ಶನಿವಾರ, ಫೆಬ್ರವರಿ 14, 2009

ಕಲಾಲ್ ಕಾಲ೦







ವಾಲಂಟೈನ್ಸ್ ಡೇ ಎಂಬ ರಾಮಾಯಣ



ಮಾಯದ ಜಿಂಕೆಯ ಬೆನ್ನತ್ತಿ ಹೋದ ರಾಮ ಸೀತೆಯನ್ನು ಕಳೆದು ಕೊಂಡು ಬಿಟ್ಟ. ಅತ್ತ ಜಿಂಕೆಯೂ ಇಲ್ಲ, ಇತ್ತ ಸೀತೆಯೂ ಇಲ್ಲ. ಸೀತೆಗೆ ಈ ಮಾಯದ ಜಿಂಕೆ ಕಾಣಿಸಿಕೊಂಡು ಪ್ರಲೋಭ ಒಡ್ಡಿರುವ ಬಗ್ಗೆ ರಾಮನಿಗೆ ಅತ್ಯಂತ ಖೇದವಾಗಿತ್ತು.
ಸೀತೆ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿದ್ದರಿಂದ ಅವಳು ಲಂಕಾ ಪಟ್ಟಣದಲ್ಲಿ ರಾವಣನ ಸೆರೆಯಲ್ಲಿದ್ದಾಳೆ ಎಂದು ರಾಮ ಗೊತ್ತು ಮಾಡಿಕೊಂಡ.
ಹೊಸದಾಗಿ ಶಿಷ್ಯನಾಗಿದ್ದ ಹನುಮನಿಗೆ ಸೀತೆಯ ಮಾಹಿತಿ ತರಲು ಕಳಿಸಿಕೊಟ್ಟು ಕಾಯುತ್ತಾ ಕುಳಿತ.
ವಾಯುಪುತ್ರ ಹನುಮ ಆಕಾಶ ಮಾರ್ಗದಲ್ಲಿ ಸಂಚರಿಸುವಾಗ ಆತನಿಗೆ ದಾರಿಯೂದ್ದಕ್ಕೂ ಮಿಸ್ ಆದ ಎಸ್.ಎಂ.ಎಸ್.ಗಳು, ವಿವಿಧ ಚಾನೆಲ್‌ಗಳ ಅಂತರಾತ್ಮಗಳು, ದಾರಿ ತಪ್ಪಿಸಿಕೊಂಡ ಈಮೇಲ್‌ಗಳು ಢಿಕ್ಕಿ ಹೊಡೆದು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಕರೆದುಕೊಂಡು ಹೋದವು. ತಕ್ಷಣವೇ ನಮ್ಮ ಹನುಮ ಮಿಸ್ಟರ್ ಹನುಮಂತ್ ಆಗಿ ಬಿಟ್ಟ. ಐಟಿ, ಬಿಟಿ ಲೋಕದಲ್ಲಿ ಹರಡಿ ರಾಮ-ಸೀತೆ, ರಾವಣನ ಲೋಕವೆಲ್ಲಾ ಸಿಲಿಕಾನ್ ಸಿಟಿಯಾಗಿ ಬಿಟ್ಟಿತು.
ಅಂತೂ ಕೊನೆಗೆ ಸೀತೆ, ರಾಮ ಇಬ್ಬರು ಸಂಧಿಸುವಲ್ಲಿ ಮಿಸ್ಟರ್ ಹನುಮಂತ ಯಶಸ್ವಿಯಾಗಿ ಬಿಟ್ಟ.
