ಗುರುವಾರ, ಡಿಸೆಂಬರ್ 18, 2008

ಆ ಅಜ್ಜನೊಂದಿಗೆ ಈ ಮೊಮ್ಮಗ


ಆ ಅಜ್ಜನೊಂದಿಗೆ ಈ ಮೊಮ್ಮಗ
ಮುದೇನೂರ ಸಂಗಣ್ಣನವರ ಚೇತನಕ್ಕೆ ನುಡಿ ನಮನ
2007 ರ ಜನವರಿ ತಿಂಗಳಲ್ಲಿ ಒಂದು ನಡುಹಗಲು. ನಾವು ನಾಲ್ವರು ಗೆಳೆಯರು ಮಾತಾಡಿಕೊಂಡು ಚಿಗಟೇರಿಯಲ್ಲಿ ಮುದೇನೂರ ಸಂಗಣ್ಣನವರನ್ನು ಭೇಟಿ ಮಾಡಲು ಹೊರಟಿದ್ದೆವು. ಕವಿ ಪೀರ್ ಭಾಷಾ ಮತ್ತು ನಾನು ಹರಪನಹಳ್ಳಿ ಮಾರ್ಗವಾಗಿ ಚಿಗಟೇರಿ ಕ್ರಾಸ್ನಲ್ಲಿಳಿದು ಚಿಗಟೇರಿಯೆಡೆಗೆ ಕ್ರಮಿಸುವಾಗ ನನ್ನ ತಲೆಯಲ್ಲಿ ಅವರು ಬರೆದ ಕವಿತೆಯ ಸಾಲುಗಳೇ ತುಂಬಿ ಕೊಂಡಿದ್ದವು. ' ಆ ಅಜ್ಜ ಈ ಮೊಮ್ಮಗ ' ಕವಿತೆಯಲ್ಲಿ ಅವರು ಚಿತ್ರಿಸಿದ ಅಜ್ಜ ; ತುಂಬು ಮೈ ಧೀರ, ಬಾನೆತ್ತರದ ಹೆಮ್ಮರ, ಗುಡ್ಡ ಕಡಿದು ದೊಡ್ಡ ಹಾದಿಯ ಮಾಡಿದವ, ಪಾಪ-ಪುಣ್ಯಬಲ್ಲ ಹಮ್ಮಿಲ್ಲದ ಮಿತಿಯರಿತ ಸಂತೃಪ್ತ. ಆತ ನಿತ್ಯ ತುಂಬಿದ ಕೊಡ- ಆತ್ಮ ನಿರ್ಭರ, ಅನುದಿನದ ವಹಿವಾಟಿನಲಿ ಸಸಿನವೆನಿಸುತ ಮೆರೆದವ, ಸಮ ತಕ್ಕಡಿಯ ಹರದವ ! ಇಹಲೋಕ ಪರಲೋಕ ತಾನಿದ್ದಲ್ಲೆ ಕಾಣುತ್ತ ಪೊರೆಯುತಿಹ ಧಾರುಣಿಯೆ ಕುಲದೈವವೆಂದವ !
