ಸೋಮವಾರ, ಮಾರ್ಚ್ 2, 2009
ಕಲಾಲ್ ಕಾಲಂ
ಜೀವಂತ ಪರಂಪರೆಯ ಹಂಪಿಗೆ ಮೈ ತುಂಬಾ ಕಥನಗಳು
ಹಂಪಿ ಎಂದೊಡನೆ ಪೇರಿಸಿಟ್ಟಂತೆ ಕಾಣುವ ಕಲ್ಲುಬಂಡೆಗಳ ಬೆಟ್ಟಗಳು, ಜುಳು ಜುಳು ಹರಿಯುವ ತುಂಗಾಭದ್ರೆ, ಎಲ್ಲಿ ನೋಡಿದರಲ್ಲಿ ಕಾಣುವ ಮಂಟಪಗಳು, ಹಾಳು ಬಿದ್ದ ದೇವಸ್ಥಾನಗಳು, ವಿರೂಪಾಕ್ಷ ಗೋಪುರ, ಕಮಲ್ ಮಹಲ್, ಬಡವಿಲಿಂಗ, ಉಗ್ರ ನರಸಿಂಹ, ಕಲ್ಲಿನ ತೇರು ಹೀಗೆ ಅನೇಕ ಸ್ಮಾರಕಗಳೇ ಕಣ್ಣು ಮುಂದೆ ಬರುತ್ತಿವೆ. ಜೊತೆಗೆ ಮೂಗು, ಮುಖ ಕೆತ್ತಿಸಿಕೊಂಡು ಊನವಾಗಿರುವ ಅಸಂಖ್ಯಾತ ವಿಗ್ರಹಗಳು ಎಲ್ಲಿ ಬೇಕಾದಲ್ಲಿ ಕಾಣಿಸಿಕೊಂಡು ಇಡೀ ಹಂಪಿಯೇ ಒಂದು ಮಹಾಭಾರತದ ಯುದ್ಧಭೂಮಿಯಂತೆ ಕಾಣಿಸುತ್ತದೆ.
ಮೂರ್ತರೂಪದಲ್ಲಿ ನಮ್ಮ ಕಣ್ಣು ಮುಂದೆ ಹಂಪಿ ತನ್ನದೇ ಆದ ಕಥೆಯನ್ನು ನಮಗೆ ಹೇಳಲು ಪ್ರಯತ್ನಿಸುತ್ತದೆ.
ಹಂಪಿಯ ಅಮೂರ್ತತೆಯನ್ನು ಕಣ್ಣಿಗೆ ಕಾಣಲಾರದ ಸತ್ಯಗಳನ್ನು ಹುಡುಕಬೇಕೆಂದು ಪ್ರಯತ್ನಿಸಿದರೆ ನಿಮಗೆ ಅನೇಕ ಮುಖಗಳು ಎದುರಾಗುತ್ತವೆ. ಮೊಟ್ಟಮೊದಲನೆಯದಾಗಿ ಇತಿಹಾಸ ಎಂಬ ಭೂತ ಕಾಲಿಟ್ಟು ಹಂಪಿಯ ಕುರಿತು ತನ್ನದೇ ಮುಖಗಳನ್ನು ಬಯಲಿಗಿಡಲು ಯತ್ನಿಸುತ್ತದೆ.
ಯಾವ ಇತಿಹಾಸ? ಯಾರ ಇತಿಹಾಸ? ಎನ್ನುವುದು ನಾವು ಎಲ್ಲಿ ನಿಂತಿದ್ದೇವೆ ಎನ್ನುವದರ ಮೇಲೆ ಅವಲಂಬಿಸಿರುತ್ತದೆ.
