನು ಈ ಎರಡು ಕಥೆಗಳು ಡಿಸ್ಟರ್ಬ್ ಮಾಡಿಬಿಡುತ್ತವೆ ಮತ್ತು ಯೋಚನೆಗೆ ಹಚ್ಚುತ್ತವೆ.
ಸಲಿಂಗ ಕಾಮದ ಸುತ್ತ ಹೆಣೆದಿರುವ ‘ಒಳಗಿನೊಳಗಿನ ಒಳಗೆ’ ಕಾವ್ಯಾತ್ಮಕ ನಿರೂಪಣೆಯಿಂದ ಪ್ರಿಯವಾಗುತ್ತದೆ. ‘ಹಿಪಾಕ್ರಸಿ’ ಕೇಂದ್ರವಾಗಿಟ್ಟುಕೊಂಡ ‘ಕಾಗೆಯೊಂದಗುಳ ಕಂಡರೆ’ ಮತ್ತು ‘ಅಂಬರದೊಳಗಾಡುವ ಗಿಳಿ’ ಕಥೆಗಳು ಸಭ್ಯ-ಅಸಭ್ಯಗಳನ್ನು ಮುಖಾಮುಖಿಯಾಗಿಸಿ ರೂಢಿಗತ ನಂಬಿಕೆಯನ್ನು ಹುಸಿ ಮಾಡುತ್ತವೆ.
ನಿರೀಕ್ಷಿತ ಅಂತ್ಯ ತೋರಿಸುವ ನಿಶ್ಚಿತ ಉದ್ದೇಶವಿರುವ ‘ಕಳ್ಳಗಂಜಿ ಕಾಡ ಹೊಕ್ಕರೆ..’ ಕಥೆಯಲ್ಲಿ ಪ್ರಬಂಧ ಧ್ವನಿಯಿದೆ. ‘ಮನಸೂಂದ್ರೆ ನಾಕೊಂದ್ಲೆ ನಾಕಲ್ಲ’ ಕಥೆಯ ತಂತ್ರ ಅತ್ಯಂತ ವಿಶಿಷ್ಟವಾದದ್ದಾಗಿದೆ. ಮನಸ್ಸು ಮತ್ತು ಬುದ್ಧಿಗಳ ನಡುವಿನ ತಾಕಲಾಟ ಮತ್ತು ಆ ನಂತರ ಅದಕ್ಕೆ ಘಟನೆಯನ್ನು ಬೆಸೆಯುವ ಮೂಲಕ ಹೇಳಿದ ಕಥೆ ಮನತಟ್ಟುತ್ತದೆ. ‘ತಾಯ ಮೊಲೆವಾಲು ನಂಜಾಗಿ ಕೊಲುವೆಡೆ’ ಕಥೆಯು ಘಟನೆಯೊಂದನ್ನು ಕಥೆಯಾಗಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ. ಅದರಾಚೆಗೆ ಬೆಳೆದು ನಿಲ್ಲುವ ಕಥೆಯು ತನ್ನದೇ ಅರ್ಥದ ಸಾಧ್ಯತೆಗಳನ್ನು ಬಿಚ್ಚಿಡುತ್ತ ಹೋಗುತ್ತದೆ.
ಈ ಸಂಕಲನದ ಕಥೆಗಳ ಭಾಷೆಯ ಬಗ್ಗೆ ಬರೆಯದಿದ್ದರೆ ಅಪೂರ್ಣವಾಗುತ್ತದೆ. ಕಾವ್ಯಾತ್ಮಕ ಪದಗಳ ಬಳಕೆ, ಸೂಚ್ಯವಾಗಿ ಹೇಳುವ ರೀತಿ ಅಪ್ಯಾಯಮಾನವಾಗಿದೆ. ಭಾವಗೀತಾತ್ಮಕ ನಿರೂಪಣೆ ಇಲ್ಲಿನ ಕಥೆಗಳ ಓದನ್ನು ಸಹ್ಯವಾಗಿಸುತ್ತದೆ. ಶಂಕರಗೌಡ ಬೆಟ್ಟದೂರು ಅವರ ಕಲಾಕೃತಿಗಳನ್ನು ಒಳಗೊಂಡ ಆಕರ್ಷಕ ಮುಖಪುಟ ಮತ್ತು ಅಷ್ಟೇ ಸೊಗಸಾದ ಮುದ್ರಣ ಗಮನ ಸೆಳೆಯುತ್ತವೆ. ತಪ್ಪಿಲ್ಲದಂತೆ ಅಥವಾ ಮುದ್ರಣದೋಷಗಳಾಗದಂತೆ ವಹಿಸಿದ ಕಾಳಜಿ ಎದ್ದು ಕಾಣಿಸುತ್ತದೆ.
-ದೇವು ಪತ್ತಾರ
ಭಾನುವಾರ, ಮಾರ್ಚ್ 22, 2009
ಪ್ರೊ.ಎಸ್.ಎಸ್.ಹಿರೇಮಠ-ಒಂದು ನೆನಪು
(ಬಳ್ಳಾರಿ ಜಿಲ್ಲೆಯಲ್ಲಿ ಎಡಪಂಥೀಯ ಚಳವಳಿ, ಬಂಡಾಯ, ಸಮುದಾಯ ಚಳವಳಿ ಬೆಳೆಸಿದ ಪ್ರಗತಿಪರ ಚಿಂತಕ, ಕವಿ, ಹೋರಾಟಗಾರ ಹಾಗೂ ಸಂಶೋಧಕರಾಗಿದ್ದ ಪ್ರೊ.ಎಸ್.ಎಸ್.ಹಿರೇಮಠರ ಬಗ್ಗೆ ಯಾರಿಗೆ ಗೊತ್ತಿಲ್ಲ. ಜಿಲ್ಲೆಯವರೇ ಆಗಿ ಹೋದ ಅವರು ಈಚಿಗೆ ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಬಗ್ಗೆ ಪರುಶುರಾಮ ಕಲಾಲ್ ಇಲ್ಲಿ ಬರೆದಿದ್ದಾರೆ.)
ಎರಡು ಘಟನೆಗಳು: ಎಸ್.ಎಸ್. ಹಿರೇಮಠರೆಂಬ ಮುಗ್ಧರು!
ಬಹಳ ಹಿಂದಿನ ಘಟನೆ ನೆನಪಾಗುತ್ತಿದೆ. ಈಗ ಪ್ರಜಾವಾಣಿಯ ಉಪ ಸಂಪಾದಕರಾಗಿರುವ ಗುಡಿಹಳ್ಳಿ ನಾಗರಾಜ್ ಆಗ ಹೋರಾಟಗಾರರು. ಅವರು ಒಂದು ಕಪ್ ಬಿಯರ್ ಕುಡಿದ ಸುದ್ದಿ ಹಿರೇಮಠರಿಗೆ ಹೇಗೋ ಗೊತ್ತಾಗಿ ಬಿಟ್ಟಿತ್ತು. ಅದರ ವಿಚಾರಣೆಯಲ್ಲಿ ನಾನೂ ಇದ್ದೆ. ಹಿರೇಮಠರು ಹೆಂಡ ಕುಡ್ಕಂಡು ಎಂದು ಬಯ್ಯುವುದನ್ನು ತಾಳಲಾರದೇ ಗುಡಿಹಳ್ಳಿ ಸಾರ್ ಬಿಯರ್ ಏನು ಹೆಂಡವಲ್ಲ, ಅದರಲ್ಲಿ ಅಲ್ಕೋಹಾಲ್ ಸ್ವಲ್ಪ ಇರುತ್ತದೆ. ಒಂದು ಕಪ್ ಕುಡಿದಿದ್ದೇನೆ ಅಷ್ಟೆ ಎಂದು ಸಮರ್ಥಿಸಿಕೊಂಡರು.
ಏನ್ರಿ ಕಲಾಲ್ ಇದೇನು ಹೊಸ ಕತೆ ಎಂದು ಕೇಳಿದರು. ಬಿಯರ್, ವ್ಹಿಸ್ಕಿ, ರಮ್, ಜಿನ್, ಸರಾಯಿ ಇತ್ಯಾದಿ ಕುಲಗಳನ್ನೆಲ್ಲಾ ಹೇಳಿದೆ. ಎಲ್ಲಾ ವಿವರ ಕೇಳಿದ ಅವರು ಪ್ರತಿಕ್ರಿಯಿಸಿದ್ದು ಹೀಗೆ ಇದರಲ್ಲೂ ವರ್ಗ ಬಂದಿದೆ ಅಲ್ಲರಿ, ಕುಡುಕರನ್ನು ವರ್ಗಬೇಧ ಮಾಡಿ ಹಾಕಿ ಅಲ್ಲೂ ತಾರತಮ್ಯ ಸೃಷ್ಠಿಸಲಾಗಿದೆ. ಇದನ್ನು ಗುಡಿಹಳ್ಳಿ ಅಂತವರೂ ನಂಬುತ್ತಾರಲ್ಲ. ಹೆಂಡ ಅಷ್ಟೇ, ಬಿಯರ್ ಅಷ್ಟೇ
ಘಟನೆ ಎರಡು: ಹರಪನಹಳ್ಳಿಯಲ್ಲಿದ್ದ ಎಸ್.ಎಸ್.ಹಿರೇಮಠರ ಮನೆಗೆ ಹೋದಾಗ ಅವರು ಹಬ್ಬಗಳು ಪುಸ್ತಕ ನೀಡಿ ಅದನ್ನು ಕನ್ನಡ ವಿಶ್ವವಿದ್ಯಾಲಯದ ಆಗೀನ ಕುಲಪತಿಗಳಾಗಿದ್ದ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ತಲುಪಿಸಬೇಕೆಂದು ಹೇಳಿದರು. ನನಗೂ ಒಂದು ಪುಸ್ತಕ ನೀಡಿದ್ದರು.
ನಾನು ಆ ಪುಸ್ತಕದ ರಕ್ಷಾಪುಟ ಹಾಗೂ ಒಳಪುಟಗಳನ್ನು ನೋಡಿ, ಏನು ಸಾರ್ ಪುಸ್ತಕವನ್ನು ಎಷ್ಟು ಕೆಟ್ಟದ್ದಾಗಿ ತಂದು ಬಿಟ್ಟಿದ್ದೀರಿ ಎಂದೆ.
ಹಿರೇಮಠರಿಗೆ ಸಿಟ್ಟು ಬಂತು. ಪುಸ್ತಕದ ವಿಷಯ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ಮುದ್ರಣ, ಹಾಳೆ ಕುರಿತು ಮಾತನಾಡಿದ್ದರಿಂದ ಈ ಸಿಟ್ಟು ಬಂದಿತು ಎಂದು ಕಾಣುತ್ತದೆ. ಹಾಳೆ ಮುಖ್ಯ ಅಲ್ಲರಿ, ವಿಷಯ ಮುಖ್ಯ ಎಂದು ಗದರಿಕೊಂಡರು. ನನಗೂ ಸಿಟ್ಟು ಬಂತು. ಹಾಗಾದರೆ ಮುದ್ರಣ ಯಾಕೆ ಮಾಡಿಸಿದಿರಿ, ಬರೆದಿದ್ದನ್ನು ಟೈಪ್ ಮಾಡಿಸಿ, ಜಿರಾಕ್ಸ್ ಮಾಡಿಸಿದ್ದರೆ ಆಗುತ್ತಿತ್ತು. ರಕ್ಷಾಪುಟ ಯಾಕೇ? ಅದು ಕೂಡಾ ಬೇಕಾಗಿದ್ದಿಲ್ಲ ಎಂದೆ.
ಒಂದು ಕ್ಷಣ ಅಲ್ಲಿ ಮೌನ. ನಂತರ ಹಿರೇಮಠರು ನಿಧಾನವಾಗಿ ಹೇಳಿದರು. ಅವಸರವಾಯಿತು, ತಪ್ಪಾಗಿ ಬಿಟ್ಟಿದೆ. ಇನ್ನೊಂದು ಸಲ ಈ ತಪ್ಪು ಮಾಡುವುದಿಲ್ಲ.ಕಲಬುರ್ಗಿಯವರಿಗೆ ಈ ಪುಸ್ತಕ ಒಪ್ಪಿಸಿ ಸಮಾಧಾನ ಮಾಡಿ ಎಂಬ ವಿನಂತಿ ಬೇರೆ.
ಹೌದು, ಹಿರೇಮಠರಲ್ಲಿ ಒಬ್ಬ ಮುಗ್ಧ ಬಾಲಕನೂ ಇದ್ದ. ಆತ ವ್ಯವಹಾರನಸ್ಥನಲ್ಲ. ಈ ಪ್ರಾಪಂಚಿಕ ಜಗತ್ತಿನ ಜೊತೆ ಆತ ಬೆರೆಯಲಾರ. ಹಿರೇಮಠರಲ್ಲಿ ಚಿಂತಕ, ಹೋರಾಟಗಾರ, ಸಂಶೋಧಕ, ಕವಿ ಎಲ್ಲರೂ ಇದ್ದರೂ ಈ ಬಾಲಕನದೇ ಯಾವಾಗಲೂ ಮೇಲುಗೈ.
ತಾವು ಬರೆದ ಬರಹದಂತೆ ಬದುಕಿದ ಹಿರೇಮಠರು ಮುಖಕ್ಕೆ ಹೊಡೆದಂತೆ ಮಾತನಾಡಿ ಅನೇಕರ ವಿರೋಧ ಕಟ್ಟಿಕೊಂಡರು. ಮಾತನಾಡಿದ ಮರುಗಳಿಗೆ ಅದನ್ನು ಮರೆತು ಬಿಡುವ ಹಿರೇಮಠರ ಮುಗ್ಧತೆಯನ್ನು ಅನೇಕರು ಅರ್ಥ ಮಾಡಿಕೊಳ್ಳಲಿಲ್ಲ. ನೆನಪು ಇಟ್ಟುಕೊಂಡು ಸಮಯ ಕಾದು ಸೇಡು ತೀರಿಸಿಕೊಂಡರು. ಹಿರೇಮಠರಿಗೆ ಇದು ಕೊನೆಯವರಿಗೂ ಗೊತ್ತಾಗಲೇ ಇಲ್ಲ. ಎಲ್ಲರನ್ನೂ ಮುಗ್ಧವಾಗಿ ನಂಬಿ ಬಿಡುತ್ತಿದ್ದರು. ವಿರೋಧಿಗಳನ್ನು ಸಹ.
ಹೀಗಾಗಿ ಕೊನೆಗಾಲದಲ್ಲಿ ತೀರಾ ಸಂಕಷ್ಟಗಳಿಗೆ ಸಿಲುಕಿದರು.
ಅವರ ಮಗ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಟ್ಟ ನಂತರ ಅವರ ಹುಡುಕಾಟವಂತೂ ಅನೇಕ ವರ್ಷಗಳ ಕಾಲ ಪುಸ್ತಕ, ಹೋರಾಟ, ಬರವಣಿಗೆಯಲ್ಲಿ ಮುಳುಗಿ ಈಗ ತಾನೇ ಮೇಲೆದ್ದ ತಂದೆಯೊಬ್ಬ ಅಷ್ಟು ವರ್ಷದ ಪ್ರೀತಿಯನ್ನು ಒಂದೇ ಸಲ ಹರಿಯ ಬಿಟ್ಟಂತೆ ಇತ್ತು.
ಆಗ ಕೊಟ್ಟೂರಿಗೆ ಹೋಗಿದ್ದೆ. ಇವರು ಹಿರೇಮಠರೇ ಎಂದು ಕೇಳುವಂತೆ ಜರ್ಜಿತರಾಗಿದ್ದರು.
ನನ್ನ ಮಗ ಹಂಪಿ, ಆನೆಗೊಂದಿ, ಹೊಸಪೇಟೆಯಲ್ಲಿ ಎಲ್ಲೂ ಒಂದುಕಡೆ ಇದ್ದಾನೆ. ಅನೇಕ ಜನ ನೋಡಿದ್ದಾರೆ. ಆದರೆ ಅವರು ನನಗೆ ಸಹಾಯ ಮಾಡುತ್ತಿಲ್ಲ, ನೀವು ಸ್ವಲ್ಪ ಸಹಾಯ ಮಾಡಿ, ನನ್ನ ಮಗನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಾಗ ನಾನು ಧರೆಗೆ ಕುಸಿದು ಹೋದೆ. ಚೇತರಿಸಿಕೊಳ್ಳುತ್ತಿರುವಾಗಲೇ ಅವರ ಸಾವಿನ ಸುದ್ದಿ ಬಂತು.
ಬೆಳಗಾವಿ ಜಿಲ್ಲೆಯ ಸಾಣೇಕೊಪ್ಪದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಅವರ ಕಳೆಬರಹ ನೋಡಿದರೆ ಅಲ್ಲಿ ಬೇರೊಬ್ಬ ಹಿರೇಮಠ ಇದ್ದರು. ನನಗೆ ಮಾತನಾಡಲು ಆಗಲಿಲ್ಲ. ಅವರು ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ
ಎಸ್.ಎಸ್. ಹಿರೇಮಠರು ನನಗೆ ಮತ್ತೇ ಕಾಣಿಸುತ್ತಿರುವುದು ಬಳ್ಳಾರಿ ಜಿಲ್ಲೆಯ ಇದೇ ನೆಲದಲ್ಲಿ. ಹೌದು, ಇಲ್ಲಿಯ ಎಡಪಂಥೀಯ ಹೋರಾಟಗಳಲ್ಲಿ, ದಲಿತರ ಹೋರಾಟಗಳಲ್ಲಿ, ಅನ್ಯಾಯ, ಅಸಮಾನತೆ ವಿರುದ್ಧ ಹೋರಾಟದಲ್ಲಿ ನನಗೆ ಕಾಣಿಸುತ್ತಿದ್ದಾರೆ. ಅವರ ಪುಸ್ತಕದಲ್ಲಿ ತಮಗೆ ಸಿಕ್ಕ ಸತ್ಯವನ್ನು ತಡಮಾಡದೇ ಅವಸರವಸರವಾಗಿ ಹೇಳುತ್ತಿದ್ದಾರೆ. ಅದೇ ಅಸ್ತವ್ಯಸ್ತತೆ ಬದುಕು, ಹುಡುಕಾಟ.
ತಮ್ಮ ತಣ್ಣಗಿನ ದನಿಯಲ್ಲಿ ಹಾಲುಗಲ್ಲದ ಹಸುಗೂಸೆ, ಹಸುಕಾಯೋ ಧೀರಬಾಲನೇ, ಹಾಲು ಮರೆತು ದಿನವೆಷ್ಟಾಯಿತೋ, ಓ ಹಾಲುಗಲ್ಲದ ಜೀತಗಾರ ಜೀತ ಸೇರಿ ದಿನವೆಷ್ಟಾಯಿತೋ ಹಾಡುತ್ತಿದ್ದಾರೆ. ನಿಶ್ಯಬ್ಧವಾಗಿ ಕೇಳಿ!