ಅಂತಹ ಅಜ್ಜನನ್ನು ಈ ಮೊಮ್ಮಕ್ಕಳು ಕಾಣಲೆಂದು ಹೊರಟಿದ್ದೆವು. ನಾವು ಊರು ಸೇರಿ, ಗಲ್ಲಿಗಳಲ್ಲಿ ಹಾದು ಅವರ ಅಂಗಡಿಯ ಮುಂದಿನಿಂದ ದೊಡ್ಡ ಜಗುಲಿಯ ಮನೆಯನ್ನು ಹೊಗುವಾಗ ಆ 80 ರ ಅಜ್ಜ ಎದ್ದು ಬಂದು ನಮ್ಮನ್ನು ಸ್ವಾಗತಿಸಿದ್ದರು. ತುಸು ದೂರದ ಗಂಗಾವತಿಯಿಂದ ಕವಿ ಚಂದ್ರು ತುರುವೀಹಾಳ, ನಾಟಕಕಾರ ಕರಿಸ್ವಾಮಿ ನಮಗಿಂತ ಮೊದಲೇ ಹಾಜರಿದ್ದರು. ನೀಳ ನಿಲುವಿನ ಸಂಗಣ್ಣನವರದು ಎಂದಿನದೇ ದಿರಿಸು. ಶುಭ್ರ ಬಿಳಿಯ ಬಗಲುಗಸೆ ಅಂಗಿ, ಬಿಳಿಯ ಪಂಚೆ, ಹೆಗಲ ಮೇಲೊಂದು ಶಾಲು, ಕೈಯಲ್ಲಿ ಊರುಗೋಲು. ಬೆಳ್ಳಿ ಕೂದಲ ಆ ಅಜ್ಜ ಮಮತೆಯಿಂದ ಈ ಮೊಮ್ಮಕ್ಕಳೊಂದಿಗೆ ಒಂದಿಡೀ ಹಗಲನ್ನು ಕಳೆಯುವ ಹವಣಿಕೆಯಲ್ಲಿದ್ದರೆ, ನಾವು ತಲುಪುವ ಹೊತ್ತಿಗಾಗಲೇ ನಡು ಹಗಲು ಮೀರುತ್ತಿತ್ತು.
ಅಂದು ನಾವು ಅವರೊಂದಿಗೆ ಮಾತಾಡಿದ್ದು - ಸಂವಾದವಲ್ಲ, ಸಂದರ್ಶನವಲ್ಲ, ಕಾಡು ಹರಟೆಯೂ ಅಲ್ಲ, ಜೀವಂತ ಜ್ಞಾನಕೋಶದ ಪುಟದೆದುರಿಗೆ ಕಿವಿತೆರೆದು ಕೂತ ಸಂಭ್ರಮ ಅದು! ಕನರ್ಾಟಕ ಸಕರ್ಾರ ಸುವರ್ಣ ಕನರ್ಾಟಕದ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಲ್ಪಟ್ಟ ಆ ಹಿರಿಯರ ಮಾತಿನಲ್ಲಿ ಹರಿದು ಹಂಚಿ ಹೋಗಿದ್ದ ಕರುನಾಡು ಒಂದಾದ ಕತೆಯ ಎಳೆಗಳು ಬಿಚ್ಚಿಕೊಳ್ಳುತ್ತಿದ್ದವು.
1927ರಲ್ಲಿ ದೊಡ್ಡ ಭೂಮಾಲೀಕ ಕುಟುಂಬದಲ್ಲಿ ಜನಿಸಿದ ಸಂಗಣ್ಣನವರಿಗೆ ಭಾವ ಸಿರಿವಂತಿಕೆ- ಬಾಳ ಬಡತನವೆರಡೂ ಗೊತ್ತಿದ್ದವು. ಮದನಪಲ್ಲಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಬಂದವರು ಮನೆತನದ ವಹಿವಾಟಿಗೆ ಹೆಗಲು ಕೊಡಬೇಕಾಗಿ ಬಂದ ಬಗ್ಗೆ ಅವರಲ್ಲಿ ಖೇದವಿರಲಿಲ್ಲ. ಶಾಲಾ ವಿದ್ಯಾಭ್ಯಾಸ ತುಂಡಾದರೂ ಆ ನಿತ್ಯ ಅಭ್ಯಾಸಿ ತಮ್ಮ ವ್ಯಾಪಾರ ವಹಿವಾಟಿಗಾಗಿ ತಿರುಗಾಡುತ್ತಾ ಮರಾಠಿ, ಬಂಗಾಳಿ, ಹಿಂದಿ ಭಾಷೆ ಕಲಿತವರು. ಹಾಗೆ ಕಲಿತ ಭಾಷೆ ಕನ್ನಡಕ್ಕೆ ನೇರ ಮರಾಠಿಯಿಂದ ಫಾಸಿರಾಮ ಕೋತ್ವಾಲ ದಂತಹ ನಾಟಕವನ್ನು ಒದಗಿಸಿತು. ಬಂಗಾಳಿಯಿಂದ ಕತೆ-ನಾಟಕಗಳ ಅನುವಾದ, ಅವರು ಸಂಗ್ರಹಿಸಿದ ಸಹಸ್ರಾರು ಜಾನಪದ ಕತೆಗಳಿಂದ ' ಲಕ್ಷಾಪತಿ ರಾಜನ ಕತೆ'ಯಂತಹ ಲಕ್ಷೊಪಲಕ್ಷ ಕತೆಗಳು ಜನ ಮಾನಸದ ರಂಗ ಮಂಟಪದಲ್ಲಿ ಪ್ರಕಟಗೊಂಡವು.
