ಸೋಮವಾರ, ನವೆಂಬರ್ 19, 2012
ಕನ್ನಡ ರಾಜ್ಯೋತ್ಸವ: ಕಾವ್ಯ-ಕುಂಚ-ಗಾಯನ
ದಿನಾಂಕ: 18.11.2012ರಂದು ಹೊಸಪೇಟೆ ಎಎಸ್ಪಿ ಕಚೇರಿ ಆವರಣದಲ್ಲಿ, ಪೊಲಿಸ್ ಉಪವಿಭಾಗ ಮತ್ತು ಸರಕಾರಿ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಕಸಾಪ ಘಟಕವು ಕನ್ನಡ ರಾಜ್ಯೋತ್ಸವದ ಅಂಗವಾಗಿ `ಕಾವ್ಯ ಕುಂಚ ಗಾಯನ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೋಹನ ನಾಗಮ್ಮನವರು ಕನ್ನಡವನ್ನು ಕಟ್ಟಿ ಬೆಳೆಸಿದ `ಪೂಜ್ಯನೀಯ ಮನ್ರಪ್ಪ'ನನ್ನು (ಥಾಮಸ್ ಮನ್ರೋ), `ವಾಲ್ಟರೆಲೆಟ್'ರನ್ನು (ವಾಲ್ಟರ್ ಎಲಿಯಟ್) ಆತ್ಮೀಯತೆಯಿಂದ ನೆನಪಿಸಿಕೊಂಡರು. ವಿದೇಶಿಗರು ಬಂದು ಸುಮ್ಮನೆ ಸಾಗುತ್ತಿದ್ದ ಕನ್ನಡ ಭಾಷೆಯ ಬೋಡರ್ಿಲ್ಲದ ಬಸ್ಸಿಗೆ ಬೋಡರ್ು ಬರೆಸಿಕೊಟ್ಟಿದ್ದಾರೆ. ಕನ್ನಡದ ಪಯಣ ಸುಗಮವಾಗುವಂತೆ ಹೆದ್ದಾರಿ ನಿಮರ್ಿಸಿದ್ದಾರೆ. ಅಂಥಾದ್ದರಲ್ಲಿ ನಮ್ಮ ಬಹಾದ್ದೂರ್ ಕನರ್ಾಟಕ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಸೈಯ್ಯಲ್ಲ ಎಂದು ಸೈಯ್ಯೆನ್ನುವಂತೆ ಮಾತನಾಡಿದರು. ಪ್ರತಿಯೊಂದು ಪೊಲಿಸ್ ಇಲಾಖೆಯೂ ತಿಂಗಳಿಗೊಂದು ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಅಪರಾಧಗಳು ಕಮ್ಮಿಯಾಗಬಹುದೆಂದು, ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳ್ಳಾರಿಯ ಎಸ್ಪಿ ಚಂದ್ರಗುಪ್ತರವರಿಗೆ, ಎಎಸ್ಪಿ ರವಿಯವರಿಗೆ ಕಿವಿಮಾತು ಹೇಳಿದರು. `ಕಾವ್ಯ-ಕುಂಚ-ಗಾಯನ' ಕಾರ್ಯಕ್ರಮದಲ್ಲಿ ಅರುಣ್ ಜೋಳದ ಕೂಡ್ಲಿಗಿ, ವಿ.ಹರಿನಾಥ ಬಾಬು, ಪರಶುರಾಮ್ ಕಲಾಲ್, ಟಿ.ಎಂ.ಉಷಾರಾಣಿ, ಶಿವಶಂಕರ್, ಎಂ.ಪಿ.ಎಂ. ಮಂಜುನಾಥ, ಸ್ವರೂಪಾನಂದ ಕೊಟ್ಟೂರು, ಟಿ.ಜಾತಪ್ಪ, ಶರೀಫ್, ಕೊ.ಹಿ.ಮ., ಸೋಮೇಶ್ ಉಪ್ಪಾರ್, ಅಬ್ದುಲ್ ರೆಹಮಾನ್ರವರ ಕವಿತೆಗಳನ್ನು ಓದಿದರು. ಡಾ|ನಾಗಪುಷ್ಪಲತಾ, ಶೀನ ನಾಡೋಳಿ, ನಾಗರಾಜ ಪತ್ತಾರ, ಜೀವನ್ಸಾಬ್ ವಾಲೀಕಾರ್ರವರು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದೂವರೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಮೂಲಕ ಚಳಿಯನ್ನು ತಡೆಗಟ್ಟಿ ಬೆಚ್ಚಗಿನ ವಾತಾವರಣವನ್ನು ನಿಮರ್ಿಸಿದರು. ನೀವು ಇಡೀ ರಾತ್ರಿ ಕವಿತೆ ಓದುತ್ತ, ಹಾಡುತ್ತಲೇ ಇರಿ. ನಾನು ಕುಂಚ ಆಡಿಸುತ್ತಲೇ ಇರುತ್ತೇನೆ ಎನ್ನುವ ಚಿತ್ರ ಕಲಾವಿದ ಬಸವರಾಜ್ ಎಸ್. ಕಲೆಗಾರ್ರವರು ಬಣ್ಣದ ಲೋಕಕ್ಕೆ ಕರೆದೊಯ್ದರು. ಕಾರ್ಯಕ್ರಮದಲ್ಲಿ ವಾಚಿಸಿದ ಕೆಲವು ಕವಿತೆಗಳನ್ನು ಬೆರಳಚ್ಚಿಸಲಾಗಿದೆ.
ಕನಸಿನಲಿ ಕತ್ತಿ ಹಿರಿದವರು ನಾವು
ಎದ್ದಾಗಲೇ ಗುರಿಯ ಮರೆತವರು
ಮಿಸುನಿ ಮತ್ತಧಿಕ ಧನವಿದ್ದು ಇಲ್ಲ
ದವರೊಡನೆ ಚಿನ್ನಾಟವಾಡುವವರ
ತಿರುಚಿ ಎಚ್ಚರಿಸೆ ನಾವು ಬಂದವರು
ಬಂದು ಮತ್ತವರ ಕೈಕುಲುಕಿ, ತಲೆ
ಹಾಕಿ, ಶೋಷಣೆಗೆ ತಲೆಬಾಗಿದವರು
ಬಗಿ ಹಾಗೆ ಬಾಳ ಹೊರಟವರು ನಾವು
ನೋವು, ತುಳಿತ, ವಂಚನೆ
ಗಳ ತಿರುಗುಣಿಯಲಿ ತಿರುಗುತ್ತಿರುವವರು
ತಿರುಗುತ್ತಲೇ ನಾವು ಕೆರಳಿದವರು
ಕೆರಳುತ್ತಲೇ ಗೋಣೆತ್ತಿದವರು
ಇನ್ನೇನು ಎದ್ದರೋ ಎನ್ನುವಾಗಲೆ
ಹೊದ್ದು ಮಲಗಿದವರು
ಇನ್ನು ಮುಂದಾದರೂ ಅನ್ಯಾಯ ತುಳಿದು
ಅಸತ್ಯವಳಿದು ತುಳಿತ ಕುತಂತ್ರಗಳ
ಮೆಟ್ಟಿ; ಶೂದ್ರ,ದಲಿತ ನೋವುಂದವರೆ
ಶತಶತಮಾನ ನಂಜುಂಡ
ನಂಜುಂಡರಿನ್ನಾದರೇಳಿರೋ
ಈನಾಡ ನತದೃಷ್ಟರೆಲ್ಲರೇಳಿರೋ
ನಿಮ್ಮಿರವ ತೋರಲೆದೆ ತಟ್ಟಿ
ರಾತ್ರಿ ಗುಡಿಮಾಳಗಿ ದುರಸ್ತಿ ಬಯಸಿ
ಮತ್ತೊಂದೂರಿಗೆ ಬೆಳಿಗ್ಗೆದ್ದೋಡುವ
ಜೋಗಿ, ಭಿಕ್ಷುಕರಾಗಬೇಡಿ
ಸಾಗಿ ಛಲದಿಂದ ತೊಡಿರಿ ದೀಕ್ಷೆ
ದೀನ ದಲಿತ ದು:ಖಿತರ ನೋಡಿ
ನಗೆ ನೀಡಲವರ ಹೊಸಬಾಳ್ಗೆ ಕೊಡಿ ರಕ್ಷೆ
* ಕೊ.ಹಿ.ಮ. ಬಸರಕೋಡು
--------------------
ಮನಸು ಮನಸುಗಳ ಮಿಲನ
ಭಾವ ಲಹರಿಯ ಹೊಸ ಗಾನ
ಕನಸುಗಳ ಮೂಟೆಯಲ್ಲಿ ಮಿಂದೆದ್ದ ಜೀವನ
ಜೊತೆಯಾಗಿ ಸಾಗಲೆಂದೇ ಅಂಕುರಿಸಿದ ಮಿಲನ
ಪ್ರೀತಿಯ ಪಯಣದಲ್ಲಿ ಅನುದಿನವೂ ಹೊಸತನದತ್ತ
ಅನುಕ್ಷಣವೂ ಅಹ್ಲಾದಕರ ಬೆಚ್ಚಗಿನ ಭಾವಗಳ ಬುತ್ತಿ
ಸ್ಫುರಿಸುವ ಪ್ರೀತಿಯಲ್ಲಿ ಸರ್ವಸ್ವವೂ ಆಗತ ಅತ್ಯಂತ
ಬರಡಾಗಿದ್ದ ಪ್ರೇಮಿಗಳ ಬಾಳಿನಲ್ಲಿ ಒಲವಿನ ಸಾಕ್ಷಾತ್ಕಾರ
