ಸೋಮವಾರ, ಜೂನ್ 29, 2009

ಮತ್ತೆ ಮತ್ತೆ ಅಕ್ಷತಾ....



ಆತ್ಮೀಯ ಗೆಳತಿ ಅಕ್ಷತಾ ಅವರ ಅಹರ್ನಿಶಿ ಪ್ರಕಾಶನದ ಎರಡನೇ ಪುಸ್ತಕ ಇಂದು ಬಿಡುಗಡೆ ಅವರಿಗೆ ಅಭಿನಂದನೆಗಳು

-ನಿರಂಜನ್,ಉಷಾ,ಅರುಣ್ ಮತ್ತು ಎಲ್ಲಾ ಸ್ನೇಹಿತರಿಂದ

ಬುಧವಾರ, ಜೂನ್ 17, 2009

ಹೊರಳಿ, ಮರಳಿ ಹಳ್ಳಿಗೆ...






ಕಳೆದ ಹತ್ತುಹದಿನೈದು ವರ್ಷಗಳಿಂದ ಎಲ್ಲಿದ್ದಾನೋ ಎಂದು ಗೊತ್ತಿಲ್ಲದ ಸ್ನೇಹಿತನೊಬ್ಬ ಇಲ್ಲಿಯೇ ಕೊಪ್ಪಳದ ಸಮೀಪ ಬಿಕನಹಳ್ಳಿಯಲ್ಲಿದ್ದಾನೆಂದು ತಿಳಿದಾಗ ಅತೀವ ಸಂತಸವಾಯಿತು.
ಆತನ ಹೆಸರು ಜಯಂತ್. ನಾನು ಮೈಸೂರಲ್ಲಿ ಕನ್ನಡ ಎಂ.ಎ. ಪರೀಕ್ಷೆ ಬರೆಯಬೇಕಾದಾಗ ಇಳಿದುಕೊಳ್ಳಲು ತಾವು ಹಾಗೂ ಊಟೋಪಚಾರ ನೋಡಿಕೊಂಡ ವ್ಯಕ್ತಿ. ಹಾಗೇ ನೋಡಿದರೆ ಅದಕ್ಕೂ ಮೊದಲು ನಾವು ಸ್ನೇಹಿತರೇ ಅಲ್ಲ. ಸ್ನೇಹಿತ ಬಣಗಾರ್ ಜರ್ನಲಿಜಂ ಮಾಡಲು ಮೈಸೂರಿಗೆ ಹೋಗಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಆತ ಹುಡುಕಿಕೊಂಡ ತಾವು ಅದಾಗಿತ್ತು. ಆಗಲೇ ಆತನಿಗೆ ಬಣಗಾರ್ ಮೂಲವಾಗಿದ್ದ, ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ನಾನು ಮೂಲವಾದೆ.
ಸಿವಿಲ್ ಇಂಜನಿಯರ್ ಆಗಿದ್ದ ಜಯಂತ್ ಉದ್ಯೋಗದಲ್ಲಿದ್ದರು. ಸರಸ್ವತಿಪುರಂನಲ್ಲಿ ಒಂದು ಸಣ್ಣ ರೂಮ್ ಮಾಡಿದ್ದರು. ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರು. ಅವರಿಗೆ ವಿದ್ಯಾರ್ಥಿಗಳಾಗಿದ್ದ ಬಣಗಾರ್, ಮೈಸೂರು ತಾಲ್ಲೂಕಿನವರೇ ಆದ ಬಸವರಾಜ ಆತನ ರೂಮ್ ಸೇರಿಕೊಂಡಿದ್ದರು. ಚಿಕ್ಕ ರೂಮ್‌ನಲ್ಲಿ ಯಾರು ಬಂದರೂ ಬೇಸರಿಸಿಕೊಳ್ಳದ ಜಯಂತ್ ಎಲ್ಲರಿಗೂ ಅವಕಾಶ ನೀಡಿದ್ದರು. ತೆಳ್ಳನೆಯ ದೇಹ, ಮಿತಮಾತು, ಸಾಹಿತ್ಯದ ಓದು, ಒಂದು ಸ್ವಲ್ಪ ಹೊತ್ತು ವಯಲಿನ್ ನುಡಿಸುವುದು, ಸ್ವಯಂಪಾಕ ಆತನ ದಿನಚರಿಗಳಲ್ಲಿ ಸೇರಿಹೋಗಿದ್ದವು.
