ಬುಧವಾರ, ಫೆಬ್ರವರಿ 25, 2009

ಅಂತೂ...ಇಂತೂ..ಕವನಸ೦ಕಲನ ಬಂತುನಮ್ಮೆಲ್ಲರ ಪ್ರೀತಿಯ ಗೆಳೆಯ ಸಿದ್ದು ನ ಮೊದಲ ಕವನಸ೦ಕಲನ ಬರುತ್ತಿದೆ.ಅವನಿಗೆ ಎಲ್ಲರ ಪರವಾಗಿ ಅಭಿನ೦ದನೆಗಳು.ಆ ಸಂಕಲನಕ್ಕೆ ಜಿ.ನ್.ಮೋಹನ್ ಸರ್ ಬರೆದ ಬೆನ್ನುಡಿ ಮತ್ತು ಸೃಜನ್ ರ ಕವರ್ ಪೇಜ್ ಇಲ್ಲಿದೆ.ಕವಿತೆಯೆಂಬ ಬೆಳಕಿನ ಬೀಜ....

ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.

’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ.

ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.

ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ.
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.

"ನನಗೀಗ ಬೆಳಕಿನದೇ ಧ್ಯಾನ...
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ
ಆರದ ಬೆಳಕನ್ನು ಹುಡುಕುತ್ತಿದ್ದೇನೆ.

ನಾನೂ ಬೆಳಕಾಗಬೇಕು"

ಎನ್ನುವ ಸಿದ್ಧು, ಬರುವ ನಾಳೆಗಳಿಗೆ... ಉಸಿರು ಹಚ್ಚುವ ಕವಿ.

-ಜಿ. ಎನ್. ಮೋಹನ್

6 ಕಾಮೆಂಟ್‌ಗಳು:

shivu.k ಹೇಳಿದರು...

ಅಭಿನಂದನೆಗಳು ಸಿದ್ದು ದೇವರ ಮನಿಯವರಿಗೆ...

ಮುನ್ನುಡಿ ಓದಿದ ಮೇಲೆ ಕವನ ಸಂಕಲನ ಓದಬೇಕೆನಿಸಿದೆ....

ಅನಾಮಧೇಯ ಹೇಳಿದರು...

ಅಂತೂ, ಇಂತೂ ನಮ್ಮ ಸಿದ್ಧು ಕವನ ಸಂಕಲನ ಹೊರಗೆ ಬಂತು ಅನ್ನೋದು ಖುಷಿ ವಿಷಯ. ಹಿನ್ನುಡಿಯಲ್ಲಿ ಮೋಹನ್ ಬುಡ್ಡಿದೀಪದ ಬೆಳಕು ಕಂಡು ವಿಸ್ಮಯರಾಗಿದ್ದಾರೆ.
ಅಂತೂ ಒಂದು ಸಲ ಪಟ್ಟಾಗಿ ಕುಳಿತು ಎಲ್ಲಾ ಕವನಗಳನ್ನು ಓದುವ ಮೂಲಕ ಸಿದ್ದು ನಮಗೆ ಇನ್ನಿಷ್ಟು ಹತ್ತಿರವಾಗಲಿ ಎಂದು ಹಾರೈಸುವೆ. ಹೌದು ಕವನ ಸಂಕಲನ ಎಂದು ಹೊರ ಬರುತ್ತದೆ?
- ಪರಶುರಾಮ ಕಲಾಲ್

kaligananath gudadur ಹೇಳಿದರು...

ಗೆಳೆಯ ಸಿದ್ದುವಿನ ಕವನ ಸಂಕಲನ ಓದುವ ತುಡಿತ ಹೆಚ್ಚುವಂತೆ ಮೋಹನ್ ಸರ್ ಬರೆದಿದ್ದಾರೆ. ನಿರಂಜನ, ಕೆಲವು ಪ್ರತಿಗಳನ್ನು ನಮ್ಮ ಕಡೆ ಮಾರುವ ಜವಾಬ್ದಾರಿ ಕೊಟ್ಟರೆ ಆ ಮೂಲಕ ಪುಸ್ತಕ ಪ್ರೀತಿ ತೋರಿದಂತಾಗುತ್ತದೆ. ಸಾಧ್ಯವಿದ್ದರೆ ನನಗೆ ಕಳಿಸಿಕೊಡು.
-ಕಲಿಗಣನಾಥ ಗುಡದೂರು

ಅನಾಮಧೇಯ ಹೇಳಿದರು...