ಪ್ರೀತಿಯ ಉತ್ತುಂಗತೆಯಲ್ಲಿ ಪಿಸುಮಾತು
ಬಿಸಿ ಉಸಿರು, ನವಿರಾದ ಸ್ಪರ್ಶ ಎಲ್ಲವೂ ಹಿತ ಹಿತ
ಸ್ವಚ್ಛಂದ ಬದುಕಿನಲ್ಲಿ ಪ್ರೀತಿಯೇ ಅನಂತ ಅಂತಿಮ
ಮನದ ಮಾತು ಕನಸು ಕನವರಿಕೆಗಳಲ್ಲಿ ಪ್ರೀತಿಯ ಮತ್ತು
ಯಾವ ವಕ್ರದೃಷ್ಟಿ ತಾಗಿತೋ ಇಂತಿಪ್ಪ ಪ್ರೀತಿಗೆ
ನಿದ್ದೆ ನೀರಡಿಕೆಗೆ ಸ್ಪಂದಿಸುತ್ತಿಲ್ಲ ಮನಸು
ದು:ಖದ ಕುಲುಮೆಯಲ್ಲಿ ಬೇಯುತ್ತಿದೆ ಭಾವ ಬದುಕು
ಶಾಂತಸಾಗರದಂತಿದ್ದ ಮನದ ಅಂಗಳದಲ್ಲೀತ ಬಿರುಗಾಳಿ
ಕನಸುಗಳ ಲೋಕದ ಸಂಚಾರ ಅಕ್ಷರಸಹ: ಸಂಚಕಾರವೀಗ
ಮೌನದಲ್ಲಿಯೇ ಉಮ್ಮಳಿಸುತ್ತಿದೆ ದು:ಖ ದುಮ್ಮಾನ
ಬದುಕು ಕಟ್ಟಿಕೊಟ್ಟ ಅದೇ ಪ್ರೀತಿ ಇಂದು
ಬದುಕನ್ನು ಬೆತ್ತಲಾಗಿಸಿದೆ ಕಾರುಣ್ಯವಿಲ್ಲದೆ
ಪ್ರೀತಿ ಪ್ರೇಮ ಪಯಣದ ಹಾದಿಯಲ್ಲಿ
ಎಲ್ಲವೂ ಉಂಟೇ? ಎಂಬ ಪ್ರಶ್ನೆಯನ್ನು ಉಳಿಸಿ
ಹೊರಟಿದೆ ಮತ್ತೊಬ್ಬರ ಬದುಕಿನಲ್ಲಿ ಪ್ರವೇಶಿಸಿ
ಪ್ರೀತಿ ಇಲ್ಲದ ಮೇಲೆ ಕವನವ ನೆನಪಿಸಿ
ಸ್ವರೂಪಾನಂದ ಎಂ. ಕೊಟ್ಟೂರು
ಕೂಡ್ಲಿಗಿ ಪೊಲಿಸ್ ಠಾಣೆ
--------------------------------------------------------
ತೀಡಿದ ಬೈತಲೆ ನಲಿಯುವ ಮುಂಗುರುಳು
ಇದೆ ಹಾದಿಯಲ್ಲಿ ಹಲವ ದಿನಗಳಿಂದ
ಎದ್ದೆದ್ದು ಕಾಣತೈತೆ ಹಣೆಗುಂಕುಮ
ಕಣ್ಣುಕಣ್ಣುಗಳೆರಡು ಥಳಥಳ ಹೊಳೆತಾವ
ನೂರಾರು ಅರ್ಥ ಕಣ್ತುಂಬಾ ಹೆಣ್ಣಾ ನಿನ್ನ ಕಣ್ತುಂಬಾ
ನಗುಮೊಗದ, ಸೊಗಸಗಾತಿ ಹೆಣ್ಣು
ಮನಸ ತುಂಬಾ ಕನಸ ಬಿತ್ತಿಹ ಹೆಣ್ಣು
ಕನಸಲ್ಲಿ ಕಾಡಿ, ನೆನಪಲ್ಲಿ ಉಳಿಯಲಿಲ್ಲ
ಹಿಡಿದಿಟ್ಟ ಕನಸು ಜಾವದೊತ್ತಿಗೆ ನಿಲ್ಲಲಿಲ್ಲ
ತುಟಿಯಂಚಿನ ನಗೆಯ ಹಿಡಿದಿಟ್ಟು
ನಿನ್ನ ಮೈಮಾಟವ ಮನಸಲ್ಲೇ ಕಡೆದಿಟ್ಟು
ಹೊಸ ಬದುಕಿನ ಸೌಧವ ಕಲ್ಪನೆಯಲ್ಲಿ ತೆರೆದಿಟ್ಟು
ಪ್ರತಿ ಬೆಳಗು, ಸಂಜೆ ಕಾದೆ ಕಷ್ಟಪಟ್ಟು
ಎದೆಬಡಿತದ ಪ್ರತಿಕ್ಷಣವೂ ನಿನ್ನ ನೆನಪು ಕನಸಾಗಿ
ಕಿವಿಯೊಳಗಿನ ಓಲೆಯ ಒನಪು
ಬಳಕುವ ಸೊಂಟದ ಥಳುಕು ಬಳಕು
ಕಾದು ಕಾದು ಸಾಕಾತು ಈ ಬದುಕು
ಆಶೆ ಬತ್ತಿಲ್ಲ ನೆನಪು ಮಾಸಿಲ್ಲ
ನಿನ್ನ ನಗು, ಮೈಮಾಟ ಕಾಡುತ್ತಲಿದೆಯಲ್ಲ
ಬಾ ಬೇಗ ಹೆಣ್ಣೇ ನನ್ನ ಹೃದಯದ ಕಣ್ಣೇ
ದೇಹ ಮಣ್ಣ ಕಾಣುವ ಮುನ್ನ, ಹೆಣ್ಣೇ ಕಣ್ಣ ತೆರೆಸು
ಹೆಣ್ಣೇ ಕಣ್ಣ ತೆರೆಸು
- ಪತ್ರೇಶ್ ಹಿರೇಮಠ್ ಬಸರಕೋಡು
-----------------------------------------------------
ಏನ ಹೇಳಲಿ ಕಾರಣ
ಅರ್ಧದಲ್ಲೇ
ಕುಸಿದು ಬಿತ್ತು
ನಮ್ಮ ಪ್ರೀತಿ ಚಾರಣ
ನಮ್ಮದ ಆಕಾಶದಲ್ಲಿ
ಗಾಳಿ ಬಳಸಿ ರೆಕ್ಕೆಬಿಚ್ಚಿ
ಹೆಜ್ಜೆಯಿಲ್ಲದ ಪಯಣ ಬೆಳೆಸಲು
ನಾ ಕಾದ ಗಳಿಗೆ
ಯಾರೋ ತೂರಿದ
ಬೆಳಕಿಗೆ ಮೈಯ್ಯೊಡ್ಡಿ
ಮಿರುಮಿರುಗುವ ಚಂದ್ರನಾಗಲು
ನೀ ಬಯಸಿದ ಬಗೆ
ನೆಲದ ವಾಸನೆ ಹೀರಿ
ಅಲೆಯ ಕಲರವ ಹೊತ್ತು
ತೋಳಚಾಚಿ ಹರಿವ ನದಿಯಾಗಲು
ನಾ ಕಾದ ಗಳಿಗೆ
ಹೊತ್ತಲ್ಲದ ಹೊತ್ತಲ್ಲಿ
ಕಣ್ತಪ್ಪಿಸಿ ಸದ್ದಿಲ್ಲದೆ
ಆಚೆಈಚೆ ತೀರ ಸೇರಲು
ನೀ ಬಯಸಿದ ಬಗೆ
ಮಾತು ಮೌನದಿ
ಮಿಂದು ಒಬ್ಬರೊಳಗೊಬ್ಬರು
ಕರಗಿ ಇನ್ನಿಲ್ಲವಾಗಲು
ನಾ ಕಾದ ಗಳಿಗೆ
ಎದ್ದುಕಾಣುವಂತೆ
ನಮ್ಮ ಚಿತ್ರ ಬಿಗಿದು
ಕಟ್ಟಿನ ಗೋಡೆಗೆ ತೂಗುಹಾಕಲು
ನೀ ಬಯಸಿದ ಬಗೆ
ಮಸಿ ತಾಗಿಸದೆ ಬರೆದ
ತೆರೆದ ಬಿಳಿಹಾಳೆಯಲಿ
ಭಾವಗಳು ಪುಟ ತುಂಬಲೆಂದು
ನಾಕಾದ ಗಳಿಗೆ
ಕೊನೆಯ ತುದಿಗೆ
ಸಹಿ ಇಟ್ಟು ಪಯಣವಿನ್ನು
ಸಾಗದೆಂದು ಷರಾ ಬರೆಯಲು
ನೀ ಬಯಸಿದ ಬಗೆ
ಏನ ಹೇಳಲಿ ಕಾರಣ
ಕುಸಿದುಬಿತ್ತು ನಮ್ಮ ಪ್ರೀತಿ ಚಾರಣ
ಹರಿದುಬಿತ್ತು ಕಟ್ಟಿದ
ಕನಸ ತೋರಣ
ಟಿ.ಎಂ.ಉಷಾರಾಣಿ ಹಡಗಲಿ
--
ಅಡಿ ಟಿಪ್ಪಣಿಗಳು:
ಕೊ.ಹಿ.ಮ: ನವೋದಯ ಮತ್ತು ಬಂಡಾಯ ಸಾಹಿತ್ಯ ಪಂಥಗಳೆರಡರಲ್ಲಿಯೂ ಆಸಕ್ತಿ ಹೊಂದಿರುವ ಹಿರಿಯರಾದ ಬಸರಕೋಡಿನ ಕೊ.ಹಿ.ಮ.ರವರು ಕಾವ್ಯಕುಂಚಗಾಯನದಲ್ಲಿ ಪಾಲುಗೊಂಡಿದ್ದು ವಿಶೇಷ. ನಿರಂತರ ಓದು ಮತ್ತು ಪತ್ರಿಕೆಗಳ ಸಾಂಗತ್ಯದಲ್ಲಿ ತಮ್ಮ ಬದುಕಿನ ಕೃಷಿಯನ್ನು ಮುಂದುವರೆಸಿದ್ದಾರೆ. ಇನ್ನು ಇವರ ಮಗ ಪತ್ರೇಶ್ ಹಿರೇಮಠ್ರವರು ಹನ್ನೊಂದು ಗಂಟೆಯ ನಂತರ ತಮ್ಮ ಕವಿತೆಯನ್ನು ಓದಿದರೆ, ಕಾವ್ಯಕನ್ನಿಕೆಗೆ ದೃಷ್ಟಿಯಾದೀತೆಂದು ಹಿಂದೆ ಸರಿದು ಅಪ್ಪನ ಕವಿತೆಯನ್ನು ಅದ್ಭುತವಾಗಿ ಹಾಡಿದ ನಾಗರಾಜ್ ಪತ್ತಾರ್ರವರ ಮೋಡಿಯಲ್ಲಿ ತಲ್ಲೀನರಾದರು.