ಅದೊಂದು ದಿನ ಸೀತೆಯೊಂದಿಗೆ ಮಿಸ್ಟರ್ ಹನುಮಂತ್ ಬ್ರಿಗೇಡ್ ರಸ್ತೆಯಲ್ಲಿ ರಾಮನ ದಾರಿ ಕಾಯುತ್ತಾ ನಿಂತರು.
ಈ ನಡುವೆ ರಾಮನಿಗೆ ಎಲ್ಲಾ ವರ್ತಮಾನ ಈ ಮೇಲ್ ಮೂಲಕ ಗೊತ್ತಾಗಿ, ಎಸ್.ಎಂ.ಎಸ್.ದಾರಿ ಕಾಯುತ್ತಾ ರಿಲ್ಯಾಕ್ಸ್ ಆಗಿ ಪಬ್‌ಗೆ ನುಗ್ಗಿ ಒಂಚೂರು ಬಂಗಾರದ ದ್ರವದಿಂದ ನಾಲಿಗೆ ತೇವ ಮಾಡಿಕೊಂಡ. ಪಬ್‌ನಲ್ಲಿ ಹುಡುಗ-ಹುಡುಗಿಯರು ಡ್ಯಾನ್ಸ್ ಮಾಡೋವುದನ್ನು ನೋಡಿ, ತಾನು ಇಂತಹ ಪಬ್ ಒಂದರಲ್ಲಿಯೇ ಸೀತೆಯನ್ನು ಭೇಟಿಯಾಗಿದ್ದು, ಭೇಟಿ ನಂತರ ಪ್ರೀತಿಗೆ ಹೊರಳಿದ್ದು, ಅವಳು ತನ್ನ ಕಷ್ಟವನ್ನು, ಇವನು ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ಇಬ್ಬರೂ ಬಾಳು ಹಂಚಿಕೊಳ್ಳಲು ನಿರ್ಧರಿಸಿ ಮದುವೆಯಾಗಿದ್ದು. ಎಲ್ಲವೂ ಕನ್ನಡ ಸಿರಿಯಲ್‌ಗಳಂತೆ ನೆನಪಾದವು. ಅದೊಂದು ರಾಮಾಯಣವೇ? ಈ ಬಗ್ಗೆ ಜೋಗಿ, ವಸುಧೇಂದ್ರ, ಚೇತನಾ ಮುಂತಾದವರಿಗೆ ಕಥೆ ಬರೆಯಲು ಬಿಟ್ಟು ಬಿಡೋಣ. ನಮಗೇಕೆ ಈ ಉಸಾಬರಿ. ನಮ್ಮ ಕಥಾ ನಾಯಕ ರಾಮ ಪಬ್‌ನಲ್ಲಿ ಮೂರು ಪೆಗ್ ಹಾಕಿದಾಗ ಅಮೇರಿಕಾ ಎಂಬುದೆ ಈ ಮಾಯಾ ಜಿಂಕೆ ಎಂಬ ರೂಪಕದ ಭಾಷೆಯಲ್ಲಿ ಏನೋನು ಬುದ್ಧಿಜೀವಿ ಕವಿಯಂತೆ ತನಗೆ ತಾನೇ ಮಾತನಾಡಿಕೊಂಡ. ಅಷ್ಟರಲ್ಲಿ ಬೀಪ್ ಶಬ್ದ ನಾನು ಇನ್ನೂ ಜೀವಂತ ಇದ್ದೀನಿ ಎಂದು ಮೊಬೈಲ್ ನೆನಪು ಮಾಡಿತು.