ಹಿರೇಮಠರಿಗೆ ಅವರ ಮಗ ಇಲ್ಲಿ ಎಲ್ಲಿಯೂ ಇದ್ದಾನೆ. ಎಲ್ಲರಿಗೂ ಕಾಣಿಸುತ್ತಾನೆ. ಯಾರು ಸಹಾಯ ಮಾಡುತ್ತಿಲ್ಲ ಎಂದೇ ಹೇಳುತ್ತಿದ್ದರು. ಹೌದು ಹಿರೇಮಠರೂ ನನಗೆ ಕಾಣಿಸುತ್ತಿದ್ದಾರೆ. ಅವರು ಇಲ್ಲಿಯೇ ಇದ್ದಾರೆ. ಹಿರೇಮಠರು ಹಲೋ ಎಂದೇ ಹೇಳುತ್ತಿದ್ದಾರೆ. ನಾನು ಅವರಿಗೆ ಹಲೋ ಹೇಳದೇ ಇರಲಾರೆ. ಎಂತಹ ನಂಬಿಕೆ ಇದು. ಈ ಜಗತ್ತು ನಂಬಿಕೆಯ ಮೇಲೆ ನಿಂತಿದೆ.
ಹೌದು, ನನ್ನೊಳಗೆ ಮುಗ್ಧತೆ ಇರುವವರಿಗೂ ಹಿರೇಮಠರು ಸಾಯುವುದಿಲ್ಲ. ನನ್ನಲ್ಲಿ ಮುಗ್ಧತೆ ಸತ್ತರೆ ಹಿರೇಮಠರು ಸಾಯುತ್ತಾರೆ. ಜೊತೆಗೆ ನಾನೂ ಕೂಡಾ.
-ಪರಶುರಾಮ ಕಲಾಲ್
ಸೋಮವಾರ, ಮಾರ್ಚ್ 2, 2009
ಕಲಾಲ್ ಕಾಲಂ
ಜೀವಂತ ಪರಂಪರೆಯ ಹಂಪಿಗೆ ಮೈ ತುಂಬಾ ಕಥನಗಳು
ಹಂಪಿ ಎಂದೊಡನೆ ಪೇರಿಸಿಟ್ಟಂತೆ ಕಾಣುವ ಕಲ್ಲುಬಂಡೆಗಳ ಬೆಟ್ಟಗಳು, ಜುಳು ಜುಳು ಹರಿಯುವ ತುಂಗಾಭದ್ರೆ, ಎಲ್ಲಿ ನೋಡಿದರಲ್ಲಿ ಕಾಣುವ ಮಂಟಪಗಳು, ಹಾಳು ಬಿದ್ದ ದೇವಸ್ಥಾನಗಳು, ವಿರೂಪಾಕ್ಷ ಗೋಪುರ, ಕಮಲ್ ಮಹಲ್, ಬಡವಿಲಿಂಗ, ಉಗ್ರ ನರಸಿಂಹ, ಕಲ್ಲಿನ ತೇರು ಹೀಗೆ ಅನೇಕ ಸ್ಮಾರಕಗಳೇ ಕಣ್ಣು ಮುಂದೆ ಬರುತ್ತಿವೆ. ಜೊತೆಗೆ ಮೂಗು, ಮುಖ ಕೆತ್ತಿಸಿಕೊಂಡು ಊನವಾಗಿರುವ ಅಸಂಖ್ಯಾತ ವಿಗ್ರಹಗಳು ಎಲ್ಲಿ ಬೇಕಾದಲ್ಲಿ ಕಾಣಿಸಿಕೊಂಡು ಇಡೀ ಹಂಪಿಯೇ ಒಂದು ಮಹಾಭಾರತದ ಯುದ್ಧಭೂಮಿಯಂತೆ ಕಾಣಿಸುತ್ತದೆ.
ಮೂರ್ತರೂಪದಲ್ಲಿ ನಮ್ಮ ಕಣ್ಣು ಮುಂದೆ ಹಂಪಿ ತನ್ನದೇ ಆದ ಕಥೆಯನ್ನು ನಮಗೆ ಹೇಳಲು ಪ್ರಯತ್ನಿಸುತ್ತದೆ.
ಹಂಪಿಯ ಅಮೂರ್ತತೆಯನ್ನು ಕಣ್ಣಿಗೆ ಕಾಣಲಾರದ ಸತ್ಯಗಳನ್ನು ಹುಡುಕಬೇಕೆಂದು ಪ್ರಯತ್ನಿಸಿದರೆ ನಿಮಗೆ ಅನೇಕ ಮುಖಗಳು ಎದುರಾಗುತ್ತವೆ. ಮೊಟ್ಟಮೊದಲನೆಯದಾಗಿ ಇತಿಹಾಸ ಎಂಬ ಭೂತ ಕಾಲಿಟ್ಟು ಹಂಪಿಯ ಕುರಿತು ತನ್ನದೇ ಮುಖಗಳನ್ನು ಬಯಲಿಗಿಡಲು ಯತ್ನಿಸುತ್ತದೆ.
ಯಾವ ಇತಿಹಾಸ? ಯಾರ ಇತಿಹಾಸ? ಎನ್ನುವುದು ನಾವು ಎಲ್ಲಿ ನಿಂತಿದ್ದೇವೆ ಎನ್ನುವದರ ಮೇಲೆ ಅವಲಂಬಿಸಿರುತ್ತದೆ.
ಹಂಪಿಯ ಇತಿಹಾಸವನ್ನು ಹಿಡಿದಿಡುವ ಕೆಲಸವನ್ನು ಹಾಗೂ ಸ್ಮಾರಕಗಳ ಸಂರಕ್ಷಣೆಯ ಕೆಲಸವನ್ನು ಮೊದಲು ಆರಂಭಿಸಿದವರು ಬ್ರಿಟಿಷ್ ಅಧಿಕಾರಿಗಳು. ಮದ್ರಾಸ್ ಪ್ರೆಸಡೆನ್ಸಿಗೆ ಸೇರಿದ ೨೨ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಸೇರಿದ್ದರಿಂದ ಈ ಕೆಲಸ ನಡೆಯಿತು. ಸರ್ವೋಚ್ಛ ನ್ಯಾಯಾಲಯ ನ್ಯಾಯಧೀಶರಾಗಿದ್ದ ಸರ್ ವಿಲಿಯಂ ಜೊನ್ಸ್ ರಾಯಲ್ ಎಷಿಯಾಟಿಕ್ ಸೊಸೈಟಿ ಸ್ಥಾಪಿಸುವ ಮೂಲಕ ಇಂತಹ ಕೆಲಸಕ್ಕೆ ಚಾಲನೆ ನೀಡಿದರು. ಬಳ್ಳಾರಿ ಕಲೆಕ್ಟರ್ ಆಗಿದ್ದ ರಾಬರ್ಟ್ ಸಿವೆಲ್ ೧೮೭೭ರಲ್ಲಿ ಹಂಪಿಯ ಸಂರಕ್ಷಣೆಗೆ ಮುಂದಾದರು. ಇವರ ನಡೆಸಿದ ಉತ್ಖನನ, ಸಂರಕ್ಷಣೆಯ ಕೆಲಸದಿಂದಾಗಿ ’ಮರೆತು ಹೋದ ಸಾಮ್ರಾಜ್ಯ’ (ಎ ಪರಗೆಟನ್ ಎಂಪೈರ್) ಕೃತಿ ಹೊರಗೆ ಬಂದು, ದೇಶ, ವಿದೇಶಕ್ಕೆ ಹಂಪಿ ಪರಿಚಯವಾಯಿತು. ೧೮೦೦ರಿಂದ ೧೮೦೭ರವರೆಗೆ ಕಲೆಕ್ಟರ್ ಸರ್ ಥಾಮಸ್ ಮನ್ರೋ, ೧೮೨೪ರಿಂದ ೧೮೩೮ರವರೆಗೆ ಕಲೆಕ್ಟರ್ ಆಗಿದ್ದ ಎಫ್.ಡಬ್ಲ್ಯೂ. ರಾಬರ್ಟ್ ಸನ್ ಹಂಪಿಯ ಕಲ್ಲಿನ ತೇರು, ವಿರೂಪಾಕ್ಷ ಮುಖ್ಯ ಗೋಪುರ ಸಂರಕ್ಷಣೆ ಕಾರ್ಯ ಕೈಗೊಂಡು ಹಂಪಿ ಉತ್ಖನನ ಹಾಗೂ ಸಂರಕ್ಷಣೆಗೆ ಅಸ್ತಿಭಾರ ಹಾಕಿದರು. ಹಂಪಿಯಲ್ಲಿ ವಿರೂಪಾಕ್ಷ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ೧೮೮೫ರಲ್ಲಿ ಕಲೆಕ್ಟರ್ ಅನುಮತಿ ನೀಡಿ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಸಹ ಇಲ್ಲಿ ಬಹಳ ಮುಖ್ಯವಾದ ಅಂಶ.
ಬ್ರಿಟಿಷರು ನಮ್ಮನ್ನಾಳುವವರು ಆಗಿದ್ದರಿಂದ ಸಾಮಾನ್ಯವಾಗಿ ತಮ್ಮ ಆಡಳಿತವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿ, ಅವರಿಗಿಂತ ಮೊದಲ ಆಳಿದ ಮುಸ್ಲಿಂ ದೊರೆಗಳ ಆಡಳಿತವನ್ನು ಕರಾಳ ಎಂದೇ ಸಾರಬೇಕಿತ್ತು. ಇಂತಹ ಕೆಲಸವನ್ನೇ ಇತಿಹಾಸ ಎನ್ನುವ ಮೂಲಕ ರಾಬರ್ಟ್ ಸಿವೆಲ್ ಕಟ್ಟಿಕೊಟ್ಟರು.
ಇದಾದ ನಂತರವೇ ನಮ್ಮ ಇತಿಹಾಸಕಾರರು ಹಂಪಿಯತ್ತ ಕಣ್ಣು ಹಾಯಿಸಿದರು. ಇವರು ಸಹ ಹಂಪಿಯ ವೈಭವವನ್ನು ಕಟ್ಟಿಕೊಡುವ ಮೂಲಕ ಹಂಪಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಬಂಧಿಸಿಬಿಟ್ಟರು.
ಹಾಗೇ ನೋಡಿದರೆ ಶಿಲಾಶಾಸನಗಳಲ್ಲಿ ವಿಜಯನಗರ ಸಾಮ್ರಾಜ್ಯದ ಉಲ್ಲೇಖ ಎಲ್ಲಿಯೂ ಬರುವುದಿಲ್ಲ. ಕರ್ನಾಟಕ ರಾಜ್ಯ ಎಂದೇ ಶಿಲಾಶಾಸನಗಳಲ್ಲಿ ಗುರುತಿಸಲಾಗಿದೆ. ವಿಜಯ ವಿರೂಪಾಕ್ಷ ಪಟ್ಟಣವಿತ್ತು ಎಂಬುದನ್ನೇ ಅಪಭ್ರಂಶಗೊಳಿಸಿ ಕಲ್ಪಿತ ವಿಜಯನಗರ ಸಾಮ್ರಾಜ್ಯ ಸೃಷ್ಠಿಸಲಾಯಿತು. ಶಾಸನಗಳ ಆಧಾರದಲ್ಲಿ ಹಂಪಿಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ನಡೆಸಲಾಯಿತು. ಜೊತೆಯಲ್ಲಿ ವಿದೇಶಿ ಪ್ರವಾಸಿಗರಾದ ಡೊಮಿಂಗ್ ಪಯಾಸ್, ನ್ಯೂನಿಚ್, ರಾಯಭಾರಿ ಅಬ್ದುಲ್ ರಜಾಕ್ ಬರಹಗಳ ಮೂಲಕ ಸಾಮ್ರಾಜ್ಯಕ್ಕೆ ವೈಭವ ತಂದುಕೊಡಲಾಯಿತು. ಈ ನಡುವೆ ಆ ಕಾಲದ ಲಿಖಿತ ಸಾಹಿತ್ಯದಿಂದಲೂ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳ ವಿಶ್ಲೇಷಣೆ ನಡೆಸಲಾಯಿತು.
ಹಾಗೇ ನೋಡಿದರೆ ಹಂಪಿಗೆ ಅದಿಮ ಕಾಲದಿಂದಲೂ ಇತಿಹಾಸವಿದೆ. ಇಲ್ಲಿಯ ಕಲ್ಲುಬಂಡೆಗಳ ಮೇಲೆ ಬೇಟೆಗಾರಿಕೆಯ ಅದಿಮ ಕಲೆಯೂ ಇದೆ. ಪ್ರಾಚೀನ ಮಾನವನ ಅಸ್ತಿತ್ವವನ್ನು ಶಾಸ್ತ್ರಜ್ಞರು ಗುರುತಿಸಿದ್ದಾರೆ. ಕಾಕತೀಯರು, ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಅನೇಕ ಕುರುಹುಗಳು ಇಲ್ಲಿವೆ.
ಬೌದ್ಧ ಧರ್ಮ ಒಂದು ಕಾಲದಲ್ಲಿ ಇಲ್ಲಿ ಪ್ರಬಲವಾಗಿತ್ತು. ಬಿಕ್ಷುಗಳ ಪ್ರಮುಖ ಕೇಂದ್ರವಾಗಿತ್ತು ಎನ್ನುವುದನ್ನು ಕೇಂದ್ರ ಪುರಾತತ್ವ ಇಲಾಖೆ ನಡೆಸಿ ಉತ್ಖನನದಲ್ಲಿ ಸಿಕ್ಕ ಬ್ರಹ್ಮಲಿಪಿಯ ಶಿಲಾಶಾಸನದ ಪ್ರಕಾರ. ಕ್ರಿ.ಶ. ೧ ಅಥವಾ ೨ನೇ ಶತಮಾನದ ಇತಿಹಾಸವನ್ನು ಇದು ಹೇಳುತ್ತಿದೆ.
ಜೈನ, ಶೈವ ಪಂಥ, ಕಾಳಮುಖ, ಸಿದ್ಧ, ಅವಧೂತ, ಆರೂಢ, ಸೂಫಿ, ಪಾಶುಪತ ಮುಂತಾದ ವಿವಿಧ ಪಂಥಗಳು ಇಲ್ಲಿದ್ದವು. ಇವುಗಳ ನಡುವೆ ತಿಕ್ಕಾಟ ಹಾಗೂ ಕೊಡುಕೊಳ್ಳುವಿಕೆ ಎರಡೂ ನಡೆದ ಇತಿಹಾಸವೂ ಸಹ ಇಲ್ಲಿದೆ. ಇಂತಹ ಅವೈದಿಕ ಪಂಥಗಳ ಸಂಗಮ ಸ್ಥಳವೂ ಸಹ ಹಂಪಿಯಾಗಿತ್ತು.
ಈಗಲೂ ಹಂಪಿ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಮೊಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಸೇರಿದ ಅಲೆಮಾರಿಗಳು, ಅರೆ ಅಲೆಮಾರಿಗಳು ಬಂದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
ಹೊಸಪೇಟೆ, ಕಮಲಾಪುರದ ನಾಯಕ ಜನಾಂಗದವರು ತೇರು ಎಳೆಯುವ ಹಕ್ಕು ಈಗಲೂ ಉಳಿಸಿಕೊಂಡಿದ್ದಾರೆ. ಹಂಪಿ ಜಾತ್ರೆ ಅತ್ತ ಎಳೆಯುತ್ತಿದ್ದಂತೆ ಇತ್ತ ಬೇಟೆ ನಡೆಸಿ ಮಾಂಸದೂಟ ತಯ್ಯಾರಾಗುತ್ತದೆ.
ಹಂಪಿಯನ್ನು ಜನಪದರು ಈ ಮೂಲಕ ಜೀವಂತಗೊಳಿಸಿ, ಇದೊಂದು ಜೀವಂತ ಸ್ಮಾರಕಗಳ ಸ್ಥಳವನ್ನಾಗಿಸಿದ್ದಾರೆ.
ಕೆಲವರಿಗೆ ಸತ್ತ ಸ್ಮಾರಕಗಳು ಮಾತ್ರ ಕಾಣಿಸಿ ಅದನ್ನೊಂದು ’ಪ್ರಾಚೀನ ಸಂಗ್ರಹಾಲಯ’ ಎನಿಸಿದರೆ, ಇನ್ನೂ ಕೆಲವರಿಗೆ ಹಂಪಿಯು ಗತ ಇತಿಹಾಸದ ಸ್ಮಾರಕಗಳಾಗಿ ವ್ಯಥೆಗೆ ಕಾರಣವಾಗಿದ್ದರೆ, ಸಾಮಾನ್ಯ ಜನರಿಗೆ ಮಾತ್ರ ಹಂಪಿ ಈಗಲೂ ಜೀವಂತ ಸ್ಮಾರಕದ ಕೇಂದ್ರವೇ ಆಗಿದೆ.
ಜನಪದರು ಇಲ್ಲಿನ ಸ್ಮಾರಕಗಳ ಬಗ್ಗೆ, ಹಂಪಿಯ ಬಗ್ಗೆ ತಮ್ಮದೇ ಆದ ಕಥಾನಕವನ್ನು ಕಟ್ಟಿಕೊಡುತ್ತಾರೆ. ಹಂಪಮ್ಮ, ಪಂಪಾಪತಿ ( ಪಂಪಾಂಬಿಕೆ, ವಿರೂಪಾಕ್ಷ ) ವಿವಾಹ ಪ್ರಸಂಗಗಳು, ಜಾತ್ರೆ ಹಾಗೂ ಫಲಪೂಜೆಯಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಅವರ ಕ್ಯಾಲೆಂಡರ್‌ಗಳಲ್ಲಿ ಹಂಪಿ ಸೇರಿ ಹೋಗಿರುವ ಕ್ರಮ, ಶ್ರಾವಣಮಾಸದಲ್ಲಿ ಹಂಪಿಗೆ ಕಾಲ್ನಡಿಗೆಯಿಂದ ಬರುವ ಭಜನಾತಂಡಗಳು ಹಂಪಿಯಲ್ಲಿ ರಾತ್ರಿಯೂದ್ದಕ್ಕೂ ಭಜನೆ ನಡೆಸುವ ಮೂಲಕ ತಮ್ಮ ಶ್ರದ್ಧೆ ಬಲಪಡೆಸಿಕೊಳ್ಳುವುದು ಇತ್ಯಾದಿಗಳ ಕಡೆ ಗಮನ ಹರಿಸಬೇಕಿದೆ. ಇಲ್ಲಿಯ ಜನಪದ ಕಥಾನಕಗಳು ಲಿಖಿತ ಸಾಹಿತ್ಯಕ್ಕಿಂತ ಬೇರೆಯದನ್ನೇ ಹೇಳುತ್ತಿವೆ.
ರಕ್ಕಸತಂಗಡಿ ಯುದ್ಧವೇ ವಿಜಯನಗರ ಪತನಕ್ಕೆ ಕಾರಣವಾಯಿತು ಎಂದು ಲಿಖಿತ ಸಾಹಿತ್ಯ ಹೇಳಿದರೆ, ನೈತಿಕತೆ ಹಾಳಾಗುವ ಮೂಲಕ ಪತನವಾಯಿತು ಎಂದು ಭಿನ್ನವಾಗಿ ರೂಪಕದ ಕಥೆಯ ಮೂಲಕ ಜನಪದರು ಕಥೆ ಕಟ್ಟಿಕೊಡುತ್ತಾರೆ.