ಬೇರೆಯವರ ರೂಮ್‌ನಲ್ಲಿ ಬಣಗಾರ್ ಇದ್ದು, ಅಲ್ಲಿ ನನಗೆ ಅಹ್ವಾನ ನೀಡಿರುವುದು ನನಗೆ ಮುಜಗರದ ವಿಷಯವಾಗಿದ್ದರೂ ನನ್ನ ಬದುಕಿನ ಸ್ಥಿತಿ ಅನಿವಾರ್ಯವೂ ಆಗಿತ್ತು. ಆತನ ರೂಮ್ ಸೇರಿದಾಗ ಎಲ್ಲಾ ಮುಜಗರಗಳು ಹೊರಟು ಹೋದವು. ಅಷ್ಟೊಂದು ಆತ್ಮೀಯವಾಗಿ ನನ್ನೊಂದಿಗೆ ವಿಚಾರ ಹಂಚಿಕೊಂಡ ಜಯಂತ್ ತೋರಿದ ಪ್ರೀತಿ, ವಿಶ್ವಾಸದ ಪರಿ ನನಗೆ ಈಗಲೂ ಪುಳಕಗೊಳಿಸುತ್ತದೆ. ಅಷ್ಟೊತ್ತಿಗಾಗಲೇ ಮಾರ್ಕ್ಸ್‌ವಾದಿಯಾಗಿದ್ದ ನಾನು ಯಾವುದೇ ವಿಷಯ ಮಂಡಿಸುವಾಗಲೂ ’ಪ್ರಖರ’ವಾಗಿ ಮುಖಕ್ಕೆ ಹೊಡೆದಂತೆ ಮಂಡಿಸುತ್ತಿದ್ದೆ. ಭಿನ್ನಾಭಿಪ್ರಾಯಗಳನ್ನು ಸಹಿಸುತ್ತಿದ್ದಿಲ್ಲ. ಮೃದು ಮನಸ್ಸಿನ ಜಯಂತ್‌ಗೆ ಇದು ಇರಿಸುಮುರಿಸು ಆಗಿರಬಹುದು ಎಂದು ಈಗ ಅನ್ನಿಸುತ್ತದೆ. ಆಗ ಅದು ಸತ್ಯ ಹೇಳುವ ಪರಿ ಎಂದಷ್ಟೇ ನನಗೆ ಗೊತ್ತಿತ್ತು. ವಾರದಲ್ಲಿ ಒಂದು ದಿನ ಚಾಮುಂಡಿ ಬೆಟ್ಟವನ್ನು ಓಡುತ್ತಲೇ ಏರಿ, ದೇವಿಯ ದರ್ಶನ ಪಡೆದು, ಲಾಡು ತೆಗೆದುಕೊಂಡು ಬರುತ್ತಿದ್ದರು. ನಾಸ್ತಿಕನಾದ ನಾನು ಲಾಡು ತಿನ್ನಬಹುದು ಎಂದೇ ಹೇಳಿಯೇ ತಿನ್ನುತ್ತಿದ್ದೆ. ಇದಾದ ನಂತರ ಬದುಕಿನ ಸ್ತಿತ್ಯಂತರಗಳು ಎಲ್ಲಿ ಎಲ್ಲಿಗೂ ಕೊಂಡೊಯ್ದು ಎಲ್ಲರೂ ಒಂದಲ್ಲ ಒಂದು ದಿಕ್ಕಿಗೆ ಹೊರಳಿಕೊಂಡೆವು. ಜಯಂತ್ ನೆನಪಾದಾಗ ಎಲ್ಲಿ ಜಯಂತ್? ಅಂತಹ ಬಣಗಾರ್‌ನಿಗೆ ಕೇಳಿದರೆ, ನನಗೂ ಸಿಕ್ಕಿಲ್ಲ, ಸ್ವಲ್ಪದಿನ ಬೆಂಗಳೂರಲ್ಲಿ ಇದ್ದನಂತೆ, ನಂತರ ಚಿನ್ನೈಗೆ ಹೋಗಿದ್ದಾನೆಂದು ಹೇಳಿದ, ಮತ್ತೊಂದು ಸಲ, ಉತ್ತರ ಭಾರತದ ಯಾವುದೋ ಊರಲ್ಲಿದ್ದಾನಂತೆ, ಮಗದೊಂದು ಸಲ, ಜಯಂತ್ ಸಿಗುವುದಿಲ್ಲ, ಆತ ವಿದೇಶದಲ್ಲಿದ್ದಾನೆ ಎಂದು ಹೇಳಿ ಅಂತಿಮಷರಾ ಬರೆದು ಬಿಟ್ಟ. ಬ್ಯಾಂಕಾಕ್, ಥೈಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಐದುವರ್ಷಗಳ ಕಾಲ ಉದ್ಯೋಗದಲ್ಲಿದ್ದ ಜಯಂತ್ ಒಂದು ದಿನ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಆ ದೇಶದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಅದರ ಮೂಲಕ್ಕೆ ಹೋದ ಜಯಂತ್ ಹಣವೇ ಪ್ರಧಾನವಾಗಿರುವ ಜಗತ್ತಿನಲ್ಲಿ ನಾನು ಜೀವಿಸುತ್ತಿರುವುದು ಯಾಕೇ? ಎಂಬ ಪ್ರಶ್ನೆ ಕೇಳಿಕೊಂಡ, ಬದುಕುವುದಕ್ಕೆ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವುದು ಕೇವಲ, ಅನ್ನ, ಬಟ್ಟೆ, ವಿಚಾರ ಮಾತ್ರ ಅನ್ನಿಸಿದೊಡನೆ ಪಿಚ್ಚೆನಿಸಿ ಉದ್ಯೋಗಕ್ಕೆ ರಾಜೀನಾಮೆ ಬಿಸಾಕಿ, ಹೊರಳಿ ನೋಡಿಕೊಂಡು, ಮರಳಿ ತಮ್ಮ ಕುಗ್ರಾಮಕ್ಕೆ ಬಂದು ಬಿಟ್ಟರು. ಉನ್ನತ ಉದ್ಯೋಗ ಬಿಟ್ಟು, ಮಳೆಯಾಶ್ರಿತ ಕೃಷಿ ಮಾಡುತ್ತೇನೆ ಎಂದು ಬಂದವರನ್ನು ಈ ಸಮಾಜ ’ಹುಚ್ಚುತನ’ ಎಂದೇ ನಗುತ್ತದೆ. ಹಾಗೇ ಈಗಲೂ ನಗುತ್ತಿದೆ ಕೂಡಾ.