ತಡಮಾಡದೇ ನಮ್ಮ ರಾಮ ಬ್ರಿಗೇಡ್ ರಸ್ತೆಗೆ ಬೈಕ್ ಓಡಿಸಿದ. ಸೀತೆ ಗುಲಾಬಿ ಹೂವು ಕೈಯಲ್ಲಿ ಹಿಡಿದು ’ಐ ಲವ್ ಯುವ್’ ಎನ್ನುವಂತೆ ನಿಂತಿದ್ದಳು. ರಾಮ ಹೂವು ತೆಗೆದುಕೊಂಡಾಗ ಇಬ್ಬರ ಕಣ್ಣುಗಳಲ್ಲಿ ಕಂಬನಿಯೂ, ಆನಂದಭಾಷ್ಪವೋ ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಸಿನಿಮಾ ನಾಯಕ=ನಾಯಕಿಯಂತೆ ಬಿಗಿದಪ್ಪಿಕೊಳ್ಳಬೇಕು ಎಂದು ಕೊಂಡಿರುವಾಗ, ಇಂತಹ ಸನ್ನಿವೇಶವನ್ನೇ ಕಾಯುತ್ತ ಪುಳುಕಿತನಾಗಲು ಮಿಸ್ಟರ್ ಹನುಮಂತ್ ಸಿದ್ಧನಾಗಿರುವಾಗ ವಾನರ ಸೇನೆಯೊಂದು ಧಾಳಿ ನಡೆಸಿ ಬಿಟ್ಟಿತು.
’ಭಾರತೀಯ ಸಂಸ್ಕೃತಿ ಉಳಿಸಿ’ ’ವಾಲಂಟೈನ್ಸ್ ಡೇಗೆ ಧಿಕ್ಕಾರ’ ಘೋಷಣೆಗಳು. ಒಂದು ಕೈಯಲ್ಲಿ ರಾಖಿ ಮತ್ತೊಂದು ಕೈಯಲ್ಲಿ ಕರೀಮಣಿ ಸರ ಹಿಡಿದುಕೊಂಡಿದ್ದ ಗಡುವನೊಬ್ಬ ರಾಮನಿಗೆ ಒಂದೇಟು ಕೊಟ್ಟವನೇ ಯಾವದು ಬೇಕು ಎಂಬಂತೆ ಎರಡನ್ನೂ ಮುಖದ ಮುಂದೆ ಆಡಿಸಿದ. ಈ ನಡುವೆ ಸೀತೆಯನ್ನು ಎಳೆದಾಡುತ್ತಾ ಹಲ್ಲೆ ನಡೆಸಿ ಭಾರತೀಯ ಸಂಸ್ಕೃತಿ ಉಪದೇಶ ನೀಡಿದ ವಾನರರು ಅಡ್ಡ ಬಂದ ಮಿಸ್ಟರ್ ಹನುಮಂತ್‌ನಿಗೆ ಬ್ರೋಕರ್ ನನ್ನ ಮಗನೇ ಎಂದೇ ಒಬ್ಬರಮೇಲೊಬ್ಬರು ಲಾಥು ಹಾಕಿ, ನೆಲಕ್ಕೆ ಕೆಡವಿದ್ದರು. ರಾಮ ಸೀತೆಗೆ ತಾಳಿ ಕಟ್ಟಿದನೇ? ಅಥವಾ ರಾಖಿ ಕಟ್ಟಿದನೋ? ನಮ್ಮ ಪೊಲಂಕಿ ಬದುಕಿದ್ದರೆ ಇನ್ನೊಂದು ಪೊಲಂಕಿಯಾಣ ಬರೆದು ಬಿಡುತ್ತಿದ್ದರು. ಹೀಗೆ ’ವಾಲಂಟೈನ್ಸ್ ಡೇ ರಾಮಾಯಣ’ ಎಂಬ ದಕ್ಷಿಣ ಕಾಂಡ ಆರಂಭವಾಯಿತು.

