ಗುರುವಾರ, ಫೆಬ್ರವರಿ 19, 2009

ಕವಿ ಕಾಲಂ
(ರಾಯಚೂರಿನ ಆತ್ಮೀಯ ಸ್ನೇಹಿತ ಶಿವರಾಜ್ ಬೆಟ್ಟದೂರು ಇವರ ಮಯೂರದಲ್ಲಿ ಪ್ರಕಟವಾದ ಒಂದು ಚಂದದ ಕವಿತೆ)

ಈ ಅಪ್ಪ ಈ ಅಮ್ಮ

ಈ ಅಮ್ಮ
ನನ್ನ ಹಡೆದು
ಸಾವ ಅಂಚಲ್ಲಿ ಕೊಂಚ ನಿಂತು
ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು

ನಮ್ಮಮ್ಮ
ಮಲ್ಲಿಗೆ ಮುಖದ
ಅದನೆ೦ದೂ ಮುಡಿಯದ ಓನಾಮ
ಓದಲು ಆಕೆಗೆ ಅಕ್ಷರ ಬೇಡ
ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು
ಮಾಡಲು ಆಕೆಗೆ ನೂರೆಂಟು ಕೆಲಸ
ಆಳು ಕಾಳು ಎಮ್ಮೆ ಮನೆ ಮಕ್ಕಳು

ಚೀರುವ ಮಗುವಿನ ಕುಂಡೆ ತೊಳೆದು
ಅದೇ ಕೈಯಲಿ ರೊಟ್ಟಿಯ ಬಡಿವಳು
ಒಬ್ಬೆಯ ಮೇಲೊಬ್ಬೆ
ಮೌನದ ತುತ್ತಿಗೆ ಯಾವ ಲೆಕ್ಕ?

ಅಮ್ಮನ ಮೇಲೆ ಹಾಡು ಕಟ್ಟಿ
ಕತೆ ಹೇಳಿವೆ ಪದಗಳು ಒಂದಿಲ್ಲೊಂದು

ಅಮ್ಮ ಮಗುವಿನ ತಾಯಿಯಂತೆ
ತಂದೆಗೆ ಮಡದಿಯೆಂತೆಲ್ಲ ಇದ್ದರೆ
ಈ ಜನ
ಅಮ್ಮನನ್ನು ನೆನಪು ಮಾಡುತ್ತಿರಲಿಲ್ಲ

ಅಪ್ಪನ ಮದುವೆಯಾದ ಅವಳ
ಗೊತ್ತೇ ಆಗದಂತೆ
ತಪ್ಪು ಮಾಡಿದ ತಪ್ಪಿಗೆ
ಅಮ್ಮನೂ ಕಾರಣವಿರಬೇಕು
ನಾನಿರುತ್ತಿರಲಿಲ್ಲ

ಹಾಲು ಹೈನ ಮಾಡುವ ಅಮ್ಮ
ಅಪ್ಪನನ್ನು ಹಾಲಲ್ಲಿ ಅದ್ದಿ
ಮೈ ತೊಳೆದಳು

ಅಪ್ಪನೂ ಅಷ್ಟೆ; ಪ್ರೀತಿ ಉಣಬಡಿಸಿದ
ಅನ್ಯೋನ್ಯವಾಗಿರುವಾಗಲೆ
ಯಾಕೋ ಏನೋ ಚೀರುವಳು ಅಮ್ಮ
ಒಮ್ಮೊಮ್ಮೆ ರಂಪ, ಹಲವು ಸಲ ಅನುಕಂಪ

ಇಲ್ಲ ಅಂದು ಕೇಳಲಿಲ್ಲ, ಇದೆ ಎಂದೂ ಅನ್ನಲಿಲ್ಲ
ಊರ ಉಸಾಬರಿ ಮಾಡಲಿಲ್ಲ; ಅಗಸೆ ದಾಟಲಿಲ್ಲ
ಯಾರ ಮಣ್ಣಿಗೂ ಹೋಗುವದು ಬಿಡಲಿಲ್ಲ
ಕಚ್ಚೆ ಏರಿಸಿ ಗಂಡ್ರಾಮಿಯಾಗಿ ದುಡಿದಳು
ಗಂಡಸು ಎತ್ತದಷ್ಟು ಮೇವು ಹೊರೆ ಹೊತ್ತಳು
ಕಂದ ಹಾಕಿದ ಎಮ್ಮೆಗೆ ಮುಖ ಗಂಟಿಕ್ಕಿದಳು
ಬೇಸಿಗೆಯಲ್ಲಿ ಖುಲ್ಲಾ ಹೊಡೆದು ಊರೂರು
ಅಲೆದು
ಮುಸಿಮುಸಿ ಅತ್ತಳು;ಎಲ್ಲಾ ಎಮ್ಮೆಗೆ
ಗಾಂಧಿ ಮನೆತನದ ಹೆಸರೇ ಇಟ್ಟಳು

