ಭಾನುವಾರ, ಡಿಸೆಂಬರ್ 7, 2008
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
1
ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ
ಅವಳು ನಿನ್ನ ಹಸೆಮಣೆಯ ನಿರ್ಜೀವ ದೇಹವಾಗುತ್ತಿರಲಿಲ್ಲ
ಅವಳ ಮನೆ ಗೋಡೆ ಮೇಲಿನ ಹಲ್ಲಿಯ ಕಣ್ಣುಗಳ
ದಿಟ್ಟಿಸಿ ನೋಡಿ ದಿಕ್ಕೆಡಬೇಡಿ, ಅಲ್ಲಿ ನಮ್ಮ ಪ್ರೇಮದ ಚಿತ್ರಗಳು ಬಿಕ್ಕಳಿಸುತ್ತಿವೆ.
ಆ ಹಲ್ಲಿಯ ಲೊಚಗುಟ್ಟುವಿಕೆಯ ಭಾಷೆ ನಿಮಗೆ ತಿಳಿಯದಿದ್ದದ್ದೇ ಒಳ್ಳೆಯದು
ಅದು ಸಾವಿರ ಬಾರಿ ಆರ್ತವಾಗಿ ನಿಮ್ಮಲ್ಲಿ ಮೊರೆಯಿಟ್ಟಿರುತ್ತದೆ
ಅವಳ ಹಿಡಿಯಾಗಿ ಹಿಂಡಿದರೆ ನಿನ್ನ ನೆನಪಿನ ಒಂದು ಕಣ ಹೊರಬಿದ್ದರೂ
ನಾನು ನೇಣಿಗೆ ತಲೆಕೊಟ್ಟು ನಿಶ್ಚಿಂತೆಯಿಂದ ಪ್ರಾಣಬಿಡುವೆ ಎಂದು
2
ತಮ್ಮ ಯೌವ್ವನವ ತಣ್ಣಗೆ ದಹಿಸಿ ಮುಪ್ಪಾದ
ಸ್ವರ್ಗದ ಎಷ್ಟೊಂದು ಕೋಣೆಯ ಬಾಗಿಲುಗಳನ್ನು ನಾವಿಬ್ಬರೂ ತೆರೆದು
ಸುಖದ ಬತ್ತಿ ಹಚ್ಚಿ ಕೋಣೆಗೆ ಯೌವ್ವನದ ಕಿಚ್ಚ ಹಚ್ಚಬೇಕೆಂದಿದ್ದೆವು
ನಿಮ್ಮಲೊಂದು ಸಣ್ಣ ಪ್ರಾರ್ಥನೆ
ಪುರುಷತ್ವದ ಸೋಗಲಾಡಿತನದ ಚಿತ್ರಗಳ
ಅವಳ ಮನದ ಕೋಣೆ ತುಂಬ ಅಂಟಿಸಿ
ಮುಊರು ಕಾಸಿನ ಸಿನಿಮಾ ಹೀರೋನಂತೆ ಪೋಜು ಕೊಡಬೇಡಿ
3
ಗಂಡ ಹೆಂಡಿರೆಂಬ ಚಿತ್ರವ ದಗದಗನೆ ಉರಿಸಿ ಚಳಿ ಕಾಯಿಸಿಕೊಂಡು
ನಾವಿಬ್ಬರೂ ಅದರ ಬೂದಿ ಇರದಂತೆ ಕೊಡವಿ
ಒಬ್ಬರೊಳಗೊಬ್ಬರು ಕಳೆದು ಹೋಗಿ
ಕಳೆದದ್ದ ಇನ್ನೆಂದೂ ಹುಡುಕದಂತೆ ಬದುಕಬೇಕೆಂದಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಹೂವಿನಂತವಳ ಜತೆ ನೀವು ಕಬ್ಬಿಣವಾಗುವ ಕನಸೂ
ನಿಮ್ಮ ಮನೆ ಪ್ರವೇಶಿಸದಂತೆ ಬಾಗಿಲುಗಳಿಗೆ ತಾಕೀತು ಮಾಡಿರಿ
ಇರುವೆ ಕಾಲು ಮುರಿದರೂ ಶ್ರುಶೂಷೆ ಮಾಡಿ
ದಿನಗಟ್ಟಲೆ ದು:ಖಿಸುವ ಅವಳ ಮನದ ಮೇಲೆ