ನಾವು ನೋಡುವ ಹಂಪಿಯ ಸ್ಮಾರಕಗಳನ್ನು ಜನಪದರು ಬೇರೊಂದು ಬಗೆಯಲ್ಲಿ ನೋಡುತ್ತಾರೆ. ರಾಮ, ಲಕ್ಷ್ಮಣ, ಸೀತೆ ನಡೆದಾಡಿದ ಕಥೆಯೊಂದರ ಮೂಲಕ ಹಂಪಿಯನ್ನು ಪುರಾಣವಾಗಿಸುತ್ತಾರೆ. ಕಮಲ್ ಮಹಲ್‌ಗೆ ಚಿತ್ರಾಂಗಿ ಮಹಲ್ ಎನ್ನುತ್ತಾರೆ. ಮತಂಗ ಪರ್ವತವನ್ನು ಮತಂಗಿ ಪರ್ವತ ಎನ್ನುತ್ತಾರೆ. ಮಾದಿಗರ ಕುಲದೇವತೆ ಇಲ್ಲಿ ನೆಲೆಸಿದ್ದಳು ಎನ್ನುವ ಪರಿಶಿಷ್ಠರು ಈಗಲೂ ಮತಂಗ ಪರ್ವತದ ಬಳಿ ಇರುವ ಹತ್ತುಕೈಯಮ್ಮನಿಗೆ ನಡೆದುಕೊಳ್ಳುತ್ತಾರೆ. ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಎದುರುಗಡೆ ಇರುವ (ಕಮಲ್ ಮಹಲ್ ಬಳಿ) ಪಟ್ಟಣದ ಯಲ್ಲಮ್ಮನಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ, ಬೇಟೆ ಮಾಡುತ್ತಾರೆ.
ವಿಜಯನಗರದರಸರು ಈ ದೇವತೆಗೆ ಪೂಜೆ ಸಲ್ಲಿಯೇ, ಬೇಟೆಯನ್ನು ಅರ್ಪಿಸಿಯೇ ಯುದ್ಧಕ್ಕೆ ಹೋಗುತ್ತಿದ್ದರೆಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.
ಜನಪದರು ಹೇಳುವ ಮತ್ತೊಂದು ಕಥೆ ಬಹಳ ಮುಖ್ಯವಾಗಿದೆ. ಕೋದಂಡರಾಮ ದೇವಸ್ಥಾನದಿಂದ ವಾಲಿ ಗವಿಯ ಮೂಲಕ ವಿಠ್ಠಲ ದೇವಸ್ಥಾನಕ್ಕೆ ಕಾಲು ಹಾದಿಯೊಂದರಲ್ಲಿ ಸಾಗಿದರೆ ಏಡಿಗುಡ್ಡವೆಂಬ ಜಾಗ ಸಿಗುತ್ತದೆ. ಇಲ್ಲಿ ಸಣ್ಣ ಕಲ್ಲಿನ ಪೊಟರೆ ಇದೆ. ಬೆಂಕಿಯ ಮಳೆ ಬಂದು ಭೂಲೋಕವೆಲ್ಲಾ ಭಸ್ಮವಾದಾಗ ಶಿವ-ಪಾರ್ವತಿ ನಂದಿಯ ಮೇಲೆ ಆಕಾಶರೂಢರಾಗಿ ಹೋಗುತ್ತಿರುವಾಗ ಭೂಲೋಕದಲ್ಲಿ ನರಮನುಷ್ಯರೇ ಇಲ್ಲವಲ್ಲ. ಹೀಗಾದರೆ ನಮ್ಮನ್ನು ಪೂಜಿಸುವವರು ಯಾರು ಎಂದು ಚರ್ಚಿಸುತ್ತಾರೆ. ಆಗ ಪಾರ್ವತಿ ಈ ಏಡಿಗುಡ್ಡವನ್ನು ನೋಡಿ ಅಲ್ಲಿ ಹೊಗೆ ಬರುತ್ತಿದೆ ಯಾರೋ ಇದ್ದಾರೆ ಎಂದು ಹೇಳುತ್ತಾಳೆ. ಬಂದು ನೋಡಲಾಗಿ ಅಲ್ಲಿ ಇಬ್ಬರು ಅಣ್ಣ-ತಂಗಿ ಇರುತ್ತಾರೆ. ಇನ್ನೂ ಮುಂದೆ ನಿಮ್ಮಿಂದ ಈ ಲೋಕ ಬೆಳೆಯಬೇಕು ಎನ್ನುತ್ತಾರೆ. ನಾವಿಬ್ಬರು ಅಣ್ಣ ತಂಗಿ ಇದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಅವರಿಗೆ ಶಿವ ಮರೆವು ಉಂಟು ಮಾಡುತ್ತಾನೆ. ನಂತರ ಕೇಳುತ್ತಾನೆ ನೀವು ಯಾರು ಎಂದು. ಅವರು ಹೇಳುತ್ತಾರೆ. ನಾವು ಗಂಡ-ಹೆಂಡತಿ ಎಂದು. ಅಲ್ಲಿಂದ ಲೋಕ ಪುನಃ ಪ್ರಾರಂಭವಾಯಿತು ಎನ್ನುತ್ತಾರೆ. ಈ ಕಥೆಗೆ ಪೂರಕವೆನ್ನುವಂತೆ ಇಲ್ಲೊಂದು ಕಲ್ಲಿನಲ್ಲಿ ಕೆತ್ತಿರುವ ಉಬ್ಬು ಶಿಲ್ಪವಿದೆ. ಒಂದು ಪಾದ ಮುಂದೆ, ಇನ್ನೊಂದು ಪಾದ ಹಿಂದೆ ಒಂದರ ಪಕ್ಕದಲ್ಲಿ ಮತ್ತೊಂದು ಇವೆ. ಇವುಗಳನ್ನು ವೃತ್ತಾಕಾರವಾಗಿ ಹಾವು ಸುತ್ತುವರೆದಿದೆ. ಹಾವು ತನ್ನ ಬಾಲವನ್ನು ತಾನೇ ನುಂಗುತ್ತಿದೆ.
ನಾವು ಮುಂದಕ್ಕೆ ಹೆಜ್ಜೆ ಇಡುತ್ತೇವೆ. ಅದೇ ಸಂದರ್ಭದಲ್ಲಿ ಹಿಂದಕ್ಕೆ ಹೆಜ್ಜೆಯನ್ನು ಇಟ್ಟಿರುತ್ತೇವೆ. ಹಂಪಿಯಲ್ಲಿ ನಡೆಯುವುದೆಂದರೆ ಇದೇ ಅಲ್ಲವೇ? ಹಂಪಿಯ ಪ್ರತಿಕಲ್ಲುಗಳಿಗೂ ಒಂದು ಕಥೆ ಇದೆ. ಇತಿಹಾಸವಿದೆ. ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಕಟ್ಟುವ ನಾವು ಇಂತಹ ಅನೇಕ ಕಥಾನಕಗಳಿಗೆ ಮುಖಾಮುಖಿಯಾಗಬೇಕಿದೆ. ಹಂಪಿಯ ಜೀವಂತ ಪಾರಂಪರಿಕತೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ.
- ಪರಶುರಾಮ ಕಲಾಲ್
ಶನಿವಾರ, ಫೆಬ್ರವರಿ 28, 2009
ಮಾಮೂಲಿ ಗಾಂಧಿ
(ಆತ್ಮೀಯ ಸ್ನೇಹಿತ ಕಲಿಗಣನಾಥ ಗುಡುದೂರ ರ ಕಥಾಸಂಕಲನ ಬಿಡುಗಡೆ ನಾಳೆ,ಅವರು ಯಾವಾಗಲು ಹೀಗೆ ಬರೆಯುತ್ತಿರಲೆಂದು ಹಾರೈಕೆ.)
ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,
ನಮಸ್ಕಾರಗಳು. ನಿಮ್ಮ ಪ್ರೀತಿಯಿಂದ ನಾನು ಕನ್ನಡ ಕಥಾಲೋಕಕ್ಕೆ ಪರಿಚಯವಾಗಿದ್ದನ್ನು ಎಂದೆಂದೂ ಮರೆಯಲಾರದ್ದು. ನಿಮ್ಮ ಸಲಹೆ, ಪ್ರೀತಿಯನ್ನುಂಡು ಬರೆಯುತ್ತಿರುವೆ. ಮಾ.೧ರಂದು ನನ್ನ ಮೂರನೇ ಕಥಾ ಸಂಕಲನ ಬಿಡುಗಡೆಯಾಗಲಿದೆ. ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮವ
ಕಲಿಗಣನಾಥ ಗುಡದೂರು
’ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ...
ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ’ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.೧,೨೦೦೯ರಂದು ’ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ’ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ’ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.೨೬ರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ ’ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ’ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-೦೯ರ ಮಯೂರದಲ್ಲಿ ’ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್‌ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ’ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್‌ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’
ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ’ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ’ದೊಡ್ಡವರ ನಾಯಿ’, ’ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ ’ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.
ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ ’ಮಾಮೂಲಿ ಗಾಂಧಿ’ ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ ’ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ ’ದೃಷ್ಟಿ’ ಕವನ ಸಂಕಲನ ಮತ್ತು ಸಹ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಬರೆದ ’ಬೆಳಕಿನೆಡೆಗೆ’ ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ ೧೦ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕರ್ಣಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.
ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...
ನಿಮ್ಮ ಪ್ರೀತಿಯ ಬಯಸುತ್ತಾ...
ಕಲಿಗಣನಾಥ ಗುಡದೂರು
ಸಂಪರ್ಕ
ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ ಪಿ.ಯು.ಕಾಲೇಜ್,
ಸಿಂಧನೂರು-೫೮೪೧೨೮
ಜಿಲ್ಲೆ: ರಾಯಚೂರು
ಮೊ: ೯೯೧೬೦೫೧೩೨೯
ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,
ನಮಸ್ಕಾರಗಳು. ನಿಮ್ಮ ಪ್ರೀತಿಯಿಂದ ನಾನು ಕನ್ನಡ ಕಥಾಲೋಕಕ್ಕೆ ಪರಿಚಯವಾಗಿದ್ದನ್ನು ಎಂದೆಂದೂ ಮರೆಯಲಾರದ್ದು. ನಿಮ್ಮ ಸಲಹೆ, ಪ್ರೀತಿಯನ್ನುಂಡು ಬರೆಯುತ್ತಿರುವೆ. ಮಾ.೧ರಂದು ನನ್ನ ಮೂರನೇ ಕಥಾ ಸಂಕಲನ ಬಿಡುಗಡೆಯಾಗಲಿದೆ. ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮವ
ಕಲಿಗಣನಾಥ ಗುಡದೂರು
’ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ...
ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ’ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.೧,೨೦೦೯ರಂದು ’ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ’ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ’ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.೨೬ರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ ’ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ’ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-೦೯ರ ಮಯೂರದಲ್ಲಿ ’ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್‌ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ’ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್‌ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’
ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ’ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ’ದೊಡ್ಡವರ ನಾಯಿ’, ’ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ ’ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.
ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ ’ಮಾಮೂಲಿ ಗಾಂಧಿ’ ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ ’ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ ’ದೃಷ್ಟಿ’ ಕವನ ಸಂಕಲನ ಮತ್ತು ಸಹ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಬರೆದ ’ಬೆಳಕಿನೆಡೆಗೆ’ ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ ೧೦ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕರ್ಣಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.
ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...
ನಿಮ್ಮ ಪ್ರೀತಿಯ ಬಯಸುತ್ತಾ...
ಕಲಿಗಣನಾಥ ಗುಡದೂರು
ಸಂಪರ್ಕ
ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ ಪಿ.ಯು.ಕಾಲೇಜ್,
ಸಿಂಧನೂರು-೫೮೪೧೨೮
ಜಿಲ್ಲೆ: ರಾಯಚೂರು
ಮೊ: ೯೯೧೬೦೫೧೩೨೯
ಬುಧವಾರ, ಫೆಬ್ರವರಿ 25, 2009
ಅಂತೂ...ಇಂತೂ..ಕವನಸ೦ಕಲನ ಬಂತು
ನಮ್ಮೆಲ್ಲರ ಪ್ರೀತಿಯ ಗೆಳೆಯ ಸಿದ್ದು ನ ಮೊದಲ ಕವನಸ೦ಕಲನ ಬರುತ್ತಿದೆ.ಅವನಿಗೆ ಎಲ್ಲರ ಪರವಾಗಿ ಅಭಿನ೦ದನೆಗಳು.ಆ ಸಂಕಲನಕ್ಕೆ ಜಿ.ನ್.ಮೋಹನ್ ಸರ್ ಬರೆದ ಬೆನ್ನುಡಿ ಮತ್ತು ಸೃಜನ್ ರ ಕವರ್ ಪೇಜ್ ಇಲ್ಲಿದೆ.
ಕವಿತೆಯೆಂಬ ಬೆಳಕಿನ ಬೀಜ....
ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.
’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ.
ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.
ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ.
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.
"ನನಗೀಗ ಬೆಳಕಿನದೇ ಧ್ಯಾನ...
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ
ಆರದ ಬೆಳಕನ್ನು ಹುಡುಕುತ್ತಿದ್ದೇನೆ.
ನಾನೂ ಬೆಳಕಾಗಬೇಕು"
ಎನ್ನುವ ಸಿದ್ಧು, ಬರುವ ನಾಳೆಗಳಿಗೆ... ಉಸಿರು ಹಚ್ಚುವ ಕವಿ.
-ಜಿ. ಎನ್. ಮೋಹನ್
ಸೋಮವಾರ, ಫೆಬ್ರವರಿ 23, 2009
ಆಯ್ಕೆ ಎಂಬುದು ಈರುಳ್ಳಿ ದೋಸೆಯಲ್ಲ
(ಜಿ.ಎನ್.ಮೋಹನ್ ಸರ್ ರವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವನಸಂಕಲನದ ಒಂದು ಚಂದದ ಕವಿತೆ)
ಈರುಳ್ಳಿ ದೋಸೆ ತಿನ್ನುವುದು
ಅಂತಹ ಕಷ್ಟದ ಕೆಲಸವೇನಲ್ಲ
ತಟ್ಟೆಯ ಮೇಲೆ ಸ್ವಚ್ಛಂದ
ಹರಡಿಕೊಡಿರುವ ದೋಸೆ
ತಿನ್ನಲು ಏನಿದೆ ಕಷ್ಟ
ದೋಸೆಗೆ ನೆನೆಹಾಕಬೇಕು
ಚೆನ್ನಾಗಿ ರುಬ್ಬಬೇಕು
ಕಣ್ಣೀರು ಸುರಿಯುತ್ತಿದ್ದರೂ ಬಿಡದೆ
ಈರುಳ್ಳಿ ಕತ್ತರಿಸಬೇಕು
ಕತ್ತರಿಸಿದ್ದು ಮಟ್ಟಸವಾಗಿರಬೇಕು.
ಕೈಗೆ ಖಾರ ಹತ್ತಿದರೂ ಮೆಣಸಿನಕಾಯಿಯ
ಬೆನ್ನಟ್ಟಬೇಕು ಹೊಟ್ಟೆ ಸಿಗಿಯಬೇಕು
ಎಲ್ಲಾ ಚೆನ್ನಾಗಿ ಬೆರಸಿ ಕಾವಲಿಯ
ಶಾಸ್ತ್ರ ಗೊತ್ತು ಮಾಡಿಕೊಂಡು ಹುಂ
ಈರುಳ್ಳಿ ದೋಸೆ ಮಾಡಬೇಕು.
ಆದರೆ ತಿನ್ನಲ್ಲೇನು ಕಷ್ಟ
ಬೇಕಿದ್ದರೆ ಕೈಯಲ್ಲಿ ಇಲ್ಲದಿದ್ದರೆ
ಸ್ಪೂನು ಫೋರ್ಕಲ್ಲಿ ಚೆಂದ ಮಾತಾಡುತ್ತಾ
ಸ್ಪೂನನ್ನು ಎಡಗೈಯಲ್ಲೋ ಇಲ್ಲಾ
ಬಲಗೈಯಲ್ಲೋ ಹೇಗೋ ಹಿಡಿದು
ಮುರಿದು ಬಾಯಿ ತೆಗೆದು
ಒಳಗಿಟ್ಟರೆ ಆಯಿತು ಉಳಿದದ್ದು
ಹಲ್ಲು ನಾಲಗೆಯ ಕೆಲಸ.
ಆದರೆ ಆಯ್ಕೆ ಎಂಬುದಿದೆಯಲ್ಲ
ಅದು ಈರುಳ್ಳಿ ದೋಸೆಯಲ್ಲ
ಕವಲು ದಾರಿಯಲ್ಲಿ ನಿಂತು
ಬೇಕಾದ ದಾರಿ ಹಿಡಿಯುವುದು
ಈರುಳ್ಳಿ ದೋಸೆ ತಿಂದಷ್ಟು ಸುಲಭವಲ್ಲ.
ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲು
ನಿಂತವರಿಗೆ ದೋಸೆ ತಿನ್ನುವುದಕ್ಕಿಂತ
ದೋಸೆ ಮಾಡುವ ಕಷ್ಟ ಗೊತ್ತಿರಬೇಕು
ಕೈಗೆ ಮೆಣಸಿನಕಾಯಿ ಮೆತ್ತಿಕೊಂಡರೂ
ಖಾರವಾಗದಂತಿರಬೇಕು. ಈರುಳ್ಳಿ
ಹಚ್ಚಬೇಕು ಆದರೆ ಕಣ್ಣೀರು
ಸುರಿಸದಂತಿರಬೇಕು
-ಜಿ.ಎನ್.ಮೋಹನ್
ಗುರುವಾರ, ಫೆಬ್ರವರಿ 19, 2009
ಕವಿ ಕಾಲಂ
(ರಾಯಚೂರಿನ ಆತ್ಮೀಯ ಸ್ನೇಹಿತ ಶಿವರಾಜ್ ಬೆಟ್ಟದೂರು ಇವರ ಮಯೂರದಲ್ಲಿ ಪ್ರಕಟವಾದ ಒಂದು ಚಂದದ ಕವಿತೆ)
ಈ ಅಪ್ಪ ಈ ಅಮ್ಮ
ಈ ಅಮ್ಮ
ನನ್ನ ಹಡೆದು
ಸಾವ ಅಂಚಲ್ಲಿ ಕೊಂಚ ನಿಂತು
ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು
ನಮ್ಮಮ್ಮ
ಮಲ್ಲಿಗೆ ಮುಖದ
ಅದನೆ೦ದೂ ಮುಡಿಯದ ಓನಾಮ
ಓದಲು ಆಕೆಗೆ ಅಕ್ಷರ ಬೇಡ
ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು
ಮಾಡಲು ಆಕೆಗೆ ನೂರೆಂಟು ಕೆಲಸ
ಆಳು ಕಾಳು ಎಮ್ಮೆ ಮನೆ ಮಕ್ಕಳು
ಚೀರುವ ಮಗುವಿನ ಕುಂಡೆ ತೊಳೆದು
ಅದೇ ಕೈಯಲಿ ರೊಟ್ಟಿಯ ಬಡಿವಳು
ಒಬ್ಬೆಯ ಮೇಲೊಬ್ಬೆ
ಮೌನದ ತುತ್ತಿಗೆ ಯಾವ ಲೆಕ್ಕ?