ಹಂಪಿಯ ಇತಿಹಾಸವನ್ನು ಹಿಡಿದಿಡುವ ಕೆಲಸವನ್ನು ಹಾಗೂ ಸ್ಮಾರಕಗಳ ಸಂರಕ್ಷಣೆಯ ಕೆಲಸವನ್ನು ಮೊದಲು ಆರಂಭಿಸಿದವರು ಬ್ರಿಟಿಷ್ ಅಧಿಕಾರಿಗಳು. ಮದ್ರಾಸ್ ಪ್ರೆಸಡೆನ್ಸಿಗೆ ಸೇರಿದ ೨೨ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಸೇರಿದ್ದರಿಂದ ಈ ಕೆಲಸ ನಡೆಯಿತು. ಸರ್ವೋಚ್ಛ ನ್ಯಾಯಾಲಯ ನ್ಯಾಯಧೀಶರಾಗಿದ್ದ ಸರ್ ವಿಲಿಯಂ ಜೊನ್ಸ್ ರಾಯಲ್ ಎಷಿಯಾಟಿಕ್ ಸೊಸೈಟಿ ಸ್ಥಾಪಿಸುವ ಮೂಲಕ ಇಂತಹ ಕೆಲಸಕ್ಕೆ ಚಾಲನೆ ನೀಡಿದರು. ಬಳ್ಳಾರಿ ಕಲೆಕ್ಟರ್ ಆಗಿದ್ದ ರಾಬರ್ಟ್ ಸಿವೆಲ್ ೧೮೭೭ರಲ್ಲಿ ಹಂಪಿಯ ಸಂರಕ್ಷಣೆಗೆ ಮುಂದಾದರು. ಇವರ ನಡೆಸಿದ ಉತ್ಖನನ, ಸಂರಕ್ಷಣೆಯ ಕೆಲಸದಿಂದಾಗಿ ’ಮರೆತು ಹೋದ ಸಾಮ್ರಾಜ್ಯ’ (ಎ ಪರಗೆಟನ್ ಎಂಪೈರ್) ಕೃತಿ ಹೊರಗೆ ಬಂದು, ದೇಶ, ವಿದೇಶಕ್ಕೆ ಹಂಪಿ ಪರಿಚಯವಾಯಿತು. ೧೮೦೦ರಿಂದ ೧೮೦೭ರವರೆಗೆ ಕಲೆಕ್ಟರ್ ಸರ್ ಥಾಮಸ್ ಮನ್ರೋ, ೧೮೨೪ರಿಂದ ೧೮೩೮ರವರೆಗೆ ಕಲೆಕ್ಟರ್ ಆಗಿದ್ದ ಎಫ್.ಡಬ್ಲ್ಯೂ. ರಾಬರ್ಟ್ ಸನ್ ಹಂಪಿಯ ಕಲ್ಲಿನ ತೇರು, ವಿರೂಪಾಕ್ಷ ಮುಖ್ಯ ಗೋಪುರ ಸಂರಕ್ಷಣೆ ಕಾರ್ಯ ಕೈಗೊಂಡು ಹಂಪಿ ಉತ್ಖನನ ಹಾಗೂ ಸಂರಕ್ಷಣೆಗೆ ಅಸ್ತಿಭಾರ ಹಾಕಿದರು. ಹಂಪಿಯಲ್ಲಿ ವಿರೂಪಾಕ್ಷ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ೧೮೮೫ರಲ್ಲಿ ಕಲೆಕ್ಟರ್ ಅನುಮತಿ ನೀಡಿ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಸಹ ಇಲ್ಲಿ ಬಹಳ ಮುಖ್ಯವಾದ ಅಂಶ.
ಬ್ರಿಟಿಷರು ನಮ್ಮನ್ನಾಳುವವರು ಆಗಿದ್ದರಿಂದ ಸಾಮಾನ್ಯವಾಗಿ ತಮ್ಮ ಆಡಳಿತವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿ, ಅವರಿಗಿಂತ ಮೊದಲ ಆಳಿದ ಮುಸ್ಲಿಂ ದೊರೆಗಳ ಆಡಳಿತವನ್ನು ಕರಾಳ ಎಂದೇ ಸಾರಬೇಕಿತ್ತು. ಇಂತಹ ಕೆಲಸವನ್ನೇ ಇತಿಹಾಸ ಎನ್ನುವ ಮೂಲಕ ರಾಬರ್ಟ್ ಸಿವೆಲ್ ಕಟ್ಟಿಕೊಟ್ಟರು.
ಇದಾದ ನಂತರವೇ ನಮ್ಮ ಇತಿಹಾಸಕಾರರು ಹಂಪಿಯತ್ತ ಕಣ್ಣು ಹಾಯಿಸಿದರು. ಇವರು ಸಹ ಹಂಪಿಯ ವೈಭವವನ್ನು ಕಟ್ಟಿಕೊಡುವ ಮೂಲಕ ಹಂಪಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಬಂಧಿಸಿಬಿಟ್ಟರು.