ನೀವು ಒರಟೊರಟಾಗಿ ನಡೆದು ಬಿಡಬೇಡಿ
4
ನಾವಿಬ್ಬರೂ ಜಗದ ಕ್ರೌರ್ಯಕ್ಕೆ ತಾಯ್ತನವ ತೊಟ್ಟುತೊಟ್ಟು ಕುಡಿಸಿ
ಅದರ ಉರಿಗಣ್ಣ ತಣ್ಣಗಾಗಿಸಿ ಮನುಷ್ಯ ಸಹಜ ಕ್ಲೀಷೆಗಳ ದಹಿಸಿ
ಜಗದ ನಿಚ್ಚಳ ಬದುಕ ಕಣ್ತುಂಬಿಕೊಳ್ಳಬೇಕೆಂಬ ಕನಸು ಕಂಡಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಅವಳ ತಾಯ್ತನದ ಬೆಚ್ಚಗಿನ ಗೂಡು ಕಿತ್ತು
ಧರ್ಮದ ಗೋಡೆಕಟ್ಟಿ ಅದಕ್ಕೆ ಮೊಳೆ ಹೊಡೆದು
ನಿಮ್ಮಿಬ್ಬರ ಫೋಟೋ ತೂಗುಹಾಕಿ ಜಗದೆದುರು ಹರಾಜಿಗಿಡಬೇಡಿ.
(ಅರುಣ್ ಜೋಳದಕೂಡ್ಲಿಗಿ ನಮ್ಮ ನಡುವಿನ ತರುಣ(!) ಕವಿ. ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ. ಹಂಪಿಯ ಸ್ಮಾರಕ, ದಿಬ್ಬ ಹಾಗೂ ಹಿಮಾಲಯದಲ್ಲಿ ಆಗಾಗ ಕಳೆದು ಹೋಗುವುದು ಇವನ ಹವ್ಯಾಸ. ಇವನ ಇತ್ತೀಚಿನ ಕವನ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ. ಕವಿತೆ ಹಿಡಿಸಿದರೆ, ಬ್ಲಾಗ್ ನ್ನು ಹೊಗಳಿ, ಹಿಡಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಕವಿಯನ್ನು ಟೀಕಿಸಿ...)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
4 ಕಾಮೆಂಟ್‌ಗಳು:
ತುಂಬ ಚಂದದ ಕವಿತೆ ಅರುಣ್ ಅವರೇ. ಮನತಟ್ಟುವ ಸಾಲುಗಳು. ಹೀಗೇ ಬರೆಯುತ್ತಿರಿ. good luck..
-ವೈಶಾಲಿ
paಅರುಣ್ ನೀನು ಸಿದ್ದುನಂತವರಿಗೆ ನನ್ನದೂ ಒಂದು ಸಣ್ಣ ಪ್ರಾರ್ಥನೆ, ಸ್ವಲ್ಪ ತಡವಾಗಿ ಮದುವೆಯಾಗಿ.
ಅದರಿಂದ ಒಂದಿಷ್ಟು ಒಳ್ಳೆಯ ಪ್ರೇಮ ಕವಿತೆಗಳು ನಮಗೆ ದಕ್ಕಬಹುದು. ನನ್ನ ತಾರುಣ್ಯದಲ್ಲಿ ಪ್ರೇಮಕವಿತೆಗಳನ್ನು ಬರೆಯಲಿಲ್ಲ. ಬರೆದಿದ್ದೆಲ್ಲಾ ಬೆಂಕಿ ಉಗುಳುವ ಕವನಗಳೇ, ಪ್ರೀತಿಸಿದ್ದು ಸಹ ಕ್ರಾಂತಿಕನ್ಯೆಯನ್ನು.
ಪ್ರೀತಿಸುವುದು ಎಷ್ಟು ಕಷ್ಟ?