ಅಂತಹ ಜಯಂತ್ ಕೊಪ್ಪಳದ ಬಳಿ ಬಿಸನೂರುನಲ್ಲಿದ್ದಾನೆಂದು ತಿಳಿದಾಗ ಕಂಡು ಬರಲು ಬಣಗಾರ್ ಕಾರು ರೆಡಿ ಮಾಡಿದರು. ಕನ್ನಡ ವಿವಿ ಕಲಾವಿದ ಕೆ.ಮಕಾಳಿ, ಭಾವೈಕ್ಯತಾ ವೇದಿಕೆಯ ಪಿ. ಅಬ್ದುಲ್, ಕಾರು ಚಾಲಕ ವೀರಭದ್ರಪ್ಪ, ನಾವು ಬೆಳಿಗ್ಗೆಯೇ ಹೊರಟೆವು. ಬಿಸನೂರು ಅಲ್ಲ, ಅದು ಬಿಕನೂರು ಎಂದು ಗೊತ್ತು ಮಾಡಿಕೊಂಡು ಆ ಕುಗ್ರಾಮ ಸೇರಬೇಕಾದರೆ ಸಾಕು ಸಾಕಾಯಿತು. ದಾರಿಯಲ್ಲಿ ಹಳ್ಳದ ಹುದಲಲ್ಲಿ ಕಾರಿನ ಚಕ್ರ ಸಿಕ್ಕು ಕೊಂಡು ಹಿಂದಕ್ಕೆ ಬಂದು, ಮತ್ತೊಂದು ದಾರಿಯಲ್ಲಿ ಸಾಗಿದ್ದು ನಡೆಯಿತು. ಅಂತೂ, ಇಂತೂ ಜಯಂತ್ ಮನೆ ಪತ್ತೆ ಹಚ್ಚಿದಾಗ ಜಯಂತ್ ತಂದೆ ಜಯಂತ್ ಹೊಲದಲ್ಲಿದ್ದಾನೆಂದು ಹೇಳಿ, ನಮ್ಮ ಜೊತೆ ಹೊಲಕ್ಕೆ ಹೊರಟರು. ಕಾಲು ಹಾದಿ ಹಿಡಿದು ಹಳ್ಳದಲ್ಲಿ ಇಳಿದು ಮೇಲತ್ತುವಾಗ ಜಯಂತ್ ಅಲ್ಲಿ ಪ್ರತ್ಯಕ್ಷ. ಮೆಲ್ಲಗೆ ಬನ್ನಿ, ಇವು ನ್ಯಾಚುರಲ್ ಗೇಟ್‌ಗಳು ಎಂದು ನಮ್ಮನ್ನು ಗುರುತಿಸಿ ಕೈ ಹಿಡಿದು ಕರೆದುಕೊಂಡರು. ಅದೇ ಜಯಂತ್. ಅದೇ ನೀಳ ದೇಹ, ಅದೇ ಮಂದಸ್ಮಿತ ನಗು, ಬಟ್ಟೆ ಮಾತ್ರ ಮಾಸಲು ಹತ್ತಿಬಟ್ಟೆಯವು. ಹರಿದ ಚಪ್ಪಲಿ, ಅಪ್ಪಟ ಭಾರತೀಯ ಕೃಷಿಕನಾಗಿ ಬದಲಾಗಿದ್ದ ಜಯಂತ್. ಕುಡಿಯುವ ನೀರಿಗೂ ಪರಿತಪಿಸುವ ಕುಗ್ರಾಮದಲ್ಲಿ, ತೋಡಿದಷ್ಟು ಉಪ್ಪು ನೀರು ಸಿಗುವ ಊರಿನಲ್ಲಿ, ಸರಿಯಾಗಿ ಒಂದು ಘಳಿಗೆಯೂ ವಿದ್ಯಾವಂತರೆನಿಸಿಕೊಂಡವರು ಇರಲಾರದ ಊರಲ್ಲಿ ಜಯಂತ್ ತಣ್ಣಗೆ ಇರುವುದಾದರೂ ಹೇಗೆ?
ಸಹಜ ಕೃಷಿಯ ಮೂಲಕ ತಮ್ಮ ೧೬ ಏಕರೆ ಎರೆ ಹಾಗೂ ಕೆಂಪು ಭೂಮಿಯ ಕೃಷಿ ನಡೆಸುತ್ತಿರುವ ಜಯಂತ್‌ನನ್ನು ಕಂಡು ನಕ್ಕವರು, ಹಿಯ್ಯಾಳಿಸುತ್ತಿರುವುದು ಇಡೀ ಊರೇ ಆಗಿದೆ.