ಪರುಶುರಾಮ್ ಕಲಾಲ್: ಕನರ್ಾಟಕವಿದು ಗಂಡುಮೆಟ್ಟಿನ ನಾಡಿದು ಎಂದು ಮುಂದಿದ್ದವರ ಎದೆ ತಟ್ಟಿ ತಟ್ಟಿ ಹೇಳುತ್ತಲೇ ಇರುತ್ತಾರೆ. ಇಂತಾ ಸಂದರ್ಭದಲ್ಲಿ ಕಲಾಲ್ರವರು `ಹಂಪಿ ಹಾಡುತಿಹಳು' ಎಂಬ ಕವಿತೆಯನ್ನು ಹೇಳುವ ಮೂಲಕ ಹೆಂಗಳೆಯರೂ ಗಂಡುಮೆಟ್ಟಿನ ನಾಡಿನ ಇತಿಹಾಸ ನಿಮರ್ಾಪಕರೆಂದು ಸಾರಿದರು.
ಅರುಣ್ ಜೋಳದ ಕೂಡ್ಲಿಗಿ: ಇಂಟರ್ನ್ಯಾಷ್ನಲ್ ಸೆಮಿನಾರಿಗೆ ಹೋಗಿ ಬಂದಂದಿನಿಂದ ಇವರು ಅರುಣ್ ಕಠ್ಮಂಡು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇವರು ತಮ್ಮ ಮದುವೆಗೂ ಮುಂಚಿನ ದಿನಗಳನ್ನು ನೆನಪುಮಾಡಿಕೊಡುವ `ತಂಪು ಮುಂಜಾವಿನ' ಕವಿತೆಯನ್ನು ಮಂಡಿಸಿದರು.
ವಿ.ಹರಿನಾಥ ಬಾಬು: ಎರಡೂವರೆ ತಾಸು ವೇದಿಕೆ ಮೇಲೆ ಮಿಟ್ಟುಮಿಸುಕದೆ ಕೈಕಟ್ಟಿ ಕುಳಿತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ಬಯಲು ಸಾಹಿತ್ಯ ವೇದಕೆಯ ನಿರಂಜನರವರು `ತಾಳ್ಮೆ ಕವಿ' ಎಂಬ ಬಿರುದನ್ನು ದಯಪಾಲಿಸಿದ್ದಾರೆ.
ಜಿ.ಶಿವಕುಮಾರ್: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿರುವ ಜಿ.ಶಿವಕುಮಾರ್ರವರಿಗೆ 2012ನೇ ಸಾಲಿನ ಡಾ|ಬಿ.ಆರ್.ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಪ್ರಶಸ್ತಿ ಲಭಿಸಿದೆ. ಅವರು ತಮ್ಮ ಕವಿತೆಯನ್ನು ವಾಚಿಸಿದರು.
ಸೋಮೇಶ್ ಉಪ್ಪಾರ್: ಕಾರ್ಯಕ್ರಮಕ್ಕೆ ಲೇಟಾಗಿ ಬಂದು ವೇದಿಕೆಯನ್ನೂ ಏರದೆ ತಮ್ಮ ಕವಿತೆಯನ್ನು ಓದಿ ಉಸ್ಸಪ್ಪ ಎಂದು ತಣ್ಣಗೆ ಕುಳಿತದ್ದೇ ತಪ್ಪಾಯಿತು. ಪಲ್ಲವ ವೆಂಕಟೇಶರೆಂದೇ ಖ್ಯಾತನಾಮರಾಗಿರುವ ಹೊಸಪೇಟೆಯ ಕಸಾಪ ಅಧ್ಯಕ್ಷರು ಜಿ.ಶಿವಕುಮಾರ್ರವರ ಕಾವ್ಯಕ್ಕೆ ರಾಗ ಸಂಯೋಜಿಸಿ ಹಾಡಲು ಅಪ್ಪಣೆ ನೀಡಬೇಕೆ? ಅಮಾಯಕ ಸೋಮೇಶನ ಸಂದಿಗ್ಧಸ್ಥಿತಿಗೆ ಗೆಳೆಯರ ಗುಂಪು ಕರುಣೆಯ ಕಣ್ಣೀರ್ಗರೆದು ವೇದಿಕೆಗೆ ಕಳಿಸಿಕೊಟ್ಟರು.
ಸ್ವರೂಪಾನಂದ: ಲೇಖನಗಳನ್ನು ಬರೆದು ಬರೆದು ಸಾಕಾಗಿ ಬೇಸತ್ತು ಕವಿತೆಯತ್ತ ಹೊರಳಿರುವ ಸ್ವರೂಪರವರು, ಮದುವೆಯಾಗುವ ಸಂದರ್ಭದಲ್ಲಿ ತಮ್ಮ ಸ್ವರೂಪವನ್ನು ಬದಲಿಸಿಕೊಂಡಿರುವುದು ಹೊಸ ಸಂಗತಿ. ಕವಿತೆ ಬರೆಯುವುದು ಹೇಗೆ? ಸ್ವರೂಪನ ಪ್ರಶ್ನೆಗೆ: ಕವಿತೆಯ ಗೀಳು ಹತ್ತಿಸಿಕೊಂಡ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಸಿದ್ದು ದೇವರ ಮನೆಯವರು ಕೊಟ್ಟ ಉತ್ತರ- ನಿನ್ನ ಲೇಖನದ ವಾಕ್ಯಗಳನ್ನು ತುಂಡುತುಂಡಾಗಿ ಕತ್ತರಿಸಿಡುವುದು.
ಗುರುವಾರ, ಜುಲೈ 15, 2010
ಮೈಸೂರಿನಲ್ಲಿ "ವರ್ತಮಾನ ಕರ್ನಾಟಕ"
ಸೋಮವಾರ, ಆಗಸ್ಟ್ 10, 2009
ಸಜ್ಜನನ ಸಹಜ ಕೃಷಿ
ರಾಸಾಯನಿಕ ಗೊಬ್ಬರಗಳನ್ನು ಹಾಕಿಯೇ ಬೆಳೆ ಬೆಳೆಯಬೇಕೆಂದು ಪ್ರಯತ್ನಿಸಿ ಕೈಸುಟ್ಟುಕೊಳ್ಳುತ್ತಿರುವ ರೈತರು ಒಂದೆಡೆಯಾದರೆ, ಬೆಳೆ ಸರಿಯಾಗಿ ಬರಲಿಲ್ಲವೆಂದು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಮತ್ತೊಂದೆಡೆ. ಇದಾವುದನ್ನೂ ತಲೆಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನು ಸಹಜ ಕೃಷಿ ನಡೆಸುತ್ತ ಮತ್ತಿತರರಿಗೆ ಮಾದರಿಯಾಗಿರುವ ಸಜ್ಜನನಂತಹ ರೈತರು ವಿಭಿನ್ನವೆನಿಸುತ್ತಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದವರಾಗಿರುವ ಎಚ್.ವಿ.ಸಜ್ಜನ್ ಕೃಷಿಯಲ್ಲಿ ಸದಾ ಪ್ರಯೋಗಶೀಲರು. ಜಿಲ್ಲೆ ರಾಜ್ಯಮಟ್ಟದ ತರಬೇತಿಗಳನ್ನು ನೀಡುವಷ್ಟರ ಮಟ್ಟಿಗೆ ಸಾಧನೆ ಮಾಡಿರುವ ಸಜ್ಜನ್ ಕಳೆದ ೧೪ ವರ್ಷಗಳಿಂದ ಸಹಜ ಕೃಷಿ ಅಳವಡಿಸಿಕೊಂಡಿರುವ ರೈತ.