ಅವರ ತಂದೆ ಕೊಟ್ರಪ್ಪನವರದು ಒಂದೇ ಆಸೆ - ಮಗ ರಾಜಕಾರಣಿಯಾಗಲೆಂದು. ಅವರ ಒತ್ತಾಸೆಗೆ ಮಣಿದು 1962ರಲ್ಲಿ ಹರಪನಹಳ್ಳಿಯಿಂದ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಸ್ಪದರ್ಿಸಿ ಸೋತ ಮುದೇನೂರ ಸಂಗಣ್ಣ ಮುಂದೆಂದೂ ರಾಜಕಾರಣದಲ್ಲಿ ಸಕ್ರಿಯರಾಗಲಿಲ್ಲ. ಅದು ಕನ್ನಡ ನಾಟಕ, ಜಾನಪದ ಕ್ಷೇತ್ರಗಳ ಗೆಲುವು.
ಕೇಳಿಸಿಕೊಳ್ಳುವ ಕಿವಿ, ಅಪಾರ ಸಹನೆಯಿದ್ದ ಆ ಅಜ್ಜ ಸಂಗ್ರಹಿಸಿದ ಅಪಾರ ತ್ರಿಪದಿಗಳ, ಜಾನಪದ ಕತೆಗಳ ಭಂಡಾರವೇ ಅವರ ಬಳಿ ಇತ್ತು. ' ನವಿಲು ಕುಣಿದಾವ ' ಎಂಬ ತ್ರಿಪದಿಗಳ ಸಂಗ್ರಹ, 'ಗೊದಲಿಗರ ದೇವೇಂದ್ರಪ್ಪನವರ ಆಟಗಳು' ' ಗೊಂಬಿ ಗೌಡರ ಸೂತ್ರದ ಗೊಂಬಿ ಆಟಗಳು' ಮುಂತಾದ ಅವರ ಸಂಗ್ರಹಿತ ಕೃತಿಗಳು ಕನ್ನಡದ ಜಾನಪದ ಕ್ಷೇತ್ರದಲ್ಲಿ ಅವಿಸ್ಮರಣೀಯವಾದುವು. ಸಂಗ್ರಹ ಕಾರ್ಯದ ಬಗ್ಗೆ ಯಾವ ಹೆಚ್ಚುಗಾರಿಕೆಯನ್ನೂ ತೋರಗೊಡದೆ, ಭಾವ ನಿಲರ್ಿಪ್ತತೆಯಲ್ಲಿ ಅವರು ಮಾತನಾಡುವುದೇ ನಮ್ಮೆಲ್ಲರ ಬೆರಗು! ತನ್ನ ಗರ್ಭದ ಮುತ್ತು ರತ್ನ ಹೆಕ್ಕಿ ಹರವಿಟ್ಟು ತನ್ನದಲ್ಲವೆಂಬಂತಿರುವ ಸಮುದ್ರದ ನಿಲರ್ಿಪ್ತತೆ ಮತ್ತು ಗಾಂಭೀರ್ಯ ಅದು! ಜನಪದರ ಮಾತಿನಲ್ಲಿ ಹಾದು ಹೋಗುವ ನುಡಿಗಟ್ಟುಗಳನ್ನ ಹೆಕ್ಕಿ 'ಚಿಗಟೇರಿ ಪದಕೋಶ' ಬರೆದ ಆ ಅಜ್ಜನಿಗೆ ತನ್ನ ಬಗ್ಗೆ ವಿವರಿಸಲು ಪದಗಳೇ ಸಿಗುತ್ತಿರಲಿಕ್ಕಿಲ್ಲವೇ!? ನಮ್ಮೆಲ್ಲರ ಮಾತು ಅವರನ್ನು