ಸಿನಿಮಾ ಹಿರೋಗಳಂತೆ ಓಡಿ ಹೋಗುವ, ಡೈಲಾಗ್ ಹೊಡೆಯುವ, ಮರ ಸುತ್ತುವ (ಈಗ ಬಾರ್ ಸುತ್ತುವ) ಪ್ರೀತಿ ಬೇರೆ. ಈ ಪ್ರೀತಿ ಎನ್ನುವುದೇ ಈಗ ಕೃತಕವಾಗಿ ಹೋಗಿದೆ. ಐಲವ್ ಯೂ ಅನ್ನದಿದ್ದರೆ ಅದು ಪ್ರೀತಿಯೇ ಅಲ್ಲ ಎನ್ನುವ ಗಿಳಿಪಾಠಕ್ಕೆ ಬಂದು ನಿಂತಿದೆ. ಆಪ್ತವಾಗಿ ಒಬ್ಬರನ್ನೊಬ್ಬರು ಬೈದಾಡಿಕೊಂಡು ಇಬ್ಬರು ತಮ್ಮ ದೌರ್ಬಲ್ಯಗಳನ್ನು ಚರ್ಚಿಸುವುದೆಲ್ಲಾ ಹೋಗಿ, ಕೃತಕ ಪೌರುಷ ಕಾಲಿಟ್ಟಿದೆ. ಹೀಗಾಗಿ ಸಿನಿಮಾ ಹಿರೋಗಳೆಲ್ಲಾ ತಮ್ಮ ಅಂಗ ಸೌಷ್ಟವ ತೋರಿಸುವುದಕ್ಕೆ ಮುಂದಾಗಿ ಬಿಟ್ಟಿದ್ದಾರೆ.
ಇದರಿಂದ ಪ್ರೀತಿ ಉಸಿರುಗಟ್ಟಿ ಸತ್ತೇ ಹೋಗಿದೆ. ಅದರ ಪ್ರೇತಾತ್ಮ ಮಾತ್ರ ಉಳಿದುಕೊಂಡಿದೆ. ಇಂತಹವುಗಳ ನಡುವೆ ನಿಮ್ಮ ಪ್ರೀತಿ ಕವಿತೆಗಳು ಜೀವಜಲ ನೀಡುತ್ತಿವೆ. ಅದನ್ನು ಪುನಃ ಹುಡುಕಾಟ ನಡೆಸುತ್ತಿವೆ. ಇದರಿಂದ ಪ್ರೀತಿ ಮತ್ತೇ ಜೀವಂತವಾಗಲಿ ಎಂಬುದು ನನ್ನ ಹಾರೈಕೆ. ಪ್ರೀತಿ ಹಳಹಳಿಕೆಯಾಗದೆ ಆತ್ಮದ ಧ್ವನಿಯಾಗಲಿ.
- ಪರುಶುರಾಮ ಕಲಾಲ್
ಪ್ರಿಯ, ಅರುಣ
ನಿನ್ನ ಬಂಡಾಯದ ಕಿಚ್ಚಿನ ಪದ್ಯಗಳ ನಡುವೆ ಈ ಪದ್ಯ ತೆರಕೊಂಡ ರೀತಿ ಅದ್ಭುತ! ’ಫೋಟೊ ಜಗದೆದುರು ತೂಗು ಹಾಕಿ ಹರಾಜಿಗಿಡಬೇಡಿ’ ತಕ್ಷಣಕ್ಕೆ ಹುಟ್ಟಿಸಿದ ತಳಮಳ ಅಕ್ಷರಗಳಲ್ಲಿ ಹಿಡಿದಿಡಲಾರೆ-ಡೀಎಸ್ಸಾರ್
ಅರುಣ ದಯವಿಟ್ಟು ನೀನು ಬರಿ ವಿರಹದ ಕವಿತೆಗಳನ್ನು ಬರೆಯುತ್ತಾ ನನಗೆ ಹೆಣ್ಣು ಹುಡುಕೋದು ಮರಿಬೇಡ ತಂದೆ!
ಕಾಮೆಂಟ್ ಪೋಸ್ಟ್ ಮಾಡಿ