ಕೂಡ್ಲಿಗಿ ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ ಹುಲಿಕೆರೆ ಪುಟ್ಟ ಗ್ರಾಮ. ಆದರೆ ಇಂದು ಸಜ್ಜನರಂತಹ ರೈತರಿಂದ ಅದು ಮಾದರಿ ಗ್ರಾಮವಾಗಿಯೂ ಬೆಳೆಯುತ್ತಿದೆ. ಕಳೆದ ೧೪ ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಔಷಧಿಗಳಿಲ್ಲದೆ ಸಹಜ ಕೃಷಿಯ ಮೂಲಕ, ಸಾಧನೆ ಮಾಡುತ್ತಿರುವ ಸಜ್ಜನ್ ಸದಾ ಕ್ರಿಯಾಶೀಲ ರೈತ. ಖುಷ್ಕಿ ಬೇಸಾಯ ಪದ್ಧತಿಯ್ಲಲಿ ರೈತರಿಗೆ ಹೆಚ್ಚು ಲಾಭ ತಂದುಕೊಡುವ ತೋಟಗಾರಿಕೆ ಬೆಳೆಗಳಾವವು ಎನ್ನುವುದರಿಂದ ಹಿಡಿದು, ಕೊಟ್ಟಿಗೆ ಗೊಬ್ಬರದಿಂದ ಹೇಗೆ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂಬುದನ್ನು ಸಾದಿಸಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ, ಅಜೋಲಾ ಎಂಬ ಜಾನುವಾರುಗಳ ಕಡಿಮೆ ವೆಚ್ಚದ ಆಹಾರ, ಜೀವಾಮೃತ ತಯಾರಿಕೆ, ಬೀಜೋಪಚಾರ, ಹೈನುಗಾರಿಕೆಯಲ್ಲಿ ವಿವಿಧೋದ್ದೇಶ ಯೋಜನೆಗಳು, ಜೊತೆಗೆ ರಾಜ್ಯಾದ್ಯಂತ ಸಹಜ ಕೃಷಿಯ ಬಗ್ಗೆ ಪ್ರವಾಸ, ತಜ್ಞರೊಂದಿಗೆ ಚರ್ಚೆ, ರೈತರಿಗೆ ತರಬೇತಿ ನೀಡುವುದು ಹೀಗೆ ಸಜ್ಜನರ ಕಾರ್ಯಕ್ಷೇತ್ರ ವಿಶಾಲವಾದುದು.
ಸಜ್ಜನರ ತೋಟ, ಮನೆಯನ್ನು ನೋಡಿದರೆ ಸಾಕು ಎಂತಹ ನಿರಾಶಾವಾದಿ ರೈತರೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ವಿಶೇಷವೆಂದರೆ ಸಜ್ಜನ್ ಯಾವುದೇ ಯಂತ್ರೋಪಕರಣಗಳನ್ನು ಕೃಷಿಗೆ ಬಳಸದೆ ಸಾಂಪ್ರದಾಯಿಕ ರೀತಿಯಲ್ಲಿಯೇ, ಅತಿಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುತ್ತಿರುವುದು. ಕೊಟ್ಟಿಗೆ ಗೊಬ್ಬರವನ್ನು ದ್ರವರೂಪದಲ್ಲಿ, ಘನರೂಪದಲ್ಲಿ ಯಾವ ಯಾವ ಉದ್ದೇಶಕ್ಕೆ ಬಳಸಬಹುದೆಂಬುದಕ್ಕೆ ಅವರ ತೋಟವೇ ಒಂದು ಪ್ರಯೋಗಶಾಲೆಯಾಗಿದೆ. ಕೊಟ್ಟಿಗೆ ಗೊಬ್ಬರದ ದ್ರವವನ್ನು ಮೇಲೆತ್ತಿ ಸಂಗ್ರಹಿಸಲು, ತಾವೇ ತಯಾರಿಸಿದ ರಾಟೆ, ಕಾಲುವೆ, ನಿರುಪಯುಕ್ತ ವಸ್ತುಗಳಿಂದಾದುದು. ರಾಟೆಗೆ ಬಳಸಿದ್ದು ಕಾರಿನ ಹಳೆಯ ಚಕ್ರ, ನೈಲಾನ್ ಹಗ್ಗ, ಸೈಕಲ್ ಟ್ಯೂಬಿನ ರಬ್ಬರ್. ಮೇಲೆತ್ತಿದ ಗೊಬ್ಬರದ ದ್ರವವನ್ನು ಡ್ರಂನಲ್ಲಿ ಸಂಗ್ರಹಿಸಲು ತಾವೇ ಕಾಲುವೆಯನ್ನು ನಿರ್ಮಿಸಿದ್ದಾರೆ. ಸಂಗ್ರಹಗೊಂಡ ಕೊಟ್ಟಿಗೆ ಗೊಬ್ಬರವನ್ನು ಹೊಲಕ್ಕೆ ಬಳಸುತ್ತಾರೆ. ಘನ ರೂಪದ ಕೊಟ್ಟಿಗೆ ಗೊಬ್ಬರವನ್ನು ಎರೆಹುಳು ಸಾಕಣೆಗೆ ಬಳಸುತ್ತಾರೆ. ಹೆಚ್ಚಾದ ಎರೆಹುಳುಗಳನ್ನು ತಮ್ಮ ಗ್ರಾಮ ಹಾಗೂ ಬೇರೆ ಗ್ರಾಮದಲ್ಲೂ ಚರಂಡಿಗಳಲ್ಲಿ ಹಾಕಿದ್ದಾರೆ. ಚರಂಡಿಯಲ್ಲಿ ಸಮೃದ್ಧವಾಗಿ ಬೆಳೆಯುವ ಎರೆಹುಳುಗಳನ್ನು ಬೇರೆ ರೈತರೂ ಉಪಯೋಗಿಸಿಕೊಳ್ಳಬಹುದು. ಎರೆಹುಳು ಗೊಬ್ಬರವನ್ನು ಜರಡಿ ಹಿಡಿಯಲು, ಜರಡಿಯ ಯಂತ್ರವನ್ನು ತಾವೇ ಸಿದ್ಧಗೊಳಿಸಿದ್ದಾರೆ. ಇಲ್ಲೆಲ್ಲ ಬಳಕೆಯಾಗುವುದು ಕೇವಲ ಮಾನವಶಕ್ತಿಯೊಂದೇ, ವಿದ್ಯುತ್‌ನ್ನು ಅವಲಂಬಿಸಿಯೇ ಇಲ್ಲವೆಂಬುದು ಗಮನಿಸಬೇಕಾದ ಸಂಗತಿ. ಮಲ್ಲಿಗೆಯನ್ನು ಮುಖ್ಯಬೆಳೆಯನ್ನಾಗಿಸಿಕೊಂಡಿರುವ ಸಜ್ಜನ್, ಇದೀಗ ಬೆಟ್ಟದ ನೆಲ್ಲಿಕಾಯಿ, ಬೇಲದಹಣ್ಣು, ನೇರಳೆಹಣ್ಣುಗಳನ್ನು ಬೆಳೆಯುತ್ತ್ದಿದಾರೆ. ಭದ್ರಾ ರೈತರ ಕೂಟದಿಂದ ೨ ಬಾರಿ ರಾಜ್ಯಪ್ರಶಸ್ತಿ, ೧ ಬಾರಿ ಜಿಲ್ಲಾಪ್ರಶಸ್ತಿ ಪಡೆದ್ದಿದಾರೆ. ರಾಜ್ಯ, ರಾಷ್ಟ್ರಮಟ್ಟಗಳಲ್ಲಿ ಕೃಷಿ ಪ್ರವಾಸ ಮಾಡಿದ್ದಾರೆ. ಮೈಸೂರಿನಲ್ಲಿ ನಜೀರ್‌ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ರೈತರಿಗಾಗಿ ನಡೆಸುತ್ತಿರುವ ರಾಜ್ಯ ಮಟ್ಟದ ಸಹಜ ಕೃಷಿ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೆಲ್ಲವನ್ನು ಸಾಧಿಸಲು ಮುಖ್ಯ ಕಾರಣವನ್ನು ಕೇಳಿದರೆ, ಕೊರತೆ, ನೋವು ನನ್ನ ಎಲ್ಲ ಕ್ರಿಯಾಶೀಲತೆಗೆ ಕಾರಣ ಎನ್ನುತ್ತಾರೆ. ಅಂದಹಾಗೆ ಎಚ್.ವಿ.ಸಜ್ಜನ್ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರ. ಸಜ್ಜನರನ್ನು ಕಾಣಬೇಕೆನ್ನುವವರು, ಅವರ ಸಹಜ ಕೃಷಿಯ ಬಗ್ಗೆ ಆಸಕ್ತಿಯಿರುವವರುಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ೯೯೦೨೬೬೧೫೯೭
ಚಿತ್ರ, ಲೇಖನ -ಸಿದ್ಧರಾಮ ಹಿರೇಮಠ. ಕೂಡ್ಲಿಗಿ
ಶುಕ್ರವಾರ, ಜುಲೈ 17, 2009
ಕನಸು ನಶೆಯೇರುವುದೆಂದರೆ...