ಸುತ್ತಿ ಕನರ್ಾಟಕದ ಏಕೀಕರಣ ಹೋರಾಟ, ಜಾನಪದ ಕ್ಷೇತ್ರದಲ್ಲಿ ಆಗಬೇಕಾದ ಜರೂರು ಕೆಲಸಗಳು, ಅವರ ನಾಟಕಗಳು, ಆಗ ಅವರು ಬರೆಯುತ್ತಿದ್ದ ಬುದ್ದನ ಕುರಿತಾದ ನಾಟಕ . . . . . . ಮಾತಿನ ವ್ಯಾಪಕತೆಗೆ ಸಮಯ ಚಿಕ್ಕದಾಗುತ್ತಿದ್ದ ಆ ಹೊತ್ತು ತಡವಾಗಿ ಬಂದೆವಲ್ಲ ಎಂಬ ಪರಿತಾಪ ನಮ್ಮೆಲ್ಲರಲ್ಲಿದ್ದರೆ, ಸಂಗಣ್ಣನವರಿಗೆ ಮೊಮ್ಮಕ್ಕಳು ಚೆನ್ನಾಗಿ ಉಣ್ಣಲೆಂದು ಉಪಚರಿಸುವ ಸಡಗರ!
ಮುದೇನೂರ ಸಂಗಣ್ಣನವರ ಒಡನಾಟವೇ ವಿಶಿಷ್ಠವಾದುದು. ಮೂಲ ಬಳ್ಳಾರಿಗರೇ ಆದರೂ ಸನಿಹದ ದಾವಣಗೆರೆಯೊಂದಿಗೂ ಅವರದು ನಿಕಟ ನಂಟು. ಜೋಳದರಾಶಿ ದೊಡ್ಡನಗೌಡರಿಂದ ಈ ಹೊತ್ತಿನ ಪೀರ್ಭಾಷಾನವರೆಗೂ ಎಲ್ಲಾ ವಯೋಮಾನದ, ಮನೋಧರ್ಮದ ಬಳ್ಳಾರಿಗರೊಂದಿಗೆ ಅವರ ಸಖ್ಯವಿದ್ದರೆ ದಾವಣಗೆರೆಯಲ್ಲೂ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪನವರೊಂದಿಗೆ ಅವರದು ನಿರಂತರ ಸಂಪರ್ಕ. ಪ್ರೊ. ರಂಗನಾಥರ ಮಗನ ಮದುವೆಯ ಕವಿಗéೋಷ್ಠಿಗೆ, ಕವಯತ್ರಿ ಅರುಂಧತಿ ರಮೇಶರ ಮನೆಗೆ ಹೀಗೆ ಬಂದಾಗಲೆಲ್ಲ ಅವರನ್ನು ಇದಿರ್ಗೊಂಡು ಮಾತಾಡಿ, ಬೆನ್ನ ನೇವರಿಸಿಕೊಂಡ ನನ್ನಂತಹ ಯುವ ಪೀಳಿಗೆಯವರೂ ಅಪಾರ. ಭೌಗೋಳಿಕವಾಗಿ ಚಿಗಟೇರಿ ನೂತನ ದಾವಣಗೆರೆ ಜಿಲ್ಲೆಗೆ ಸೇರಿದ್ದರಿಂದ ಆ ಹಿರಿಯ ಜೀವ ನಮ್ಮವರೆನಿಸಿದ್ದು ನಮ್ಮ ಭಾಗ್ಯ. ಆದರೆ 'ನಾಡೋಜ' ಸಮ್ಮಾನಿತ ಆ ಹಿರಿಯ ನಾಡಿನ ಭಾಗ್ಯವೂ ಹೌದು.