ಅಮ್ಮನ ಮೇಲೆ ಹಾಡು ಕಟ್ಟಿ
ಕತೆ ಹೇಳಿವೆ ಪದಗಳು ಒಂದಿಲ್ಲೊಂದು
ಅಮ್ಮ ಮಗುವಿನ ತಾಯಿಯಂತೆ
ತಂದೆಗೆ ಮಡದಿಯೆಂತೆಲ್ಲ ಇದ್ದರೆ
ಈ ಜನ
ಅಮ್ಮನನ್ನು ನೆನಪು ಮಾಡುತ್ತಿರಲಿಲ್ಲ
ಅಪ್ಪನ ಮದುವೆಯಾದ ಅವಳ
ಗೊತ್ತೇ ಆಗದಂತೆ
ತಪ್ಪು ಮಾಡಿದ ತಪ್ಪಿಗೆ
ಅಮ್ಮನೂ ಕಾರಣವಿರಬೇಕು
ನಾನಿರುತ್ತಿರಲಿಲ್ಲ
ಹಾಲು ಹೈನ ಮಾಡುವ ಅಮ್ಮ
ಅಪ್ಪನನ್ನು ಹಾಲಲ್ಲಿ ಅದ್ದಿ
ಮೈ ತೊಳೆದಳು
ಅಪ್ಪನೂ ಅಷ್ಟೆ; ಪ್ರೀತಿ ಉಣಬಡಿಸಿದ
ಅನ್ಯೋನ್ಯವಾಗಿರುವಾಗಲೆ
ಯಾಕೋ ಏನೋ ಚೀರುವಳು ಅಮ್ಮ
ಒಮ್ಮೊಮ್ಮೆ ರಂಪ, ಹಲವು ಸಲ ಅನುಕಂಪ
ಇಲ್ಲ ಅಂದು ಕೇಳಲಿಲ್ಲ, ಇದೆ ಎಂದೂ ಅನ್ನಲಿಲ್ಲ
ಊರ ಉಸಾಬರಿ ಮಾಡಲಿಲ್ಲ; ಅಗಸೆ ದಾಟಲಿಲ್ಲ
ಯಾರ ಮಣ್ಣಿಗೂ ಹೋಗುವದು ಬಿಡಲಿಲ್ಲ
ಕಚ್ಚೆ ಏರಿಸಿ ಗಂಡ್ರಾಮಿಯಾಗಿ ದುಡಿದಳು
ಗಂಡಸು ಎತ್ತದಷ್ಟು ಮೇವು ಹೊರೆ ಹೊತ್ತಳು
ಕಂದ ಹಾಕಿದ ಎಮ್ಮೆಗೆ ಮುಖ ಗಂಟಿಕ್ಕಿದಳು
ಬೇಸಿಗೆಯಲ್ಲಿ ಖುಲ್ಲಾ ಹೊಡೆದು ಊರೂರು
ಅಲೆದು
ಮುಸಿಮುಸಿ ಅತ್ತಳು;ಎಲ್ಲಾ ಎಮ್ಮೆಗೆ
ಗಾಂಧಿ ಮನೆತನದ ಹೆಸರೇ ಇಟ್ಟಳು
ಅಪ್ಪ ನಿಜವಾಗಲೂ ಅಮ್ಮನನ್ನು
ತುಂಬಾ ಪ್ರೀತಿಸುವವ
ಇದು ಹೀಗೆಂದು ಒಂದು
ಮುಂಜಾವು ನನಗೆ ಗೊತ್ತಾಯಿತು
ಅಮ್ಮನೇನೂ ಕಡಿಮೆ ಇರಲಿಲ್ಲ!
ಅವರ ರಾತ್ರಿಗಳು ಮೌನ ರಾಗಗಳಾಗಿ
ಬೆಳಿಗ್ಗೆ ನನಗೆ ಅಪ್ಪನಿಗೆ
ಉಣಬಡಿಸುವಾಗಲೆ ಗೊತ್ತಾಗುತ್ತಿತ್ತು
ಅಪ್ಪನ ಮೈಸೂರು ಸ್ಯಾಂಡಲ್ಲು
ಅಮ್ಮನ ಬರಿ ಮೈ ಸ್ನಾನ
ನನ್ನಲ್ಲಿ ಗಾಢವಾದ ಮೌನ, ಅಕ್ಕರೆ,ಸಂಶಯ
ಈ ಅಪ್ಪ ಈ ಅಮ್ಮ
ಎಲ್ಲಿ ಹೋದರು
ಗೊತ್ತಾಗುತ್ತಿಲ್ಲ.
-ಶಿವರಾಜ ಬೆಟ್ಟದೂರು, ರಾಯಚೂರು
ಶನಿವಾರ, ಫೆಬ್ರವರಿ 14, 2009
ಕಲಾಲ್ ಕಾಲ೦
ವಾಲಂಟೈನ್ಸ್ ಡೇ ಎಂಬ ರಾಮಾಯಣ
ಮಾಯದ ಜಿಂಕೆಯ ಬೆನ್ನತ್ತಿ ಹೋದ ರಾಮ ಸೀತೆಯನ್ನು ಕಳೆದು ಕೊಂಡು ಬಿಟ್ಟ. ಅತ್ತ ಜಿಂಕೆಯೂ ಇಲ್ಲ, ಇತ್ತ ಸೀತೆಯೂ ಇಲ್ಲ. ಸೀತೆಗೆ ಈ ಮಾಯದ ಜಿಂಕೆ ಕಾಣಿಸಿಕೊಂಡು ಪ್ರಲೋಭ ಒಡ್ಡಿರುವ ಬಗ್ಗೆ ರಾಮನಿಗೆ ಅತ್ಯಂತ ಖೇದವಾಗಿತ್ತು.
ಸೀತೆ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿದ್ದರಿಂದ ಅವಳು ಲಂಕಾ ಪಟ್ಟಣದಲ್ಲಿ ರಾವಣನ ಸೆರೆಯಲ್ಲಿದ್ದಾಳೆ ಎಂದು ರಾಮ ಗೊತ್ತು ಮಾಡಿಕೊಂಡ.
ಹೊಸದಾಗಿ ಶಿಷ್ಯನಾಗಿದ್ದ ಹನುಮನಿಗೆ ಸೀತೆಯ ಮಾಹಿತಿ ತರಲು ಕಳಿಸಿಕೊಟ್ಟು ಕಾಯುತ್ತಾ ಕುಳಿತ.
ವಾಯುಪುತ್ರ ಹನುಮ ಆಕಾಶ ಮಾರ್ಗದಲ್ಲಿ ಸಂಚರಿಸುವಾಗ ಆತನಿಗೆ ದಾರಿಯೂದ್ದಕ್ಕೂ ಮಿಸ್ ಆದ ಎಸ್.ಎಂ.ಎಸ್.ಗಳು, ವಿವಿಧ ಚಾನೆಲ್‌ಗಳ ಅಂತರಾತ್ಮಗಳು, ದಾರಿ ತಪ್ಪಿಸಿಕೊಂಡ ಈಮೇಲ್‌ಗಳು ಢಿಕ್ಕಿ ಹೊಡೆದು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಕರೆದುಕೊಂಡು ಹೋದವು. ತಕ್ಷಣವೇ ನಮ್ಮ ಹನುಮ ಮಿಸ್ಟರ್ ಹನುಮಂತ್ ಆಗಿ ಬಿಟ್ಟ. ಐಟಿ, ಬಿಟಿ ಲೋಕದಲ್ಲಿ ಹರಡಿ ರಾಮ-ಸೀತೆ, ರಾವಣನ ಲೋಕವೆಲ್ಲಾ ಸಿಲಿಕಾನ್ ಸಿಟಿಯಾಗಿ ಬಿಟ್ಟಿತು.
ಅಂತೂ ಕೊನೆಗೆ ಸೀತೆ, ರಾಮ ಇಬ್ಬರು ಸಂಧಿಸುವಲ್ಲಿ ಮಿಸ್ಟರ್ ಹನುಮಂತ ಯಶಸ್ವಿಯಾಗಿ ಬಿಟ್ಟ.
ಅದೊಂದು ದಿನ ಸೀತೆಯೊಂದಿಗೆ ಮಿಸ್ಟರ್ ಹನುಮಂತ್ ಬ್ರಿಗೇಡ್ ರಸ್ತೆಯಲ್ಲಿ ರಾಮನ ದಾರಿ ಕಾಯುತ್ತಾ ನಿಂತರು.
ಈ ನಡುವೆ ರಾಮನಿಗೆ ಎಲ್ಲಾ ವರ್ತಮಾನ ಈ ಮೇಲ್ ಮೂಲಕ ಗೊತ್ತಾಗಿ, ಎಸ್.ಎಂ.ಎಸ್.ದಾರಿ ಕಾಯುತ್ತಾ ರಿಲ್ಯಾಕ್ಸ್ ಆಗಿ ಪಬ್‌ಗೆ ನುಗ್ಗಿ ಒಂಚೂರು ಬಂಗಾರದ ದ್ರವದಿಂದ ನಾಲಿಗೆ ತೇವ ಮಾಡಿಕೊಂಡ. ಪಬ್‌ನಲ್ಲಿ ಹುಡುಗ-ಹುಡುಗಿಯರು ಡ್ಯಾನ್ಸ್ ಮಾಡೋವುದನ್ನು ನೋಡಿ, ತಾನು ಇಂತಹ ಪಬ್ ಒಂದರಲ್ಲಿಯೇ ಸೀತೆಯನ್ನು ಭೇಟಿಯಾಗಿದ್ದು, ಭೇಟಿ ನಂತರ ಪ್ರೀತಿಗೆ ಹೊರಳಿದ್ದು, ಅವಳು ತನ್ನ ಕಷ್ಟವನ್ನು, ಇವನು ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ಇಬ್ಬರೂ ಬಾಳು ಹಂಚಿಕೊಳ್ಳಲು ನಿರ್ಧರಿಸಿ ಮದುವೆಯಾಗಿದ್ದು. ಎಲ್ಲವೂ ಕನ್ನಡ ಸಿರಿಯಲ್‌ಗಳಂತೆ ನೆನಪಾದವು. ಅದೊಂದು ರಾಮಾಯಣವೇ? ಈ ಬಗ್ಗೆ ಜೋಗಿ, ವಸುಧೇಂದ್ರ, ಚೇತನಾ ಮುಂತಾದವರಿಗೆ ಕಥೆ ಬರೆಯಲು ಬಿಟ್ಟು ಬಿಡೋಣ. ನಮಗೇಕೆ ಈ ಉಸಾಬರಿ. ನಮ್ಮ ಕಥಾ ನಾಯಕ ರಾಮ ಪಬ್‌ನಲ್ಲಿ ಮೂರು ಪೆಗ್ ಹಾಕಿದಾಗ ಅಮೇರಿಕಾ ಎಂಬುದೆ ಈ ಮಾಯಾ ಜಿಂಕೆ ಎಂಬ ರೂಪಕದ ಭಾಷೆಯಲ್ಲಿ ಏನೋನು ಬುದ್ಧಿಜೀವಿ ಕವಿಯಂತೆ ತನಗೆ ತಾನೇ ಮಾತನಾಡಿಕೊಂಡ. ಅಷ್ಟರಲ್ಲಿ ಬೀಪ್ ಶಬ್ದ ನಾನು ಇನ್ನೂ ಜೀವಂತ ಇದ್ದೀನಿ ಎಂದು ಮೊಬೈಲ್ ನೆನಪು ಮಾಡಿತು.
ತಡಮಾಡದೇ ನಮ್ಮ ರಾಮ ಬ್ರಿಗೇಡ್ ರಸ್ತೆಗೆ ಬೈಕ್ ಓಡಿಸಿದ. ಸೀತೆ ಗುಲಾಬಿ ಹೂವು ಕೈಯಲ್ಲಿ ಹಿಡಿದು ’ಐ ಲವ್ ಯುವ್’ ಎನ್ನುವಂತೆ ನಿಂತಿದ್ದಳು. ರಾಮ ಹೂವು ತೆಗೆದುಕೊಂಡಾಗ ಇಬ್ಬರ ಕಣ್ಣುಗಳಲ್ಲಿ ಕಂಬನಿಯೂ, ಆನಂದಭಾಷ್ಪವೋ ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಸಿನಿಮಾ ನಾಯಕ=ನಾಯಕಿಯಂತೆ ಬಿಗಿದಪ್ಪಿಕೊಳ್ಳಬೇಕು ಎಂದು ಕೊಂಡಿರುವಾಗ, ಇಂತಹ ಸನ್ನಿವೇಶವನ್ನೇ ಕಾಯುತ್ತ ಪುಳುಕಿತನಾಗಲು ಮಿಸ್ಟರ್ ಹನುಮಂತ್ ಸಿದ್ಧನಾಗಿರುವಾಗ ವಾನರ ಸೇನೆಯೊಂದು ಧಾಳಿ ನಡೆಸಿ ಬಿಟ್ಟಿತು.
’ಭಾರತೀಯ ಸಂಸ್ಕೃತಿ ಉಳಿಸಿ’ ’ವಾಲಂಟೈನ್ಸ್ ಡೇಗೆ ಧಿಕ್ಕಾರ’ ಘೋಷಣೆಗಳು. ಒಂದು ಕೈಯಲ್ಲಿ ರಾಖಿ ಮತ್ತೊಂದು ಕೈಯಲ್ಲಿ ಕರೀಮಣಿ ಸರ ಹಿಡಿದುಕೊಂಡಿದ್ದ ಗಡುವನೊಬ್ಬ ರಾಮನಿಗೆ ಒಂದೇಟು ಕೊಟ್ಟವನೇ ಯಾವದು ಬೇಕು ಎಂಬಂತೆ ಎರಡನ್ನೂ ಮುಖದ ಮುಂದೆ ಆಡಿಸಿದ. ಈ ನಡುವೆ ಸೀತೆಯನ್ನು ಎಳೆದಾಡುತ್ತಾ ಹಲ್ಲೆ ನಡೆಸಿ ಭಾರತೀಯ ಸಂಸ್ಕೃತಿ ಉಪದೇಶ ನೀಡಿದ ವಾನರರು ಅಡ್ಡ ಬಂದ ಮಿಸ್ಟರ್ ಹನುಮಂತ್‌ನಿಗೆ ಬ್ರೋಕರ್ ನನ್ನ ಮಗನೇ ಎಂದೇ ಒಬ್ಬರಮೇಲೊಬ್ಬರು ಲಾಥು ಹಾಕಿ, ನೆಲಕ್ಕೆ ಕೆಡವಿದ್ದರು. ರಾಮ ಸೀತೆಗೆ ತಾಳಿ ಕಟ್ಟಿದನೇ? ಅಥವಾ ರಾಖಿ ಕಟ್ಟಿದನೋ? ನಮ್ಮ ಪೊಲಂಕಿ ಬದುಕಿದ್ದರೆ ಇನ್ನೊಂದು ಪೊಲಂಕಿಯಾಣ ಬರೆದು ಬಿಡುತ್ತಿದ್ದರು. ಹೀಗೆ ’ವಾಲಂಟೈನ್ಸ್ ಡೇ ರಾಮಾಯಣ’ ಎಂಬ ದಕ್ಷಿಣ ಕಾಂಡ ಆರಂಭವಾಯಿತು.
- ಪರಶುರಾಮ ಕಲಾಲ್
February 14, 2009 12:13 AM
ಶುಕ್ರವಾರ, ಫೆಬ್ರವರಿ 6, 2009
ಪ್ರೀತಿಯನ್ನು ಪ್ರೀತಿಸುತ್ತಾ....
ನಮ್ಮ ಬ್ಲಾಗ್‌ನಲ್ಲಿ ಪರಶುರಾಮ ಕಲಾಲ್ ಅವರು ಇನ್ನು ಮುಂದೆ ತಮ್ಮ ಲೇಖನಗಳನ್ನು ’ಕಲಾಲ್ ಕಾಲಂ’ನಲ್ಲಿ ಬರೆಯಲಿದ್ದಾರೆ. ಪ್ರಸ್ತುತ ಘಟನೆಗಳ ಬಗ್ಗೆ ಸೂಕ್ಷ್ಮವಾದ ಮತ್ತು ನೀವೆಲ್ಲರೂ ಇಷ್ಟಪಡುಬಹುದಾದ ಲೇಖನಗಳನ್ನು ಈ ಕಾಲಂನಲ್ಲಿ ನಿರೀಕ್ಷಿಸಬಹುದು.
- ನಿರಂಜನ ಕೊಟ್ಟೂರು.
ಪ್ರೀತಿಸುವುದು ತಪ್ಪೇ? ಪ್ರೀತಿ ಎಂದರೆ ಏನು? ಒಂದು ಹುಡುಗ-ಹುಡುಗಿಯ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದರೆ ಇದರಲ್ಲಿ ತಪ್ಪೇನು? ಇವರ ಮದುವೆಗೆ ಜಾತಿ-ಮತ, ಅಂತಸ್ತುಗಳು ಅಡ್ಡಬಂದರೆ ಅದನ್ನು ಮೀರುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ? ಅದನ್ನು ವಿರೋಧಿಸಿದರೆ ಅದೆಂತಹ ನಾಗರಿಕ ಸಮಾಜ?
’ಪ್ರೀತಿ ಅಂದರೆ ಅದೊಂದು ಉತ್ಪಾದನಾ ವಸ್ತುವಿನ ಅಭಿವ್ಯಕ್ತಿ ಇದ್ದಂತೆ
ಅದಕ್ಕೆ ಹೊಣೆಗಾರಿಕೆ, ಜವಾಬ್ದಾರಿ ಎಂಬೆಲ್ಲಾ ಅಮೂಲ್ಯ ಅರ್ಥಗಳಿವೆ’ ಎನ್ನುತ್ತಾನೆ ಮಾನವ ಶಾಸ್ತ್ರಜ್ಞ ಎರಿಕ್ ಫ್ರಾಮ್.
ಜಾಗತೀಕರಣದಲ್ಲಿ ಸಿಲುಕಿರುವ ನಾವುಗಳ ಎಲ್ಲವನ್ನೂ ವಾಣಿಜ್ಯಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಿರುವಾಗ ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ, ಮನುಷ್ಯರ ನಡುವೆ ದೊಡ್ಡ ಕಂದಕ ಉಂಟಾಗುತ್ತದೆ. ಸುಖ ಎನ್ನುವುದು ಹಣದಿಂದ ಕೊಂಡು ಕೊಳ್ಳುವ ’ಸರಕಾಗಿ’ ಮಾರ್ಪಾಡುತ್ತದೆ. ಇಂತಹ ಸಂದರ್ಭದಲ್ಲಿ ಪಾಪ ಒಂದು ಎಳೆಯ ಪ್ರೀತಿ ಬದುಕುವುದುಂಟೆ? ಪ್ರೀತಿ ಉಸಿರುಗಟ್ಟಿ ಅತ್ತ ಸಾಯದೆ, ಇತ್ತ ಬದುಕದೆ ಏದುಸಿರು ಬಿಡುತ್ತಾ ’ಪಂಜರದ ಗಿಳಿ’ಯಾಗಿ ಅರ್ತನಾದ ಮಾಡುತ್ತದೆ. ಶಬ್ದಮಾಲಿನ್ಯದಲ್ಲಿ ಸಿಲುಕಿದವರಿಗೆ ಈ ಧ್ವನಿ ಕೇಳುಸುತ್ತಲೇ ಇಲ್ಲ.