ಗಾರ್ಮೆ೦ಟಿನ ಕೂಲಿಯೊಬ್ಬಳು
ಅವಸರದಿ ಸ್ಟಿಚ್ ಮಾಡುವಾಗ ಸೂಜಿ ಕೈಗ ನೆಟ್ಟು
ಮೆಲ್ಲಗೆ ಜಿನುಗಿದ ರಕ್ತದ ಕಲೆಗಳು
ಪ್ಯಾಕ್ಟರಿಯ ಮ್ಯಾನೇಜರ್ ಗೆ ಕಾಣದಂತೆ
ಅವಳ ಗೆಳತಿಯೇ ಜೀನ್ಸ್ ಪ್ಯಾಂಟನ್ನು ತೀಡಿ ತೀಡಿ
ಫಾಲಿಶ್ ಮಾಡಿ ಮರೆಮಾಚುತ್ತಾಳೆ !
ಕೆಲಸ ಕಳೆದುಕೊಳ್ಳುವ ಅಪಾಯದಿಂದ ಪಾರುಮಾಡಿ
ಅವಳ ಮುಖದಲ್ಲಿ ಗೆಲುವು ತರುತ್ತಾಳೆ !
*****
ಅದೇ ಜೀನ್ಸ್ ಪ್ಯಾಂಟನ್ನು
ತೊಟ್ಟ ಹುಡುಗಿಯೊಬ್ಬಳು
ಪಬ್ಬಿನಲಿ ಕುಡಿದು ಅಮಲೇರಿ
ಪ್ಯಾಂಟಿನ ಮೇಲೆಲ್ಲಾ ವಿಸ್ಕಿಯು ಚೆಲ್ಲಿದಾಗ
ರಕ್ತದ ಕಲೆ ಮತ್ತೇರಿ
ಗರ್ಮೆ೦ಟ್ ಹುಡುಗಿಯ ಕನಸಿಗೆ ಲಗ್ಗೆ ಇಟ್ಟಿವೆ!
ಇಲ್ಲಿ ಕೈಕಾಲು ಚಾಚದಸ್ಟು
ಪುಟ್ಟ ರೂಮಿನಲ್ಲಿ ಕೈ ಬೆರಳನೋವಲ್ಲಿ
ಗೆಳತಿಯ ಗಟ್ಟಿಯಾಗಿ ಬಿಗಿದಪ್ಪಿ ಮಲಗಿದ್ದಾಳೆ...
ಈಗ ಅವಳಿಗೂ ಮೆಲ್ಲಗೆ ನಶೆ ಏರುತ್ತಿದೆ.
-ಅರುಣ್ ಜೋಳದಕೂಡ್ಲಿಗಿ
ಸೋಮವಾರ, ಜೂನ್ 29, 2009
ಮತ್ತೆ ಮತ್ತೆ ಅಕ್ಷತಾ....
ಬುಧವಾರ, ಜೂನ್ 17, 2009
ಹೊರಳಿ, ಮರಳಿ ಹಳ್ಳಿಗೆ...
ಕಳೆದ ಹತ್ತುಹದಿನೈದು ವರ್ಷಗಳಿಂದ ಎಲ್ಲಿದ್ದಾನೋ ಎಂದು ಗೊತ್ತಿಲ್ಲದ ಸ್ನೇಹಿತನೊಬ್ಬ ಇಲ್ಲಿಯೇ ಕೊಪ್ಪಳದ ಸಮೀಪ ಬಿಕನಹಳ್ಳಿಯಲ್ಲಿದ್ದಾನೆಂದು ತಿಳಿದಾಗ ಅತೀವ ಸಂತಸವಾಯಿತು.
ಆತನ ಹೆಸರು ಜಯಂತ್. ನಾನು ಮೈಸೂರಲ್ಲಿ ಕನ್ನಡ ಎಂ.ಎ. ಪರೀಕ್ಷೆ ಬರೆಯಬೇಕಾದಾಗ ಇಳಿದುಕೊಳ್ಳಲು ತಾವು ಹಾಗೂ ಊಟೋಪಚಾರ ನೋಡಿಕೊಂಡ ವ್ಯಕ್ತಿ. ಹಾಗೇ ನೋಡಿದರೆ ಅದಕ್ಕೂ ಮೊದಲು ನಾವು ಸ್ನೇಹಿತರೇ ಅಲ್ಲ. ಸ್ನೇಹಿತ ಬಣಗಾರ್ ಜರ್ನಲಿಜಂ ಮಾಡಲು ಮೈಸೂರಿಗೆ ಹೋಗಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಆತ ಹುಡುಕಿಕೊಂಡ ತಾವು ಅದಾಗಿತ್ತು. ಆಗಲೇ ಆತನಿಗೆ ಬಣಗಾರ್ ಮೂಲವಾಗಿದ್ದ, ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ನಾನು ಮೂಲವಾದೆ.
ಸಿವಿಲ್ ಇಂಜನಿಯರ್ ಆಗಿದ್ದ ಜಯಂತ್ ಉದ್ಯೋಗದಲ್ಲಿದ್ದರು. ಸರಸ್ವತಿಪುರಂನಲ್ಲಿ ಒಂದು ಸಣ್ಣ ರೂಮ್ ಮಾಡಿದ್ದರು. ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರು. ಅವರಿಗೆ ವಿದ್ಯಾರ್ಥಿಗಳಾಗಿದ್ದ ಬಣಗಾರ್, ಮೈಸೂರು ತಾಲ್ಲೂಕಿನವರೇ ಆದ ಬಸವರಾಜ ಆತನ ರೂಮ್ ಸೇರಿಕೊಂಡಿದ್ದರು. ಚಿಕ್ಕ ರೂಮ್‌ನಲ್ಲಿ ಯಾರು ಬಂದರೂ ಬೇಸರಿಸಿಕೊಳ್ಳದ ಜಯಂತ್ ಎಲ್ಲರಿಗೂ ಅವಕಾಶ ನೀಡಿದ್ದರು. ತೆಳ್ಳನೆಯ ದೇಹ, ಮಿತಮಾತು, ಸಾಹಿತ್ಯದ ಓದು, ಒಂದು ಸ್ವಲ್ಪ ಹೊತ್ತು ವಯಲಿನ್ ನುಡಿಸುವುದು, ಸ್ವಯಂಪಾಕ ಆತನ ದಿನಚರಿಗಳಲ್ಲಿ ಸೇರಿಹೋಗಿದ್ದವು.