ವ್ಯಾಪಾರದ ಜಾಣ್ಮೆ, ವಿದ್ವಾಂಸನ ಮಹತ್ತು, ಮನೆ ಹಿರಿಯನ ಗತ್ತು ಎಲ್ಲವನ್ನೂ ಒಳಗೊಂಡಿದ್ದ ಮುದೇನೂರ ಸಂಗಣ್ಣನವರ ವ್ಯಕ್ತಿತ್ವವನ್ನು ನಿಖರವಾಗಿ ದಾಖಲಿಸುವುದು ಅಷ್ಟು ಸುಲಭವಲ್ಲ. ಅವರ ನೇರ, ನಿಷ್ಠುರ ಮಾತಿನ ಹಿಂದೆ ದ್ವೇಷದ ಲೇಪವಿರುತ್ತಿರಲಿಲ್ಲ. ಆದರೆ ಅವರ ಅಸಮಾಧಾನ ಸಕಾರಣವಾಗಿರುತ್ತಿದ್ದುದು ಬಹಳಷ್ಟು ಜನರಿಗೆ ಅರ್ಥವಾದಂತಿರಲಿಲ್ಲ. ತಂಬಾಕಿನ ದೊಡ್ಡ ಬೆಳೆಗಾರರು, ದಲ್ಲಾಳಿಗಳೂ ಆಗಿದ್ದ ಅವರ ಮನೆತನದ ಭೂಮಾಲೀಕತ್ವ ಮತ್ತು ಮನಸ್ಸಿನ ಸಮಾಜವಾದಿ ನಿಲುವು ಎರಡನ್ನೂ ಪ್ರತ್ಯೇಕವಾಗಿ ಹೇಗೆ ಪರಿಗಣಿಸುವುದು ಎಂಬ ಗೊಂದಲವನ್ನು - ಅವರನ್ನು ಸಂದಶರ್ಿಸಿ 'ಲೋಕ ವಿರೋಧಿಗಳ ನಡುವೆ' ದಾಖಲಿಸಿದ ಪ್ರೊ. ರಹಮತ್ ತರೀಕೆರೆಯವರೂ ಸೇರಿದಂತೆ - ಎಲ್ಲಾ ಎಡಪಂಥೀಯ ಚಿಂತಕರೂ ಎದುರಿಸಿದ್ದಿದೆ. ನನ್ನಂತಹ ಕಿರಿಯನಿಗೆ ಪತ್ರ ಬರೆಯುವಾಗಲೂ ' ಆದರಣೀಯ' ಎಂದೇ ಸಂಬೋಧಿಸಿ ಒಕ್ಕಣೆ ಪ್ರಾರಂಭಿಸುತ್ತಿದ್ದ ಅವರ ಪತ್ರ ಪ್ರೀತಿಯೊಂದಿಗೇ ' ನೀವು ಪಡೆದ ಪುಸ್ತಕ ಓದುವುದು ಆಗಿದ್ದರೆ ದಯವಿಟ್ಟು ಹಿಂದಿರುಗಿಸಿ' ಎಂಬ ಒತ್ತಾಸೆಯನ್ನು ಅಷ್ಟೇ ನಿಷ್ಠುರವಾಗಿ ಹೊಂದಿರುತ್ತಿತ್ತು.
ಕೆ.ಶಿವರಾಮ ಕಾರಂತರೊಂದಿಗೆ, ಕೆ.ವಿ.ಸುಬ್ಬಣ್ಣರವರೊಂದಿಗೆ ದಶಕಗಳ ಕಾಲದ ಅವರ ಸ್ನೇಹ, ಕತರ್ೃತ್ವ ಶಕ್ತಿ, ಸೃಜನಶೀಲ ನಿಸ್ಪೃಹತೆಯನ್ನು ಈ ಮಧ್ಯ ಕನರ್ಾಟಕ ಪ್ರದೇಶ ಸಮರ್ಪಕವಾಗಿ ಬಳಸಿಕೊಂಡಿದ್ದರೆ- ಬಾಲವನದಂತೆ, ನೀನಾಸಂನಂತೆ ಸಾಂಸ್ಥಿಕವಾಗಿ ಮಹತ್ವವಾದುದನ್ನು ಪಡೆಯಬಹುದಿತ್ತೇನೋ? ಆದರೆ ಸ್ವತಃ ತಾವೇ ಒಂದು ಸಂಸ್ಥೆಯಂತೆ ಕೆಲಸ ಮಾಡಿದ ಮುದೇನೂರ ಸಂಗಣ್ಣನವರನ್ನು ಮಾತ್ರ ಪಡೆದದ್ದು - ಅದೇ ಲಭ್ಯ, ಅದು ಭಾಗ್ಯ.
21ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆಯ ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸಮ್ಮಾನ, ನಾಟಕ ಅಕಾಡೆಮಿಯ ಫೆಲೋಶಿಪ್, ಸಾಹಿತ್ಯ ಅಕಾಡೆಮಿಯ ಬಹುಮಾನ ಹೀಗೆ ಹಲವು ಗೌರವಗಳ ಭಾರ ಹೊತ್ತ ಸಂಗಣ್ಣನವರಿಗೆ ದಾವಣಗೆರೆಯೂ ' ಮಹಲಿಂಗ ರಂಗ' ಹೆಸರಿನ ಸಾಹಿತ್ಯ ಪ್ರಶಸ್ತಿಯನ್ನು ಅಪರ್ಿಸಿ ಧನ್ಯವಾಗಿತ್ತು. ಅಂತಹ ದಾವಣಗೆರೆಯನ್ನೇ ಅವರು ಚಿರ ವಿಶ್ರಾಂತಿಗೆ ಆಯ್ದುಕೊಂಡುದು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ ಹಿರಿಯ ಜೀವ ಯಾರಿಗೂ ತೊಂದರೆ ಕೊಡಬಾರದೆಂದು ವಿಷಯ ಹರಡಲು ಬಿಟ್ಟಿರಲಿಲ್ಲ. ಅವರು ಕೋಮಾದಲ್ಲಿ ಜಾರುವವರೆಗೂ ಮಾಧ್ಯಮ ಮಿತ್ರರಿಗೆ ಉಸಿರಲು ಸಾಧ್ಯವಾಗಿರಲಿಲ್ಲ. 2008 ಅಕ್ಟೋಬರ್ 27 ರ ಮುಂಜಾನೆ ನಾವೆಲ್ಲಾ ಗಡಬಡಿಸಿ ಹೋಗಿ ನೋಡುವ ಹೊತ್ತಿಗೆ ಅವರು ಆಸ್ಪತ್ರೆಯ ಶೈತ್ಯಾಗಾರದಲ್ಲಿ ತಣ್ಣಗೆ ಮಲಗಿಬಿಟ್ಟಿದ್ದರು! ಅವರ ಕಣ್ಣುಗಳು ಈ ಹೊತ್ತು ಅಜ್ಞಾತನೊಬ್ಬನ ರೆಪ್ಪೆಯಲ್ಲಿ ಅವಿತು ಈ ಜಗತ್ತನ್ನು ಮತ್ತೆ ನಿಟ್ಟಿಸುತ್ತಿರುವಾಗ ಅವರು ಕಣ್ಮುಚ್ಚಿದರು ಎಂದು ಹೇಗೆ ಹೇಳಲಿ? ತಮ್ಮದೇಹವನ್ನೂ ದಾನವಾಗಿ ಇಲ್ಲೇ ಬಿಟ್ಟು ಅವರ ಚೇತನ ನಿಷ್ಕ್ರಮಿಸಿರುವಾಗ ಮತ್ತೆ ಅವರ ಕವನದ ಸಾಲುಗಳು ನೆನಪಾಗುತ್ತಿವೆ.
. . . . ಅನುಭವದ ಕೈಗೋಲ
ಹಿಡಿದು ಮುಗಿಸಿದನಲ್ಲ ಬಾಳ ಯಾತ್ರೆಯನು!
ಇರಲೆಬೇಕವನು ಮರಣವನೆ ಗೆಲಿದ ಮಹಂತ,
ಬಾಳ್ವೆಯೇ ಬೆಳಕೆಂದ ಮಹಾಸಂತ ! ಆನ0ದ ಋಗ್ವೇದಿ (ವಿಜಯಕರ್ನಾಟಕ ಪತ್ರಿಕೆಯಿ೦ದ)

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

photos and write-up are too good. wishes to Anand.
satish

ಅನಾಮಧೇಯ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

nice article..i am also belongs to same place ..i will proud of chigateri..