ಹಾಗೇ ನೋಡಿದರೆ ಶಿಲಾಶಾಸನಗಳಲ್ಲಿ ವಿಜಯನಗರ ಸಾಮ್ರಾಜ್ಯದ ಉಲ್ಲೇಖ ಎಲ್ಲಿಯೂ ಬರುವುದಿಲ್ಲ. ಕರ್ನಾಟಕ ರಾಜ್ಯ ಎಂದೇ ಶಿಲಾಶಾಸನಗಳಲ್ಲಿ ಗುರುತಿಸಲಾಗಿದೆ. ವಿಜಯ ವಿರೂಪಾಕ್ಷ ಪಟ್ಟಣವಿತ್ತು ಎಂಬುದನ್ನೇ ಅಪಭ್ರಂಶಗೊಳಿಸಿ ಕಲ್ಪಿತ ವಿಜಯನಗರ ಸಾಮ್ರಾಜ್ಯ ಸೃಷ್ಠಿಸಲಾಯಿತು. ಶಾಸನಗಳ ಆಧಾರದಲ್ಲಿ ಹಂಪಿಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ನಡೆಸಲಾಯಿತು. ಜೊತೆಯಲ್ಲಿ ವಿದೇಶಿ ಪ್ರವಾಸಿಗರಾದ ಡೊಮಿಂಗ್ ಪಯಾಸ್, ನ್ಯೂನಿಚ್, ರಾಯಭಾರಿ ಅಬ್ದುಲ್ ರಜಾಕ್ ಬರಹಗಳ ಮೂಲಕ ಸಾಮ್ರಾಜ್ಯಕ್ಕೆ ವೈಭವ ತಂದುಕೊಡಲಾಯಿತು. ಈ ನಡುವೆ ಆ ಕಾಲದ ಲಿಖಿತ ಸಾಹಿತ್ಯದಿಂದಲೂ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳ ವಿಶ್ಲೇಷಣೆ ನಡೆಸಲಾಯಿತು.
ಹಾಗೇ ನೋಡಿದರೆ ಹಂಪಿಗೆ ಅದಿಮ ಕಾಲದಿಂದಲೂ ಇತಿಹಾಸವಿದೆ. ಇಲ್ಲಿಯ ಕಲ್ಲುಬಂಡೆಗಳ ಮೇಲೆ ಬೇಟೆಗಾರಿಕೆಯ ಅದಿಮ ಕಲೆಯೂ ಇದೆ. ಪ್ರಾಚೀನ ಮಾನವನ ಅಸ್ತಿತ್ವವನ್ನು ಶಾಸ್ತ್ರಜ್ಞರು ಗುರುತಿಸಿದ್ದಾರೆ. ಕಾಕತೀಯರು, ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಅನೇಕ ಕುರುಹುಗಳು ಇಲ್ಲಿವೆ.
ಬೌದ್ಧ ಧರ್ಮ ಒಂದು ಕಾಲದಲ್ಲಿ ಇಲ್ಲಿ ಪ್ರಬಲವಾಗಿತ್ತು. ಬಿಕ್ಷುಗಳ ಪ್ರಮುಖ ಕೇಂದ್ರವಾಗಿತ್ತು ಎನ್ನುವುದನ್ನು ಕೇಂದ್ರ ಪುರಾತತ್ವ ಇಲಾಖೆ ನಡೆಸಿ ಉತ್ಖನನದಲ್ಲಿ ಸಿಕ್ಕ ಬ್ರಹ್ಮಲಿಪಿಯ ಶಿಲಾಶಾಸನದ ಪ್ರಕಾರ. ಕ್ರಿ.ಶ. ೧ ಅಥವಾ ೨ನೇ ಶತಮಾನದ ಇತಿಹಾಸವನ್ನು ಇದು ಹೇಳುತ್ತಿದೆ.
