ಸೋಮವಾರ, ಫೆಬ್ರವರಿ 23, 2009

ಆಯ್ಕೆ ಎಂಬುದು ಈರುಳ್ಳಿ ದೋಸೆಯಲ್ಲ(ಜಿ.ಎನ್.ಮೋಹನ್ ಸರ್ ರವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವನಸಂಕಲನದ ಒಂದು ಚಂದದ ಕವಿತೆ)

ಈರುಳ್ಳಿ ದೋಸೆ ತಿನ್ನುವುದು
ಅಂತಹ ಕಷ್ಟದ ಕೆಲಸವೇನಲ್ಲ
ತಟ್ಟೆಯ ಮೇಲೆ ಸ್ವಚ್ಛಂದ
ಹರಡಿಕೊಡಿರುವ ದೋಸೆ
ತಿನ್ನಲು ಏನಿದೆ ಕಷ್ಟ
ದೋಸೆಗೆ ನೆನೆಹಾಕಬೇಕು
ಚೆನ್ನಾಗಿ ರುಬ್ಬಬೇಕು
ಕಣ್ಣೀರು ಸುರಿಯುತ್ತಿದ್ದರೂ ಬಿಡದೆ
ಈರುಳ್ಳಿ ಕತ್ತರಿಸಬೇಕು
ಕತ್ತರಿಸಿದ್ದು ಮಟ್ಟಸವಾಗಿರಬೇಕು.
ಕೈಗೆ ಖಾರ ಹತ್ತಿದರೂ ಮೆಣಸಿನಕಾಯಿಯ
ಬೆನ್ನಟ್ಟಬೇಕು ಹೊಟ್ಟೆ ಸಿಗಿಯಬೇಕು
ಎಲ್ಲಾ ಚೆನ್ನಾಗಿ ಬೆರಸಿ ಕಾವಲಿಯ
ಶಾಸ್ತ್ರ ಗೊತ್ತು ಮಾಡಿಕೊಂಡು ಹುಂ
ಈರುಳ್ಳಿ ದೋಸೆ ಮಾಡಬೇಕು.

ಆದರೆ ತಿನ್ನಲ್ಲೇನು ಕಷ್ಟ
ಬೇಕಿದ್ದರೆ ಕೈಯಲ್ಲಿ ಇಲ್ಲದಿದ್ದರೆ
ಸ್ಪೂನು ಫೋರ್ಕಲ್ಲಿ ಚೆಂದ ಮಾತಾಡುತ್ತಾ
ಸ್ಪೂನನ್ನು ಎಡಗೈಯಲ್ಲೋ ಇಲ್ಲಾ
ಬಲಗೈಯಲ್ಲೋ ಹೇಗೋ ಹಿಡಿದು
ಮುರಿದು ಬಾಯಿ ತೆಗೆದು
ಒಳಗಿಟ್ಟರೆ ಆಯಿತು ಉಳಿದದ್ದು
ಹಲ್ಲು ನಾಲಗೆಯ ಕೆಲಸ.

ಆದರೆ ಆಯ್ಕೆ ಎಂಬುದಿದೆಯಲ್ಲ
ಅದು ಈರುಳ್ಳಿ ದೋಸೆಯಲ್ಲ
ಕವಲು ದಾರಿಯಲ್ಲಿ ನಿಂತು
ಬೇಕಾದ ದಾರಿ ಹಿಡಿಯುವುದು
ಈರುಳ್ಳಿ ದೋಸೆ ತಿಂದಷ್ಟು ಸುಲಭವಲ್ಲ.
ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲು
ನಿಂತವರಿಗೆ ದೋಸೆ ತಿನ್ನುವುದಕ್ಕಿಂತ
ದೋಸೆ ಮಾಡುವ ಕಷ್ಟ ಗೊತ್ತಿರಬೇಕು
ಕೈಗೆ ಮೆಣಸಿನಕಾಯಿ ಮೆತ್ತಿಕೊಂಡರೂ
ಖಾರವಾಗದಂತಿರಬೇಕು. ಈರುಳ್ಳಿ
ಹಚ್ಚಬೇಕು ಆದರೆ ಕಣ್ಣೀರು
ಸುರಿಸದಂತಿರಬೇಕು

-ಜಿ.ಎನ್.ಮೋಹನ್