ಬೇರೆಯವರ ರೂಮ್‌ನಲ್ಲಿ ಬಣಗಾರ್ ಇದ್ದು, ಅಲ್ಲಿ ನನಗೆ ಅಹ್ವಾನ ನೀಡಿರುವುದು ನನಗೆ ಮುಜಗರದ ವಿಷಯವಾಗಿದ್ದರೂ ನನ್ನ ಬದುಕಿನ ಸ್ಥಿತಿ ಅನಿವಾರ್ಯವೂ ಆಗಿತ್ತು. ಆತನ ರೂಮ್ ಸೇರಿದಾಗ ಎಲ್ಲಾ ಮುಜಗರಗಳು ಹೊರಟು ಹೋದವು. ಅಷ್ಟೊಂದು ಆತ್ಮೀಯವಾಗಿ ನನ್ನೊಂದಿಗೆ ವಿಚಾರ ಹಂಚಿಕೊಂಡ ಜಯಂತ್ ತೋರಿದ ಪ್ರೀತಿ, ವಿಶ್ವಾಸದ ಪರಿ ನನಗೆ ಈಗಲೂ ಪುಳಕಗೊಳಿಸುತ್ತದೆ. ಅಷ್ಟೊತ್ತಿಗಾಗಲೇ ಮಾರ್ಕ್ಸ್‌ವಾದಿಯಾಗಿದ್ದ ನಾನು ಯಾವುದೇ ವಿಷಯ ಮಂಡಿಸುವಾಗಲೂ ’ಪ್ರಖರ’ವಾಗಿ ಮುಖಕ್ಕೆ ಹೊಡೆದಂತೆ ಮಂಡಿಸುತ್ತಿದ್ದೆ. ಭಿನ್ನಾಭಿಪ್ರಾಯಗಳನ್ನು ಸಹಿಸುತ್ತಿದ್ದಿಲ್ಲ. ಮೃದು ಮನಸ್ಸಿನ ಜಯಂತ್‌ಗೆ ಇದು ಇರಿಸುಮುರಿಸು ಆಗಿರಬಹುದು ಎಂದು ಈಗ ಅನ್ನಿಸುತ್ತದೆ. ಆಗ ಅದು ಸತ್ಯ ಹೇಳುವ ಪರಿ ಎಂದಷ್ಟೇ ನನಗೆ ಗೊತ್ತಿತ್ತು. ವಾರದಲ್ಲಿ ಒಂದು ದಿನ ಚಾಮುಂಡಿ ಬೆಟ್ಟವನ್ನು ಓಡುತ್ತಲೇ ಏರಿ, ದೇವಿಯ ದರ್ಶನ ಪಡೆದು, ಲಾಡು ತೆಗೆದುಕೊಂಡು ಬರುತ್ತಿದ್ದರು. ನಾಸ್ತಿಕನಾದ ನಾನು ಲಾಡು ತಿನ್ನಬಹುದು ಎಂದೇ ಹೇಳಿಯೇ ತಿನ್ನುತ್ತಿದ್ದೆ. ಇದಾದ ನಂತರ ಬದುಕಿನ ಸ್ತಿತ್ಯಂತರಗಳು ಎಲ್ಲಿ ಎಲ್ಲಿಗೂ ಕೊಂಡೊಯ್ದು ಎಲ್ಲರೂ ಒಂದಲ್ಲ ಒಂದು ದಿಕ್ಕಿಗೆ ಹೊರಳಿಕೊಂಡೆವು. ಜಯಂತ್ ನೆನಪಾದಾಗ ಎಲ್ಲಿ ಜಯಂತ್? ಅಂತಹ ಬಣಗಾರ್‌ನಿಗೆ ಕೇಳಿದರೆ, ನನಗೂ ಸಿಕ್ಕಿಲ್ಲ, ಸ್ವಲ್ಪದಿನ ಬೆಂಗಳೂರಲ್ಲಿ ಇದ್ದನಂತೆ, ನಂತರ ಚಿನ್ನೈಗೆ ಹೋಗಿದ್ದಾನೆಂದು ಹೇಳಿದ, ಮತ್ತೊಂದು ಸಲ, ಉತ್ತರ ಭಾರತದ ಯಾವುದೋ ಊರಲ್ಲಿದ್ದಾನಂತೆ, ಮಗದೊಂದು ಸಲ, ಜಯಂತ್ ಸಿಗುವುದಿಲ್ಲ, ಆತ ವಿದೇಶದಲ್ಲಿದ್ದಾನೆ ಎಂದು ಹೇಳಿ ಅಂತಿಮಷರಾ ಬರೆದು ಬಿಟ್ಟ. ಬ್ಯಾಂಕಾಕ್, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಐದುವರ್ಷಗಳ ಕಾಲ ಉದ್ಯೋಗದಲ್ಲಿದ್ದ ಜಯಂತ್ ಒಂದು ದಿನ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಆ ದೇಶದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಅದರ ಮೂಲಕ್ಕೆ ಹೋದ ಜಯಂತ್ ಹಣವೇ ಪ್ರಧಾನವಾಗಿರುವ ಜಗತ್ತಿನಲ್ಲಿ ನಾನು ಜೀವಿಸುತ್ತಿರುವುದು ಯಾಕೇ? ಎಂಬ ಪ್ರಶ್ನೆ ಕೇಳಿಕೊಂಡ, ಬದುಕುವುದಕ್ಕೆ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವುದು ಕೇವಲ, ಅನ್ನ, ಬಟ್ಟೆ, ವಿಚಾರ ಮಾತ್ರ ಅನ್ನಿಸಿದೊಡನೆ ಪಿಚ್ಚೆನಿಸಿ ಉದ್ಯೋಗಕ್ಕೆ ರಾಜೀನಾಮೆ ಬಿಸಾಕಿ, ಹೊರಳಿ ನೋಡಿಕೊಂಡು, ಮರಳಿ ತಮ್ಮ ಕುಗ್ರಾಮಕ್ಕೆ ಬಂದು ಬಿಟ್ಟರು. ಉನ್ನತ ಉದ್ಯೋಗ ಬಿಟ್ಟು, ಮಳೆಯಾಶ್ರಿತ ಕೃಷಿ ಮಾಡುತ್ತೇನೆ ಎಂದು ಬಂದವರನ್ನು ಈ ಸಮಾಜ ’ಹುಚ್ಚುತನ’ ಎಂದೇ ನಗುತ್ತದೆ. ಹಾಗೇ ಈಗಲೂ ನಗುತ್ತಿದೆ ಕೂಡಾ.
ಅಂತಹ ಜಯಂತ್ ಕೊಪ್ಪಳದ ಬಳಿ ಬಿಸನೂರುನಲ್ಲಿದ್ದಾನೆಂದು ತಿಳಿದಾಗ ಕಂಡು ಬರಲು ಬಣಗಾರ್ ಕಾರು ರೆಡಿ ಮಾಡಿದರು. ಕನ್ನಡ ವಿವಿ ಕಲಾವಿದ ಕೆ.ಮಕಾಳಿ, ಭಾವೈಕ್ಯತಾ ವೇದಿಕೆಯ ಪಿ. ಅಬ್ದುಲ್, ಕಾರು ಚಾಲಕ ವೀರಭದ್ರಪ್ಪ, ನಾವು ಬೆಳಿಗ್ಗೆಯೇ ಹೊರಟೆವು. ಬಿಸನೂರು ಅಲ್ಲ, ಅದು ಬಿಕನೂರು ಎಂದು ಗೊತ್ತು ಮಾಡಿಕೊಂಡು ಆ ಕುಗ್ರಾಮ ಸೇರಬೇಕಾದರೆ ಸಾಕು ಸಾಕಾಯಿತು. ದಾರಿಯಲ್ಲಿ ಹಳ್ಳದ ಹುದಲಲ್ಲಿ ಕಾರಿನ ಚಕ್ರ ಸಿಕ್ಕು ಕೊಂಡು ಹಿಂದಕ್ಕೆ ಬಂದು, ಮತ್ತೊಂದು ದಾರಿಯಲ್ಲಿ ಸಾಗಿದ್ದು ನಡೆಯಿತು. ಅಂತೂ, ಇಂತೂ ಜಯಂತ್ ಮನೆ ಪತ್ತೆ ಹಚ್ಚಿದಾಗ ಜಯಂತ್ ತಂದೆ ಜಯಂತ್ ಹೊಲದಲ್ಲಿದ್ದಾನೆಂದು ಹೇಳಿ, ನಮ್ಮ ಜೊತೆ ಹೊಲಕ್ಕೆ ಹೊರಟರು. ಕಾಲು ಹಾದಿ ಹಿಡಿದು ಹಳ್ಳದಲ್ಲಿ ಇಳಿದು ಮೇಲತ್ತುವಾಗ ಜಯಂತ್ ಅಲ್ಲಿ ಪ್ರತ್ಯಕ್ಷ. ಮೆಲ್ಲಗೆ ಬನ್ನಿ, ಇವು ನ್ಯಾಚುರಲ್ ಗೇಟ್‌ಗಳು ಎಂದು ನಮ್ಮನ್ನು ಗುರುತಿಸಿ ಕೈ ಹಿಡಿದು ಕರೆದುಕೊಂಡರು. ಅದೇ ಜಯಂತ್. ಅದೇ ನೀಳ ದೇಹ, ಅದೇ ಮಂದಸ್ಮಿತ ನಗು, ಬಟ್ಟೆ ಮಾತ್ರ ಮಾಸಲು ಹತ್ತಿಬಟ್ಟೆಯವು. ಹರಿದ ಚಪ್ಪಲಿ, ಅಪ್ಪಟ ಭಾರತೀಯ ಕೃಷಿಕನಾಗಿ ಬದಲಾಗಿದ್ದ ಜಯಂತ್. ಕುಡಿಯುವ ನೀರಿಗೂ ಪರಿತಪಿಸುವ ಕುಗ್ರಾಮದಲ್ಲಿ, ತೋಡಿದಷ್ಟು ಉಪ್ಪು ನೀರು ಸಿಗುವ ಊರಿನಲ್ಲಿ, ಸರಿಯಾಗಿ ಒಂದು ಘಳಿಗೆಯೂ ವಿದ್ಯಾವಂತರೆನಿಸಿಕೊಂಡವರು ಇರಲಾರದ ಊರಲ್ಲಿ ಜಯಂತ್ ತಣ್ಣಗೆ ಇರುವುದಾದರೂ ಹೇಗೆ?
ಸಹಜ ಕೃಷಿಯ ಮೂಲಕ ತಮ್ಮ ೧೬ ಏಕರೆ ಎರೆ ಹಾಗೂ ಕೆಂಪು ಭೂಮಿಯ ಕೃಷಿ ನಡೆಸುತ್ತಿರುವ ಜಯಂತ್‌ನನ್ನು ಕಂಡು ನಕ್ಕವರು, ಹಿಯ್ಯಾಳಿಸುತ್ತಿರುವುದು ಇಡೀ ಊರೇ ಆಗಿದೆ.