ಇಂತಹ ಸಮಾಜದಲ್ಲಿ ಒಂದು ಹುಡುಗ-ಹುಡುಗಿ ಪ್ರೀತಿಸುವುದು ದೊಡ್ಡ ಅಪರಾಧವಾಗಿ ಕಂಡು, ಅದನ್ನು ’ಸ್ವೆಚ್ಛಾಚಾರ’ ಎಂದೇ ಬಣ್ಣಿಸುವ ವಾತಾವರಣ ಸೃಷ್ಠಿಯಾಗಿ ಬಿಡುತ್ತದೆ.
ಇದರ ತಾರಕರೂಪವೇ ಅನ್ಯ ಧರ್ಮಿಯರ ಒಂದು ಹುಡುಗ-ಹುಡುಗಿ ಪರಸ್ಪರ ಸ್ನೇಹ ಬೆಳೆಸುವುದು ’ಅಸಭ್ಯ’ ಎನ್ನುವ ಮನಸ್ಥಿತಿಗೆ ಕಾರಣವಾಗುತ್ತದೆ.
ಕರಾವಳಿಯಲ್ಲಿ ಇವತ್ತು ನಡೆಯುತ್ತಿರುವುದು ಇದೇ.
ಪ್ರೀತಿಯನ್ನು ಸ್ವೇಚ್ಛಾಚಾರ, ಸ್ನೇಹವನ್ನು ಅಸಭ್ಯ ಎಂದು ಬಗೆಯುವ ಮಂದಿ ಅದರ ರಕ್ಷಣೆಗಾಗಿ ಸೇನೆ ಕಟ್ಟಿಕೊಂಡು ಅಂತವರನ್ನು ಹಿಡಿದು ’ಬುದ್ಧಿ ಕಲಿಸುತ್ತಾರೆ, ’ ’ಸಂಸ್ಕೃತಿಯ ಪಾಠ’ ಹೇಳಿಕೊಡುತ್ತಾರೆ, ಪ್ರೀತಿಸುವುದು ಗೊತ್ತಿಲ್ಲದ ಜನ.
ಜಗತ್ತಿನ ಬೇರೆ ಯಾವುದೇ ಭಾಷೆಗಳಲ್ಲಿ ಬರದಷ್ಟು ಪ್ರೀತಿ-ಪ್ರೇಮದ ಕಥಾವಸ್ತು ಹೊಂದಿದ ಚಲನಚಿತ್ರಗಳು ಭಾರತದಲ್ಲಿ ಬಂದಿವೆ. ಈಗಲೂ ಬರುತ್ತಿವೆ. ’ಪರಸ್ಪರ ಪ್ರೇಮಿಸುವ ಹೃದಯಗಳು, ಇವರಿಬ್ಬರೂ ನಾಯಕ-ನಾಯಕಿಯರು, ಅವರನ್ನು ಬೇರ್ಪಡಿಸಲು ಯತ್ನಿಸುವವರು ಅವರೆಲ್ಲಾ ಖಳನಾಯಕರು’ ಇದೇರೀತಿಯ ಅಸಂಖ್ಯಾತ ಚರ್ವಿತಚರ್ವಿಣ ಕಥೆಗಳು.
ಪ್ರೀತಿಸಲಾಗದ ಸಮಾಜವೊಂದರಲ್ಲಿ ಪ್ರೀತಿಸುವ ಕನಸು ಯಾವತ್ತೂ ಆಶಯವಾಗಿಯೇ ಉಳಿದಿರುವುದರಿಂದ ಇಂತಹ ಕಥಾ ಚಿತ್ರಗಳು ಯಾವತ್ತಿಗೂ ಇಲ್ಲಿ ಜೀವಂತ ಇರುತ್ತವೆ. ಇದನ್ನೇ ನಮ್ಮ ಸಿನಿಮಾಗಳು ಬಂಡವಾಳ ಮಾಡಿಕೊಂಡಿವೆ.
ಪ್ರೀತಿಸಲು ಸಾಧ್ಯವಾಗದ ಸಮಾಜದಲ್ಲಿ ಕಾಮ ಮಾತ್ರ ಹುಚ್ಚೆದ್ದು ಕುಣಿಯುತ್ತದೆ. ಇಂತಹ ಹುಚ್ಚೆ ದೇವದಾಸಿ ಪದ್ಧತಿಯನ್ನು ಇನ್ನೂ ಜೀವಂತವಾಗಿಟ್ಟಿದೆ. ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿರುವಷ್ಟು ಕೆಂಪು ದೀಪಗಳ ಏರಿಯಾಗಳು ಬೇರೆಲ್ಲೂ ಇಲ್ಲ. ಪ್ರತಿನಿಮಿಷಕ್ಕೊಮ್ಮೆ ಆಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಲೆ ಇದೆ. ಇವೆಲ್ಲಾ ಬಂಧಿಸಿರುವ ಸಂಕೋಲೆಗಳನ್ನು ಮುರಿಯಲು ಕಂಡು ಕೊಂಡ ಅಡ್ಡಮಾರ್ಗಗಳು ಅಥವಾ ಅಡ್ಡ ಪರಿಣಾಮಗಳು.
ನಮ್ಮ ಪುರಾಣದ ಅನೇಕ ಕಥಾನಾಯಕರು ಅಂತರ್ಜಾತಿಯ ವಿವಾಹವಾಗಿದ್ದಾರೆ. ವಿವಾಹದಲ್ಲೂ ಗಂಧರ್ವ ವಿವಾಹ ಸೇರಿದಂತೆ ಅನೇಕ ಬಗೆಯ ವಿವಾಹಗಳು ಇವೆ. ಋಷಿಪುಂಗವರಂತೂ ತಮ್ಮ ತಪಸ್ಸನ್ನು ರಂಭಾ, ಊರ್ವಶಿ, ಮೇನಕೆಯರು ಬಂದು ಕೆಡಸಬೇಕೆಂದೆ ತಪಸ್ಸಿಗೆ ಕುಳಿತಿದ್ದಾರೆ ಎಂದು ಭಾವಿಸುವಷ್ಟು ರಂಜಕ ಕಥೆಗಳಿವೆ.
ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿ ಅಲ್ಲ, ವಾದಕ್ಕಾದರೂ ಒಪ್ಪಿಕೊಳ್ಳೋಣ. ನಮ್ಮ ಸಂಸ್ಕೃತಿ ಯಾವುದು? ಭಾರತೀಯ ಸಂಸ್ಕೃತಿ ಎನ್ನುವಂತಾದ್ದು ಏನಾದರೂ ಇದೆಯೇ? ಬರ್ತಡೇ ಆಚರಿಸುವುದು ಯಾವ ಸಂಸ್ಕೃತಿ? ಪ್ಯಾಂಟ್, ಷರ್ಟು ಹಾಕಿಕೊಳ್ಳುವುದು ಯಾವ ಸಂಸ್ಕೃತಿ? ಸಂಸ್ಕೃತಿ ಎನ್ನುವುದು ಹರಿಯುವ ನೀರಿನಂತೆ ಹೊಸದನ್ನು ಸ್ವೀಕರಿಸುತ್ತಲೇ ಹೋಗುವ ಪರಿಯದು. ಒಂದು ಸಂಸ್ಕೃತಿ ಹೊರಗಿನದನ್ನು ಸ್ವೀಕರಿಸಿದರೆ ಅದು ಸಾಯುತ್ತದೆ ಎನ್ನುವುದಾದರೆ ನಾನು ಅದು ಸತ್ತು ಹೋಗಲಿ ಎಂದೇ ಹೇಳುತ್ತೇನೆ. ಅಷ್ಟೊಂದು ಪೊಳ್ಳಾದ, ಶಕ್ತಿಹೀನ ಸಂಸ್ಕೃತಿ ನಮಗೆ ಬೇಕಿಲ್ಲ.
ಐದುಸಾವಿರ ವರ್ಷದ ಇತಿಹಾಸವಿರುವ ದೇಶ ಭಾರತ. ಇಲ್ಲಿ ಸಂಸ್ಕೃತಿ, ಪರಂಪರೆ ಬೆಳೆದಿರುವುದು ಕೊಡುಕೊಳ್ಳುವಿಕೆಯ ಮೂಲಕವೇ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾವು ಸಂಸ್ಕೃತಿಯನ್ನು ನಿಜವಾದ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಅಂತಹ ಜನಪರ ಸಂಸ್ಕೃತಿಯೊಂದರ ವಾರುಸುದಾರರಾದ ನಾವುಗಳು ಒಂದು ವ್ಯಾಲೆಂಟೈನ್ ಡೇಗೆ ಹೆದರುವ ಅಗತ್ಯವಿಲ್ಲ.
’ಪ್ರೀತಿಯೇ ನಿನ್ನನ್ನು ನಾನು ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಹೋಗುತ್ತೇನೆ. ಪ್ರೀತಿಯೇ ನನಗೆ ಗಾಢ ನಂಬಿಕೆ ನೀಡು, ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚು ಮಾಡು, ಪ್ರೀತಿಸುವ ಸುಖ ಉಣಿಸು’ ಎಂದು ಪ್ರೀತಿಯನ್ನು ಪ್ರೀತಿಸುತ್ತಾ...
- ಪರಶುರಾಮ ಕಲಾಲ್
ಗುರುವಾರ, ಫೆಬ್ರವರಿ 5, 2009
ಕಟ್ಟಕಡೆಯ ಕನಸು
(ಇನ್ನು ಮುಂದೆ ಅರುಣ್ ಜೋಳದಕೂಡ್ಲಿಗಿ ತನ್ನ "ಕವಿ ಕಾಲಂ" ಮೂಲಕ ಕನ್ನಡದ ಇಷ್ಡಪಡಬಹುದಾದ ಕವನಗಳನ್ನು ನಿಮ್ಮ ಮುಂದೆ ತರಲಿದ್ದಾರೆ. ಈ ಕಾಲಂ ನ್ನು ಅವನ ಕವನದಿಂದಲೇ ಪ್ರಾರಂಬಿಸುತ್ತಿದ್ದೇವೆ.)
ಇದು ನೆಲದ ಜೊತೆ ಜೀವ ಬೆಸೆದವರ
ಕಟ್ಟಕಡೆಯ ಕನಸು
ಆಕಾಶದ ಆಷ್ಟೂ ನಕ್ಷತ್ರಗಳಿಂದ
ಹಗ್ಗಗಳು ಚಾಚಿಕೊಂಡವು.
ನಕ್ಷತ್ರ ಬಿಳಲುಗಳ ಕಂಡು ವಿಜ್ಙಾನ ಬೆರಗಾಯಿತು.
ಕೆಲವರು ಜೋಕಾಲಿ ಕಟ್ಟಿ ಪ್ರಿಯರ ಕೂರಿಸಿ ತೂಗಿದರು
ಸರಕಾರ ಇಳಿಬಿದ್ದ ಹಗ್ಗಗಳ
ಕೊಯ್ದು ಹಾಕಲು ಕೂಲಿಗಳಿಗೆ ಗುತ್ತಿಗೆ ಕೊಟ್ಟಿತು.
ಇನ್ನು ಕೆಲವರು ಹಗ್ಗ ಹಿಡಿದು ನಕ್ಷತ್ರ ಸಿಗುವವರೆಗೂ
ಮೇಲೇರುತ್ತಲೇ ಕಣ್ಮರೆಯಾದರು
ಕವಿಯೊಬ್ಬ ಬರೆದ ಇದು ಮಳೆಯ ಹಗ್ಗದಾ ಕನಸು.
ನೆಲವೆ ಹೊರೆಯಾದ ರೈತರೆಲ್ಲಾ ಜೊತೆಯಾದರು
ನಕ್ಷತ್ರದ ಬಿಳಲುಗಳಿಗೆ ವಂದಿಸಿದರು
ಜೋತು ಬೀಳುವ ತಮ್ಮ ಭಾರ ಹೊರುವ
ಶಕ್ತಿಯು ನಕ್ಷತ್ರಗಳಿಗೆ ಬರಲೆಂದು ಮೊರೆಯಿಟ್ಟರು !
ಚಾಕಚಕ್ಯತೆಯಲ್ಲಿ ಸರಗುಣಿಕಿ ಹಾಕಿದರು
ಎಲ್ಲರೂ ಕುತ್ತಿಗೆಗೆ ಬಿಗಿದು ಸಿದ್ದವಾದರು
ನೆಲವೇ ಇಂಚಿಂಚು ಕುಸಿಯತೊಡಗಿತು !
ಮಂಗಳವಾರ, ಜನವರಿ 27, 2009
ಮೋಹನ್‌ಗೆ ಒಲಿದ ಪು.ತಿ.ನ
‘ನಿಲ್ಲಿಸದಿರು ವನಮಾಲಿ ಕೊಳಲ ಗಾನವ ನಿಲ್ಲಿಸೇ ನೀ ಕಳೆವುದೆಂತೋ ಭವಭೀತಿಯ ಕೇಶವ’ ಎಂದು ಕವಿತೆ ಕಟ್ಟಿದವರು ಪು.ತಿ.ನ. ಅವರ ಪಾಲಿಗೆ ವನಮಾಲಿಯ ಕೊಳಲ ಗಾನ ಬದುಕಿನ ಕ್ಷುದ್ರತೆಯನ್ನು ಮೀರುವ ಕಲೆಯ ಹಾದಿ. ಅದು ಅವರ ಬದುಕಿನ ಧ್ಯಾನ ಮತ್ತು ಪ್ರೇಮ. ಆ ಹಾದಿಯ ಬಗ್ಗೆ ಅವರಿಗೆ ಎಣೆಯಿಲ್ಲದ ನಂಬಿಕೆ. ಪು.ತಿ.ನ ರಂತೆಯೇ ಕಲೆಯ ಹಾದಿಯನ್ನೇ ನಂಬಿ ನಡೆಯುತ್ತಿರುವ ಗೆಳೆಯ ಜಿ.ಎನ್. ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವಿತಾ ಸಂಕಲನಕ್ಕೆ ಈ ಬಾರಿಯ ಪು.ತಿ.ನ ಕಾವ್ಯ ಪ್ರಶಸ್ತಿ ಸಂದಿದೆ.
ಪ್ರಶ್ನೆಗಳಿರುವುದು... ಇವರ ಎರಡನೇ ಕವನ ಸಂಕಲನ. ಮೊದಲನೆಯದು ‘ಸೋನೆ ಮಳೆಯ ಸಂಜೆ’. ಮುಗ್ಧತೆ, ಕೌತುಕ ಮತ್ತು ತಲ್ಲಣದ ಲೋಕವನ್ನು ಸೋನೆಮಳೆಯಲ್ಲಿ ಕಟ್ಟಿ ಕೊಟ್ಟ ಮೋಹನ್, ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ ಸಂಕಲನದ ಕವಿತೆಗಳಲ್ಲಿ ಅಂಥದ್ದೆ ಲೋಕವನ್ನು ಬೌದ್ದಿಕ ಆಯಾಮದೊಂದಿಗೆ, ಸ್ವ ವಿಮರ್ಶೆಯಲ್ಲಿ ಎದುರಾಗಲೆತ್ನಿಸಿದ್ದಾರೆ. ಹೀಗೆ ಎದುರಾಗುವ ಭರದಲ್ಲೂ ಅವರು ಕವಿತೆಗಳಲ್ಲಿ ಮಾನವೀಯ ಕಾಳಜಿ ಮುಕ್ಕಾಗಲು ಬಿಟ್ಟಿಲ್ಲ. ಆದರೆ ಹಸಿ ಹಸಿ ಭಾವುಕತೆಯ ಭಾರದಿಂದ ನಲುಗದೇ ವಿಷಯವನ್ನು ಸೂಕ್ಷ್ಮವಾಗಿ ಮಂಡಿಸುವುದರಲ್ಲಿ ಈ ಕವಿತೆಗಳ ಯಶಸ್ಸಿದೆ.
ಮೋಹನ್‌ಗೆ ತಾವು ಬರೆಯುವುದರ ಜೊತೆಗೆ ಉಳಿದವರಿಂದಲೂ ಬರೆಸಬೇಕು ಎಂಬ ಹಂಬಲ. ಒಟ್ಟಾರೆ ಸಮೃದ್ದ ಸಾಂಸ್ಕೃತಿಕ ಲೋಕವೊಂದನ್ನು ಕಟ್ಟುವ ತಹತಹ ಹಾಗಾಗಿಯೇ ಮೋಹನ್ ಇಂದಿನ ಬಹುತೇಕ ಬರಹಗಾರರ ನೆಚ್ಚಿನ ಗೆಳೆಯ, ಮಾರ್ಗದರ್ಶಿ. ಇವರ ಅವಧಿ ಬ್ಲಾಗ್ ಹಲವು ಯುವಮನಸ್ಸುಗಳ ಕಲಾಭಿವ್ಯಕ್ತಿಯ ವೇದಿಕೆ. ಮೊದಲಿನಿಂದಲೂ ಇಂತದ್ದೆ ಜಾಯಮಾನದವರಾದ ಮೋಹನ್ ಬರೆದಿದ್ದಕ್ಕಿಂತ ಬರೆಸಿದ್ದೆ ಜಾಸ್ತಿ. ಜೊತೆಗೆ ತಾವು ಬರೆದದ್ದೆಲ್ಲ ಕೂಡಲೇ ಪ್ರಿಂಟಾಗಿ ಪುಸ್ತಕವಾಗಿ ಬರಬೇಕು ಎಂಬ ಹಲವರ ನಂಬಿಕೆಗೆ ಹೊರತಾದ ಮನಸಿದು. ‘ಇವರ ‘ನನ್ನೊಳಗಿನ ಹಾಡು ಕ್ಯೂಬಾ’ ಪ್ರವಾಸಕಥನ ಓದುಗರ ಮನಕ್ಕೆ ಲಗ್ಗೆ ಹಾಕಿ ಪ್ರತಿಗಳೆಲ್ಲ ಮಾರಾಟವಾಗಿ ಹೋದರೂ ಕೂಡಲೇ ಪುನರ್ ಮುದ್ರಣಕ್ಕೆ ಮನಸ್ಸು ಮಾಡದೇ ಅದರ ಬದಲಿಗೆ ಮೋಹನ್ ಹೊಸಬರ ಪುಸ್ತಕಗಳನ್ನು ಹೊರ ತರಲು ಒತ್ತಾಸೆ ತಂದರು ಹೀಗಾಗಿ ಬಿ.ಎಂ ಬಶೀರ್ ಮತ್ತು ಸಬಿಹಾ ಭೂಮಿಗೌಡ ಅವರ ಪುಸ್ತಕಗಳು ಹೊರಬಂದವು’ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸಣ್ಣ ಮೋಹನ್ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ. ಕನ್ನಡದ ಎರಡು ಅಪೂರ್ವ ಕೃತಿಗಳಾದ ನಾಗವೇಣಿಯವರ ‘ಗಾಂಧಿ ಬಂದ’ ಮತ್ತು ಗೀತಾ ನಾಗಭೂಷಣರ ‘ಬದುಕು’ ಕಾದಂಬರಿಗಳ ಮ್ಯಾನುಸ್ಕ್ರಿಪ್ಟ್‌ನ್ನು ಅಚ್ಚಿನ ಮನೆ ಸೇರಿಸುವುದರಿಂದ ಹಿಡಿದು ಪುಸ್ತಕದ ರೂಪದಲ್ಲಿ ಹೊರ ಬರುವ ತನಕದ ಎಲ್ಲ ಪ್ರಕ್ರಿಯೆಗಳಲ್ಲಿ ನಿಗಾ ತೆಗೆದುಕೊಂಡವರು ಮೋಹನ್. ಅವರೊಳಗೆ ಅಂದಿನಿಂದ ಇಂದಿಗೂ ಒಬ್ಬ ಅತ್ಯುತ್ತಮ ಸ್ತ್ರೀವಾದಿ ಲೇಖಕ ಮತ್ತು ಓದುಗನಿದ್ದಾನೆ.