- ಪರಶುರಾಮ ಕಲಾಲ್
February 14, 2009 12:13 AM

5 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಓದುತ್ತಿದ್ದಂತೆ ಸಿಕ್ಕಾ ಪಟ್ಟೆ ನಗು ಬಂತು.....ಅಂದಿನದನ್ನು ಇಂದಿನ ರೂಪಕ್ಕೆ ತಂದಿರುವುದು ಖುಷಿಯಾಯಿತು.....ಹೀಗೆ ಬರೆಯುತ್ತಿರಿ....

ಅಂದ ಹಾಗೆ ನನ್ನ ಬ್ಲಾಗಿನಲ್ಲಿ ನಿಮ್ಮ ಹಾಗೆ ವ್ಯಾಲೆಂಟೈನ್ಸ್ ಡೆ ಗಿಫ್ಟ್[ಲೇಖನ]ಕೊಟ್ಟಿದ್ದೇನೆ....ಬಂದು ನೋಡುತ್ತಿರಲ್ಲ...
http://chaayakannadi.blogspot.com/

ಅನಾಮಧೇಯ ಹೇಳಿದರು...

Super sir, chennagide

ಅನಾಮಧೇಯ ಹೇಳಿದರು...

It shows Cheap mentality twds Hindu Gods. ರಾಮಸೇನೆಯನ್ನು ಖಂಡಿಸುವ ಭರದಲ್ಲಿ ದೇವರುಗಳನ್ನು ಹೀಗೆ ಬಳಸಿಕೊಂಡಿದ್ದಕ್ಕೆ ನಿಮಗೇ ನಾಚಿಕೆಯಾಗಬೇಕು.

ಅನಾಮಧೇಯ ಹೇಳಿದರು...