ಗೊಬ್ಬರವಿಲ್ಲದ, ಹೈಬ್ರಿಡ್ ಬೀಜವಿಲ್ಲದೇ, ಆ ಭಾಗದ ಮೂಲ ತಳಿಗಳನ್ನು ಪತ್ತೆ ಹಚ್ಚಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಮಾರುಕಟ್ಟೆ ಅಗತ್ಯವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾರೆ. ಕುಸಬಿ ಬೆಳೆದು ಅದನ್ನು ಗಿರಣಿಯಲ್ಲಿ ಹಾಕಿಸಿ, ಎಣ್ಣೆ ಮಾಡಿಕೊಳ್ಳುತ್ತಾರೆ. ನವಣಿ, ಜೋಳ, ಸಾವಿ, ತೊಗರಿ, ಶೇಂಗಾ, ಅಗಸಿ, ಹೆಸರು, ಉದ್ದು ಬೆಳೆಯುತ್ತಾರೆ. ಇವರ ಬೆಳೆದ ಫಸಲು ಇವರ ಮನೆಯಲ್ಲಿಯೇ ಇದೆ. ಹಣ ಯಾಕೇ ಬೇಕು. ಸಣ್ಣಪುಟ್ಟ ಖರ್ಚುಗಳು ಅಷ್ಟು ತಾನೇ ಎಂದು ಹೇಳುತ್ತಾರೆ. ನಮಗೆ ಸಣ್ಣಪುಟ್ಟ ಖರ್ಚುಗಳ ಅಗತ್ಯವೂ ಇಲ್ಲ ಎಂದೇ ನಗುತ್ತಾರೆ. ಉತ್ತರ ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಪ್ರೀತಿಸಿ ಮದುವೆಯಾಗಿದ್ದ ಆ ಮಹಿಳೆ ಕೂಡಾ ಇಂತಹ ಕುಗ್ರಾಮದಲ್ಲಿ ಗಂಡನ ಜೊತೆ ಇದ್ದಾಳೆ. ಕನ್ನಡ ಭಾಷೆ ಬರದು, ಈಗೀಗ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆಯಂತೆ. ಇವರ ಎದುರಲ್ಲಿ ರಾಜರೋಷವಾಗಿ ಗೊಬ್ಬರ ಹಾಕಿ, ಹೈಬ್ರಿಡ್ ಬಂಪರ್ ಬೆಳೆ ಬೆಳೆಯುವ ರೈತರು, ಅವರ ಎದುರಲ್ಲಿ ದೇಶಿ ತಳಿಗಳು, ಅದರಲ್ಲೂ ಇಳುವರಿ ಕಡಿಮೆ ಕೊಡುವ ಬೆಳೆ ಬೆಳೆಯುವ ಜಯಂತ್ ಪೇಲವವಾಗಿ ಕಾಣುತ್ತಾರೆ. ಕೀಟಗಳ ಹಾವಳಿ, ಬೇರೆ ಬೇರೆ ಕಾರಣದಿಂದಲೂ ಬೆಳೆ ಹಾಳಾದರೂ ಇವರು ಚಿಂತೆ ಮಾಡುವುದಿಲ್ಲ. ಕೀಟಗಳು ಕೂಡಾ ತಿನ್ನಬೇಕು ತಾನೇ ತಿನ್ನಲಿ ಬಿಡಿ ಎನ್ನುತ್ತಾರೆ. ಅಷ್ಟೆಲ್ಲಾ ಬಂಪರ್ ಬೆಳೆ ಬೆಳೆದರೂ ಆ ಊರಲ್ಲಿ ಸ್ವಾವಲಂಬನೆಯಿಂದ ಯಾವ ರೈತನೂ ಜೀವಿಸುತ್ತಿಲ್ಲ. ಆದರೆ ಅಷ್ಟು ಕಡಿಮೆ ಬೆಳೆದು ಸ್ವಾವಲಂಬನೆಯಿಂದ ಬದುಕಿ ತೋರಿಸುತ್ತಿದ್ದಾನೆ ಜಯಂತ್. ಜಯಂತ್‌ನ ಮನೆಯಲ್ಲಿ ಟಿ.ವಿ. ಇಲ್ಲ, ಅದರ ಅಗತ್ಯವೂ ಇಲ್ಲ. ನೋಡುತ್ತೀರಿ, ಹೊರಳಿ, ಮರಳಿ ಇಲ್ಲಿಗೆ ಬರುತ್ತಾರೆ ಎಂದು ಜಯಂತ್ ಹೇಳುತ್ತಾನೆ. ಜಾಗತೀಕರಣದ ಈ ಹೊತ್ತಿನಲ್ಲಿ ಜಗತ್ತಿನಲ್ಲಿ ಯಾವ ಸರ್ಕಾರಗಳು ಬರಬೇಕು, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರಬೇಕು ಎನ್ನುವುದನ್ನು ಕೆಲವೇ ಕೆಲವು ಬೆರಳೆಣಿಕೆಯ ಜನ ನಿರ್ಧರಿಸುತ್ತಿದ್ದಾರೆ. ಇಂತಹ ಮೋಡಿಗೆ ನಾವು ಯಾಕೇ ಒಳಗಾಗಬೇಕು. ನಮ್ಮ ವಿವೇಕ, ವಿಚಾರದೊಡನೆ ಬದುಕಬೇಕು ಎನ್ನುತ್ತಾನೆ ಜಯಂತ್. ಇದೇ ಉತ್ತರವೂ ಎನ್ನುತ್ತಾನೆ. ಜಯಂತ್ ಮನೆಗೆ ಬಂದು ದೇಶಿ ತಿಂಡಿ ತಿನ್ನುವಾಗ ’ಕಾಯಕವೇ ಕೈಲಾಸ’ ಎಂದು ಹೇಳುವ ಬಸವಣ್ಣನ ಕ್ಯಾಲೆಂಡರ್ ಗಾಳಿಗೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಹೊಯ್ದಾಡುತ್ತಿತ್ತು. ದೇಶಿ ಕಡಲೆ, ಕುಸಬಿ ಪಡೆದುಕೊಂಡು, ಕಾರು ಹತ್ತುವಾಗ ರಸ್ತೆ ಹಾಳಾಗಿರುವ ಬಗ್ಗೆ ನಾವು ಗೋಳು ತೋಡಿಕೊಂಡು ಸರ್ಕಾರವನ್ನು ಬಯ್ದರೆ, ಜಯಂತ್ ಹೇಳಿದ, ರಸ್ತೆ ಇಷ್ಟೇ ಇದ್ದರೆ ಸಾಕು, ನಡೆಯಲು ಬರುತ್ತದಲ್ಲವೇ? ಅವಕ್ಕಾಗುವ ಸರದಿ ನಮ್ಮದು. ಜಯಂತ್ ತುಳಿದ ಹಾದಿಯನ್ನು ಬದಿಗೊತ್ತಿ ರಾಜಮಾರ್ಗಕ್ಕೆ ನಾವು ಹೊರಳಿಕೊಂಡಾಗ ಕಳೆದುಕೊಂಡ ಅನುಭವ ಎಲ್ಲರಲ್ಲೂ ದಟ್ಟವಾಗುತ್ತಾ ಹೊಯಿತು. ನಮ್ಮ ಜೊತೆ ದೇಶಿಯ ಕಾಳುಗಳು ನಾವಿದ್ದೇವೆ ಎಂದು ಹೇಳಿದವು.
ಶುಕ್ರವಾರ, ಏಪ್ರಿಲ್ 17, 2009
ಕಾಡುವ ಕತೆಗಳು
(ಸ್ನೇಹಿತರಾದ ಚಿದಾನಂದ ಸಾಲಿಯವರ ಕಥಾ ಸಂಕಲನ ಮತ್ತು ಡಾ.ಆನಂದ್ ಋಗ್ವೇದಿಯವರ ವಿಮರ್ಶಾ ಸಂಕಲನಗಳನ್ನು ಮುದ್ದಾದ ಮುದ್ರಣ, ಮೌಲಿಕ ಪ್ರಕಟಣೆಗೆ ಮತ್ತು ಆತ್ಮೀಯ ಸ್ನೇಹಕ್ಕೆ ಹೆಸರಾದ ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್ ರವರು ಹೊರತರುತ್ತಿರುವ ಸಂದರ್ಭದಲ್ಲಿ ಎರಡು ಪುಸ್ತಕಗಳ ಮುಖಪುಟಗಳು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಸಾಲಿ’ಯವರ ಕಥಾಸಂಕಲನದ ದೇವು ಪತ್ತಾರರ ವಿಮರ್ಶೆ ನಿಮಗಾಗಿ)
ಸಿದ್ಧ ವಿನ್ಯಾಸದಿಂದ ‘ಮುಕ್ತ’ವಾದ ಕಥೆಗಳು ‘ಎಲೆಯುದುರುವ ಕಾಲ’ ಎಂಬ ಅನುವಾದಿತ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಧಿಕೃತ ಪ್ರವೇಶ ಪಡೆದ ಚಿದಾನಂದ ಸಾಲಿ ನಂತರ ‘ಮೌನ’ ಎಂಬ ಗಜಲ್ ಸಂಕಲನ ಪ್ರಕಟಿಸಿದರು. ಅದಕ್ಕೂ ಮುನ್ನ ಅಂದರೆ ಸುಮಾರು ದಶಕದ ಹಿಂದೆಯೇ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ‘ಕಥೆಗಾರ’ ಎಂದು ಗುರುತಿಸಿಕೊಂಡಿದ್ದ ‘ಸಾಲಿ’ ಅನುವಾದ, ಗಜಲ್‌ಗಳ ಕಡೆಗೆ ಮುಖ ಮಾಡಿದ್ದರು. ‘ಕೊಟ್ಟ ಕುದುರೆಯನೇರಲರಿಯದೆ’ ಅಂತಹ ಓದಿಸಿಕೊಳ್ಳುವ ಗುಣವುಳ್ಳ ಉತ್ತಮ ಕಥೆ ಬರೆದಿದ್ದ ಕಥೆಗಳ ವಿಷಯಕ್ಕೆ ಮೌನವಾದರೇನೋ ಅನ್ನಿಸತೊಡಗಿತ್ತು. ಆದರೆ, ನಾಡಿನ ಪ್ರಮುಖ ದೈನಿಕಗಳ ಪುರವಣಿ ಮತ್ತು ವಾರಪತ್ರಿಕೆಗಳಲ್ಲಿ ಕಥೆ ಪ್ರಕಟಿಸುವ ಮೂಲಕ ‘ಅಸ್ತಿತ್ವ’ ತೋರಿಸುತ್ತ ಬಂದಿದ್ದರು. ಕಥಾಸ್ಪರ್ಧೆಯ ಬಹುಮಾನ ಪಡೆಯುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದ್ದರು.