ಜೈನ, ಶೈವ ಪಂಥ, ಕಾಳಮುಖ, ಸಿದ್ಧ, ಅವಧೂತ, ಆರೂಢ, ಸೂಫಿ, ಪಾಶುಪತ ಮುಂತಾದ ವಿವಿಧ ಪಂಥಗಳು ಇಲ್ಲಿದ್ದವು. ಇವುಗಳ ನಡುವೆ ತಿಕ್ಕಾಟ ಹಾಗೂ ಕೊಡುಕೊಳ್ಳುವಿಕೆ ಎರಡೂ ನಡೆದ ಇತಿಹಾಸವೂ ಸಹ ಇಲ್ಲಿದೆ. ಇಂತಹ ಅವೈದಿಕ ಪಂಥಗಳ ಸಂಗಮ ಸ್ಥಳವೂ ಸಹ ಹಂಪಿಯಾಗಿತ್ತು.
ಈಗಲೂ ಹಂಪಿ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಮೊಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಸೇರಿದ ಅಲೆಮಾರಿಗಳು, ಅರೆ ಅಲೆಮಾರಿಗಳು ಬಂದು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.
ಹೊಸಪೇಟೆ, ಕಮಲಾಪುರದ ನಾಯಕ ಜನಾಂಗದವರು ತೇರು ಎಳೆಯುವ ಹಕ್ಕು ಈಗಲೂ ಉಳಿಸಿಕೊಂಡಿದ್ದಾರೆ. ಹಂಪಿ ಜಾತ್ರೆ ಅತ್ತ ಎಳೆಯುತ್ತಿದ್ದಂತೆ ಇತ್ತ ಬೇಟೆ ನಡೆಸಿ ಮಾಂಸದೂಟ ತಯ್ಯಾರಾಗುತ್ತದೆ.
ಹಂಪಿಯನ್ನು ಜನಪದರು ಈ ಮೂಲಕ ಜೀವಂತಗೊಳಿಸಿ, ಇದೊಂದು ಜೀವಂತ ಸ್ಮಾರಕಗಳ ಸ್ಥಳವನ್ನಾಗಿಸಿದ್ದಾರೆ.
ಕೆಲವರಿಗೆ ಸತ್ತ ಸ್ಮಾರಕಗಳು ಮಾತ್ರ ಕಾಣಿಸಿ ಅದನ್ನೊಂದು ’ಪ್ರಾಚೀನ ಸಂಗ್ರಹಾಲಯ’ ಎನಿಸಿದರೆ, ಇನ್ನೂ ಕೆಲವರಿಗೆ ಹಂಪಿಯು ಗತ ಇತಿಹಾಸದ ಸ್ಮಾರಕಗಳಾಗಿ ವ್ಯಥೆಗೆ ಕಾರಣವಾಗಿದ್ದರೆ, ಸಾಮಾನ್ಯ ಜನರಿಗೆ ಮಾತ್ರ ಹಂಪಿ ಈಗಲೂ ಜೀವಂತ ಸ್ಮಾರಕದ ಕೇಂದ್ರವೇ ಆಗಿದೆ.
ಜನಪದರು ಇಲ್ಲಿನ ಸ್ಮಾರಕಗಳ ಬಗ್ಗೆ, ಹಂಪಿಯ ಬಗ್ಗೆ ತಮ್ಮದೇ ಆದ ಕಥಾನಕವನ್ನು ಕಟ್ಟಿಕೊಡುತ್ತಾರೆ. ಹಂಪಮ್ಮ, ಪಂಪಾಪತಿ ( ಪಂಪಾಂಬಿಕೆ, ವಿರೂಪಾಕ್ಷ ) ವಿವಾಹ ಪ್ರಸಂಗಗಳು, ಜಾತ್ರೆ ಹಾಗೂ ಫಲಪೂಜೆಯಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಅವರ ಕ್ಯಾಲೆಂಡರ್‌ಗಳಲ್ಲಿ ಹಂಪಿ ಸೇರಿ ಹೋಗಿರುವ ಕ್ರಮ, ಶ್ರಾವಣಮಾಸದಲ್ಲಿ ಹಂಪಿಗೆ ಕಾಲ್ನಡಿಗೆಯಿಂದ ಬರುವ ಭಜನಾತಂಡಗಳು ಹಂಪಿಯಲ್ಲಿ ರಾತ್ರಿಯೂದ್ದಕ್ಕೂ ಭಜನೆ ನಡೆಸುವ ಮೂಲಕ ತಮ್ಮ ಶ್ರದ್ಧೆ ಬಲಪಡೆಸಿಕೊಳ್ಳುವುದು ಇತ್ಯಾದಿಗಳ ಕಡೆ ಗಮನ ಹರಿಸಬೇಕಿದೆ. ಇಲ್ಲಿಯ ಜನಪದ ಕಥಾನಕಗಳು ಲಿಖಿತ ಸಾಹಿತ್ಯಕ್ಕಿಂತ ಬೇರೆಯದನ್ನೇ ಹೇಳುತ್ತಿವೆ.