ಅನಾಮಧೇಯ ಹೆಸರಿನ ದೇವರಿಗೆ ಶರಣು ಎನ್ನುವೆ.
’ದೇವರು ಸ್ವಲ್ಪ ಸರಿಯುತ್ತಿರಾ..’ ಇತ್ಯಾದಿ ಮಾತುಗಳನ್ನಾಡುವ ಜನರ ನಡುವೆ ಬೆಳೆದವನು ನಾನು. ನಮ್ಮ ಊರಲ್ಲಿ ಕೇರಿ ತಾಯಮ್ಮ ಮೈಮೇಲೆ ಬಂದಾಗ ’ಆ ನನ್ನ ಸವತಿ ಗಾಳೆಮ್ಮ ನಿಗೆ ಕುರಿ ಬೇಟೆ ಮಾಡಿದಿ, ನನ್ನ ಮರೆತೆ. ಕೋಳಿ ಬೇಟೆ ಮಾಡುವುದಾಗಿ ಹೇಳಿದ್ದು ಎಲ್ಲಿ ಹೊಯಿತು?’ ಎಂದು ಹುಂಕರಿಸಿದಾಗ ಅದಕ್ಕೆ ಹೆದರದ ಭಕ್ತ ’ನೀನೇನೂ ಕುಲ್ಡಿ ಏನು? ಆಕೆ ಕೊಟ್ಟಲು ಪಡಕೊಂಡಳು. ನೀನು ಈ ಕೈಯಲ್ಲಿ ಕೊಡು, ಈ ಕೈಯಲ್ಲಿ ಪಡಕೋ’ ಎಂದು ತಿರುಗೇಟು ನೀಡಿ ಬಿಟ್ಟ.
ಇಲ್ಲಿ ದೇವರು ಎನ್ನುವುದು ಮನುಷ್ಯ ಸಹಜ ವ್ಯಕ್ತಿಯಷ್ಟೇ. ಹೆಚ್ಚಿಲ್ಲ, ಕಡಿಮೆ ಇಲ್ಲ. ಮನುಷ್ಯರಿಗಿರುವ ರಾಗ, ಧ್ವೇಷ ಎಲ್ಲವೂ ಆತ ಸೃಷ್ಠಿಸಿಕೊಂಡಿರುವ ದೇವರಿಗೂ ಇದೆ.
ನಮ್ಮ ಹಳ್ಳಿಗರಿಗೆ ಹಂಪಿಯು ಪಂಪಾಪತಿ, ಹಂಪಮ್ಮನ ನೆಲೆ ಹಾಗೂ ರಾಮಾಯಣದ ಎಲ್ಲಾ ಐತಿಹ್ಯಗಳನ್ನು ಅವರು ಕಾಣುತ್ತಾರೆ. ಅವರ ದೃಷ್ಠಿಯಲ್ಲಿ ವಿಜಯನಗರ ಸಾಮ್ರಾಜ್ಯ ಎನ್ನುವುದೇ ಇಲ್ಲಿ ಇರುವುದೇ ಇಲ್ಲ. ರಾವಣ ಉಚ್ಚೆ ಹೊಯ್ಯದ ಹೊಂಡ, ವಾಲಿ ಗವಿ, ಸೀತೆ ಸೆರಗು, ಸುಗ್ರೀವ ಗವಿ, ಲಂಕಾ ಪಟ್ನದ ಸೇತುವೆ ಎಷ್ಟೊಂದು ಐತಿಹ್ಯಗಳಿವೆ ಎಂದರೆ ಹಂಪಿ ತುಂಬಾ ರಾಮಾಯಣದ ಕಥೆಗಳೇ ಕಥೆಗಳು. ಅವರ ರಾಮಾಯಣದಲ್ಲಿ ರಾಮ, ಲಕ್ಷ್ಮಣ, ಸೀತೆ, ರಾವಣ ಎಲ್ಲರೂ ಇಲ್ಲಿಯ ಜನರೇ. ಈ ಜನರಿಗಿರುವ ಭ್ರಮೆ, ವಾಸ್ತವ, ಬದುಕು, ಸಂಸ್ಕೃತಿ ಎಂದು ನೀವು ಕರೆಯುವುದು ಎಲ್ಲವೂ ಪಕ್ಕಾ ದೇಶಿಯತೆಯದೇ ಆಗಿರುತ್ತದೆ.
ಹೀಗಾಗಿಯೆ ನಮ್ಮ ದೇಶದಲ್ಲಿ ನೂರಾರು ರಾಮಾಯಣಗಳಿವೆ. ನೂರಾರು ಮಹಾಭಾರತಗಳಿವೆ.
ದೇವರಗಳನ್ನು ಎತ್ತರದ ಸ್ಥಾನದಲ್ಲಿ ಕುಳ್ಳರಿಸಿ, ಸ್ವರ್ಗದ ಕಲ್ಪನೆ ಸೃಷ್ಠಿಸಿ ಬದುಕನ್ನು ನರಕವನ್ನಾಗಿಸಿದವರಿಗೆ ದೇವರ ಬಗ್ಗೆ ತಮಾಷೆಯಾಗಿ ಮಾತನಾಡುವುದು ನಾಚಿಕೆ ಪಡಬೇಕಾದ ಸಂಗತಿಯಾಗಿ ಕಾಣುತ್ತದೆ.