ಪ್ರಜಾವಾಣಿಯಲ್ಲಿದ್ದು ಅಭಿರುಚಿವಂತ ಓದುಗರನ್ನು ಸೃಷ್ಟಿಸಿದ್ದ ಮೋಹನ್, ಈ ಟಿವಿಯಲ್ಲಿದ್ದು ಅಭಿರುಚಿವಂತ ನೋಡುಗರನ್ನು ಸೃಷ್ಟಿಸಿದ್ದರು. ಅದು ದೃಶ್ಯ ಮಾಧ್ಯಮದ ಗೆಳೆಯ ವೆಂಕಟ್ರಮಣ ಗೌಡ ಹೇಳುವಂತೆ ‘ದೃಶ್ಯ ಮಾಧ್ಯಮದ ಕಮರ್ಷಿಯಲ್ ಆದ ಒತ್ತಾಯಗಳನ್ನು ಉಲ್ಲಂಘಿಸಿ ಭಾವದ ಜಗುಲಿಯ ತೋರಣ ನಳನಳಿಸುವಂತೆ ನೋಡಿಕೊಳ್ಳುವ ಮೂಲಕ’. ಬೆಂಗಳೂರಿನಿಂದ ವೃತ್ತಿ ಜೀವನ ಆರಂಭಿಸಿ, ಕಡಲ ನಗರಿ ಮಂಗಳೂರು, ಬಿಸಿಲ ನಗರಿ ಕಲ್ಬುರ್ಗಿ, ಮುತ್ತಿನ ನಗರಿ ಹೈದ್ರಾಬಾದ್‌ಗೆ ಪಯಣ ಬೆಳೆಸಿದ್ದ ಮೋಹನ್‘ಎಲ್ಲಿಯು ನಿಲ್ಲದಿರು’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಎಲ್ಲಿಯು ನಿಲ್ಲದೆ ‘ಹೋಗೆವೆನು ನನ್ನ ತವರಿನ ಬೀಡಿಗೆ’ ಎಂಬ ಕವಿವಾಣಿಗೆ ಕಟ್ಟು ಬಿದ್ದು ಸೀದಾ ತಮ್ಮ ತವರು ಮನೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲು ಪೆನ್ನು ಆನಂತರ ಕ್ಯಾಮರಾ ಮೂಲಕ ಮಾತನ್ನು ಕಟ್ಟಿಕೊಡುತಿದ್ದ ಮೋಹನ್ ಇದೀಗ ಅವೆರಡನ್ನು ಒಟ್ಟೊಟ್ಟಿಗೆ ಬಳಸಿಕೊಂಡು ಆ ಮೂಲಕ ಒಂದು ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡಲು ಹೊರಟಿದ್ದಾರೆ. ಮೇ ಫ್ಲವರ್ ಮೀಡಿಯಾ ಹೌಸ್ ಮೂಲಕ ಅವರು ಮಾಡುತ್ತಿರುವ ಕೆಲಸ ಅದೇ. ಮೇ ಫ್ಲವರ್ ಆಫೀಸ್‌ನ ಆಪ್ತ ಅಂಗಣ ಇಂಥ ಹಲವು ಕಾರ್ಯಕ್ರಮಗಳಿಗೆ ಇದಾಗಲೇ ಸಾಕ್ಷಿಯಾಗಿದೆ. ಹೊರ ಊರಿನಿಂದ ಬೆಂಗಳೂರಿಗೆ ಹೋಗುವರು ಈಗ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬೆಂಗಳೂರಿನಲ್ಲಿ ಇರಲಿಕ್ಕಾಗುವಂತೆ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ ಏಕೆಂದರೆ ಅಂದು ಮೇ ಫ್ಲವರ್ ಆಪ್ತ ಅಂಗಳದಲ್ಲಿ ಫಿಶ್ ಮಾರ್ಕೆಟ್ ಇರುತ್ತದೆ. ಫಿಶ್ ಮಾರ್ಕೆಟ್‌ನಲ್ಲಿ ಇದಾಗಲೇ ಕಾವ್ಯ ಜಂಗಮ ಕಿ.ರಂ ನಾಗರಾಜರಿಂದ ಹಿಡಿದು ಮೊನ್ನೆ ಮೊನ್ನೆ ಕಾವ್ಯ ಬರೆಯಲು ತೊಡಗಿದ ಕನಸು ಕಂಗಳ ಹುಡುಗರವರೆಗೆ, ಪತ್ರಕರ್ತರು, ಸಿನಿಮಾದವರು, ವಿಮರ್ಶಕರು, ಕಲಾವಿದರು ಹೀಗೆ ಹತ್ತು ಹಲವು ಕ್ಷೇತ್ರದ ಜನರು ಬಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಪ್ತ ಅಂಗಳ ಈಗಾಗಲೇ ತನ್ನದೇ ಆದ ಪ್ರೇಕ್ಷಕರನ್ನು ಸಂಪಾದಿಸಿದೆ. ಜೊತೆಗೆ ಈ ಪ್ರೇಕ್ಷಕರು ಪ್ರತಿ ಬಾರಿಯು ಮತ್ತೊಂದಿಷ್ಟು ಪ್ರೇಕ್ಷಕರನ್ನು ಕರೆದು ತರುತ್ತಲೇ ಇರುತ್ತಾರೆ. ಮೇ ಫ್ಲವರ್‌ನ ಪ್ಯಾಪಿರಸ್ ಪ್ರಕಾಶನ ಒಲಿಂಪಿಕ್ ಎಂಬ ಕೆಂಪು ದೀಪ, ಭಾಮಿನಿ ಷಟ್ಪಧಿ ಕೃತಿಗಳನ್ನು ಹಾಗೂ ತೇಜಸ್ವಿ, ಸುಬ್ಬಣ್ಣ, ಸಮುದಾಯದ ಕಾರ್ಡಗಳನ್ನು ಪ್ರಕಟಿಸುವ ಮೂಲಕ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಅವಧಿ, ಓದು ಬಜಾರ್ ಮತ್ತು ಸೈಡ್ ವಿಂಗ್ ಬ್ಲಾಗ್‌ಗಳು ಸಾಹಿತ್ಯ, ಸಾಂಸ್ಕೃತಿಕ ಬರಹಗಳ ವೇದಿಕೆಗಳಾಗಿವೆ. ಇಲ್ಲೆಲ್ಲ ಯುವಮನಸ್ಸುಗಳ ತಲ್ಲಣ ಮತ್ತು ಕೌತುಕ ಅನಾವರಣಗೊಳ್ಳುತ್ತಿರುತ್ತದೆ. ಪತ್ರಿಕೋದ್ಯಮ ಶಿಕ್ಷಣ, ದೃಶ್ಯ ಮಾಧ್ಯಮದಲ್ಲಿ ಹಲವು ಪ್ರಯೋಗಗಳು ಹೀಗೆ ಹತ್ತು ಹಲವು ಯೋಜನೆಗಳು ಕಾರ್ಯಗತವಾಗುತ್ತಿವೆ. ಇವೆಲ್ಲದರ ಹಿಂದಿನ ಶಕ್ತಿ ಜಿ.ಎನ್.ಮೋಹನ್. ಯುವ ಮನಸ್ಸುಗಳಲ್ಲಿ ಸೃಜನಶೀಲತೆಯನ್ನು, ಸಾಹಿತ್ಯದ ಅಭಿರುಚಿಯನ್ನು ಹುಟ್ಟು ಹಾಕುತ್ತಿರುವ ಗೆಳೆಯ ಮೋಹನ್ ನಾಳೆ ಸಂಜೆ ಐದು ಗಂಟೆಗೆ ಬೆಂಗಳೂರಿನ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪು.ತಿ.ನ ಕಾವ್ಯ ಪ್ರಶಸ್ತಿ ಸ್ವೀಕರಿಸುತಿದ್ದಾರೆ. ಕಾರ್ಯಕ್ರಮದ ಮೊದಲಿಗೆ ತಿಂಡಿ ಕೊಡ್ತಾರೆ ಆಗಂತೂ ನೀವು ಹಾಜರಿರಲೇ ಬೇಕು ಎಂದು ಅವರಿಗಾಗಲೇ ಕರೆಕೊಟ್ಟಿದ್ದಾರೆ. ಆದರೆ ನಾವು ಕಾರ್ಯಕ್ರಮ ಮುಗಿಯೋ ತನಕವೂ ಇರೋಣ. ಒಳ್ಳೆಯ ಗಾಯಕರೂ ಆಗಿರುವ ಮೋಹನ್ ಕಂಠ ಸಿರಿಯಿಂದ ಕೊನೆಗೆ ಸಮಯ ಸಿಕ್ಕಿದರೆ ಒಂದೆರಡು ಹಾಡನ್ನು ಕೇಳಿಕೊಂಡು ಬರೋಣ. ಒತ್ತಾಯ ಮಾಡಿದರೆ ಮೋಹನ ಮುರಳೀ ನುಡಿಯದಿದ್ದೀತೆ?
ಮತ್ತೆ ಮೋಹನ್‌ಗೆ ಒಂದು ಮಾತು. ನಿಮ್ಮಾಸೆ ಇದೆಯಲ್ಲ ಯಾರ ಕೈಗೂ ಸಿಗದೆ ಒಳಗೆ ಉಳಿಯುತ್ತಲ್ಲಾ ಹುಳ ಹಾಗೆ ನೀವು ಇರಬೇಕು ಅಂತ. ಆ ಕನಸನ್ನು ಮುಂದಿನ ಜನ್ಮಕ್ಕೆ ಪೆಂಡಿಂಗ್ ಇಟ್ಕೊಳ್ಳಿ. ಏಕೆಂದರೆ ಎಲ್ಲರ ಗೆಳೆಯನಾಗುವ ಜೀವ ಗೂಡಿನೊಳಗೆ ಹೊಕ್ಕಿ ಕೂರಲು ಸಾಧ್ಯವೇ ಇಲ್ಲ. ಇರಲಿ ಮೋಹನ್ ಇದು ಖುಷಿಯ ಸಂದರ್ಭ. ಪು.ತಿ.ನ ಕಾವ್ಯ ಪ್ರಶಸ್ತಿ ನಿಮ್ಮನ್ನು ಪು.ತಿ.ನ ಕಾವ್ಯದಂತೆಯೇ ನಿಮ್ಮೊಳಗಿನ ಚೈತನ್ಯವನ್ನು ಪೊರೆಯಲಿ.
January 27, 2009 5:24 AM
ಭಾನುವಾರ, ಜನವರಿ 25, 2009
ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ!
ಹಂಪಿ ಎಂದೊಡನೆ ಅನೇಕರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದಾಚೆಗೂ ಹಂಪಿ ಎನ್ನುವುದು ಇತ್ತು ಎಂದು ನಾವು ಯೋಚಿಸಲಾರದಷ್ಟು ಕಳೆದ ೬೦ವರ್ಷದಲ್ಲಿ ಇತಿಹಾಸಕಾರರೆಂಬ ಕೆಲವು ಭಯೋತ್ಪಾದಕರು ಹಂಪಿಗೆ ವಿಜಯನಗರದ ಪಟ್ಟ ಕಟ್ಟಿ ಅಲ್ಲಿಯೇ ಬಿಡಾರ ಹೂಡಿ ಬಿಟ್ಟಿದ್ದಾರೆ.
ಶಿಲಾಯುಗದ ಕಾಲದಲ್ಲೂ ಹಂಪಿ ಜೀವಂತವಾಗಿತ್ತು ಎನ್ನುವುದಕ್ಕೆ ಅನೇಕ ಪ್ರಾಚೀನ ಕುರುಹುಗಳು ಸಾಕಷ್ಟು ದೊರಕಿವೆ. ಕಲ್ಲುಗುಂಡುಗಳನ್ನು ಪೇರಿಸಿಟ್ಟಂತೆ ಕಾಣುವ ಸಾಲು ಸಾಲು ಬೆಟ್ಟಗಳು, ಇವುಗಳನ್ನು ಸೀಳಿಕೊಂಡು ಹರಿಯುವ ತುಂಗಭದ್ರೆ ’ಇತಿಹಾಸ ನಿರ್ಮಾಣಕಾರರು’ ಎಂದು ಅಹಂಕಾರ ಪ್ರದರ್ಶಿಸುತ್ತಾ ಬಂದವರನ್ನು ಕೆಲವೊಮ್ಮೆ ಉಕ್ಕಿ ಹರಿದು ಅವರ ಸೊಕ್ಕು ಮುರಿದು ಹಾಕುತ್ತಾ ಬಂದಿದ್ದಾಳೆ ಈ ಪುಣ್ಯಾತಗಿತ್ತಿ.
ಹಂಪಿಯು ಜನಪದರಿಗೆ ಪಂಪಾಪತಿ, ಹಂಪಮ್ಮರ ನೆಲೆ ಎನಿಸಿದೆ. ತುಂಗಭದ್ರೆಯು ಇವರಿಗೆ ಹಂಪಿ ಹೊಳೆಯಾಗಿದೆ. ಹಂಪಿಯಲ್ಲಿ ನಡೆಯುವ ಫಲಪೂಜೆಯು ಪಂಪಾಪತಿ-ಹಂಪಮ್ಮರ ನಿಶ್ಚಿತಾರ್ಥವಾದರೆ ಜಾತ್ರೆಯು ಅವರ ವಿವಾಹವಾಗಿದೆ. ಜನರು ತಮ್ಮ ಮನೆಯೊಂದರ ಮದುವೆ ಸಂಭ್ರಮ ಎನ್ನುವಂತೆ ಇದರಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಪಟ್ಟಣದ ಎಲ್ಲಮ್ಮ, ಹತ್ತುಕೈ ತಾಯಮ್ಮ ಶಕ್ತಿದೇವತೆಗಳು ಇವತ್ತಿಗೂ ಕುರಿ-ಕೋಳಿ ಬೇಡುತ್ತಿವೆ. ಜನರು ಅವರ ಕೋರಿಕೆ ಈಡೇರಿಸಿ ಎಡೆ ಹಾಕುತ್ತಾರೆ. ರಾಮಾಯಣ, ಮಹಾಭಾರತ ಕಥೆಯಂತೂ ಹಂಪಿ ತುಂಬಾ ವ್ಯಾಪಿಸಿ ಬಿಟ್ಟಿದೆ. ಸೀತೆ ಸೆರಗು, ವಾಲಿ ಗವಿ, ರಾವಣ ಉಚ್ಚೆ ಹೊಯ್ದ ಹೊಂಡ ಇತ್ಯಾದಿ.
ನಾನು ಸಣ್ಣವನಿದ್ದಾಗ ಅವುಟುಗಾಲು ಭರಮಪ್ಪ ಎನ್ನುವ ವಯಸ್ಸಾದ ವ್ಯಕ್ತಿಯೊಬ್ಬ ಹಂಪಿ ತೋರಿಸಲು ಕರೆದೊಯ್ದು ವಿಜಯ ವಿಠ್ಠಲ ದೇವಸ್ಥಾನದ ಹಿಂದೆ ನದಿಯಲ್ಲಿ ನಿಂತಿರುವ ಕಲ್ಲು ಕಂಭಗಳನ್ನು ತೋರಿಸಿ ಆ ಕಡೆ ಇರುವುದೇ ಲಂಕಾ ಪಟ್ಟಣ ಎಂದು ಹೇಳಿದ್ದ. ಆತ ಹೇಳಿದ್ದ ಪ್ರದೇಶ ಋಷ್ಯಮೂಕ ಪರ್ವತವಾಗಿತ್ತು. ಅಲ್ಲಿಗೆ ಯಾರೂ ಹೋಗಿಲ್ಲ, ಹೋದವರು ಹಿಂದಕ್ಕೆ ಬಂದಿಲ್ಲ ಎಂದು ಹೇಳಿ ನನ್ನನ್ನು ಆ ಪ್ರದೇಶದ ಬಗ್ಗೆ ಭಯಭೀತಿ ಉಂಟಾಗುವಂತೆ ಮಾಡಿದ್ದ. ಸೇತುವೆ ಯಾಕೇ ಹಾಳಾಯಿತು ಎಂದು ಬಾಲಕನ ಸಹಜ ಕುತೂಹಲದಿಂದ ಆಗ ಕೇಳಿದ್ದೆ. ರಾವಣ ಸತ್ತ ನಂತರ ರಾಮ ವಾಪಾಸ್ಸು ಬಂದಾಗ ಇನ್ನೂ ಸೇತುವೆ ಯಾಕೇ ಬೇಕು ಇದನ್ನು ಹೊಡೆದಾಕಿ ಎಂದು ವಾನರ ಸೇನೆಗೆ ತಿಳಿಸಿದ. ಅದರಂತೆ ಸೇತುವೆ ಹೊಡೆದು ಹಾಕಲಾಯಿತು. ಹಂಪಿಯಲ್ಲಿರುವ ಕಲ್ಲುಬಂಡೆಗಳ ಬೆಟ್ಟಗಳು ಸೇತುವೆ ನಿರ್ಮಾಣಕ್ಕೆಂದು ತರಲಾಗಿತ್ತು. ಹೆಚ್ಚಾಗಿದ್ದರಿಂದ ಅವುಗಳನ್ನು ಎಲ್ಲಿ ಬೇಕು ಅಲ್ಲಿ ಚೆಲ್ಲಿದ್ದರಿಂದ ಇಷ್ಟೊಂದು ಕಲ್ಲುಗುಂಡುಗಳ ಬೆಟ್ಟಗಳಾಗಿವೆ ಎಂದು ಸಹ ಹೇಳಿದ್ದ.