ಅಪ್ಪ ನಿಜವಾಗಲೂ ಅಮ್ಮನನ್ನು
ತುಂಬಾ ಪ್ರೀತಿಸುವವ
ಇದು ಹೀಗೆಂದು ಒಂದು
ಮುಂಜಾವು ನನಗೆ ಗೊತ್ತಾಯಿತು
ಅಮ್ಮನೇನೂ ಕಡಿಮೆ ಇರಲಿಲ್ಲ!

ಅವರ ರಾತ್ರಿಗಳು ಮೌನ ರಾಗಗಳಾಗಿ
ಬೆಳಿಗ್ಗೆ ನನಗೆ ಅಪ್ಪನಿಗೆ
ಉಣಬಡಿಸುವಾಗಲೆ ಗೊತ್ತಾಗುತ್ತಿತ್ತು

ಅಪ್ಪನ ಮೈಸೂರು ಸ್ಯಾಂಡಲ್ಲು
ಅಮ್ಮನ ಬರಿ ಮೈ ಸ್ನಾನ
ನನ್ನಲ್ಲಿ ಗಾಢವಾದ ಮೌನ, ಅಕ್ಕರೆ,ಸಂಶಯ

ಈ ಅಪ್ಪ ಈ ಅಮ್ಮ
ಎಲ್ಲಿ ಹೋದರು
ಗೊತ್ತಾಗುತ್ತಿಲ್ಲ.

-ಶಿವರಾಜ ಬೆಟ್ಟದೂರು, ರಾಯಚೂರು

3 ಕಾಮೆಂಟ್‌ಗಳು:

kaligananath gudadur ಹೇಳಿದರು...

ಶಿವರಾಜ ಬೆಟ್ಟದೂರು,
ಗೆಳೆಯ, ಅದೆಷ್ಟು ಅಪ್ಪ, ಅಮ್ಮನವರನ್ನು ಚೆಂದಾಗಿ ಹಿಡಿದಿಟ್ಟಿದ್ದಿಯಾ? ಎಲ್ಲರೂ ಬರೀ ಲಂಕೇಶರ 'ಅವ್ವ' ಕವನದ ಬಗ್ಗೆ ಮಾತನಾಡುತ್ತಾರದರೂ, ಅವರಿಗಿಂತಲೂ ನಮ್ಮ ಭಾಗದ ಅವ್ವ ಆ ಕವನಕ್ಕಿಂತಲೂ ಉತ್ತಮವಾಗಿ ಮೂಡಿಬಂದಿದ್ದಾಳೆ. ಮತ್ತೊಮ್ಮೆ ಓದಿ, ಹಡೆದವರನ್ನು ಮತ್ತಷ್ಟು ನಮ್ಮ ಕಣ್ಣಂಚುಗಳಲ್ಲಿ ತಂದ 'ನಾವು ನಮ್ಮಲ್ಲಿ' ಬಳಗಕ್ಕೆ ಧನ್ಯವಾದಗಳು.
-ಕಲಿಗಣನಾಥ ಗುಡದೂರು, ಸಿಂಧನೂರು

siddu devaramani ಹೇಳಿದರು...

ಮೌನದ ತುತ್ತಿಗೆ ಯಾವ ಲೆಕ್ಕ ? ಉಹು೦, ಲೆಕ್ಕ ಇಡಲು ಯಾರ ಕೈಲೂ ಆಗಿಲ್ಲ..
ಅಲ್ಲಲ್ಲಿ ಓದುವ ಸಾಲುಗಳು ಮಬ್ಬಾದವು.
ಬರೆದ ಬೆಟ್ಟದೂರು ಮತ್ತು ನೀಡಿದ ನಿರು ಗೆ ದೊಡ್ಡ ಮಟ್ಟದ ಧನ್ಯವಾದಗಳು ಸಲ್ಲುತ್ತವೆ ..

ಗೌತಮ್ ಹೆಗಡೆ ಹೇಳಿದರು...

lankesha avara ammana kuritu ondu kavana yavagalo oadida nenaou,e kavana oaduvaga avella nenapayitu.chendada kavana bloginalli haakiddakke nimage dhanyavaadagalu:)