ರಕ್ಕಸತಂಗಡಿ ಯುದ್ಧವೇ ವಿಜಯನಗರ ಪತನಕ್ಕೆ ಕಾರಣವಾಯಿತು ಎಂದು ಲಿಖಿತ ಸಾಹಿತ್ಯ ಹೇಳಿದರೆ, ನೈತಿಕತೆ ಹಾಳಾಗುವ ಮೂಲಕ ಪತನವಾಯಿತು ಎಂದು ಭಿನ್ನವಾಗಿ ರೂಪಕದ ಕಥೆಯ ಮೂಲಕ ಜನಪದರು ಕಥೆ ಕಟ್ಟಿಕೊಡುತ್ತಾರೆ.
ನಾವು ನೋಡುವ ಹಂಪಿಯ ಸ್ಮಾರಕಗಳನ್ನು ಜನಪದರು ಬೇರೊಂದು ಬಗೆಯಲ್ಲಿ ನೋಡುತ್ತಾರೆ. ರಾಮ, ಲಕ್ಷ್ಮಣ, ಸೀತೆ ನಡೆದಾಡಿದ ಕಥೆಯೊಂದರ ಮೂಲಕ ಹಂಪಿಯನ್ನು ಪುರಾಣವಾಗಿಸುತ್ತಾರೆ. ಕಮಲ್ ಮಹಲ್‌ಗೆ ಚಿತ್ರಾಂಗಿ ಮಹಲ್ ಎನ್ನುತ್ತಾರೆ. ಮತಂಗ ಪರ್ವತವನ್ನು ಮತಂಗಿ ಪರ್ವತ ಎನ್ನುತ್ತಾರೆ. ಮಾದಿಗರ ಕುಲದೇವತೆ ಇಲ್ಲಿ ನೆಲೆಸಿದ್ದಳು ಎನ್ನುವ ಪರಿಶಿಷ್ಠರು ಈಗಲೂ ಮತಂಗ ಪರ್ವತದ ಬಳಿ ಇರುವ ಹತ್ತುಕೈಯಮ್ಮನಿಗೆ ನಡೆದುಕೊಳ್ಳುತ್ತಾರೆ. ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಎದುರುಗಡೆ ಇರುವ (ಕಮಲ್ ಮಹಲ್ ಬಳಿ) ಪಟ್ಟಣದ ಯಲ್ಲಮ್ಮನಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ, ಬೇಟೆ ಮಾಡುತ್ತಾರೆ.
ವಿಜಯನಗರದರಸರು ಈ ದೇವತೆಗೆ ಪೂಜೆ ಸಲ್ಲಿಯೇ, ಬೇಟೆಯನ್ನು ಅರ್ಪಿಸಿಯೇ ಯುದ್ಧಕ್ಕೆ ಹೋಗುತ್ತಿದ್ದರೆಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.