ನಿಮ್ಮ ರಾಮ, ನಿಮ್ಮ ದೇವರು ನಮ್ಮ ರಾಮನಲ್ಲ, ನಮ್ಮ ದೇವರಲ್ಲ, ನಮ್ಮ ರಾಮ ಕಳ್ಳು ಕುಡಿಯಬಲ್ಲ, ಕಲ್ಲು ಮುಳ್ಳ ಹಾದಿಯಲ್ಲಿ ನಡೆದು ಕಟ್ಟಿಗೆ ಕಡಿದು ಹಾಕಬಲ್ಲ. ಸೀತೆ ಕಟ್ಟಿಗೆ ಹೊರೆ ಹೊರಬಲ್ಲಳು.
ಎ.ಕೆ.ರಾಮನುಜನ್ ಸಂಪಾದಿಸಿರುವ ನೂರಾರು ರಾಮಾಯಣಗಳಲ್ಲಿ ಒಂದು ರಾಮಾಯಣದ ಪ್ರಸಂಗ ಹೀಗಿದೆ. ರಾಮ ವನವಾಸಕ್ಕೆ ಹೋಗುವಾಗ ಸೀತೆ ಬರುತ್ತೇನೆಂದು ಹಠ ಹಿಡಿಯುತ್ತಾಳೆ. ರಾಮ ಪರಿಪರಿಯಾಗಿ ವಿವರಿಸಿ ಸೀತೆ ಬರದಂತೆ ತಡೆಯುತ್ತಾನೆ. ಕೊನೆಗೆ ಸೀತೆ ಸೋಲುವ ಪ್ರಸಂಗ ಬಂದಾಗ ಹೊಸ ಅಸ್ತ್ರ ಪ್ರಯೋಗಿಸುತ್ತಾಳೆ. ’ನಿಮಗೆ ರಾಮಾಯಣ ಗೊತ್ತು ತಾನೇ? ಯಾವ ರಾಮಾಯಣದಲ್ಲಿ ಸೀತೆ ರಾಮನೊಂದಿಗೆ ವನವಾಸಕ್ಕೆ ಹೋಗುವುದಿಲ್ಲ ಹೇಳಿ?’ ನಿರುತ್ತರನಾದ ರಾಮ ಸೀತೆಯನ್ನು ವನವಾಸಕ್ಕೆ ಕರೆದೊಯ್ಯುತ್ತಾನೆ.
ಡಂಕೆಲ್ ಪ್ರಸ್ತಾವನೆಗೆ ದೇಶ ಸಹಿ ಮಾಡಿ ಜಾಗತೀಕರಣಕ್ಕೆ ಮುನ್ನುಡಿ ಬರೆಯುವಾಗ ಅದನ್ನು ಮರೆಮಾಚಲು ಬಾಬ್ರಿ ಮಸೀದಿ ನಾಶ ಮಾಡಿ ಜೈ ಶ್ರೀರಾಮ್ ಎನ್ನಲಾಯಿತು. ಬಹುರಾಷ್ಟ್ರೀಯ ಕಂಪನಿಗಳಿಗೆ ದಲ್ಲಾಳಿಯಾಗಿ ಶ್ರೀರಾಮನನ್ನು ನಿಲ್ಲಿಸಲಾಯಿತು. ಜಗತ್ತಿನಲ್ಲಿ ಒಂದೇ ಉತ್ಪನ್ನ, ಅಮೇರಿಕಾ, ಇಂಗ್ಲೇಡ್, ಭಾರತದ ಯಾವ ಮೂಲೆಯಲ್ಲಿ ಕುಡಿದರೂ ಅದೇ ಪೆಪ್ಸಿ, ಅದೇ ಕೋಲಾ. ಅದೇ ರೀತಿ ಒಬ್ಬೇ ಶ್ರೀರಾಮ.
ದೇವರಗಳನ್ನು ಉತ್ಪನ್ನ ಮಾಡಿಕೊಂಡು, ದೇವರುಗಳನ್ನು ದಲ್ಲಾಳಿಗಳಾಗಿ ಮಾಡಿಕೊಂಡು, ನಿಜ ದೇವರುಗಳನ್ನು, ಮಾನವೀಯತೆಯ ಸಾಕಾರವಾಗಿದ್ದ ದೇವರುಗಳನ್ನು ಕೊಂದವರಿಗೆ ಮೊದಲು ನಾಚಿಕೆಯಾಗಬೇಕು ಅಷ್ಟೇ ಅಲ್ಲ ಅಂತವರು ಆತ್ಮಹತ್ಯೆ ಮಾಡಿಕೊಂಡು ಪ್ರಾಯಶ್ಚಿತ ಪಡೆಯಬೇಕು.
- ಪರಶುರಾಮ ಕಲಾಲ್

ಅನಾಮಧೇಯ ಹೇಳಿದರು...

hahha! Kalal, bahaLa taDavAytu idanna Odiddu. but chenAgide AytA?
mmm.... kathe bariyO kelsa hacchideeri, adu mAtra bhALa kashTa. yAkandre nange kathe bareyOke baralla. dammayya, kshamisibiDi nanna...

nalme,
Chetana TeerthahaLLi