ಸೇತುವೆ ಪುನಃ ಕಟ್ಟಲು ಬರುವುದಿಲ್ಲವೇ? ನಾನು ಕೇಳಿದ್ದೆ. ಸೇತುವೆಯನ್ನು ಇನ್ನು ಮುಂದೆ ಯಾರೋ ಕಟ್ಟಲು ಆಗುವುದಿಲ್ಲ, ಕಟ್ಟಿದರೆ ಆ ಸೇತುವೆ ಉಳಿಯುವುದಿಲ್ಲ, ಇಂತಹ ಸೇತುವೆ ಕಟ್ಟುವವರೆಲ್ಲಾ ರಕ್ತಕಾರಿ ಸತ್ತು ಹೋಗಿದ್ದಾರೆ, ಎಲ್ಲಿಯಾದರೂ ದೈವಕ್ಕೆ ಎದುರಾಗಿ ಉಳಿಯುವುದು ಉಂಟೇ ಎನ್ನುವುದು ಆತನ ಮಾತಿನ ತಾತ್ಪರ್ಯವಾಗಿತ್ತು.
ಇದೆಲ್ಲಾ ಈಗ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ. ಹಂಪಿ ತಳವಾರ ಘಟ್ಟ-ಆನೆಗೊಂದಿ ಸೇತುವೆ ಕುಸಿದು ೩೦ಕ್ಕೂ ಹೆಚ್ಚು ಕಾರ್ಮಿಕರು ಜಲಸಮಾಧಿಯಾದ ದುರಂತ ಘಟಿಸಿದ್ದರಿಂದ.
ನಾನು ತಳವಾರ ಘಟ್ಟದ ಒಂದು ಕಲ್ಲುಗುಂಡಿನ ಮೇಲೆ ಕುಳಿತು ಇದನ್ನೆಲ್ಲಾ ನೆನಪು ಮಾಡಿಕೊಳ್ಳುವ ಹೊತ್ತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಬಂದರು. ದೋಣಿ ಹತ್ತಿ ಹೊಳೆಯಲ್ಲಿ ಒಂದು ಸುತ್ತು ’ವಿಹಾರ’ ನಡೆಸಿದರು. ಅದನ್ನೇ ನಮ್ಮ ಪತ್ರಕರ್ತ ಮಿತ್ರರು ಫೋಟೊ ತೆಗೆದು ಪರಿಶೀಲನೆ, ಕಾರ್ಯಾಚರಣೆ ಉಸ್ತುವಾರಿ ಎಂದೆಲ್ಲಾ ಬರೆದು ಹಾಕಿದರು.
ಆನೆಗೊಂದಿ-ಹಂಪಿಯ ನಡುವೆ ಯಾವುದೋ ರಾಜ ನಿರ್ಮಿಸಿದ್ದ ಕಲ್ಲಿನ ಸೇತುವೆ, ವಿರೂಪಾಪುರ ಗಡ್ಡೆಗೆ ಸಂಪರ್ಕಿಸಲು ಋಷ್ಯಮೂಕ ಪರ್ವತಕ್ಕೆ ಹೊಂದಿಕೊಂಡಿದ್ದ ಕಲ್ಲಿನ ಸೇತುವೆ ಯಾಕೆ ಹಾಳಾದವು? ಈಗಲೂ ಅವಶೇಷಗಳಾಗಿ ಶತಮಾನದುದ್ದಕ್ಕೂ ಸೇತುವೆ ಹೊತ್ತಿದ್ದ ಕಲ್ಲಿನ ಬಂಡೆಗಳು ಇನ್ನೂ ಸಾಕ್ಷಿಯಾಗಿ ನಿಂತುಕೊಂಡು ಚರಿತ್ರೆಯ ಇಂತಹ ಕಥೆಗಳನ್ನು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಡುತ್ತಿವೆ. ಇದನ್ನು ಕೇಳುವ ಸೂಕ್ಷ್ಮ ಮನಸ್ಸನ್ನು ನಾವು ಕಳೆದುಕೊಂಡಿದ್ದೇವೆಯೇ? ಇತಿಹಾಸ ಎಂದೊಡನೆ ಭೂತ ಮೈವೆತ್ತವರಂತೆ ಆಡುವುದು ಬಿಟ್ಟು ಬೇರೇನೂ ನಮಗೆ ಕಾಣಿಸುತ್ತಿಲ್ಲ ಯಾಕೇ?
ಯುನೆಸ್ಕೋ ಪ್ರತಿನಿಧಿ ಜಿಂಕು ತಾನಿಗುಚ್ಚಿ ಈ ಹಿಂದೆ ಹಂಪಿಗೆ ಬಂದಿದ್ದಾಗ ಆಕೆಯೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. (ಪತ್ರಕರ್ತನಾಗಿದ್ದರಿಂದ) ಆಕೆಯೇ ಮುಂದೆ ಹಂಪಿಯನ್ನು ವಿಶ್ವಪರಂಪರೆಯ ಆಪಾಯದ ಸ್ಮಾರಕಗಳ ಪಟ್ಟಿಯಲ್ಲಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಚಳಿ ಜ್ವರ ಬರುವಂತೆ ಮಾಡಿದ ಪುಣ್ಯಾತಗಿತ್ತಿ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬ ಈ ಯುನೆಸ್ಕೂ ಹೆಂಗಸಿಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನೂ ಅರ್ಥವಾಗುತ್ತಿಲ್ಲ, ಸ್ವಲ್ಪ ನೀವೇ ಮಾತನಾಡಿ ಒಪ್ಪಿಸಿ, ಪ್ರೆಸ್‌ನವರೆಂದರೆ ಆಕೆ ಗೌರವ ಕೊಡುತ್ತಾಳೆ ಎಂದು ಪುಸಲಾಯಿಸಿ ನನ್ನನ್ನು ಆಕೆಯ ಬಳಿ ಬಿಟ್ಟಿದ್ದ.
ಹಂಪಿಯ ವಿಜಯನಗರ ಇತಿಹಾಸದ ಬಗ್ಗೆ ನಾನು ಪ್ರಸ್ತಾಪಿಸುತ್ತಿದ್ದಂತೆ ಅದನ್ನು ತಕ್ಷಣವೇ ಕತ್ತರಿಸಿದ ಆಕೆ, ’ನಿಮಗೆಲ್ಲಾ ಏನಾಗಿದೆ ನನಗೆ ಅರ್ಥ ಆಗುತ್ತಿಲ್ಲ. ಹಂಪಿ ಒಂದು ಸ್ಮಾರಕಗಳ ಗುಚ್ಛ. ಕಲ್ಲುಬಂಡೆಗಳ ಸಾಲು ಸಾಲು ಗುಡ್ಡಗಳು, ಭೌಗೋಳಿಕ ನಿಸರ್ಗ ಸಹಜ ಸುಂದರ ಪ್ರದೇಶ. ಇದನ್ನು ಹೀಗೆಯೇ ಉಳಿಸಿಕೊಳ್ಳುವುದು ಬಿಟ್ಟು ಪ್ರವಾಸೋದ್ಯಮದ ಹೆಸರಲ್ಲಿ ಹಣ ಮಾಡುವುದಕ್ಕೆ ಇದೆಲ್ಲಾ ಯಾಕೇ ಬೇಕು? ಸೇತುವೆ ಜನರಿಗೆ ಬೇಕು ಎಂದು ನೀವು ಹೇಳುತ್ತೀರಿ? ಪಾಪ ಅವರು ದೋಣಿಯಲ್ಲಿ ಓಡಾಡುತ್ತಿಲ್ಲವೇ? ಪ್ರವಾಸೋದ್ಯಮದ ಹೆಸರಲ್ಲಿ ಇಲ್ಲಿಗೆ ಮಜ ಮಾಡಲು ಬರುವ ಪ್ರವಾಸಿಗರಿಗೆ ಇದೆಲ್ಲಾ ಮಾಡಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶವನ್ನು ಸಂರಕ್ಷಿಸುವುದೆಂದರೆ ಇದೇ ಏನು? ನಿಮ್ಮ ಸರ್ಕಾರಗಳಿಗೆ ಬುದ್ಧಿ ನೀವೇ ಹೇಳಬೇಕು.’ ಒಂದೇ ಉಸಿರಿನಲ್ಲಿ ಆಕೆ ಹೇಳಿ ಸುಮ್ಮನೆ ನಿಂತಳು. ಜಪಾನ್ ದೇಶದವಳಾದ ಆಕೆ ಈಗ ಪ್ಯಾರಿಸ್‌ನಲ್ಲಿದ್ದಾಳೆ. ತೆಳ್ಳಗೆ, ಬೆಳ್ಳಗೆ ಬಳ್ಳಿಯಂತೆ ಇರುವ ಸುಂದರಿಯೊಬ್ಬಳ ದೇಹದಲ್ಲಿ ಇಷ್ಟೊಂದು ಶಕ್ತಿ ಇದೆಯೇ? ಆಕೆಯ ಆಲೋಚನಾ ಶಕ್ತಿಗೆ ಬೆರಗಾಗಿ ಬಿಟ್ಟೆ. ಆಕೆಗೆ ನನ್ನ ಸಹಮತ ಇದೆ ಎನ್ನುವುದನ್ನು ಸೂಚಿಸಿ ವಿದಾಯ ಹೇಳಿದಾಗ ವಿಷಾಧದ ನಗೆಯಲ್ಲಿಯೇ ನಿಮ್ಮಂತವರ ಅಗತ್ಯ ಹಂಪಿಗೆ ಇದೆ ಎಂದೇ ಹೇಳಿ ಕಣ್ಣು ಮಿಂಚಿಸಿದಳು. ಒಡನೆ ಅಧಿಕಾರ ವರ್ಗ ಕಂಡೊಡನೆ ದುರ್ಗಿಯಂತೆ ಪುನಃ ಕದಲಿ ಮಾತಿನ ಕಾಳಗಕ್ಕೆ ಇಳಿದು ಬಿಟ್ಟಳು.
’ಕಾಲಿದ್ದವರು ಹಂಪಿಯನ್ನು ನೋಡಬೇಕು’ ಎಂದು ಜನಪದರು ಹೇಳುತ್ತಿರುವ ಮಾತು ನನಗೆ ಅರ್ಥವತ್ತಾಗಿ ಕಾಣತೊಡಗಿ, ದುರ್ಗಮ ಹಂಪಿಯಲ್ಲಿ ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು ಎನ್ನುವ ಅನುಭೂತಿಯೊಂದನ್ನು ಜಿಂಕು ತಾನಿಗುಚ್ಛಿ ಮೂಡಿಸಿ ಬಿಟ್ಟಿದ್ದಳು. ಅವುಟುಗಾಲು ಭರಮಪ್ಪ ಅದಕ್ಕೊಂದು ದೇಶಿ ಪರಂಪರೆ ಜೋಡಿಸಿ ಬಿಟ್ಟಿದ್ದ.
ನಂತರ ಹಂಪಿಯ ಕಲ್ಲುಬಂಡೆಗಳ ಬೆಟ್ಟಗಳನ್ನು ಏರುವುದು. ದುರ್ಗಮ ಪ್ರದೇಶಕ್ಕೆ ನುಗ್ಗುವುದು. ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಕಥಾನಕವನ್ನು ತೀರಾ ಆಪ್ತವಾಗಿ ಕೇಳಿಸಿಕೊಳ್ಳುವ ಹೊಸ ಬಗೆಯ ಕಥಾನಕ ನನ್ನದಾಯಿತು.
ಇಂತಹ ಒಂದು ಸಾಹಸವನ್ನು ಸ್ನೇಹಿತ ಬಣಗಾರ್, ಸಿದ್ದಲಿಂಗಪ್ಪ ಇವರ ಜೊತೆ ಕೈಗೊಂಡಿದ್ದಾಗ ದುರ್ಗಮ ಬೆಟ್ಟ ಏರಿ ದಾರಿ ಕಾಣದೇ ಇಳಿಯಲೂ ಬಾರದೆ ಕಂಗಾಲಾಗಿ ಹೇಗೋ ಮಾಡಿ ಸಮತಟ್ಟು ಪ್ರದೇಶ ಕಂಡುಕೊಂಡು ಅಲ್ಲಿಂದ ಚಾರಣ ಮುಂದುವರೆಸಿ ಇನ್ನೇನೋ ವಾಪಾಸ್ಸಾಗಬೇಕು ಎಂದಾಗ ದಿನಗೂಲಿಗಳು ಹೇಳಿದ್ದ ಭೈರವ ಮೂರ್ತಿ ಕೊನೆಗೂ ಪತ್ತೆಯಾಗಿ ಬಿಟ್ಟಿತು. ೧೨ ಅಡಿಯಷ್ಟು ಎತ್ತರದ ಭವ್ಯ ವೀರಭದ್ರ ದೇವರ ಮೂರ್ತಿ ’ಅಂತೂ ಕೊನೆಗೆ ಬಂದಿರಲ್ಲ’ ಎಂದು ನಮ್ಮನ್ನು ನೋಡಿ ನಕ್ಕಂತಾಯಿತು. ಪಕ್ಕಾ ನಾಸ್ತಿಕನಾದ ನನಗೆ ಎಂಥದ್ದೋ ಧನ್ಯತಾ ಭಾವ ಆವರಿಸಿ, ಏನೋ ಕಂಡುಕೊಂಡ ಏನೆಲ್ಲಾ ಭಾವನೆಗಳು ನನ್ನ ಬೇಸರ, ಆಯಾಸವನ್ನು ದೂರ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಬಿಟ್ಟವು. ಇದು ಸ್ನೇಹಿತರ ಅನುಭವವೂ ಆಗಿತ್ತು. ಅಲ್ಲಿಂದ ಹೊರ ಬರಲು ಮನಸ್ಸಿಲ್ಲದ ಮನಸ್ಸಿನಿಂದ ಗುಡ್ಡ ಇಳಿಯುವಾಗ ದಾರಿ ಸುಗಮವಾಗಿತ್ತು. ಮನಸ್ಸು ನಿರಾಳವಾಗಿತ್ತು. ಗುಡ್ಡದ ಬದಿಯಲ್ಲಿ ನೀರು ಹಾಗೂ ಬಿಸ್ಕಿಟ್ ಹಿಡಿದು ನಮಗಾಗಿ ಕಾಯುತ್ತಿದ್ದ ಕೇಂದ್ರ ಪುರಾತತ್ವ ಇಲಾಖೆಯ ದಿನಗೂಲಿಗಳು ನಮ್ಮ ಪುರಾತನರಾಗಿ ಕಾಣಿಸಿಕೊಂಡು ಬಾಯಾರಿದ್ದ ನಮಗೆ ಅಮೃತವನ್ನು ಧಾರೆ ಎರೆದು ಮತ್ತೊಂದು ಧನ್ಯತಾಭಾವ ಮೂಡಿಸಿ ಬಿಟ್ಟು ’ಮನುಷ್ಯ ಮನುಷ್ಯರ ಮಧ್ಯೆ ಮಾನವೀಯ ಸೇತುವೆ’ ಮುಖ್ಯ ಎಂದೇ ಕ್ರಿಯೆ ಮೂಲಕ ತೋರಿಸಿಬಿಟ್ಟರು. ಇವತ್ತಿನ ಸಂದರ್ಭದಲ್ಲಿ ನಮಗೆ ಯಾವ ಸೇತುವೆ ಬೇಕು? ನಮಗೆ ಎಂದೂ ಕುಸಿಯದ ಸೇತುವೆ ಬೇಕಿದೆ ಎನಿಸಿಬಿಟ್ಟಿತು.
- ಪರಶುರಾಮ ಕಲಾಲ್
ಭಾನುವಾರ, ಜನವರಿ 18, 2009
ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ಕೇಳುತ್ತಿರುವ ರಾಜು? ನಾನು ಏನು ಹೇಳಲಿ?
ರಾಜು ಅನಂತಸ್ವಾಮಿ ಎನ್ನುವ ಹಾಡುವ ಕೋಗಿಲೆಯೊಂದು ತನ್ನ ಸ್ವರವನ್ನು ನಿಲ್ಲಿಸಿದೆ ಎಂದು ಕೇಳಿಯೇ ಮನಸ್ಸು ಅಸ್ವಸ್ಥವಾಯಿತು.
ನಾನು ರಾಜು ಅನಂತಸ್ವಾಮಿ ಹೆಸರು ಕೇಳಿರಲೇ ಇಲ್ಲ. ಹಂಪಿ ಉತ್ಸವದಲ್ಲಿ ಕವಿ ಕಾವ್ಯ ಗಾಯನ ಕುಂಚ ಕಾರ್ಯಕ್ರಮದಲ್ಲಿ ನನ್ನನ್ನು ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು. ಹಾಡಬಲ್ಲ ಕವಿತೆ ಫ್ಯಾಕ್ಸ್ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಾಹಿತಿ ರವಾನಿಸಿದ್ದರು. ಆಗ ಉತ್ಸವಕ್ಕಾಗಿಯೇ ಬರೆದ ಕವಿತೆಯನ್ನು ಫ್ಯಾಕ್ಸ್ ಮಾಡಿದ್ದೇ. ಕವಿಗೋಷ್ಠಿ ಆರಂಭವಾಗುವ ಹದಿನೈದು ನಿಮಿಷ ಮುಂಚೆಯೇ ನಾನು ವೇದಿಕೆ ಬಳಿ ಇದ್ದೆ. ಯಾರೋ ಶಿವಮೊಗ್ಗ ಸುಬ್ಬಣ್ಣ ಅವರನ್ನು ಪರಿಚಯಿಸಿದರು. ಸುಬ್ಬಣ್ಣ ಅವರು ಒಡನೆಯೇ ಅಯ್ಯೋ ಮಾರಾಯ, ಅಂತೂ ಹೀಗಾದರೂ ಬಂದಿಯಲ್ಲ, ಆ ರಾಜು ನಿನ್ನ ಹುಡುಕುತ್ತಾ ಕಂಗಾಲಾಗಿದ್ದಾನೆ. ಎಂದು ರಾಜುವನ್ನು ಹುಡುಕಿ ಕೂಗಿ ಕರೆದು ಪರಿಚಯಿಸಿದರು. ಕಳೆದ ಹೋದ ನಿಧಿ ಸಿಕ್ಕವರಂತೆ ಪರಿಚಯವೇ ಇಲ್ಲದ ರಾಜು ನನ್ನ ಕೈ ಹಿಡಿದು ವಾರಿಗೆ ಕರೆದೊಯ್ಯದು ನನ್ನ ಕವಿತೆಯ ಅರ್ಥ ಹಾಗೂ ಕೆಲವು ಅಸ್ಪಷ್ಠ ಎನಿಸುವ ಪದಗಳ ವಿವರಣೆ ಕೇಳಿದರು. ನನ್ನ ಕನ್ನಡ ಬರಹ ನೋಡಿದವರಿಗೆ ಇದು ಯಾವ ಕಾಲದ ಲಿಪಿ ಎನ್ನುವಂತೆ ಇರುತ್ತದೆ. ಅದನ್ನೇ ಪ್ಯಾಕ್ಸ್ ಮಾಡಿದ್ದರಿಂದ ರಾಜುಗೆ ಅದೂ ಕೂಡಾ ಸಮಸ್ಯೆಯಾಗಿತ್ತು. ಕವಿತೆಯ ಅರ್ಥ, ಭಾವವ್ಯಾಪ್ತಿ ಎಲ್ಲವನ್ನೂ ತನ್ನಲ್ಲಿ ತಾನು ಗುನುಗುತ್ತಲೇ ಕೇಳಿಸಿಕೊಂಡ ರಾಜು ಸ್ವಲ್ಪ ಹೊತ್ತು ಧ್ಯಾನಸ್ಥನಾದವನಂತೆ ನನ್ನ ಮುಂದೆ ಹಾಡಲಾರಂಭಿಸಿದ. ಹಾಡುತ್ತಲೇ ಈ ಭಾವ ನಿಮ್ಮ ಭಾವವನ್ನು ತಟ್ಟುತ್ತದೆಯಲ್ಲವೇ ಎಂದು ಕೇಳಿದ. ಹೋರಾಟದ ಹಾಡುಗಳ ಪ್ರಭಾವದಿಂದ ಬೆಳೆದ ನನಗೆ ಈ ಸುಗಮ ಸಂಗೀತದ ಹಾಡುಗಳ ಬಗ್ಗೆ ತಾತ್ಸಾರವಿತ್ತು. ಅದನ್ನು ತೋರ್ಪಡಿಸಿಕೊಳ್ಳದೇ ನಿಮಗೆ ಬಂದಂತೆ ಹಾಡಿ ಎಂದೇ. ಈ ಮಾತು ರಾಜು ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ತನ್ನ ಹಾಡು ಕವಿತೆಯ ಭಾವ ಹಿಡಿದಿಡಲು ವಿಫಲವಾಗಿದೆ ಎಂದೇ ಭಾವಿಸಿ ಬಿಟ್ಟ. ಮತ್ತೊಂದು ಕ್ಷಣ ಗುನಗುನಿಸುತ್ತಲೇ ಧ್ಯಾನಸ್ಥನಾಗಿ ಬೇರೊಂದು ಬಗೆಯಲ್ಲಿ ಹಾಡಲು ಯತ್ನಿಸಿದ. ಈಗ ಹಾಡಿಗೆ ಸ್ವಲ್ಪ ವೇಗ ನೀಡಿದ್ದ. ನನಗೆ ರಾಜುನ ಸಮಸ್ಯೆ ಅರ್ಥವಾಯಿತು. ರಾಜು ನೀನು ಕವಿತೆಗೆ ಜೀವ ತುಂಬುವಂತೆ ಹಾಡುತ್ತೀ. ಎರಡೂ ಬಗೆಯ ಹಾಡುಗಳು ನನಗೆ ಇಷ್ಟವಾದವು ಎಂದಾಗಲೇ ರಾಜುನ ಕಣ್ಗಳಲ್ಲಿ ಮಿಂಚು ಕಾಣಿಸಿಕೊಂಡಿತು. ತಕ್ಷಣವೇ ವಾದ್ಯವೃಂದದವರ ಬಳಿ ತೆರಳಿ ಹಾಡು ಹೇಳುತ್ತಾ ಅವರನ್ನು ತನ್ನ ರಾಗಕ್ಕೆ ಒಗ್ಗಿಸಿದ.