ಸಿದ್ದು,
ನೀವು ನಿಮ್ಮ ಪ್ರತಿ ಸಾಲುಗಳಲ್ಲೂ, ಪ್ರತಿಕವನದಲ್ಲೂ, ಎದೆ ಹೊಕ್ಕು ನಮ್ಮನ್ನು ಸುಮ್ಮನಾಗಿಸುತ್ತೀರ. ಎಲ್ಲಾ ಕವನಗಳನ್ನು ಒಂದೇ ಉಸಿರಿನಲ್ಲಿ ಓದಿ ಪಕ್ಕಕ್ಕಿಡಲು ಸಾಧ್ಯವೇ ಇಲ್ಲ. ಪ್ರತಿಯೊಂದರ ನಂತರವೂ ಸಾವರಿಸಿಕೊಂಡು ಮುಂದೆ ಹೋಗಬೇಕಾಗುತ್ತದೆ ಅಂತ ನನಗನ್ನಿಸುತ್ತೆ. ಇನ್ನೊಂದಷ್ಟು ಅಪರಿಚಿತರ ಎದೆಗೆ ಲಗ್ಗೆ ಇಡಲು ಹೊರಟಿದ್ದೀರ. ಶುಭವಾಗಲಿ. ಬದುಕು ಬದಲಾಗಲಿ. ಆ ಮೂಲಕ ಬೆಳೆಯಲಿ.
ಎಂದಿನಂತೆ ಪ್ರೀತಿ ಮಾತ್ರ,

ನವೀನ್ ಹಳೇಮನೆ

ಡಿ.ಎಸ್.ರಾಮಸ್ವಾಮಿ ಹೇಳಿದರು...

ಸಿದ್ದು, ಅಭಿನಂದನೆ. ಬಿಡುಗಡೆ ಯಾವಾಗ?

ಅನಾಮಧೇಯ ಹೇಳಿದರು...

ಸಿದ್ದು ಅವರ ಕವನ ಬರೀ ಕವನವಲ್ಲ. ಅದೆಷ್ಟೋ ಭಾವನೆಗಳ ತಹ ತಹ... ಅಷ್ಟು ಭಾವನೆಗಳ ತುಡಿತ ಒಮ್ಮೆಗೆ ಉಮ್ಮಳಿಸುವಂತೆ ಮಾಡುವ ಛಾತಿ ಅವರ ಕವನಕ್ಕಿದೆ. ಅವರ ಕವನಗಳ ರೆಕ್ಕೆಗಳಿಗೆ ಈಗ ಇನ್ನಷ್ಟು ಶಕ್ತಿ ತುಂಬಿದಂತೆ ಕಾಣುತ್ತಿದೆ ಪುಸ್ತಕ ರೂಪದಲ್ಲಿ. ಅಭಿನಂದನಗಳು ಸಿದ್ದು.


ನನ್ನ ಈಗಿನ ಪ್ರಶ್ನೆ ಎಂದರೆ
ಇಡೀ ಎಲ್ಲ ಕವನಗಳನ್ನು ಒಂದು ಪುಸ್ತಕ ರೂಪದಲ್ಲಿ ಓದುವುದು ಸರಿಯೇ. ನನ್ನ ಪ್ರಕಾರ ಅವುಗಳು ಸಂಕಲನಕ್ಕಿಂತ ಬಿಡಿಬಿಡಿಯಾಗಿ ಓದುವುದು ಚೆಂದ ಅನಿಸುತ್ತೆ, ಅದರ ಪ್ರಭಾವ ಕೂಡ ಹೆಚ್ಚಿರುತ್ತದೆ.
ಇಡೀ ಎಲ್ಲ ಕವನಗಳನ್ನು ಒಮ್ಮೆಗೆ ಓದುವವರು ಕಡಿಮೆ ಅಂತ ನನ್ನ ಅಭಿಪ್ರಾಯ. ಯಾಕೆಂದರೆ ಇತ್ತೀಚಿನ ಪುಸ್ತಕೋದ್ಯಮದಲ್ಲಿ ಕವನ ಸಂಕಲನಗಳನ್ನು ಕೊಂಡುಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ. ಬಹುಶಃ ಇದಕ್ಕೆ ಮೇಲೆ ಹೇಳಿದ ಕಾರಣ ಇರಬಹುದು. ಈ ಮೂಲಕ ಕವನ ಸಂಕಲನಗಳ ಕೊಂಡುಕೊಳ್ಳುವಿಕೆ ಹೆಚ್ಚಾಗಬೇಕೆಂದರೆ ಏನು ಮಾಡುವುದು.... ಯೋಚಿಸೋಣ...