ಪ್ರತಿಯೊಂದು ಕಥೆಯೂ ಹೊಸ ಜೀವನಾನುಭವ ಕಟ್ಟಿಕೊಡುವ ‘ಪ್ರಯೋಗ’ ಎಂದು ಭಾವಿಸುವ ಕಥೆಗಾರ ಮಾತ್ರ ಚೌಕಟ್ಟುಗಳನ್ನು ಮೀರಿ ತನ್ನದೇ ಹೊಸ ಕಥೆ ಕಟ್ಟಬಲ್ಲ. ಚಿದಾನಂದ ಸಾಲಿ ತಮ್ಮ ಮೊದಲ ‘ಧರೆಗೆ ನಿದ್ರೆಯು ಇಲ್ಲ’ ಕಥಾಸಂಕಲನದ ಮೂಲಕ ತಾವು ಕೇವಲ ಸ್ಪರ್ಧೆಗಾಗಿ ಬರೆಯುವ ಕಥೆಗಾರ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಸಂಕಲನದ ಎಲ್ಲ ಕಥೆಗಳೂ ಒಂದಕ್ಕಿಂತ ಮತ್ತೊಂದು ವಸ್ತು, ವಿಷಯ, ನಿರ್ವಹಣೆ ಮತ್ತು ತಂತ್ರದ ದೃಷ್ಟಿಯಿಂದ ಭಿನ್ನವಾಗಿವೆ. ವೈವಿಧ್ಯತೆಯೇ ಇಲ್ಲಿನ ಕಥೆಗಳ ಜೀವಾಳ. ಕನ್ನಡದ ಅಥವಾ ಹೈದರಾಬಾದ್ ಕರ್ನಾಟಕದ ಕಥೆಗಾರರ ಸಿದ್ಧವಿನ್ಯಾಸದ ಹೆಜ್ಜೆ ನಾಡಿನಲ್ಲಿ ನಡೆಯಬಯಸದ ‘ಸಾಲಿ ಮಾಸ್ತರ’ ತನ್ನದೇ ಹೊಸ ದಾರಿ ಕಂಡುಕೊಂಡಿದ್ದಾರೆ.
‘ಕೊಟ್ಟ ಕುದುರೆಯನೇರಲರಿಯದೆ’ ಮತ್ತು ‘ಆಸೆಯೆಂಬ ತಥಾಗತನ ವೈರಿ’ ಕಥೆಗಳು ಸಂಕಲನದಲ್ಲಿ ಗಮನ ಸೆಳೆಯುವ ಗಂಭೀರ ಕಥೆಗಳು. ಬದುಕಿನ ನಗ್ನಸತ್ಯವನ್ನು ಯಾವುದೇ ಮುಜುಗರಕ್ಕೆ ಎಡೆಯಿಲ್ಲದಂತೆ ಬಿಚ್ಚಿಡುವ ಈ ಎರಡು ಕಥೆಗಳು ವಸ್ತು ಮತ್ತು ನಿರ್ವಹಣೆಯ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಸೂಕ್ಷ್ಮ ಸಂವೇದಿ ಓದುಗನನ್ನು ಈ ಎರಡು ಕಥೆಗಳು ಡಿಸ್ಟರ್ಬ್ ಮಾಡಿಬಿಡುತ್ತವೆ ಮತ್ತು ಯೋಚನೆಗೆ ಹಚ್ಚುತ್ತವೆ.
ಸಲಿಂಗ ಕಾಮದ ಸುತ್ತ ಹೆಣೆದಿರುವ ‘ಒಳಗಿನೊಳಗಿನ ಒಳಗೆ’ ಕಾವ್ಯಾತ್ಮಕ ನಿರೂಪಣೆಯಿಂದ ಪ್ರಿಯವಾಗುತ್ತದೆ. ‘ಹಿಪಾಕ್ರಸಿ’ ಕೇಂದ್ರವಾಗಿಟ್ಟುಕೊಂಡ ‘ಕಾಗೆಯೊಂದಗುಳ ಕಂಡರೆ’ ಮತ್ತು ‘ಅಂಬರದೊಳಗಾಡುವ ಗಿಳಿ’ ಕಥೆಗಳು ಸಭ್ಯ-ಅಸಭ್ಯಗಳನ್ನು ಮುಖಾಮುಖಿಯಾಗಿಸಿ ರೂಢಿಗತ ನಂಬಿಕೆಯನ್ನು ಹುಸಿ ಮಾಡುತ್ತವೆ.
ನಿರೀಕ್ಷಿತ ಅಂತ್ಯ ತೋರಿಸುವ ನಿಶ್ಚಿತ ಉದ್ದೇಶವಿರುವ ‘ಕಳ್ಳಗಂಜಿ ಕಾಡ ಹೊಕ್ಕರೆ..’ ಕಥೆಯಲ್ಲಿ ಪ್ರಬಂಧ ಧ್ವನಿಯಿದೆ. ‘ಮನಸೂಂದ್ರೆ ನಾಕೊಂದ್ಲೆ ನಾಕಲ್ಲ’ ಕಥೆಯ ತಂತ್ರ ಅತ್ಯಂತ ವಿಶಿಷ್ಟವಾದದ್ದಾಗಿದೆ. ಮನಸ್ಸು ಮತ್ತು ಬುದ್ಧಿಗಳ ನಡುವಿನ ತಾಕಲಾಟ ಮತ್ತು ಆ ನಂತರ ಅದಕ್ಕೆ ಘಟನೆಯನ್ನು ಬೆಸೆಯುವ ಮೂಲಕ ಹೇಳಿದ ಕಥೆ ಮನತಟ್ಟುತ್ತದೆ. ‘ತಾಯ ಮೊಲೆವಾಲು ನಂಜಾಗಿ ಕೊಲುವೆಡೆ’ ಕಥೆಯು ಘಟನೆಯೊಂದನ್ನು ಕಥೆಯಾಗಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ. ಅದರಾಚೆಗೆ ಬೆಳೆದು ನಿಲ್ಲುವ ಕಥೆಯು ತನ್ನದೇ ಅರ್ಥದ ಸಾಧ್ಯತೆಗಳನ್ನು ಬಿಚ್ಚಿಡುತ್ತ ಹೋಗುತ್ತದೆ.
ಈ ಸಂಕಲನದ ಕಥೆಗಳ ಭಾಷೆಯ ಬಗ್ಗೆ ಬರೆಯದಿದ್ದರೆ ಅಪೂರ್ಣವಾಗುತ್ತದೆ. ಕಾವ್ಯಾತ್ಮಕ ಪದಗಳ ಬಳಕೆ, ಸೂಚ್ಯವಾಗಿ ಹೇಳುವ ರೀತಿ ಅಪ್ಯಾಯಮಾನವಾಗಿದೆ. ಭಾವಗೀತಾತ್ಮಕ ನಿರೂಪಣೆ ಇಲ್ಲಿನ ಕಥೆಗಳ ಓದನ್ನು ಸಹ್ಯವಾಗಿಸುತ್ತದೆ. ಶಂಕರಗೌಡ ಬೆಟ್ಟದೂರು ಅವರ ಕಲಾಕೃತಿಗಳನ್ನು ಒಳಗೊಂಡ ಆಕರ್ಷಕ ಮುಖಪುಟ ಮತ್ತು ಅಷ್ಟೇ ಸೊಗಸಾದ ಮುದ್ರಣ ಗಮನ ಸೆಳೆಯುತ್ತವೆ. ತಪ್ಪಿಲ್ಲದಂತೆ ಅಥವಾ ಮುದ್ರಣದೋಷಗಳಾಗದಂತೆ ವಹಿಸಿದ ಕಾಳಜಿ ಎದ್ದು ಕಾಣಿಸುತ್ತದೆ.
-ದೇವು ಪತ್ತಾರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)