ಜನಪದರು ಹೇಳುವ ಮತ್ತೊಂದು ಕಥೆ ಬಹಳ ಮುಖ್ಯವಾಗಿದೆ. ಕೋದಂಡರಾಮ ದೇವಸ್ಥಾನದಿಂದ ವಾಲಿ ಗವಿಯ ಮೂಲಕ ವಿಠ್ಠಲ ದೇವಸ್ಥಾನಕ್ಕೆ ಕಾಲು ಹಾದಿಯೊಂದರಲ್ಲಿ ಸಾಗಿದರೆ ಏಡಿಗುಡ್ಡವೆಂಬ ಜಾಗ ಸಿಗುತ್ತದೆ. ಇಲ್ಲಿ ಸಣ್ಣ ಕಲ್ಲಿನ ಪೊಟರೆ ಇದೆ. ಬೆಂಕಿಯ ಮಳೆ ಬಂದು ಭೂಲೋಕವೆಲ್ಲಾ ಭಸ್ಮವಾದಾಗ ಶಿವ-ಪಾರ್ವತಿ ನಂದಿಯ ಮೇಲೆ ಆಕಾಶರೂಢರಾಗಿ ಹೋಗುತ್ತಿರುವಾಗ ಭೂಲೋಕದಲ್ಲಿ ನರಮನುಷ್ಯರೇ ಇಲ್ಲವಲ್ಲ. ಹೀಗಾದರೆ ನಮ್ಮನ್ನು ಪೂಜಿಸುವವರು ಯಾರು ಎಂದು ಚರ್ಚಿಸುತ್ತಾರೆ. ಆಗ ಪಾರ್ವತಿ ಈ ಏಡಿಗುಡ್ಡವನ್ನು ನೋಡಿ ಅಲ್ಲಿ ಹೊಗೆ ಬರುತ್ತಿದೆ ಯಾರೋ ಇದ್ದಾರೆ ಎಂದು ಹೇಳುತ್ತಾಳೆ. ಬಂದು ನೋಡಲಾಗಿ ಅಲ್ಲಿ ಇಬ್ಬರು ಅಣ್ಣ-ತಂಗಿ ಇರುತ್ತಾರೆ. ಇನ್ನೂ ಮುಂದೆ ನಿಮ್ಮಿಂದ ಈ ಲೋಕ ಬೆಳೆಯಬೇಕು ಎನ್ನುತ್ತಾರೆ. ನಾವಿಬ್ಬರು ಅಣ್ಣ ತಂಗಿ ಇದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಅವರಿಗೆ ಶಿವ ಮರೆವು ಉಂಟು ಮಾಡುತ್ತಾನೆ. ನಂತರ ಕೇಳುತ್ತಾನೆ ನೀವು ಯಾರು ಎಂದು. ಅವರು ಹೇಳುತ್ತಾರೆ. ನಾವು ಗಂಡ-ಹೆಂಡತಿ ಎಂದು. ಅಲ್ಲಿಂದ ಲೋಕ ಪುನಃ ಪ್ರಾರಂಭವಾಯಿತು ಎನ್ನುತ್ತಾರೆ. ಈ ಕಥೆಗೆ ಪೂರಕವೆನ್ನುವಂತೆ ಇಲ್ಲೊಂದು ಕಲ್ಲಿನಲ್ಲಿ ಕೆತ್ತಿರುವ ಉಬ್ಬು ಶಿಲ್ಪವಿದೆ. ಒಂದು ಪಾದ ಮುಂದೆ, ಇನ್ನೊಂದು ಪಾದ ಹಿಂದೆ ಒಂದರ ಪಕ್ಕದಲ್ಲಿ ಮತ್ತೊಂದು ಇವೆ. ಇವುಗಳನ್ನು ವೃತ್ತಾಕಾರವಾಗಿ ಹಾವು ಸುತ್ತುವರೆದಿದೆ. ಹಾವು ತನ್ನ ಬಾಲವನ್ನು ತಾನೇ ನುಂಗುತ್ತಿದೆ.
ನಾವು ಮುಂದಕ್ಕೆ ಹೆಜ್ಜೆ ಇಡುತ್ತೇವೆ. ಅದೇ ಸಂದರ್ಭದಲ್ಲಿ ಹಿಂದಕ್ಕೆ ಹೆಜ್ಜೆಯನ್ನು ಇಟ್ಟಿರುತ್ತೇವೆ. ಹಂಪಿಯಲ್ಲಿ ನಡೆಯುವುದೆಂದರೆ ಇದೇ ಅಲ್ಲವೇ? ಹಂಪಿಯ ಪ್ರತಿಕಲ್ಲುಗಳಿಗೂ ಒಂದು ಕಥೆ ಇದೆ. ಇತಿಹಾಸವಿದೆ. ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಕಟ್ಟುವ ನಾವು ಇಂತಹ ಅನೇಕ ಕಥಾನಕಗಳಿಗೆ ಮುಖಾಮುಖಿಯಾಗಬೇಕಿದೆ. ಹಂಪಿಯ ಜೀವಂತ ಪಾರಂಪರಿಕತೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ.
- ಪರಶುರಾಮ ಕಲಾಲ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
Thank you for the informative article.
ಕಾಮೆಂಟ್ ಪೋಸ್ಟ್ ಮಾಡಿ