ಗೊಬ್ಬರವಿಲ್ಲದ, ಹೈಬ್ರಿಡ್ ಬೀಜವಿಲ್ಲದೇ, ಆ ಭಾಗದ ಮೂಲ ತಳಿಗಳನ್ನು ಪತ್ತೆ ಹಚ್ಚಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಮಾರುಕಟ್ಟೆ ಅಗತ್ಯವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳುತ್ತಾರೆ. ಕುಸಬಿ ಬೆಳೆದು ಅದನ್ನು ಗಿರಣಿಯಲ್ಲಿ ಹಾಕಿಸಿ, ಎಣ್ಣೆ ಮಾಡಿಕೊಳ್ಳುತ್ತಾರೆ. ನವಣಿ, ಜೋಳ, ಸಾವಿ, ತೊಗರಿ, ಶೇಂಗಾ, ಅಗಸಿ, ಹೆಸರು, ಉದ್ದು ಬೆಳೆಯುತ್ತಾರೆ. ಇವರ ಬೆಳೆದ ಫಸಲು ಇವರ ಮನೆಯಲ್ಲಿಯೇ ಇದೆ. ಹಣ ಯಾಕೇ ಬೇಕು. ಸಣ್ಣಪುಟ್ಟ ಖರ್ಚುಗಳು ಅಷ್ಟು ತಾನೇ ಎಂದು ಹೇಳುತ್ತಾರೆ. ನಮಗೆ ಸಣ್ಣಪುಟ್ಟ ಖರ್ಚುಗಳ ಅಗತ್ಯವೂ ಇಲ್ಲ ಎಂದೇ ನಗುತ್ತಾರೆ. ಉತ್ತರ ಭಾರತದಲ್ಲಿ ಉದ್ಯೋಗದಲ್ಲಿದ್ದಾಗ ಪ್ರೀತಿಸಿ ಮದುವೆಯಾಗಿದ್ದ ಆ ಮಹಿಳೆ ಕೂಡಾ ಇಂತಹ ಕುಗ್ರಾಮದಲ್ಲಿ ಗಂಡನ ಜೊತೆ ಇದ್ದಾಳೆ. ಕನ್ನಡ ಭಾಷೆ ಬರದು, ಈಗೀಗ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆಯಂತೆ. ಇವರ ಎದುರಲ್ಲಿ ರಾಜರೋಷವಾಗಿ ಗೊಬ್ಬರ ಹಾಕಿ, ಹೈಬ್ರಿಡ್ ಬಂಪರ್ ಬೆಳೆ ಬೆಳೆಯುವ ರೈತರು, ಅವರ ಎದುರಲ್ಲಿ ದೇಶಿ ತಳಿಗಳು, ಅದರಲ್ಲೂ ಇಳುವರಿ ಕಡಿಮೆ ಕೊಡುವ ಬೆಳೆ ಬೆಳೆಯುವ ಜಯಂತ್ ಪೇಲವವಾಗಿ ಕಾಣುತ್ತಾರೆ. ಕೀಟಗಳ ಹಾವಳಿ, ಬೇರೆ ಬೇರೆ ಕಾರಣದಿಂದಲೂ ಬೆಳೆ ಹಾಳಾದರೂ ಇವರು ಚಿಂತೆ ಮಾಡುವುದಿಲ್ಲ. ಕೀಟಗಳು ಕೂಡಾ ತಿನ್ನಬೇಕು ತಾನೇ ತಿನ್ನಲಿ ಬಿಡಿ ಎನ್ನುತ್ತಾರೆ. ಅಷ್ಟೆಲ್ಲಾ ಬಂಪರ್ ಬೆಳೆ ಬೆಳೆದರೂ ಆ ಊರಲ್ಲಿ ಸ್ವಾವಲಂಬನೆಯಿಂದ ಯಾವ ರೈತನೂ ಜೀವಿಸುತ್ತಿಲ್ಲ. ಆದರೆ ಅಷ್ಟು ಕಡಿಮೆ ಬೆಳೆದು ಸ್ವಾವಲಂಬನೆಯಿಂದ ಬದುಕಿ ತೋರಿಸುತ್ತಿದ್ದಾನೆ ಜಯಂತ್. ಜಯಂತ್‌ನ ಮನೆಯಲ್ಲಿ ಟಿ.