ಅಷ್ಟರಲ್ಲಿಯಾಗಲೇ ವೇದಿಕೆಗೆ ಕವಿಗಳ ಅಹ್ವಾನ ನಡೆದಿತ್ತು. ನಾನು ವೇದಿಕೆ ಏರಿದೆ.
ನನ್ನ ಸರದಿ ಬಂದಾಗ ನಾನು ಕವಿತೆ ವಾಚಿಸಿದ ನಂತರ ರಾಜು ಅನಂತಸ್ವಾಮಿ ಹಾಡಿದ್ದಂತೂ ಇದು ನಾನು ಬರೆದಿದ್ದೇ ಎಂದು ನಾಚಿಕೆ ಪಡುವಷ್ಟು ಸೊಗಸಾಗಿ ಹಾಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿ ಬಿಟ್ಟ.
ನನ್ನ ಕವಿತೆಯ ಮೊದಲ ಚರಣವಿದು ’ ಪ್ರೀತಿ ಅರಳುವುದು ಎಲ್ಲಿಂದ? ತಾವರೆಯ ಮೊಗದವಳೇ, ಮಲ್ಲಿಗೆಯ ನಗೆಯೋಳೆ ಹೇಳೇ ನನಗೆ, ಪ್ರೀತಿ ಅರಳುವುದು ಎಲ್ಲಿಂದ? ಪ್ರೀತಿಯನ್ನು ಸೋಸಿ ಸೋಸಿ ಹುಡುಕಿದಂತೆ, ಹಂಪಿಯ ಕಲ್ಲುಬಂಡೆಗಳು ಕರಗಿ ಹೋಗುವಂತೆ ಅಂತರಾಳದಿಂದಲೇ ಮುತ್ತುಗಳನ್ನು ಹೆಕ್ಕುವಂತೆ ಕವಿತೆಗೆ ಜೀವ ತುಂಬಿದ ಪರಿ ನನಗೆ ಈಗಲೂ ಭಾವಪರವಶರಾಗುವಂತೆ ಮಾಡುತ್ತದೆ.
ಕವಿತೆಗಳು ಹಾಡುವದಕ್ಕೆ ಬರುವಂತೆ ಇರಬೇಕು ಎನ್ನುವದಕ್ಕೆ ವಿರೋಧವಾಗಿದ್ದ ನನ್ನ ಅಹಂಕಾರವನ್ನು ಸಹ ರಾಜು ತನ್ನ ಮಾಧುರ್ಯದ ಧ್ವನಿಯಿಂದ ನೂಚ್ಚು ನೂರಾಗಿಸಿ ಬಿಟ್ಟಿದ್ದ. ಗೋಷ್ಠಿ ಮುಗಿದ ನಂತರ ರಾಜು ಹುಡುಕಿಕೊಂಡು ಬಂದು ಹೇಗೆ ಬಂತು ಎಂದು ಕೇಳಿ, ನನ್ನ ಬಿಗಿದಪ್ಪಿದ. ಕವಿಗಳಿಗೆ ಇಷ್ಟವಾದರೆ ನಾನು ಕೃತಜ್ಞ ಎಂದ. ನಾನು ಯಾರು? ರಾಜು ಅನಂತಸ್ವಾಮಿ ಯಾರು? ಇಬ್ಬರ ನಡುವೆ ಈ ಪ್ರೀತಿ ಹುಟ್ಟಿದ ಘಳಿಗೆ ಯಾವುದು ಎನ್ನುವ ಹೊಸ ರೀತಿಯ ತಾತ್ವಿಕತೆಯೊಂದು ನನ್ನಲ್ಲಿ ಮೊಳಕೆ ಹೊಡೆಯಲು ಕಾರಣವಾಗಿ ಬಿಟ್ಟ. ಇದಾದ ನಂತರವಷ್ಟೇ ನಾನು ರಾಜು ಅನಂತಸ್ವಾಮಿ ಬಗ್ಗೆ ವಿವರಗಳು ಸಿಕ್ಕಿದ್ದು, ರಾಜು ಹಾಡಿದ ಭಾವಗೀತೆಗಳನ್ನು ಕೇಳಿದ್ದು.
ರಾಜು ಅನಂತಸ್ವಾಮಿ ಇನ್ನಿಲ್ಲ ಎನ್ನುವುದು ನನಗೆ ಯಾಕಿಷ್ಟು ತಳಮಳಕ್ಕೆ ಕಾರಣವಾಗುತ್ತಿದೆ? ಈ ಘಟನೆಯ ನಂತರ ನಾನು ಎಂದೂ ರಾಜುನನ್ನು ಭೇಟಿ ಮಾಡಿಲ್ಲ, ನಮ್ಮಿಬ್ಬರ ನಡುವೆ ದೊಡ್ಡ ಕಂದಕವೇ ಇದೆ. ನಿಜಕ್ಕೂ ಕಂದಕ ಇತ್ತೇ? ಪ್ರೀತಿ ನೀನು ಅರಳುವುದು ಎಲ್ಲಿಂದ? ಎಂದೇ ರಾಜು ಅನಂತಸ್ವಾಮಿ ನನ್ನ ಕವಿತೆಯನ್ನು ಹಾಡಿಯೇ ಕೇಳುತ್ತಿದ್ದಾನೆ? ನಾನು ಏನು ಹೇಳಲಿ? ತಕ್ಷಣ ಒಬ್ಬರಿಗೆ ಮೇಸೇಜ್ ಹಾಕಿದೆ- ‘ಒಂದು ಪ್ರೀತಿ ಸತ್ತು ಹೊಯಿತು’.
ಪರುಶುರಾಮ್ ಕಲಾಲ್
January 18, 2009 4:07 AM
ಶನಿವಾರ, ಜನವರಿ 17, 2009
ವಚನಾಚಲ
ಗಜಲ್ ಗಳಿಗೆ ಹೆಸರಾದ ಇಟಗಿ ಈರಣ್ಣನವರು ರಚಿಸಿದ ಅಧುನಿಕ ವಚನ.ಇನ್ನು ಕೆಲವೇ ದಿನಗಳಲ್ಲಿ ಇವರ ವಚನಗಳ ಸ೦ಕಲನ ‘ವಚನಾಚಲ‘ ಪ್ರಕಟವಾಗಲಿದೆ,ಅದಕ್ಕು ಮು೦ಚೆ ಅದರ ಒ೦ದು ಇಷ್ಟದ ಕವಿತೆ ಇಲ್ಲಿದೆ.
ಸಾಯಲೀಬೀಜವೆ೦ದು ಮಣ್ಣಲ್ಲಿ ಹೂಳಿದರು!
ಉಸಿರುಗಟ್ಟಲಿ ಎ೦ದು ಮೇಲೆ ನೀರು ಬಿಟ್ಟರು!
ನಲುಗಿಸಿ ಬಿಡುವೆನೆ೦ದು ಬಿಸಿಲು ಬಿದ್ದಿತು!
ಮಲಗಿಸಿ ಬಿಡುವೆನೆ೦ದು ಗಾಳಿ ಸುಳಿಯಿತು!
ಆಚೆ ಈಚೆ ತಿರುಗದ೦ತೆ
ನೆಲವೇ ಕಾಲನು ಕಟ್ಟಿಹಾಕಿತು!
ಏನೆ೦ಬೆನಚ್ಚರಿಯ?
ಬೀಜ ಬೆಳೆಯಿತು,ಮೊಳಕೆಯೊಡೆಯಿತು,
‘ಭೂಜ‘ ವಾಗಿಯೆ ನಿ೦ತಿತು!!
ತನಗಾದ ಅಳಲ ತೋಡಿಕೊಳ್ಳದೆ
ಲೊಕಕ್ಕೆ ನೆಳಲ ನೀಡಿತು!
ಶಾರದಾಸಖ ಈಶಾ ನೀನೆ ಸಾಕ್ಷಿ
ಬೆಳೆವವರಿಗೆಲ್ಲ ತಾನೇ ಅದರ್ಶವಾಯಿತು!!
ಇಟಗಿ ಈರಣ್ಣ.
ಬುಧವಾರ, ಜನವರಿ 14, 2009
ಸೋಮವಾರ, ಜನವರಿ 12, 2009
ಜಾಡಮಾಲಿಯೊಬ್ಬಳ ದಿನಚರಿ
ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ ಅವಳು
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ
-2-
ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ
ದಾರಿಹೋಕರು ಆ ಮರದ ಎಳೆ ನೀರು ಕುಡಿದು ತಂಪಾದಂತೆ
ಅವರು ಬಿಸಾಡಿದ ಖಾಲಿ ತೆಂಗು ಕಸ ಬಳಿಯಲು ಅಡ್ಡಾದಂತೆ
ಏನೆಲ್ಲಾ ಅನ್ನಿಸಿ ಕನಸ ಕಿತ್ತೊಗೆದು
ಪೊರಕೆಗೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಒಂದೊಂದೇ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಆ ತುಟಿಗಳೆಲ್ಲಾ ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ
-3-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನರೆಳುಗಳ
ಮೆಲ್ಲಗೆ ನಿದ್ದೆ ಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರ ವಹಿಸಿ
ಬೇಧವ ಮರೆತು ಕಸದ ತೊಟ್ಟಿಯಲ್ಲಿ
ಒಂದಾದ ಮನುಷ್ಯರ ಛಾಯೆಗಳಿಗೆ ಹೊಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ
-4-
ಈಗ ತಾನೆ ಚಲಿಸಿದ ವಾಹನವೊಂದರ ಟಯರ್ ಗುರುತು
ಹೊಸ ಕಾರಿನದೆಂದು ಗುರುತಿಸಿ ಗುರುತು ಹಿಡಿದು ಎಳೆದಂತೆ
ಕಾರು ಹಿಂಚಲಿಸಿ ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ
ಟಯರಿನ ಚಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ
ಹೆಜ್ಜೆ ಮುಡದ ಸವೆದ ಹಳೆ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ
-5-
ಮೈಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ
ಮುಂಜಾವನ್ನು ಬೀದಿಗೆ ಹರಡುತ್ತಾಳೆ
ಯಾರಿಗೂ ಕಾಣದಂತೆ ಸೀರೆಯ ಸೆರಗಿನಲ್ಲಿ
ಕಟ್ಟಿಕೊಂಡ ವಿಮಾನದ ನೆರಳಲ್ಲಿ ಕೂತು
ಆಕಾಶಕ್ಕೆ ಮುಖ ಮಾಡಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು
-ಅರುಣ್ ಜೋಳದ ಕೂಡ್ಲಿಗಿ
ಶನಿವಾರ, ಜನವರಿ 10, 2009
ತಿರುಗಿ ನಿ೦ತ ಪ್ರಶ್ನೆ
(ನನಗೆ ತು೦ಬ ಇಷ್ಟವಾದ ಕವನ ನಿಮಗಾಗಿ...)
ಅಪ್ಪ ಜನಕ ಕಲಿಸಿದ ಅಕ್ಷರವಿತ್ತು
ಸಾಕವ್ವೆಯರು ಹೇಳಿಕೊಟ್ಟ ಹಾಡ ಮುಟ್ಟಿತ್ತು
ಸುತ್ತಮುತ್ತ ತಾಡಪತ್ರ ಚೆಲ್ಲಿತ್ತು
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?
ಅಶೋಕದ ನೆರಳಿತ್ತು
ನಿನ್ನ ತು೦ಬ ಶೋಕವಿತ್ತು
ಇನ್ನೇನು ಬೇಕಿತ್ತು?
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?
ಅಮೇಲೂ ಬಿಡುವಿತ್ತು
ಲವಕುಶರು ಬೆಳೆದು
ಆಶ್ರಮ ಪ್ರಶಾಂತವಾಗಿತ್ತು
ನಿನ್ನೆದುರು ಹರಿದು ಹೋದ
ಇಡೀ ಜೀವನವಿತ್ತು
ಯಾಕೆ ಸುಮ್ಮನೆ ಕುಳಿತೆ ಸೀತೆ ನೀನು?
ನನ್ನ ಪ್ರಶ್ನೆಗಳಿಗೆಲ್ಲ
ಅವಳ ಭೂಮಿತೂಕದ ಮೌನ.
ಕತ್ತೆತ್ತಿ ನೋಡಿದರೂ
ಅವಳ ಕಣ್ಣಭಾವಗಳು
ಶಬ್ದವಾಗದೇ ನನ್ನ ಕಣ್ಣಗಿಳಿದು
ತಿರುಗಿ ನಿಂತವು ಕೇಳಿದ್ದ ಪ್ರಶ್ನೆಗಳು
-ಡಾ| ವಿಜಯಾ ದಬ್ಬೆ
ಶುಕ್ರವಾರ, ಜನವರಿ 9, 2009
(ಮೈಸೂರಿನ ಗೆಳೆಯ ಎಚ್.ಎನ್.ಈಶಕುಮಾರ್ ತಮ್ಮ ಪುಟ್ಟ ಕವನದಿಂದ ಬ್ಲಾಗಿನ ಎಲ್ಲಾ ಗೆಳೆಯರಿಗೆ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ)
ಹಳೆ ಬೇರಿನ ಸತ್ವವಹುದಲ್ಲವೇ
ಹೊಸ ಚಿಗುರಿನ ನವನೀತ ಚಿಗುರುತನ
ನಳನಳಿಸುವ ಹಸಿರ ಸಿಂಚನದ
ಒಡಲಲಿಲ್ಲವೇ ಭೂತಾಯಿಯ ಗುಣ
ಹಳೆಯ ಅನುಭವದ ನೆನಪ
ಸೊಗಡಿನ ಆಹ್ಲಾದದ ಪಸರಲ್ಲವೇ
ಹೊಸತರ ಅನ್ವೇಷಣೆ
ಹಳತು ಹೊಸತುಗಳೆರಡರ
ಸಮ್ಮಿಲ್ಲನವೇ ನವೋಲ್ಲಾಸದ ಸೊಬಗು...
ಹೊಸ ವರುಷದ ಹೊಸ ಹುಡುಕಾಟಕೆ
ನೂರು ರಹದಾರಿಗಳಿರಲಿ...
ಮನಕೆ ಚೈತನ್ಯವಿರಲಿ
ಸದಾಕಾಲ
ಗುರುವಾರ, ಜನವರಿ 8, 2009
ಗಜಲ್
ನೀ ನೆಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಸವಿ ಮುತ್ತ ನೀಡಿದೆ ಚಿಕ್ಕೆಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಮುಂಜಾವಿನ ಹೊಂಗಿರಣದಿ ತೊಯ್ದು ಗಿಡಗಂಟೆ ಬಳ್ಳಿಗಳೆಲ್ಲ
ಚಿಗುರು ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀನಿರುವುದೇ ಹಾಗೆ
ಸುಳಿವ್ ತಂಗಾಳಿಯಲ್ಲಿ ನೀರವ ಮೌನದಲ್ಲಿ ಪಿಸುಮಾತಿನ ಹೊನಲ
ಹರಿಸಿದೆ ಕೋಗಿಲೆಗಳೆಲ್ಲ ಕೂಜನವ ಮರೆತವು ನೀನಿರುವುದೇ ಹಾಗೆ
ಕುಡಿನೋಟ, ಹುಸಿನಗೆ, ಕಿರುಗೆಜ್ಜೆಯ ನಾದವ ಹೊಮ್ಮಿಸಿ, ಚಿಮ್ಮುತ, ಬಳುಕುತ
ಹಸಿರಲ್ಲೆಲ್ಲ ಸುಳಿದೆ ಚಿಟ್ಟೆಗಳೆಲ್ಲ ಬೆರಗಾದವು ನೀನಿರುವುದೇ ಹಾಗೆ
ಸುಳಿಸುಳಿಯಾಗಿ ಹೆರಳ ಕೆದರಿ ಕೊರಳ ಕೊಂಕಿಸಿ ಓರೆನೋಟವ ಬೀರಿ
ಮುನಿಸು ತೋರಿದೆ ನವಿಲುಗಳೆಲ್ಲ ಹೆಜ್ಜೆ ಮರೆತವು ನೀನಿರುವುದೇ ಹಾಗೆ
ಸಿದ್ಡರಾಮ ಹಿರೇಮಠ,ಕೂಡ್ಲಿಗಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)