ವಿ. ಇಲ್ಲ, ಅದರ ಅಗತ್ಯವೂ ಇಲ್ಲ. ನೋಡುತ್ತೀರಿ, ಹೊರಳಿ, ಮರಳಿ ಇಲ್ಲಿಗೆ ಬರುತ್ತಾರೆ ಎಂದು ಜಯಂತ್ ಹೇಳುತ್ತಾನೆ. ಜಾಗತೀಕರಣದ ಈ ಹೊತ್ತಿನಲ್ಲಿ ಜಗತ್ತಿನಲ್ಲಿ ಯಾವ ಸರ್ಕಾರಗಳು ಬರಬೇಕು, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರಬೇಕು ಎನ್ನುವುದನ್ನು ಕೆಲವೇ ಕೆಲವು ಬೆರಳೆಣಿಕೆಯ ಜನ ನಿರ್ಧರಿಸುತ್ತಿದ್ದಾರೆ. ಇಂತಹ ಮೋಡಿಗೆ ನಾವು ಯಾಕೇ ಒಳಗಾಗಬೇಕು. ನಮ್ಮ ವಿವೇಕ, ವಿಚಾರದೊಡನೆ ಬದುಕಬೇಕು ಎನ್ನುತ್ತಾನೆ ಜಯಂತ್. ಇದೇ ಉತ್ತರವೂ ಎನ್ನುತ್ತಾನೆ. ಜಯಂತ್ ಮನೆಗೆ ಬಂದು ದೇಶಿ ತಿಂಡಿ ತಿನ್ನುವಾಗ ’ಕಾಯಕವೇ ಕೈಲಾಸ’ ಎಂದು ಹೇಳುವ ಬಸವಣ್ಣನ ಕ್ಯಾಲೆಂಡರ್ ಗಾಳಿಗೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಹೊಯ್ದಾಡುತ್ತಿತ್ತು. ದೇಶಿ ಕಡಲೆ, ಕುಸಬಿ ಪಡೆದುಕೊಂಡು, ಕಾರು ಹತ್ತುವಾಗ ರಸ್ತೆ ಹಾಳಾಗಿರುವ ಬಗ್ಗೆ ನಾವು ಗೋಳು ತೋಡಿಕೊಂಡು ಸರ್ಕಾರವನ್ನು ಬಯ್ದರೆ, ಜಯಂತ್ ಹೇಳಿದ, ರಸ್ತೆ ಇಷ್ಟೇ ಇದ್ದರೆ ಸಾಕು, ನಡೆಯಲು ಬರುತ್ತದಲ್ಲವೇ? ಅವಕ್ಕಾಗುವ ಸರದಿ ನಮ್ಮದು. ಜಯಂತ್ ತುಳಿದ ಹಾದಿಯನ್ನು ಬದಿಗೊತ್ತಿ ರಾಜಮಾರ್ಗಕ್ಕೆ ನಾವು ಹೊರಳಿಕೊಂಡಾಗ ಕಳೆದುಕೊಂಡ ಅನುಭವ ಎಲ್ಲರಲ್ಲೂ ದಟ್ಟವಾಗುತ್ತಾ ಹೊಯಿತು. ನಮ್ಮ ಜೊತೆ ದೇಶಿಯ ಕಾಳುಗಳು ನಾವಿದ್ದೇವೆ ಎಂದು ಹೇಳಿದವು.